Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೂತಳು


1 : ನವೊಮಿಗೆ ಬೋವಜ ಎಂಬ ನೆಂಟನು ಇದ್ದನು. ಅವನು ಐಶ್ವರ್ಯವಂತ ಮತ್ತು ಒಬ್ಬ ಗಣ್ಯ ವ್ಯಕ್ತಿ; ನವೊಮಿಯ ಪತಿ ಎಲಿಮೆಲೆಕನ ಕುಟುಂಬಕ್ಕೆ ಸೇರಿದವನು.
2 : ರೂತಳು ನವೊಮಿಗೆ: “ನಾನು ಹೊಲಗಳಿಗೆ ಹೋಗಿ ತೆನೆಗಳನ್ನು ಆಯ್ದುಕೊಂಡು ಬರಲೇ? ಇದಕ್ಕೆ ಯಾರಾದರು ನನಗೆ ನೆರವಾಗಬಹುದು,” ಎಂದು ಕೇಳಿದಳು. ನವೊಮಿ, “ಹೋಗಿ ಬಾ, ಮಗಳೇ,” ಎಂದು ಅಪ್ಪಣೆಕೊಟ್ಟಳು.
3 : ರೂತಳು ಕೊಯ್ಯುವವರ ಹಿಂದೆ ಹೋಗುತ್ತಾ ಅಲ್ಲಲ್ಲಿ ಬಿದ್ದ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಸುದೈವದಿಂದ ಅದು ಎಲಿಮೆಲೆಕನ ನೆಂಟನಾದ ಬೋವಜನ ಹೊಲವಾಗಿತ್ತು.
4 : ಸ್ವಲ್ಪ ಹೊತ್ತಾದ ಮೇಲೆ ಇದ್ದಕ್ಕಿದ್ದ ಹಾಗೆ ಬೋವಜನು ಬೆತ್ಲೆಹೇಮಿನಿಂದ ಅಲ್ಲಿಗೆ ಬಂದನು. ಅವನು, “ಸರ್ವೇಶ್ವರಸ್ವಾಮಿ ನಿಮ್ಮೊಡನೆ ಇರಲಿ!” ಎಂದು ಕೆಲಸದಾಳುಗಳನ್ನು ವಂದಿಸಿದನು. ಅದಕ್ಕೆ ಅವರು, “ಸರ್ವೇಶ್ವರ ನಿಮ್ಮನ್ನೂ ಹರಸಲಿ!” ಎಂದು ಪ್ರತಿವಂದನೆ ಮಾಡಿದರು.
5 : ಬೋವಜನು ಮೇಸ್ತ್ರಿಯನ್ನು ಕರೆದು, “ಇವಳು ಯಾವ ಮನೆಯ ಹೆಣ್ಣು?” ಎಂದು ವಿಚಾರಿಸಿದನು.
6 : ಅದಕ್ಕೆ ಆ ಮೇಸ್ತ್ರಿ, “ಇವಳು ಮೋವಾಬ್ಯಳು, ನವೊಮಿಯ ಸಂಗಡ ಮೋವಾಬ್ ನಾಡಿನಿಂದ ಹಿಂದಿರುಗಿ ಬಂದವಳು.
7 : ಕೊಯ್ಯುವವರ ಹಿಂದೆ ಹೋಗಿ ಸಿವುಡಗಳ ಮಧ್ಯೆ ಹಕ್ಕಲಾಯ್ದುಕೊಳ್ಳುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡಳು. ಬೆಳಿಗ್ಗೆ ಬಂದವಳು ಇನ್ನೂ ಇಲ್ಲೇ ಇದ್ದಾಳೆ. ಸದ್ಯಕ್ಕೆ ನೆರಳಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಳೆ,” ಎಂದು ಉತ್ತರಕೊಟ್ಟನು.
8 : ತದನಂತರ ಬೋವಜನು ರೂತಳಿಗೆ, “ನೋಡಮ್ಮಾ, ಈ ಹೊಲವನ್ನು ಬಿಟ್ಟು ಮತ್ತೆ ಎಲ್ಲಿಯೂ ತೆನೆ ಆಯಲು ಹೋಗಬೇಕಾಗಿಲ್ಲ, ನನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಇರು.
9 : ಅವರು ಎಲ್ಲಿ ಪೈರು ಕೊಯ್ಯುತ್ತಾರೋ ಅವರ ಹಿಂದೆ ಹೋಗಿ ತೆನೆಗಳನ್ನು ಆರಿಸಿಕೊ. ನಿನಗೆ ಯಾರೂ ತೊಂದರೆ ಕೊಡಬಾರದೆಂದು ನನ್ನ ಆಳುಗಳಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ಹೋಗಿ ನನ್ನ ಆಳುಗಳು ತುಂಬಿಸಿರುವ ನೀರಿನ ಬಾನೆಗಳಿಂದ ಕುಡಿ,” ಎಂದನು.
10 : ಆಗ ರೂತಳು ಅವನಿಗೆ ಸಾಷ್ಟಾಂಗವೆರಗಿ ನಮಸ್ಕರಿಸಿ, “ಒಡೆಯಾ, ನನ್ನ ಮೇಲೆ ಏಕೆ ಇಷ್ಟು ಕನಿಕರ? ಪರದೇಶಿಯಾದ ನನಗೆ ತಾವಿಷ್ಟು ದಯೆತೋರಿಸುವುದೇಕೆ?” ಎಂದಳು.
11 : ಅದಕ್ಕೆ ಬೋವಜನು, “ನಿನ್ನ ಪತಿ ತೀರಿಹೋದಂದಿನಿಂದ ನೀನು ಅತ್ತೆಗಾಗಿ ಮಾಡಿದ್ದ ಎಲ್ಲವನ್ನೂ ಕುರಿತು ಕೇಳಿದ್ದೇನೆ. ನೀನು ಹೇಗೆ ನಿನ್ನ ತಂದೆತಾಯಿಗಳನ್ನು ಮತ್ತು ಸ್ವಂತನಾಡನ್ನು ಬಿಟ್ಟು, ಅಪರಿಚಿತರಾದ ಜನರ ಮಧ್ಯೆ ವಾಸಿಸಲು ಬಂದಿರುವೆ ಎಂಬುದು ಸಹ ನನಗೆ ತಿಳಿದಿದೆ.
12 : ನೀನು ಮಾಡಿದ್ದಕ್ಕೆಲ್ಲಾ ದೇವರು ನಿನಗೆ ತಕ್ಕ ಪ್ರತಿಫಲವನ್ನೀಯಲಿ. ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಆಶ್ರಯವನ್ನರಸಿ ಬಂದಿರುವೆ. ಅವರು ನಿನಗೆ ಹೇರಳವಾದ ಆಶೀರ್ವಾದವನ್ನು ಅನುಗ್ರಹಿಸಲಿ!” ಎಂದನು.
13 : ಆಗ ರೂತಳು, “ಒಡೆಯಾ, ತಾವು ನನಗೆ ದೊಡ್ಡ ಉಪಕಾರವನ್ನು ಮಾಡಿದ್ದೀರಿ. ನಾನು ತಮ್ಮ ದಾಸಿ ಎನಿಸಿಕೊಳ್ಳುವುದಕ್ಕೂ ಯೋಗ್ಯಳಲ್ಲ. ಆದರೂ ನನ್ನನ್ನು ಕನಿಕರಿಸಿ ಪ್ರೀತಿಯಿಂದ ಮಾತನಾಡಿದ್ದೀರಿ,” ಎಂದು ಹೇಳಿದಳು.
14 : ಊಟದ ಸಮಯದಲ್ಲಿ ಬೋವಜನು ರೂತಳನ್ನು ಕರೆದು, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ದ್ರಾಕ್ಷಾರಸದಲ್ಲಿ ಅದ್ದಿ ತಿನ್ನು,” ಎಂದನು. ಆಕೆ ಕೊಯ್ಯುವವರ ಸಂಗಡ ಕುಳಿತುಕೊಂಡಳು. ಇದಲ್ಲದೆ ಬೋವಜನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ಅವಳು ತೃಪ್ತಿಯಾಗಿ ಊಟಮಾಡಿ ಇನ್ನೂ ಸ್ವಲ್ಪ ಉಳಿಸಿಕೊಂಡಳು.
15 : ಅವಳು ಪುನಃ ಹಕ್ಕಲು ತೆನೆಗಳನ್ನು ಆರಿಸಿಕೊಳ್ಳಲು ಹೋದಾಗ, ಬೋವಜನು ತನ್ನ ಆಳುಗಳಿಗೆ, “ಸಿವುಡುಗಳ ಮಧ್ಯದಲ್ಲೂ ಅವಳು ತೆನೆಗಳನ್ನು ಆರಿಸಿಕೊಳ್ಳಲಿ; ಅಡ್ಡಿಮಾಡಬೇಡಿ.
16 : ನೀವು ಕೊಯ್ಯುವಾಗ ಕೆಲವು ತೆನೆಗಳನ್ನು ಕಟ್ಟುಗಳಿಂದ ಕಿತ್ತು ಕೆಳಗೆ ಹಾಕಿರಿ. ಅವಳು ಆಯ್ದುಕೊಳ್ಳಲಿ; ಯಾರೂ ಅವಳನ್ನು ಗದರಿಸಬೇಡಿ,” ಎಂದು ಆಜ್ಞೆಯಿತ್ತನು.
17 : ಅದರಂತೆಯೇ ರೂತಳು ಸಾಯಂಕಾಲದವರೆಗೆ ತೆನೆಗಳನ್ನು ಆಯ್ದುಕೊಂಡಳು. ಅವನ್ನು ಬಡಿದಾಗ ಸುಮಾರು ಅರ್ಧ ಚೀಲದಷ್ಟು ಜವೆಗೋದಿ ಸಿಕ್ಕಿತು.
18 : ಅದನ್ನು ತೆಗೆದುಕೊಂಡು ಊರೊಳಕ್ಕೆ ಹೋಗಿ ತನ್ನ ಅತ್ತೆಗೆ ತೋರಿಸಿದಳು. ಅಂತೆಯೇ ತನ್ನ ಆಹಾರದಿಂದ ಉಳಿಸಿಟ್ಟಿದ್ದನ್ನು ತನ್ನ ಅತ್ತೆಗೆ ಕೊಟ್ಟಳು.
19 : ಅದನ್ನು ನೋಡಿ ನವೊಮಿ, “ನೀನು ಈ ದಿನ ಎಲ್ಲ ಹಕ್ಕಲಾಯ್ದೆ? ಯಾರ ಹೊಲದಲ್ಲಿ ಕೆಲಸಮಾಡಿದೆ? ನಿನಗೆ ದಯೆ ತೋರಿಸಿದವನಿಗೆ ಶುಭವಾಗಲಿ!” ಎಂದಳು. ಅದಕ್ಕೆ ರೂತಳು, “ನಾನು ತೆನೆ ಆಯ್ದುಕೊಂಡ ಹೊಲವು ಬೋವಜನದು,” ಎಂದು ಹೇಳಿದಳು.
20 : ಇದನ್ನು ಕೇಳಿದ ನವೊಮಿ ಆವೇಶದಿಂದ, “ಜೀವಂತರಿಗೂ ಮೃತರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಸರ್ವೇಶ್ವರ ಅವನನ್ನು ಆಶೀರ್ವದಿಸಲಿ!” ಎಂದು ಹರಸಿ, “ಆ ಮನುಷ್ಯ ನಮಗೆ ಹತ್ತಿರದ ನೆಂಟ, ನಮ್ಮನ್ನು ಪೋಷಿಸಬೇಕಾದವನು,” ಎಂದು ತಿಳಿಸಿದಳು.
21 : ಇದಲ್ಲದೆ ರೂತಳು, “ಸುಗ್ಗಿಕಾಲ ತೀರುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರಬಹುದೆಂದು ಹೇಳಿದ್ದಾನೆ,” ಎಂದಳು.
22 : ಅದಕ್ಕೆ ನವೊಮಿ ತನ್ನ ಸೊಸೆಗೆ, “ಹೌದು, ಮಗಳೇ, ನೀನು ಆತನ ಹೆಣ್ಣಾಳುಗಳ ಸಂಗಡ ಇರುವುದೇ ಒಳ್ಳೆಯದು; ಬೇರೆಯವರ ಹೊಲದಲ್ಲಿ ನಿನಗೆ ತೊಂದರೆಯಾದೀತು,” ಎಂದು ಸಲಹೆ ಕೊಟ್ಟಳು.
23 : ಅದರಂತೆಯೆ ರೂತಳು ಜವೆಗೋದಿ ಮತ್ತು ಗೋದಿಯ ಸುಗ್ಗಿ ಮುಗಿಯವವರೆಗೂ ಬೋವಜನ ಹೆಣ್ಣಾಳುಗಳ ಸಂಗಡ ತೆನೆಗಳನ್ನು ಆಯ್ದುಕೊಳ್ಳುತ್ತಾ ಇದ್ದಳು; ಅತ್ತೆಯ ಮನೆಯಲ್ಲೇ ವಾಸಿಸುತ್ತಿದ್ದಳು.

· © 2017 kannadacatholicbible.org Privacy Policy