Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನ್ಯಾಯ


1 : ‘ಯೆರುಬ್ಬಾಳ’ನ ಮಗ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರ ಮಾವಂದಿರಿಗೂ ತಾಯಿಯ ಬಂಧುಗಳೆಲ್ಲರಿಗೂ,
2 : “ನೀವು ದಯವಿಟ್ಟು ಶೆಕೆಮಿನ ಹಿರಿಯರೊಡನೆ ಮಾತಾಡಬೇಕು. ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳುವುದು ಒಳ್ಳೆಯದೋ ಅಥವಾ ಒಬ್ಬನೇ ಆಳುವುದು ಮೇಲೋ? ಎಂದು ಅವರನ್ನು ವಿಚಾರಿಸಬೇಕು; ನಾನು ಅವರ ರಕ್ತ ಸಂಬಂಧಿಯಾಗಿದ್ದೇನೆಂಬುದನ್ನು ಜ್ಞಾಪಕಪಡಿಸಬೇಕು” ಎಂದು ಕೇಳಿಕೊಂಡನು.
3 : ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಿದರು. ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲವೆ” ಎಂದುಕೊಂಡು ಅವನ ಪಕ್ಷವಹಿಸಲು ಒಪ್ಪಿಕೊಂಡರು.
4 : ಅದು ಮಾತ್ರವಲ್ಲ, ಬಾಳ್‍ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ಬೆಳ್ಳಿನಾಣ್ಯಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಮಂದಿ ಪುಂಡಪೋಕರಿಗಳನ್ನು ಕೂಡಿಸಿ, ಅವರ ನಾಯಕನಾಗಿ ಹೊರ
5 : ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನು ಅವಿತುಕೊಂಡು ತನ್ನ ಜೀವವನ್ನು ಉಳಿಸಿಕೊಂಡನು.
6 : ತರುವಾಯ ಎಲ್ಲಾ ಶೆಕೆಮಿನವರೂ ಹಾಗು ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಸ್ಮಾರಕ ಸ್ತಂಭವಿರುವ ಓಕ್‍ಮರದ ಹತ್ತಿರ ಕೂಡಿ ಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು.
7 : : “ಶೆಕೆಮಿನ ಜನರೇ, ನನ್ನ ಮಾತಿಗೆ ಕಿವಿಗೊಡಿ; ಆಗ ದೇವರೂ ನಿಮ್ಮ ಮೊರೆಗೆ ಕಿವಿಗೊಡುವರುಯೋತಾಮನ ಸಾಮತಿ ಯೋತಾಮನು ಇದನ್ನು ಕೇಳಿ, ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ ಹೀಗೆಂದನು:
8 : “ಒಮ್ಮೆ ಮರಗಳು ತಮಗೆ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಓಲಿವ್ ಮರದ ಬಳಿಗೆ ಬಂದು, ‘ನೀನು ನಮಗೆ ಅರಸನಾಗು,’ ಎಂದವು.
9 : ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಯಿಂದ ದೇವತೆಗಳೂ ಮಾನವರೂ ಘನತೆ ಗೌರವಗಳನ್ನು ಪಡೆಯುತ್ತಾರೆ. ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
10 : “ಬಳಿಕ ಆ ಮರಗಳು ಅಂಜೂರದ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
11 : ಅದು, ‘ನಾನು ನನ್ನ ಶ್ರೇಷ್ಠವಾದ ಸಿಹಿಹಣ್ಣು ಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
12 : “ಅನಂತರ ಆ ಮರಗಳು ದ್ರಾಕ್ಷಾಬಳ್ಳಿಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
13 : ಅದಕ್ಕೆ ಆ ಬಳ್ಳಿ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮಾನವರಿಗೂ ಆನಂದ ತರುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
14 : “ಕಡೆಗೆ ಆ ಮರಗಳು ಮುಳ್ಳು ಪೊದೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
15 : ಅದಕ್ಕೆ ಆ ಪೊದೆ, ‘ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ, ಬನ್ನಿ, ಬಂದು ನನ್ನ ನೆರಳಲ್ಲಿ ಆಶ್ರಯಿಸಿಕೊಳ್ಳಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು,’ ಎಂದುಬಿಟ್ಟಿತು.
16 : “ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯಸಮ್ಮತವೇ? ಅದು ಧರ್ಮಕಾರ್ಯವೇ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕಾಗಿ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರ ಮಾಡಿದಿರೋ?
17 : ನನ್ನ ತಂದೆ ತನ್ನ ಪ್ರಾಣಾಶೆಯನ್ನು ತೊರೆದು ಹೋರಾಡಿ ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲವೆ?
18 : ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿದ ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಿಮ್ಮ ಬಂಧುವೆಂದು ಹೇಳಿ ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.
19 : ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲೇ ಆನಂದಿಸಿರಿ; ಅವನು ನಿಮ್ಮಲ್ಲೇ ಆನಂದಿಸಲಿ.
20 : ಇಲ್ಲವಾದರೆ, ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ ಮಿಲ್ಲೋ ಕೋಟೆಯವರನ್ನೂ ಸುಟ್ಟು ಬಿಡಲಿ’ ಶೆಕೆಮಿನವರಿಂದಲೂ ಮಿಲ್ಲೋ ಕೋಟೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ಸುಟ್ಟುಬಿಡಲಿ.”
21 : ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು.
22 : ಅಬೀಮೆಲೆಕನು ಇಸ್ರಯೇಲರನ್ನು ಮೂರು ವರ್ಷ ಆಳಿದನಂತರ
23 : ಸರ್ವೇಶ್ವರಸ್ವಾಮಿ ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ದುಷ್ಟ ಆತ್ಮವನ್ನು ಕಳುಹಿಸಿದರು. ಈ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹ ಎಸಗಿದರು.
24 : ಹೀಗೆ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದು ಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೂ ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೂ ಬರುವುದಕ್ಕೆ ಮಾರ್ಗವಾಯಿತು.
25 : ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆಮಾಡುತ್ತಿದ್ದರು. ಈ ವರ್ತಮಾನ ಅಬೀಮೆಲೆಕನಿಗೆ ಮುಟ್ಟಿತು.
26 : ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬವನು ತನ್ನ ಬಂದುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸೆ ಇಟ್ಟರು.
27 : ಆ ಊರಿನವರು ಒಂದು ದಿವಸ ತಮ್ಮ ದ್ರಾಕ್ಷಾಫಲಗಳನ್ನು ಕೊಯ್ದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ, ಹಬ್ಬ ಮಾಡಿ, ಉಂಡು, ಕುಡಿದು ಅಬೀಮೆಲೆಕನನ್ನು ಶಪಿಸಿದರು.
28 : ಎಬೇದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನಿಗೆ ಏಕೆ ಸೇವೆಮಾಡಬೇಕು? ಅವನು ಯೆರುಬ್ಬಾಳನ ಮಗನಲ್ಲವೇ? ಅವನ ಪುರಾಧಿಕಾರಿ ಜೆಬುನಲ್ಲವೇ? ನಾವು ಅವನಿಗೆ ಏಕೆ ಸೇವೆಮಾಡಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರಿಗೇ ಸೇವೆಮಾಡೋಣ.
29 : ಈ ಜನರ ಮೇಲೆ ನನಗೆ ಅಧಿಕಾರವಿದ್ದರೆ ಅಬೀಮೆಲೆಕನನ್ನು ಓಡಸಿ ಬಿಡುತ್ತಿದ್ದೆ” ಎಂದು ಹೇಳಿದನು. ಅಷ್ಟು ಮಾತ್ರವಲ್ಲದೆ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ,” ಎಂದು ಕೊಚ್ಚಿಕೊಂಡನು.
30 : ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ ಕೋಪಗೊಂಡನು. ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ,
31 : “ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಬಿಂಸುತ್ತಿದ್ದಾರೆ.
32 : ಆದುದರಿಂದ ನೀನು ಈ ರಾತ್ರಿಯಲ್ಲೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು.
33 : ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು; ಅವನೂ ಅವನ ಜೊತೆಯಲ್ಲಿರುವವರೂ ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು,” ಎಂದು ಹೇಳಿಸಿದನು.
34 : ಅಬೀಮೆಲೆಕನೂ ಅವನ ಜನರೂ ರಾತ್ರಿಯಲ್ಲೇ ಹೊರಟು ಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿ ಕಾಯುತ್ತಿದ್ದರು.
35 : ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರ ಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿ ನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು.
36 : ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ,” ಎಂದು ಹೇಳಲು ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ,” ಎಂದನು. ಅವನು ಪುನಃ
37 : “ನೋಡು ದೇಶನಾಭಿಗಿರಿಯಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.
38 : ಆಗ ಜೆಬುಲನು ಅವನಿಗೆ, “ಈಗ ನಿನ್ನ ಮಾತೆಲ್ಲಿ? ಅಬೀಮೆಲೆಕನು ಎಷ್ಟರವನು? ನಾವು ಅವನಿಗೆ ಏಕೆ ಸೇವೆಮಾಡಬೇಕು ಎಂದು ಕೊಚ್ಚಿಕೊಂಡಿಯಲ್ಲವೆ? ಅವರು ನೀನು ತಿರಸ್ಕರಿಸಿದ ಜನರಲ್ಲವೇ? ಹಾಗಾದರೇ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ,” ಎಂದು ಹೇಳಿದನು.
39 : ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು.
40 : ಆದರೆ ಅಬೀಮೆಲೆಕನಿಗೆ ಬೆನ್ನುತೋರಿಸಿ ಓಡಿ ಹೋಗಬೇಕಾಯಿತು. ಅವನು ಇವನನ್ನು ಹಿಂದಟ್ಟಿದನು. ಊರಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು.
41 : ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಿಸಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಅಟ್ಟಿಬಿಟ್ಟನು.
42 : ಮಾರನೆಯದಿನ ಜನರು ಬೈಲಿಗೆ ಹೊರಟು ಬಂದರು;
43 : ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪುಮಾಡಿ ಅವರನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೆ ಅಲ್ಲಿಂದ ಎದ್ದು ಅವರ ಮೇಲೆ ದಾಳಿ ಮಾಡಿದನು.
44 : ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿಬಂದು ಊರಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.
45 : ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದರ ಜನರನ್ನೆಲ್ಲಾ ಸದೆಬಡಿದು ಊರನ್ನು ಕೆಡವಿ ಅಲ್ಲಿ ಉಪ್ಪನ್ನು ಎರಚಿಬಿಟ್ಟನು.
46 : ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್ ಬೆರೀತ್ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು.
47 : ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿದನು.
48 : .ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ,” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಂಡನು.
49 : ಅವರೂ ಅದರಂತೆಯೇ ಮಾಡಿದರು. ಅವನ ಹಿಂದೆ ಹೋಗಿ ಆ ಕೊಂಬೆಗಳನ್ನು ಅವರಿದ್ದ ನೆಲ ಮನೆಯ ಸುತ್ತಲೂ ಹಾಕಿ ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‍ಕೋಟೆಯವರೆಲ್ಲರೂ ಸತ್ತರು. ಸ್ತ್ರೀಪುರುಷರೆಲ್ಲಾ ಸೇರಿ ಅವರು ಸುಮಾರು ಸಾವಿರ ಜನರಿದ್ದರು.
50 : ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ, ಮುತ್ತಿಗೆ ಹಾಕಿ ಅದನ್ನು ಹಿಡಿದನು.
51 : ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಗೋಪುರವಿತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ ಅದರೊಳಗೆ ಹೊಕ್ಕು ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು.
52 : ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಗೋಪುರದ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸವಿೂಪಕ್ಕೆ ಹೋದನು.
53 : ಒಬ್ಬ ಸ್ತ್ರೀ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು.
54 : ಅವನು ಕೂಡಲೆ ತನ್ನ ಆಯುಧವಾಹಕನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ಹೆಂಗಸಿನ ಕೈಯಿಂದ ಸತ್ತನೆಂದು ಹೇಳಾರು,” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು.
55 : ಅಬೀಮೆಲೆಕನು ಸತ್ತುಹೋದದ್ದನ್ನು ಕಂಡು ಇಸ್ರಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.
56 : ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದರು.
57 : ಶೆಕೆಮಿನವರಿಗಾದರೋ ಅವರ ದುಷ್ಟತ್ವವು ಅವರ ತಲೆಯ ಮೇಲೆಯೇ ಬರುವಂತೆ ಮಾಡಿದರು. ಹೀಗೆ ಯೆರುಬ್ಬಾಳನ ಮಗ ಯೋತಾಮನು ಇವರ ಬಗ್ಗೆ ನುಡಿದ ಶಾಪ ನೆರವೇರಿತು.

· © 2017 kannadacatholicbible.org Privacy Policy