Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಮರುವರ್ಷ, ಅರಸರು ಯುದ್ಧಕ್ಕೆ ಹೊರಡುವ ಕಾಲದಲ್ಲಿ ಯೋವಾಬನು ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳು ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅವನೊಡನೆ ಬಲವಾದ ಸೈನ್ಯವಿತ್ತು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡು ಅದನ್ನು ಹಾಳು ಮಾಡಿಬಿಟ್ಟನು.
2 : ದಾವೀದನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಸುಮಾರು ಮೂವತ್ತೈದು ಕಿಲೋಗ್ರಾಂ ತೂಕದ್ದು. ಅದರಲ್ಲಿ ಇದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ಅವನು ದೊಡ್ಡ ಕೊಳ್ಳೆಯನ್ನೇ ಕೊಂಡು ಹೊಯ್ದನು.
3 : ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೆ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರೆಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.
4 : ಬಳಿಕ ಫಿಲಿಷ್ಟಿಯರ ವಿರುದ್ಧ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕ್ಕೆ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದನು. ಫಿಲಿಷ್ಟಿಯರು ಇದರಿಂದ ಕುಗ್ಗಿಹೋದರು.
5 : ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮ ಲಹ್ಮೀಯನನ್ನು ಕೊಂದನು. ಈ ಲಹ್ಮೀಯನ ಬರ್ಜಿಯ ಹಿಡಿಕೆ ನೇಕಾರರ ಕುಂಟೆಯಷ್ಟು ದೊಡ್ಡದಾಗಿತ್ತು.
6 : ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷ ಇದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳು ಇದ್ದವು. ಅವನೂ ರೆಫಾಯನು.
7 : ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
8 : ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕನಿಂದಲೂ ಹತರಾದರು.

· © 2017 kannadacatholicbible.org Privacy Policy