Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಅನಂತರ ದಾವೀದನು ಹೋಗಿ ಅವರನ್ನು ಸೋಲಿಸಿದನು. ಅವರಿಂದ ಗತ್ ಪಟ್ಟಣವನ್ನೂ ಅದರ ಗ್ರಾಮಗಳನ್ನೂ ವಶಪಡಿಸಿಕೊಂಡನು.
2 : ಆಮೇಲೆ ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ಅಧೀನರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
3 : ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜೆರನನ್ನು ದಾವೀದನು ಹಮಾತಿನ ಬಳಿಯಲ್ಲಿ ಪರಾಭವ ಗೊಳಿಸಿದನು.
4 : ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದನು; ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.
5 : ದಮಸ್ಕದ ಸಿರಿಯಾದವರು ಚೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆಬಡಿದನು;
6 : ಇದಲ್ಲದೆ ಅವನು ದಮಸ್ಕದ ಸಿರಿಯಾ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯ ದೊರಕುತ್ತಿತ್ತು.
7 : ದಾವೀದನು ಹದರೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರುಸಲೇಮಿಗೆ ಒಯ್ದನು.
8 : ಇದಲ್ಲದೆ, ಹದರೆಜೆರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಹೇರಳ ತಾಮ್ರವನ್ನು ತೆಗೆದುಕೊಂಡು ಬಂದನು. ಸೊಲೊಮೋನನು ‘ಕಂಚಿನ ಕಡಲೆಂಬ ಪಾತ್ರೆ’ಯನ್ನೂ ಕಂಬಗಳನ್ನೂ ಇನ್ನಿತರ ಸಾಮಾನುಗಳನ್ನೂ ಮಾಡಿಸಿದ್ದು ಆ ತಾಮ್ರದಿಂದಲೇ.
9 : ದಾವೀದನು ಚೋಬನ ಅರಸನಾದ ಹದರೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನ ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
10 : (ತೋವಿಗೂ ಹದರೆಜೆರನಿಗೂ ವಿರೋಧವಿತ್ತು). ದಾವೀದನು ಹದರೆಜೆರನ ಮೇಲೆ ದಾಳಿಮಾಡಿ ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ಅಭಿನಂದಿಸುವುದಕ್ಕಾಗಿ ಹಾಗು ಹರಸುವುದಕ್ಕಾಗಿ ತನ್ನ ಮಗ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೆ ವಿಧವಿಧವಾದ ತಾಮ್ರ, ಬೆಳ್ಳಿ ಹಾಗು ಬಂಗಾರದ ಪಾತ್ರೆಗಳನ್ನು ತಂದನು.
11 : ಅರಸ ದಾವೀದನು ಕಾಣಿಕೆಗಳನ್ನು ಮಾತ್ರವಲ್ಲದೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಹಾಗು ಅಮಾಲೇಕ್ಯರು ಎಂಬ ಸುತ್ತಮುತ್ತಿನ ಜನಾಂಗಗಳಿಂದ ಕಿತ್ತುಕೊಂಡ ಬೆಳ್ಳಿಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.
12 : ಇದಲ್ಲದೆ ಚೆರೂಯಳ ಮಗ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿದನು.
13 : ದಾವೀದನು ಎದೋಮಿನಲ್ಲಿ ಕಾವಲುದಂಡು ಗಳನ್ನಿರಿಸಿದ್ದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು.
14 : ದಾವೀದನು ಇಸ್ರಯೇಲರ ಅರಸನಾಗಿ ಪ್ರಜೆಗಳೆಲ್ಲರನ್ನು ಧರ್ಮಾನುಸಾರ, ನ್ಯಾಯಯುತವಾಗಿ ನಡೆಸುತ್ತಿದ್ದನು.
15 : ಚೆರೂಯಳ ಮಗ ಯೋವಾಬನು ಅವನ ಸೇನಾಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿಯಾಗಿದ್ದನು.
16 : ಅಹೀಟೂಬನ ಮಗ ಚಾದೋಕನೂ ಹಾಗು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವರ ಯಾಜಕರಾಗಿದ್ದರು; ಶವ್ಷನು ಅವನಿಗೆ ಲೇಖಕನಾಗಿದ್ದನು.
17 : ಯೆಹೋಯಾದಾವನ ಮಗ ಬಿನಾಯನು ‘ಕೆರೇತ್ಯ’, ‘ಪೆಲೇತ್ಯ’ ಎಂಬ ಕಾವಲು ದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.

· © 2017 kannadacatholicbible.org Privacy Policy