1 : ದೇವಾಲಯದ ಕಾವಲುಗಾರರಾಗಿ ಸೇವೆಮಾಡಲು ನೇಮಕಗೊಂಡ ಲೇವಿಯರ ಹೆಸರುಗಳು: ಕೋರಹೀಯನಾದ ಮೆಷೆಲೆಮ್ಯ; ಇವನು ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ;
2 : ಮೆಷಲೆಮ್ಯನ ಮಕ್ಕಳಲ್ಲಿ ಜೆಕರ್ಯನು ಚೊಚ್ಚಲನು; ಎದೀಯಯೇಲನು ಮರಚಲನು; ಜೆಬದ್ಯನು ಮೂರನೆಯವನು; ಯೆತ್ನಿಯೇಲನು ನಾಲ್ಕನೆಯವನು.
3 : ಏಲಾಮನು ಐದನೆಯವನು. ಯೆಹೋಹಾನಾನನು ಆರನೆಯವನು; ಎಲ್ಯೆಹೋಯೇನೈ ಏಳನೆಯವನು.
4 : ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು; ಯೆಹೋಜಾಬಾದನು ಮರಚಲನು; ಯೋವಾಹನು ಮೂರನೆಯವನು; ಸಾಕಾರನು ನಾಲ್ಕನೆಯವನು; ನೆತನೇಲನು ಐದನೆಯವನು;
5 : ಅಮ್ಮೀಯೇಲನು ಆರನೆಯವನು; ಇಸ್ಸಾಕಾರನು ಏಳನೆಯವನು; ಪೆಯುಲ್ಲಿತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
6 : ಅವನ ಮಗ ಶೆಮಾಯನ ಮಕ್ಕಳು ಗೋತ್ರ ಪ್ರಧಾನರೂ ಮಹಾ ಸಮರ್ಥರೂ ಆಗಿದ್ದರು.
7 : ಇವರು ಯಾರೆಂದರೆ, ಒತ್ನೀ, ರೆಫೇಯೇಲ್, ಓಬೇದ್, ಎಲ್ಜಾಬಾದ್ ಇವರು ಹಾಗೂ ಬಹು ಸಮರ್ಥರಾದ, ಎಲೀಹು, ಸೆಮಕ್ಯ ಎಂಬ ಇವರ ಸಹೋದರರು.
8 : ಇವರೆಲ್ಲರೂ ಓಬೇದೆದೋಮನ ಸಂತಾನದವರು. ಸಮರ್ಥರೂ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಮಕ್ಕಳೂ ಸಹೋದರರೂ ಕೂಡಿ ಅರವತ್ತೆರಡು ಮಂದಿ ಇದ್ದರು.
9 : ಮೆಷೆಲಿಮ್ಯನ ಮಕ್ಕಳೂ ಸಹೋದರರೂ ಹದಿನೆಂಟು ಮಂದಿ; ಇವರೂ ಸಮರ್ಥರಾಗಿದ್ದರು.
10 : ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬವನು ಮುಖ್ಯಸ್ಥನಾಗಿದ್ದನು. ಇವನು ಚೊಚ್ಚಲನಲ್ಲದಿದ್ದರೂ ತಂದೆ ಅವನನ್ನೇ ಮುಖ್ಯಸ್ಥನನ್ನಾಗಿ ನೇಮಿಸಿದನು.
11 : ಹಿಲ್ಕೀಯನು ಎರಡನೆಯವನು; ಟೋಬಲ್ಯನು ಮೂರನೆಯವನು; ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳೂ ಸಹೋದರರೂ ಒಟ್ಟಿಗೆ ಹದಿಮೂರು ಮಂದಿ.
12 : ಈ ದ್ವಾರಪಾಲಕ ವರ್ಗಗಳ ಪ್ರಧಾನ ಪುರುಷರು ತಮ್ಮ ಕುಲಬಂಧುಗಳಂತೆ ಸರ್ವೇಶ್ವರನ ಆಲಯದಲ್ಲಿ ಸೇವೆಮಾಡುತ್ತಿದ್ದರು.
13 : ಅವರು, ಕನಿಷ್ಠ ಕುಟುಂಬವೆಂದಾಗಲಿ ಶ್ರೇಷ್ಠ ಕುಟುಂಬವೆಂದಾಗಲಿ ವ್ಯತ್ಯಾಸಮಾಡದೆ, ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಳ್ಳುತ್ತಿದ್ದರು.
14 : ಪೂರ್ವದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತ್ತು. ಬಹುವಿವೇಕವುಳ್ಳ ಪಂಚಾಯತಗಾರನಾಗಿರುವ ಅವನ ಮಗ ಜೆಕರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತ್ತು.
15 : ಓಬೇದೆದೋಮನಿಗೆ ದಕ್ಷಿಣ ಬಾಗಿಲೂ ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ
16 : ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮ ಬಾಗಿಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಿಲೂ ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
17 : ಲೇವಿಯರಲ್ಲಿ ಪ್ರತಿದಿನವೂ ಪೂರ್ವಬಾಗಿಲನ್ನು ಆರು ಮಂದಿ, ಪಶ್ಚಿಮ ಬಾಗಿಲನ್ನು ನಾಲ್ಕು ಮಂದಿ, ದಕ್ಷಿಣ ಬಾಗಿಲನ್ನು ನಾಲ್ಕು ಮಂದಿ, ಉಗ್ರಾಣ ಮಂದಿರದ ಎರಡು ಬಾಗಿಲುಗಳನ್ನು ಇಬ್ಬಿಬ್ಬರು,
18 : ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿಯ ಬಾಗಿಲನ್ನು ನಾಲ್ಕು ಮಂದಿ, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
19 : ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕ ವರ್ಗಗಳು ಇವೇ.
20 : ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:
21 : ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಮುಖ್ಯಸ್ಥರಲ್ಲಿ ಯೆಹೀಯೇಲೀ;
22 : ಮತ್ತು ಯೆಹೀಯೇಲ್ಯರಾದ ಜೇತಾಮನು ಹಾಗೂ ಯೋವೇಲನೆಂಬ ಅವನ ತಮ್ಮನು ಸರ್ವೇಶ್ವರನ ಆಲಯದ ಭಂಡಾರಗಳನ್ನು ಕಾಯುತ್ತಿದ್ದರು.
23 : ಅಮ್ರಾಮ್, ಇಚ್ಚಾರ್, ಹೆಬ್ರೋನ್, ಉಜ್ಜೀಯೇಲ್
24 : ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನು.
25 : ಎಲೀಯೆಜೆರನ ಮಗ ರೆಹಬ್ಯನಿಗೆ ಹುಟ್ಟಿದ ಯೆಶಾಯನ ಮರಿಮಗನೂ ಯೋರಾಮನ ಮೊಮ್ಮಗನೂ
26 : ಜಿಕ್ರೀಯ ಮಗನೂ ಆಗಿರುವ ಶೆಕೋಮೋತನೂ ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲಿನ ಗೋತ್ರ ಬಂಧುಗಳು.
27 : ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.
28 : ಇವರಲ್ಲದೆ ದರ್ಶಿಯಾದ ಸಮುವೇಲನೂ ಕೀಷನ ಮಗ ಸೌಲನೂ ನೇರನ ಮಗ ಅಬ್ನೇರನೂ ಜೆರೂಯಳ ಮಗ ಯೋವಾಬನೂ ಹಾಗೆಯೇ ಮಾಡಿದ್ದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
29 : ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳೂ ಲೌಕಿಕೋದ್ಯೋಗದಲ್ಲಿದ್ದರು. ಅವರು ಇಸ್ರಯೇಲರ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಆಗಿದ್ದರು.
30 : ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಯೇಲರೊಳಗೆ ಸರ್ವೇಶ್ವರನ ಸೇವಾಕಾರ್ಯಗಳನ್ನೂ ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳು ನೂರು ಮಂದಿ ಇದ್ದರು.
31 : ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಲ್ಲಿ ಅನೇಕರು ಅವರ ಗೋತ್ರದವರು ಯಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೇರೀಯನು ಮುಖ್ಯಸ್ಥನು;
32 : ಶ್ರೀಮಂತರೂ ಕುಟುಂಬ ಪ್ರಧಾನರೂ ಆದ ಅವನ ಗೋತ್ರ ಬಂಧುಗಳು ಎರಡು ಸಾವಿರದ ಏಳು ನೂರು ಮಂದಿ ಇದ್ದರು. ಅರಸ ದಾವೀದನು ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲೂ ರಾಜಕೀಯ ಕಾರ್ಯಗಳಲ್ಲೂ ಅಧಿಕಾರಿಗಳನ್ನಾಗಿ ನೇಮಿಸಿದನು.