Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ದಾವೀದ ನಗರದಲ್ಲಿ ದಾವೀದನು ತನ್ನ ವೈಯಕ್ತಿಕ ಉಪಯೋಗಕ್ಕಾಗಿ ಮನೆಗಳನ್ನು ಕಟ್ಟಿಸಿಕೊಂಡನು. ದೇವಮಂಜೂಷಕ್ಕೂ ಒಂದು ಸ್ಥಳವನ್ನು ಸಿದ್ಧಪಡಿಸಿ ಅದಕ್ಕೆ ಒಂದು ಗುಡಾರವನ್ನು ಹಾಕಿಸಿದನು.
2 : ‘ಲೇವಿಯರು ಮಾತ್ರವೇ ದೇವಮಂಜೂಷವನ್ನು ಹೊರಬೇಕು. ಏಕೆಂದರೆ ಸದಾಕಾಲ ತಮ್ಮ ಸೇವೆ ಮಾಡುವುದಕ್ಕೂ ಮಂಜೂಷವನ್ನು ಹೊರುವುದಕ್ಕೂ ಸರ್ವೇಶ್ವರನಿಂದ ಆಯ್ಕೆಯಾದವರು ಅವರೇ’ ಎಂದು ನಿಶ್ಚಯಿಸಿಕೊಂಡನು.
3 : ತಾನು ಸಿದ್ಧಪಡಿಸಿದ ಸ್ಥಳಕ್ಕೆ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ಎಲ್ಲಾ ಇಸ್ರಯೇಲರನ್ನು ಜೆರುಸಲೇಮಿಗೆ ಬರಮಾಡಿಕೊಂಡನು.
4 : ಅನಂತರ ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆಯಿಸಿದನು.
5 : ಅಂತೆಯೇ, ಲೇವಿಯರಲ್ಲಿ ಕೇಹತನ ಊರಿಯೇಲನೆಂಬ ಮೇಲ್ವಿಚಾರಕನು ತನ್ನ ಕುಲದ ನೂರಿಪ್ಪತ್ತು ಸದಸ್ಯರೊಂದಿಗೆ ಬಂದನು.
6 : ಮೆರಾರೀ ಗೋತ್ರದಿಂದ ಮೇಲ್ವಿಚಾರಕ ಅಸಾಯನು ಇನ್ನೂರ ಇಪ್ಪತ್ತು ಜನರೊಂದಿಗೆ ಬಂದನು;
7 : ಗೇರ್ಷೋನ್ ಗೋತ್ರದಿಂದ ಮೇಲ್ವಿಚಾರಕ ಯೋವೇಲ ನೂರ ಮೂವತ್ತು ಜನರೊಂದಿಗೆ ಬಂದನು;
8 : ಎಲೀಚಾಫನ್ಯ ಗೋತ್ರದಿಂದ ಮೇಲ್ವಿಚಾರಕ ಶೆಮಾಯ ಇನ್ನೂರು ಜನರೊಂದಿಗೆ ಬಂದನು;
9 : ಎಲೀಚಾಫನ್ಯ ಗೋತ್ರದಿಂದ ಮೇಲ್ವಿಚಾರಕ ಶೆಮಾಯ ಇನ್ನೂರು ಜನರೊಂದಿಗೆ ಬಂದನು;
10 : ಉಜ್ಜೀಯೇಲನ ಗೋತ್ರದಿಂದ ಮೇಲ್ವಿಚಾರಕ ಅಮ್ಮೀನಾದಾಬ ನೂರ ಹನ್ನೆರಡು ಜನರೊಂದಿಗೆ ಬಂದನು.
11 : ದಾವೀದನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರೆಂಬುವರನ್ನು ಕರೆಯಿಸಿದನು; ಅಂತೆಯೇ ಲೇವಿಯರಾದ ಊರಿಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೋಲ್ ಮತ್ತು ಅಮ್ಮೀನಾದಾಬ್ ಎಂಬವರನ್ನೂ ಕರೆಯಿಸಿದನು.
12 : “ನೀವು ಲೇವಿಯರ ಗೋತ್ರಗಳ ನಾಯಕರು; ನಾನು ಸಿದ್ಧಪಡಿಸಿದ ಸ್ಥಳಕ್ಕೆ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ನೀವು ಹಾಗು ನಿಮ್ಮ ಜೊತೆಯಲ್ಲಿ ಲೇವಿಯರೂ ನಿಮ್ಮನ್ನೇ ಶುದ್ಧಪಡಿಸಿಕೊಳ್ಳಿರಿ.
13 : ಮೊದಲೊಂದು ಸಾರಿ, ಅದನ್ನು ತರಲು ನೀವು ಇಲ್ಲದೇ ಹೋದುದರಿಂದ ಹಾಗು ನಾವು ತಕ್ಕ ರೀತಿಯಲ್ಲಿ ಅವರನ್ನು ಆರಾಧಿಸದೇ ಹೋದುದಕ್ಕಾಗಿ ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಶಿಕ್ಷಿಸಿದರು,” ಎಂದು ಅವರನ್ನು ಎಚ್ಚರಿಸಿದನು.
14 : ಆಗ ಯಾಜಕರೂ ಲೇವಿಯರೂ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ತಮ್ಮನ್ನೇ ಶುದ್ಧೀಕರಿಸಿಕೊಂಡರು.
15 : ಲೇವಿಯರು ಅದನ್ನು ಗುದಿಗೆಗಳ ಮೇಲಿಟ್ಟು, ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ, ತಮ್ಮ ಹೆಗಲಮೇಲೆ ಹೊತ್ತುಕೊಂಡು ನಡೆದರು.
16 : ಸ್ವರಮಂಡಲ, ಕಿನ್ನರಿ, ತಾಳಗಳೊಂದಿಗೆ ಸಂಭ್ರಮದಿಂದ ವಾದ್ಯಗಳನ್ನು ಬಾರಿಸುವುದಕ್ಕೂ ಹಾಡುವುದಕ್ಕೂ ವಿವಿಧ ಲೇವಿಯರನ್ನು ನೇಮಿಸಬೇಕೆಂದು ದಾವೀದನು ಲೇವಿಯರ ನಾಯಕನಿಗೆ ಆಜ್ಞಾಪಿಸಿದನು.
17 : ಗಾಯಕರ ಮಂಡಳಿಯಿಂದ ಕಂಚಿನ ತಾಳಗಳನ್ನು ಬಾರಿಸಲು ಆಯ್ಕೆಹೊಂದಿ ದವರು: .
18 : ಯೋವೇಲನ ಮಗ ಹೇಮಾನ್, ಅವನ ಬಂಧು ಬೆರೆಕ್ಯನ ಮಗ ಆಸಾಫ್, ಮೆರಾರೀ ಕುಟುಂಬಕ್ಕೆ ಸೇರಿದ ಕೂಷಾಯನ ಮಗ ಏತಾನ್ ಎಂಬವರು.
19 : ತಮಗೆ ಸಹಾಯ ಮಾಡಲು ತಾರಸ್ಥಾಯಿಯ ತಂತಿವಾದ್ಯಗಳನ್ನು ಬಾರಿಸಲು ಜೆಕರ್ಯ, ಬೇನ್, ಯಾಜೀಯೇಲ್, ಶಮೀರಾ ಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್ ಬೆನಾಯ ಹಾಗು ಮಸೇಯ ಎಂಬವರನ್ನು ಆರಿಸಿಕೊಂಡರು.
20 : ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸಲು ಮತಿತ್ಯ, ಎಲೀಫೆಲೇಹು,
21 : ಮಿಕ್ನೇಯ, ದೇವಾಲಯದ ದ್ವಾರಪಾಲಕರಾದ ಓಬೇದೆದೋಮ್ ಮತ್ತು ಯೆಗೀಯೇಲರನ್ನೂ ನೇಮಿಸಿಕೊಂಡರು.
22 : ಸಂಗೀತದಲ್ಲಿ ಪರಿಣತನಾದ ಕೆನನ್ಯ, ಲೇವಿಯರ ವಾದ್ಯವೃಂದಕ್ಕೆ ಮುಖ್ಯಸ್ಥನಾಗಿ ನೇಮಕಗೊಂಡನು.
23 : ಬೆರಕ್ಕೆ ಹಾಗು ಎಲ್ಕಾನ ಎಂಬವರು ಓಬೇದೆದೋಮ್ ಮತ್ತು ಯೆಹೀಯರೊಂದಿಗೆ ಮಂಜೂಷದ ಕಾವಲುಗಾರರಾಗಿ ನೇಮಕವಾದರು.
24 : ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಹಾಗು ಎಲೀಯೆಜೆರ್ ಎಂಬವರು ಮಂಜೂಷದ ಮುಂದೆ ತುತ್ತೂರಿಗಳನ್ನು ಊದಲು ಆಯ್ಕೆಯಾದರು.
25 : ಹೀಗೆ ಅರಸ ದಾವೀದನು, ಇಸ್ರಯೇಲಿನ ನಾಯಕರು ಹಾಗು ಸೈನ್ಯದ ಅಧಿಕಾರಿಗಳು ನಿಬಂಧನ ಮಂಜೂಷವನ್ನು ತರಲು ಓಬೇದೆದೋಮನ ಮನೆಗೆ ಹೋದರು. ಇದನ್ನು ಒಂದು ದೊಡ್ಡ ಜಾತ್ರೆಯಂತೆಯೇ ಆಚರಿಸಲಾಯಿತು.
26 : ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರ ಸಹಾಯ ದೊರೆತುದರಿಂದ ಅವರು ಏಳು ಹೋರಿಗಳನ್ನೂ ಏಳು ಕುರಿಗಳನ್ನೂ ಬಲಿದಾನ ಮಾಡಿದರು.
27 : ದಾವೀದನು, ಮಂಜೂಷ ಹೊತ್ತವರು, ವಾದ್ಯ ಬಾರಿಸುವವರು ಹಾಗು ಅವರ ನಾಯಕ ಕೆನನ್ಯನು ಅತ್ಯುತ್ತಮ ನೂಲಿನಿಂದ ತಯಾರಿಸಿದ ನಿಲುವಂಗಿಗಳನ್ನು ಧರಿಸಿದ್ದರು. ದಾವೀದನು ಏಫೋದನ್ನು ಕೂಡ ಧರಿಸಿಕೊಂಡಿದ್ದನು.
28 : ಹೀಗೆ ಎಲ್ಲಾ ಇಸ್ರಯೇಲರು ಜೆರುಸಲೇಮಿನವರೆಗೆ ಆನಂದ ಘೋಷಣೆಗಳಿಂದಲೂ ತುತೂರಿ, ಕೊಂಬು, ತಾಳ, ತಂತಿ, ವಾದ್ಯಗಳ ಸಂಗೀತದಿಂದಲೂ ಸರ್ವೇಶ್ವರನ ನಿಬಂಧನಾ ಮಂಜೂಷವನ್ನು ಹೊತ್ತು ತಂದರು.
29 : ಆ ಮಂಜೂಷ ಪಟ್ಟಣದೊಳಗೆ ಬರುತ್ತಿದ್ದಂತೆ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿ ನೋಡಿದಳು. ದಾವೀದನು ಸಂತೋಷದಿಂದ ಕುಣಿಯುತ್ತಾ ನರ್ತಿಸುತ್ತಾ ಇದ್ದುದನ್ನು ಕಂಡಳು. ಅದನ್ನು ನೋಡಿ ಅವನ ಬಗ್ಗೆ ಅವಳಲ್ಲಿ ತಿರಸ್ಕಾರ ಭಾವ ಮೂಡಿತು.

· © 2017 kannadacatholicbible.org Privacy Policy