1 : ಟೈರಿನ ಅರಸ ಹೀರಾಮನು ದಾವೀದನ ಬಳಿಗೆ ತನ್ನ ವಾಣಿಜ್ಯ ನಿಯೋಗವನ್ನು ಕಳುಹಿಸಿದನು. ಅರಮನೆಯನ್ನು ಕಟ್ಟಲು ಅವನಿಗೆ ದೇವದಾರು ಮರದ ದಿಮ್ಮಿಗಳನ್ನು, ಶಿಲ್ಪಿಗಳನ್ನು ಹಾಗು ಬಡಗಿಯವರನ್ನು ಕಳುಹಿಸಿಕೊಟ್ಟನು.
2 : ಹೀಗೆ ದಾವೀದನು ದೇವಪ್ರಜೆಗಳಾದ ಇಸ್ರಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿ ತನ್ನನ್ನು ಇಸ್ರಯೇಲ್ ರಾಜನನ್ನಾಗಿ ಸ್ಥಿರಪಡಿಸುವರೆಂದು ತಿಳಿದುಕೊಂಡನು.
3 : ಜೆರುಸಲೇಮಿನಲ್ಲೂ ದಾವೀದನು ಹಲವು ಮಹಿಳೆಯರನ್ನು ವಿವಾಹವಾಗಿ ಇನ್ನೂ ಕೆಲವು ಮಂದಿ ಗಂಡು ಮಕ್ಕಳನ್ನೂ ಹೆಣ್ಣು ಮಕ್ಕಳನ್ನೂ ಪಡೆದನು.
4 : ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
5 : ಇಬ್ಹಾರ್, ಎಲೀಷೂವ, ಎಲ್ಪೆಲೆಟ್,
6 : ನೋಗಹ, ನೆಫೆಗ್, ಯಾಫೀಯ,
7 : ಎಲೀಷಾಮ, ಬೇಲ್ಯಾದ ಹಾಗು ಎಲೀಫೆಲೆಟ್ ಎಂಬವರು.
8 : ದಾವೀದನು ಇಸ್ರಯೇಲರೆಲ್ಲರ ಇಡೀ ನಾಡಿಗೆ ಅರಸನಾಗಿ ಅಭಿಷಿಕ್ತನಾಗಿದ್ದಾನೆಂಬ ವರ್ತಮಾನವನ್ನು ಫಿಲಿಷ್ಟಿಯರು ಕೇಳಿದರು. ಅವನನ್ನು ಸೆರೆಹಿಡಿಯಲು ತಮ್ಮ ಸೈನ್ಯವನ್ನು ಕಳುಹಿಸಿದರು. ದಾವೀದನು ಅವರನ್ನು ಎದುರಿಸಲು ಸಿದ್ಧನಾದರು.
9 : ಫಿಲಿಷ್ಟಿಯರು ರೆಫಾಯಿಮ್ ಕಣಿವೆಯನ್ನು ತಲುಪಿ ಸುಲಿಗೆಮಾಡಲು ಪ್ರಾರಂಭಿಸಿದರು.
10 : “ಫಿಲಿಷ್ಟಿಯರ ಮೇಲೆ ನಾನು ದಾಳಿ ಮಾಡಬಹುದೊ? ನೀವು ನನಗೆ ಜಯವನ್ನು ಕೊಡುವಿರೋ?” ಎಂದು ದಾವೀದನು ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸಿದನು.
“ಹೌದು, ಅವರನ್ನು ಎದುರಿಸು. ನಾನು ನಿನಗೆ ಜಯವನ್ನು ಕೊಡುವೆನು,” ಎಂದು ಸರ್ವೇಶ್ವರ ಉತ್ತರಕೊಟ್ಟರು.
11 : ಹೀಗೆ ದಾವೀದ ಬಾಳ್ ಪೆರಾಚೀಮ್ ಎಂಬಲ್ಲಿ ಅವರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನುಗ್ಗಿ ವೈರಿಸೈನ್ಯವನ್ನು ನಾಶಮಾಡಲು ಸರ್ವೇಶ್ವರ ನನ್ನನ್ನು ಉಪಯೋಗಿಸಿದ್ದಾರೆ,” ಎಂದು ಹೇಳಿದನು. ಈ ಕಾರಣ ಆ ಸ್ಥಳಕ್ಕೆ ‘ಬಾಳ್ ಪೆರಾಚೀಮ್’ ಎಂಬ ಹೆಸರು ಬಂದಿತು.
12 : ಫಿಲಿಷ್ಟಿಯರು ತಲೆ ತಪ್ಪಿಸಿಕೊಂಡು ಓಡಿಹೋಗುವಾಗ ತಮ್ಮ ವಿಗ್ರಹಗಳನ್ನು ಅಲ್ಲೇ ಬಿಟ್ಟು ಹೋದರು. ಅವೆಲ್ಲವನ್ನು ಸುಟ್ಟುಹಾಕಬೇಕೆಂದು ದಾವೀದನು ಅಪ್ಪಣೆ ಮಾಡಿದನು.
13 : ಸ್ವಲ್ಪವೇ ಸಮಯದ ನಂತರ ಫಿಲಿಷ್ಟಿಯರು ಪುನಃ ಬಂದು ಕಣಿವೆಯಲ್ಲಿ ಕೊಳ್ಳೆ ಹೊಡೆಯಲು ಪ್ರಾರಂಭಿಸಿದರು.
14 : ದಾವೀದನು ಮತ್ತೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದನು. “ನೀನು ಅವರನ್ನು ಬೆನ್ನಟ್ಟಬೇಡ. ಸುತ್ತಿಕೊಂಡು ಹೋಗಿ ಬಾಕಾಮರಗಳಿರುವ ಆಚೆಕಡೆಯಿಂದ ಅವರ ಮೇಲೆ ದಾಳಿಮಾಡು.
15 : ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳುವಾಗ, ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನನಗೆ ಮುಂದಾಗಿ ಹ್ರೆರಟಿದ್ದಾರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದು ಸರ್ವೇಶ್ವರ ಉತ್ತರಕೊಟ್ಟರು.
16 : ಸರ್ವೇಶ್ವರ ಹೇಳಿದಂತೆಯೇ ದಾವೀದನು ಮಾಡಿದನು. ಫಿಲಿಷ್ಟಿಯರನ್ನು ಗಿಬ್ಯೋನಿನಿಂದ ಗೆಜೆರಿನವರೆಗೂ ಹಿಮ್ಮೆಟ್ಟಿದನು.
17 : ದಾವೀದನ ಹೆಸರು ಎಲ್ಲಾ ಕಡೆಗಳಲ್ಲಿ ಪ್ರಖ್ಯಾತಿಗೆ ಬಂದಿತು; ಎಲ್ಲಾ ದೇಶಗಳವರೂ ದಾವೀದನಿಗೆ ಭಯಪಡುವಂತೆ ಸರ್ವೇಶ್ವರ ಮಾಡಿದರು.