1 : ಆಗ ಅರಸ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದನು.
2 : ಒಂದು ದಿನ ಅವನು ಪ್ರವಾದಿ ನಾತಾನನನ್ನು ಬರಮಾಡಿ, “ನೋಡು, ನಾನು ವಾಸಮಾಡುತ್ತಾ ಇರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ಸರ್ವೇಶ್ವರನ ನಿಬಂಧನ ಮಂಜೂಷವಿರುವುದು ಬಟ್ಟೆಯಿಂದ ಮಾಡಿದ ಗುಡಾರದಲ್ಲಿ!” ಎಂದನು.
3 : ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
4 : ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
5 : “ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬಾರದು.
6 : ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿ ನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಿದ್ದೆನು. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗಲೆಲ್ಲಾ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ನ್ಯಾಯ ಸ್ಥಾಪಕರನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ’.”
7 : “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೇಳಿದೆನೆಂದು ಹೀಗೆ ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
8 : ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಆಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.
9 : ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು, ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ಅಲ್ಲೇ ವಾಸಿಸುವರು.
10 : ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯ ಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚೆಗೆ ಇಸ್ರಯೇಲರು ಶೋಷಣೆಗೆ ಗುರಿಯಾದಂತೆ ಇನ್ನು ಗುರಿಯಾಗರು. ನಿನ್ನ ಶತ್ರುಗಳನ್ನೆಲ್ಲ ನಿನಗೆ ಅಧೀನಮಾಡುವೆನು. ಅದು ಮಾತ್ರವಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತುಕೊಡುತ್ತೇನೆ.
11 : ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
12 : ನನಗಾಗಿ ಒಂದು ದೇವಾಲಯವನ್ನು ಕಟ್ಟುವವನು ಅವನೇ. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು
13 : ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನನ್ನು ನನ್ನ ಕೃಪೆ ಬಿಟ್ಟು ಹೋದಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ.
14 : ಅವನನ್ನು ನನ್ನ ಮನೆಯಲ್ಲೂ ನನ್ನ ರಾಜ್ಯದಲ್ಲೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನ ಶಾಶ್ವತವಾಗಿರುವುದು’.”
15 : ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
16 : ಬಳಿಕ ಅರಸ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ದೇವರೇ, ಸರ್ವೇಶ್ವರಾ, ನನ್ನಂಥವನಿಗೆ ತಾವು ಈ ಪದವಿಯನ್ನು ಅನುಗ್ರಹಿಸಿದ್ದೀರಿ; ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು!
17 : ದೇವರೇ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹುದೂರ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ದೇವರೇ, ಸರ್ವೇಶ್ವರಾ, ನೀವು ನನ್ನನ್ನು ಒಬ್ಬ ಮಹಾನ್ ವ್ಯಕ್ತಿಯನ್ನೋ ಎಂಬಂತೆ ಭಾವಿಸಿದಿರಿ; ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ!
18 : ನೀವು ನಿಮ್ಮ ದಾಸ ದಾವೀದನನ್ನು ಚೆನ್ನಾಗಿ ಬಲ್ಲಿರಿ; ನಾನು ನನ್ನ ಘನತೆಯನ್ನು ಕುರಿತು ಇನ್ನೇನು ಹೇಳಲಿ?
19 : ಸರ್ವೇಶ್ವರಾ, ನಿಮ್ಮ ದಾಸನಾದ ನನ್ನ ಹಿತಕ್ಕಾಗಿಯೂ ತಮ್ಮ ಚಿತ್ತಾನುಸಾರವಾಗಿಯೂ ಈ ಮಹತ್ಕಾರ್ಯಗಳನ್ನೆಲ್ಲಾ ನಡೆಸಿ ನಿಮ್ಮ ಸರ್ವ ಮಹತ್ವವನ್ನು ತೋರ್ಪಡಿಸಿದ್ದೀರಿ.
20 : ಸರ್ವೇಶ್ವರಾ, ತಮಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದಂಥವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ತಮ್ಮ ಹೊರತು, ಬೇರಾವ ದೇವರೂ ಇಲ್ಲ ಎಂಬುದು ನಿಶ್ಚಯ.
21 : ತಮ್ಮ ಇಸ್ರಯೇಲ್ ಪ್ರಜೆಗೆ ಸಮನಾದ ಜನಾಂಗ ಲೋಕದಲ್ಲಿ ಬೇರೆ ಯಾವುದಿದೆ? ದೇವರಾದ ತಾವೇ ಬಂದು ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿಸಿಕೊಂಡಿರಿ; ಆಶ್ಚರ್ಯಕರವಾದ ಅದ್ಭುತಕಾರ್ಯಗಳಿಂದ ನಿಮ್ಮ ನಾಮವನ್ನು ಪ್ರಸಿದ್ಧಿ ಪಡಿಸಿದ್ದೀರಿ. ಈಜಿಪ್ಟರ ಕೈಯಿಂದ ತಮ್ಮ ಪ್ರಜೆಯನ್ನು ತಪ್ಪಿಸಿ, ರಕ್ಷಿಸಿದಿರಿ. ಅನ್ಯಜನಾಂಗಗಳನ್ನು ಅವರ ನಾಡಿನಿಂದ ಹೊರಡಿಸಿ ಬಿಟ್ಟಿರಿ.
22 : ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ;
23 : ಸರ್ವೇಶ್ವರಾ, ನೀವು ಅವರಿಗೆ ದೇವರಾದಿರಿ. ಸರ್ವೇಶ್ವರಾ, ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ನೀವು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ, ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ.
24 : ‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು; ತಮ್ಮ ದಾಸ ದಾವೀದನ ಮನೆತನವನ್ನು ತಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿಟ್ಟಿದ್ದಾರೆ’ ಎಂದು ಜನರು ನಿಮ್ಮ ನಾಮವನ್ನು ಕೊಂಡಾಡಲಿ.
25 : ನನ್ನ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ.
26 : ಸರ್ವೇಶ್ವರಾ, ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ ನೀವು ದೇವರಾಗಿದ್ದೀರಿ.
27 : ಈಗ ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಅದನ್ನು ಸದಾಕಾಲ ನಿಮ್ಮ ಆಶ್ರಯದಲ್ಲಿ ಇಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀರಿ; ಸರ್ವೇಶ್ವರಾ, ನೀವು ಅದನ್ನು ಆಶೀರ್ವದಿಸಿದ್ದೀರಿ; ಅದು ನಿತ್ಯವು ಸೌಭಾಗ್ಯದಿಂದ ಇರುವುದು,” ಎಂದು ಪ್ರಾರ್ಥಿಸಿದನು.