Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಅವರು ದೇವಮಂಜೂಷವನ್ನು ತಂದು ದಾವೀದನು ಅದಕ್ಕಾಗಿ ಸಿದ್ಧಪಡಿಸಿದ್ದ ಗುಡಾರದೊಳಗೆ ಒಯ್ದು, ಅಲ್ಲಿ ಅದನ್ನು ಸ್ಥಾಪಿಸಿದರು. ದೇವರಿಗೆ ದಹನಬಲಿಗಳನ್ನೂ, ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದರು.
2 : ಬಲಿಹೋಮಗಳ ಅರ್ಪಣೆ ಮುಗಿದ ತರುವಾಯ ದಾವೀದನು ಸರ್ವೇಶ್ವರನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. ಅವರೆಲ್ಲರಿಗೂ ಪ್ರಸಾದವನ್ನು ಹಂಚಿದನು:
3 : ಇಸ್ರಯೇಲಿನ ಪ್ರತಿ ಒಬ್ಬ ಪುರುಷನಿಗೂ ಸ್ತ್ರೀಗೂ ಒಂದೊಂದು ರೊಟ್ಟಿಯನ್ನೂ ಬೇಯಿಸಿದ ಒಂದು ತುಂಡುಮಾಂಸವನ್ನೂ ಒಣಗಿದ ದ್ರಾಕ್ಷೆಗಳನ್ನೂ ಹಂಚಿದನು.
4 : ಸರ್ವೇಶ್ವರನ ಮಂಜೂಷದ ಮುಂದೆ ದೇವರ ಆರಾಧನೆ ಮಾಡುವುದಕ್ಕಾಗಿ ದಾವೀದನು ಕೆಲವು ಮಂದಿ ಲೇವಿಯರನ್ನು ನೇಮಿಸಿದನು.
5 : ಅವರಲ್ಲಿ ಆಸಾಫನು ಮುಖ್ಯಸ್ಥನಾಗಿಯೂ ಜೆಕರ್ಯ ಅವನ ಸಹಾಯಕನಾಗಿಯೂ ನೇಮಕಗೊಂಡರು. ಯೇಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಹಾಗು ಯೆಗೀಯೇಲ್ ಸ್ವರಮಂಡಲಗಳನ್ನು ಬಾರಿಸಲು ನೇಮಕವಾದರು. ಆಸಾಫನು ತಾಳಗಳನ್ನು ಬಾರಿಸಬೇಕಾಗಿತ್ತು.
6 : ಬೆನಾಯ ಹಾಗೂ ಯಹಜೀಯೇಲ್ ಎಂಬ ಯಾಜಕರು ನಿಬಂಧನಾ ಮಂಜೂಷದ ಮುಂದೆ ಕ್ರಮವಾಗಿ ತುತೂರಿಗಳನ್ನು ಊದಬೇಕಾಗಿತ್ತು. ದರ್ಶಿಯಾದ ಹನಾನಿ
7 : ಆಸಾಫನಿಗೂ ಅವನ ಜೊತೆ ಲೇವಿಯರಿಗೂ ಸರ್ವೇಶ್ವರನ ಸ್ತೋತ್ರ ಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು.
8 : ಅವರು ಹೀಗೆಂದು ಹಾಡಿದರು: ಸಲ್ಲಿಸಿ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರವನು! ಮಾಡಿರಿ ಆತನ ನಾಮಸ್ಮರಣೆಯನು! ಸಾರಿರಿ ಜಗಕೆ ಆತನ ಸತ್ಕಾರ್ಯಗಳನು!!.
9 : ಹಾಡಿ ಪಾಡಿ ಹೊಗಳಿರಿ ಆತನನು ! ಧ್ಯಾನಿಸಿ ಆತನ ಪವಾಡಗಳನು !!
10 : ಹೆಮ್ಮೆಪಡಿ, ನೆನೆದು ಆತನ ಶ್ರೀನಾಮವನು ! ಹಿಗ್ಗಲಿ ಹೃದಯ, ಕೋರಿ ಆತನ ದರ್ಶನವನು !!
11 : ಆಶ್ರಯಿಸಿರಿ ಸರ್ವೇಶ್ವನನೂ ಆತನ ಶಕ್ತಿಯನೂ ! ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು !!
12 : ಆತನ ದಾಸ ಇಸ್ರಯೇಲನ ಸಂತತಿಯವರೇ ! ಆತನಾರಿಸಿಕೊಂಡ ಯಕೋಬನ ವಂಶದವರೇ !!
13 : ನೆನೆಯಿರಿ ಆತನ ಅದ್ಭುತಗಳನು, ಮಹತ್ಕಾರ್ಯಗಳನು ! ಆತನ ವದನ ವಿಧಿಸಿದ ನ್ಯಾಯ ನಿರ್ಣಯಗಳನು !!
14 : ಸರ್ವೇಶ ನಮ್ಮ ದೇವನೆಂಬುದು ಪ್ರಕಟಿತ ! ಆತನಿತ್ತ ತೀರ್ಪು ವಿಶ್ವವ್ಯಾಪ್ತ !!
15 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು ! ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು !!
16 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು ! ಇಸಾಕನಿಗೆ ಆಣೆಯಿಟ್ಟು ಆತನು ಹೇಳಿದುದನು !!
17 : ಯಕೋಬನಿಗೆ ರಾಜಶಾಸನವಾಗಿ ಕೊಟ್ಟದ್ದನು ! ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು:!!
18 : “ನಾ ಕೊಡುವೆನು ಕಾನಾನ್ ನಾಡನು ನಿಮಗೆ! ಸ್ವಾಸ್ತ್ಯವಾಗುವುದಿದು ನಿಮ್ಮ ಸಂತತಿಗೆ”!!
19 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು !
20 : ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರಲು !!
21 : ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ ! ಅವರಿಗಾಗಿ ಅರಸರನ್ನಾತ ಗದರಿಸದೆ ಬಿಡಲಿಲ್ಲ !!
22 : “ನಾನು ಅಭಿಷೇಕಿಸಿದವರನು ಇಗೋ, ಮುಟ್ಟಬೇಡಿ ! ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” !!
23 : ಸರ್ವ ಭೂನಿವಾಸಿಗಳೇ, ಸರ್ವೇಶ್ವರನಿಗೆ ಹಾಡಿರಿ! ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ!!
24 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ ! ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ !!
25 : ಏಕೆನೆ, ಮಹಾತ್ಮನು ಸರ್ವೇಶ್ವರ ಅತಿ ಸ್ತುತ್ಯರ್ಹನು ! ಸಕಲ ದೇವರುಗಳಿಗಿಂತಲೂ ಘನಗಂಭೀರವನು !!
26 : ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳು ದೇವರುಗಳೆಲ್ಲ ! ಸರ್ವೇಶನಿಂದಲೇ ಉಂಟಾಯಿತು ಆಕಾಶ ಮಂಡಲವೆಲ್ಲ !!
27 : ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ ! ಶಕ್ತಿ, ಸಂತೋಷ ಆತನ ಗರ್ಭಗುಡಿಯಲಿ !!
28 : ಶಕ್ತಿಸಾಮಥ್ರ್ಯ ಸರ್ವೇಶ್ವರನವೇ ಎಂದು ! ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದೂ !!
29 : ಆತನ ನಾಮಕೆ ಘನತೆಗೌರವವನು ತನ್ನಿ ! ಕಾಣಿಕೆಯೊಂದಿಗೆ ಆತನ ಮಂದಿರಕೆ ಬನ್ನಿ !!
30 : ಸರ್ವೇಶನಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ ! ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ ! ಕದಲದ ಸ್ಥಿರತೆಯನು ಇತ್ತಿಹನೀ ಧರೆಗೆ !!
31 : “ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ ! ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ !
32 : ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು ! ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು !!
33 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು ! ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು !!
34 : ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ ! ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ !!
35 : ಹೇ ದೇವಾ, ನಮ್ಮ ಸಹಾಯಕ, ನಮ್ಮನ್ನು ಉದ್ಧರಿಸು ! ನಾಡು ನಾಡುಗಳಿಂದ ನಮ್ಮನ್ನು ಒಂದುಗೂಡಿಸು ! ನಿನ್ನ ಪವಿತ್ರ ನಾಮವನು ಭಜಿಸುವೆವು ನಾವು ! ನಿನ್ನ ಸ್ತುತಿಸ್ತೋತ್ರಗಳಲ್ಲಿ ಹೆಚ್ಚಳಪಡುವೆವು !!
36 : ಇಸ್ರಯೇಲಿನ ದೇವನಾದ ಸರ್ವೇಶಗೆ ಸ್ತೋತ್ರ ! ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ ! ಜನರೆಲ್ಲರು ಹೇಳಲಿ ‘ಆಮೆನ್,’ ಸರ್ವೇಶ್ವರ ನಿಗೆ ಸ್ತೋತ್ರ !!
37 : ನಿಬಂಧನಾ ಮಂಜೂಷದ ಮುಂದೆ ಪ್ರತಿ ದಿನವೂ ಆರಾಧನೆ ನಡೆಸುವ ಜವಾಬ್ದಾರಿಯನ್ನು ಆಸಾಫ ಮತ್ತು ಅವನ ಜೊತೆ ಲೇವಿಯರಿಗೆ ಅರಸ ದಾವೀದ ಶಾಶ್ವತವಾಗಿ ವಹಿಸಿಕೊಟ್ಟನು. ಅಲ್ಲಿ ಅವರು ತಮ್ಮ ಕರ್ತವ್ಯವನ್ನು ದಿನನಿತ್ಯವೂ ನೆರವೇರಿಸಬೇಕಾಗಿತ್ತು.
38 : ಯೆದುತೂನನ ಮಗ ಓಬೇದೆದೋಮನೂ ಅವನ ಗೋತ್ರದ ಅರವತ್ತ ಎಂಟು ಜನರೂ ಅವರಿಗೆ ಸಹಾಯಕರು ಆಗಿದ್ದರು. ಹೋಸ ಮತ್ತು ಓಬೇದೆದೋಮರು ದ್ವಾರ ಪಾಲಕರ ಮೇಲ್ವಿಚಾರಕರಾಗಿದ್ದರು.
39 : ಯಾಜಕ ಚಾದೋಕ ಮತ್ತು ಅವನ ಜೊತೆ ಯಾಜಕರು ಗಿಬ್ಯೋನಿನಲ್ಲಿದ್ದ ಸರ್ವೇಶ್ವರನ ಗುಡಾರದಲ್ಲಿ ಆರಾಧನೆಯನ್ನು ನಡೆಸಲು ನೇಮಕರಾಗಿದ್ದರು.
40 : ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಬಲಿಪೀಠದ ಮೇಲೆ ಪ್ರತೀ ದಿನ ಮುಂಜಾನೆ ಹಾಗು ಸಂಜೆ ದಹನಬಲಿಯರ್ಪಿಸಬೇಕಾಗಿ ಇತ್ತು.
41 : ಅಲ್ಲಿ ಅವರೊಂದಿಗೆ ಸರ್ವೇಶ್ವರನ ನಿತ್ಯಪ್ರೀತಿಗಾಗಿ ಅವರನ್ನು ಸ್ತುತಿಸಿ, ಸಂಗೀತ ಹಾಡಲು ಹೇಮಾನ್, ಯೆದುತೂನ ಹಾಗು ಇನ್ನಿತರರು ನಿರ್ದಿಷ್ಟವಾಗಿ ನೇಮಕರಾಗಿದ್ದರು.
42 : ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.
43 : ಅನಂತರ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ತನ್ನ ಕುಟುಂಬದವರನ್ನು ಆಶೀರ್ವದಿಸಲು ದಾವೀದನೂ ತನ್ನ ಮನೆಗೆ ಹೋದನು.

· © 2017 kannadacatholicbible.org Privacy Policy