Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೂತಳು


1 : ಒಂದು ದಿನ ನವೊಮಿ ರೂತಳಿಗೆ: “ಮಗಳೇ, ನೀನು ಮತ್ತೆ ಗೃಹಿಣಿಯಾಗಿ ಸುಖದಿಂದ ಬಾಳುವಂತೆ ಏರ್ಪಾಟು ಮಾಡುವುದು ನನ್ನ ಕರ್ತವ್ಯವಲ್ಲವೇ?
2 : ಆ ಬೋವಜನು ನಮ್ಮ ನೆಂಟ. ಅವನ ಹೆಣ್ಣಾಳುಗಳ ಜೊತೆಯಲ್ಲಿ ನೀನು ತೆನೆ ಆರಿಸಿಕೊಳ್ಳುತ್ತಿದ್ದೀಯಲ್ಲವೇ? ಈಗ ನಾನು ಹೇಳುವುದನ್ನು ಗಮನಿಸು; ಈ ಸಂಜೆ ಬೋವಜನು ಕಣದಲ್ಲಿ ಜವೆಗೋದಿಯನ್ನು ತೂರುವನು.
3 : ನೀನು ಸ್ನಾನಮಾಡಿಕೊಂಡು ಸುಗಂಧ ತೈಲವನ್ನು ಹಚ್ಚಿ, ಸೊಗಸಾದ ಉಡುಪನ್ನು ತೊಟ್ಟುಕೊ. ಆಮೇಲೆ ಕಣಕ್ಕೆ ಹೋಗು. ಅವನು ಅನ್ನಪಾನಮಾಡಿ ಮುಗಿಸುವವರೆಗೂ ಅವನಿಗೆ ಕಾಣಿಸಿಕೊಳ್ಳಬೇಡ.
4 : ಅವನು ಎಲ್ಲಿ ಮಲಗುತ್ತಾನೆ ಎಂಬುದನ್ನು ಗೊತ್ತು ಮಾಡಿಕೊ. ಅವನು ಮಲಗಿದ ಮೇಲೆ ಅಲ್ಲಿಗೆ ಹೋಗು. ಅವನ ಪಾದಗಳ ಮೇಲಿನ ಹೊದಿಕೆಯನ್ನು ಮೆತ್ತಗೆ ಸರಿಸಿಬಿಟ್ಟು ಪಕ್ಕದಲ್ಲೇ ಮಲಗು. ಆಮೇಲೆ ನೀನು ಮಾಡಬೇಕಾದುದೇನೆಂಬುದನ್ನು ಅವನೇ ತಿಳಿಸುವನು,” ಎಂದು ಹೇಳಿದಳು.
5 : ರೂತಳು: “ನೀವು ಹೇಳಿದಂತೆಯೇ ನಾನು ಮಾಡುತ್ತೇನೆ,” ಎಂದು ಮರುತ್ತರಕೊಟ್ಟಳು.
6 : ಅದರಂತೆ ರೂತಳು ಕಣಕ್ಕೆ ಹೋಗಿ ಅತ್ತೆ ಹೇಳಿಕೊಟ್ಟಂತೆ ಮಾಡಿದಳು.
7 : ಇತ್ತ ಬೋವಜನು ಅನ್ನಪಾನಮಾಡಿ ಸಂತುಷ್ಟನಾಗಿದ್ದನು. ಅನಂತರ ಜವೆಗೋದಿಯ ರಾಶಿಯ ಬಳಿ ಹೋಗಿ ಮಲಗಿಕೊಂಡನು. ರೂತಳು ನಿಶ್ಯಬ್ಧವಾಗಿ ಅವನ ಬಳಿಗೆ ಹೋದಳು. ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ಮೆತ್ತಗೆ ಸರಿಸಿ, ಅಲ್ಲೇ ಮಲಗಿಕೊಂಡಳು. ಸುಮಾರು ನಡುರಾತ್ರಿಯಲ್ಲಿ ಅವನಿಗೆ ತಟ್ಟನೆ ಎಚ್ಚರವಾಯಿತು. ಬಗ್ಗಿ ನೋಡಿದಾಗ ಸ್ತ್ರೀಯೊಬ್ಬಳು ಪಾದಗಳ ಬಳಿ ಮಲಗಿರುವುದನ್ನು ಕಂಡು ಚಕಿತಗೊಂಡು, “ನೀನು ಯಾರು?” ಎಂದು ಕೇಳಿದನು.
8 : ಅದಕ್ಕೆ ರೂತಳು: “ಒಡೆಯಾ, ನಾನು ನಿಮ್ಮ ದಾಸಿ ರೂತಳು.
9 : ನೀವು ನನ್ನ ಹತ್ತಿರದ ನೆಂಟರಾಗಿ ಇರುವುದರಿಂದ ದಯವಿಟ್ಟು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿ,” ಎಂದು ಕೇಳಿಕೊಂಡಳು.
10 : ಬೋವಜನು: “ಮಗಳೇ, ಸರ್ವೇಶ್ವರ ನಿನ್ನನ್ನು ಆಶೀರ್ವದಿಸಲಿ! ನೀನು ಬಡ ಯೌವನಸ್ಥನನ್ನಾಗಲೀ, ಸಿರಿವಂತ ಯೌವನಸ್ಥನನ್ನಾಗಲೀ ಅರಸಲಿಲ್ಲ. ನೀನು ನನಗೆ ತೋರಿದ ವಂಶ ಗೌರವವು ಇಲ್ಲಿಯವರೆಗೆ ನೀನು ಅತ್ತೆಗೆ ತೋರಿದ ಗೌರವಕ್ಕಿಂತಲೂ ಶ್ರೇಷ್ಠವಾದುದು.
11 : ಮಗಳೇ, ಭಯಪಡಬೇಡ, ನೀನು ಸುಗುಣಶೀಲೆ ಎಂದು ಊರಿಗೆಲ್ಲಾ ತಿಳಿದಿದೆ; ನೀನು ಕೇಳಿಕೊಂಡದ್ದನ್ನು ಈಡೇರಿಸುವೆನು.
12 : ನಾನು ನಿಮಗೆ ಹತ್ತಿರದ ನೆಂಟನಾಗಿರುವುದೇನೋ ನಿಜ. ನಿನ್ನನ್ನು ಸಲಹುವ ಮೈದುನ ಕರ್ತವ್ಯ ನನ್ನದು. ಆದರೆ ನನಗಿಂತಲೂ ಹತ್ತಿರದ ನೆಂಟನೊಬ್ಬನಿದ್ದಾನೆ.
13 : ಈ ರಾತ್ರಿ ಇಲ್ಲೇ ಇರು. ಅವನು ನಿನ್ನನ್ನು ಸಲಹುವ ಜವಾಬ್ದಾರಿ ವಹಿಸಿಕೊಳ್ಳುವನೋ ಇಲ್ಲವೋ ಎಂಬುದನ್ನು ನಾಳೆ ವಿಚಾರಿಸಿಕೊಳ್ಳೋಣ. ಅವನು ಅದನ್ನು ವಹಿಸಿಕೊಳ್ಳುವುದಾದರೆ ಒಳ್ಳೆಯದು. ಇಲ್ಲವಾದರೆ ನಾನೇ ಆ ಕರ್ತವ್ಯವನ್ನು ವಹಿಸಿಕೊಳ್ಳುತ್ತೇನೆ ಎಂದು ಜೀವಸ್ವರೂಪರಾದ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಇನ್ನು ನಿಶ್ಚಿಂತಳಾಗಿ ಮಲಗು,” ಎಂದನು.
14 : ಅದರಂತೆ ಅವಳು ಅವನ ಪಾದಗಳ ಬಳಿಯಲ್ಲೇ ಮಲಗಿದಳು. ಅವಳು ಅಲ್ಲಿಗೆ ಬಂದದ್ದು ಯಾರಿಗೂ ತಿಳಿಯಬಾರದೆಂದು ಬೋವಜನು ಹೇಳಿದ್ದನು; ಎಂತಲೇ ನಸುಕಿನಲ್ಲೇ ಎದ್ದಳು.
15 : ಬೋವಜನು ಆಕೆಗೆ, “ನಿನ್ನ ಮೇಲ್ಹೊದಿಕೆಯನ್ನು ಹಾಸು,” ಎಂದು ಹೇಳಿ ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂನಷ್ಟು ಜವೆಗೋದಿಯನ್ನು ಸುರಿದು, ಅದನ್ನೆತ್ತಿ ಹೊರಿಸಿದನು. ಆಕೆ ಅದನ್ನು ಹೊತ್ತುಕೊಂಡು ಊರೊಳಗೆ ಹೋದಳು.
16 : ಅತ್ತೆಯ ಬಳಿಗೆ ಬಂದಾಗ, “ನೀನು ಹೋಗಿದ್ದ ಕಾರ್ಯ ಏನಾಯಿತು?” ಎಂದು ಕೇಳಲು, ರೂತಳು ಬೋವಜನು ತನಗೆ ಮಾಡಿದ್ದೆಲ್ಲವನ್ನು ತಿಳಿಸಿದಳು.
17 : ಇದಲ್ಲದೆ, “ಅತ್ತೆಯ ಬಳಿಗೆ ಬರಿಗೈಯಲ್ಲಿ ಹೋಗಬೇಡ, ಎಂದು ಹೇಳಿ ಇಷ್ಟೊಂದು ಜವೆಗೋದಿಯನ್ನು ಕೊಟ್ಟನು,” ಎಂದು ಹೇಳಿದಳು.
18 : ಆಗ ನವೊಮಿ, “ಮಗಳೇ, ಇದರ ಫಲಿತಾಂಶ ಏನಾಗುವುದೆಂದು ಗೊತ್ತಾಗುವವರೆಗೂ ತಾಳ್ಮೆಯಿಂದಿರು. ಬೋವಜನು ಈ ವಿಷಯವನ್ನು ಇತ್ಯರ್ಥ ಮಾಡುವವರೆಗೆ ಸುಮ್ಮನಿರಲಾರನು,” ಎಂದು ಹೇಳಿದಳು.

· © 2017 kannadacatholicbible.org Privacy Policy