Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನ್ಯಾಯ


1 : ಏಹೂದನು ನಿಧನನಾದ ನಂತರ ಇಸ್ರಯೇಲರು ಪುನಃ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು.
2 : ಈ ಕಾರಣ ಸರ್ವೇಶ್ವರ ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ವಶಪಡಿಸಿದರು. ಮ್ಲೇಚ್ಛರ ಹರೋಷೆತ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಪತಿ ಆಗಿದ್ದನು.
3 : ಒಂಬೈನೂರು ಕಬ್ಬಿಣದ ರಥಗಳನ್ನು ಪಡೆದಿದ್ದ ಇವನು ಇಸ್ರಯೇಲರನ್ನು ಇಪ್ಪತ್ತು ವರ್ಷಕಾಲ ದಬ್ಬಾಳಿಕೆಗೆ ಈಡುಪಡಿಸಿದನು. ಆಗ ಅವರು ಸರ್ವೇಶ್ವರನಿಗೆ ಮೊರೆಯಿಟ್ಟರು.
4 : ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿ, ದೆಬೋರಳೆಂಬ ಪ್ರವಾದಿನಿ ಇಸ್ರಯೇಲರಲ್ಲಿ ನ್ಯಾಯ ತೀರಿಸುತ್ತಿದ್ದಳು.
5 : ಆಕೆ ಎಫ್ರಯಿಮ್ ಬೆಟ್ಟದ ಸೀಮೆಯಲ್ಲಿ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ‘ದೆಬೋರಳ ಖರ್ಜೂರ ವೃಕ್ಷ’ವೆಂದು ಹೆಸರುಗೊಂಡ ಮರದ ಕೆಳಗೆ ಆಸೀನಳಾಗಿರುತ್ತಿದ್ದಳು. ಇಸ್ರಯೇಲರು ನ್ಯಾಯತೀರ್ಪಿಗಾಗಿ ಆಕೆಯ ಬಳಿಗೆ ಬರುತ್ತಿದ್ದರು.
6 : ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗ ಬಾರಾಕನನ್ನು ಬರಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಆಜ್ಞಾಪಿಸಿದ್ದಾರೆ: ‘ನೀನೆದ್ದು ನಫ್ತಾಲಿ ಮತ್ತು ಜೆಬುಲೂನ್ ಕುಲಗಳಿಂದ ಹತ್ತುಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು;
7 : ಯಾಬೀನನ ಸೇನಾಪತಿ ಸೀಸೆರನನ್ನು ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬರುವರು. ಅವನಿಗೆ ರಥಗಳೂ ಸೇನಾಪಡೆಗಳೂ ಇದ್ದರೂ ನಾನು ನಿನಗೆ ಜಯವನ್ನು ದೊರಕಿಸುವೆನು’,” ಎಂದಳು.
8 : ಬಾರಾಕನು ಆಕೆಗೆ, “ನೀನು ನನ್ನ ಸಂಗಡ ಬರುವುದಾದರೆ ಹೋಗುತ್ತೇನೆ; ಇಲ್ಲವಾದರೆ ಹೋಗುವುದಿಲ್ಲ,” ಎಂದನು.
9 : ಆಕೆ, “ನಾನು ಹೇಗೂ ನಿನ್ನ ಸಂಗಡ ಬರುವೆನು; ಆದರೆ ಈ ಯುದ್ಧದಿಂದ ನಿನಗೆ ಗೌರವಗಿಟ್ಟದು; ಏಕೆಂದರೆ ಸರ್ವೇಶ್ವರ ಸೀಸೆರನನ್ನು ಒಬ್ಬ ಮಹಿಳೆಗೆ ಒಪ್ಪಿಸಿಕೊಡುವರು,” ಎಂದು ಹೇಳಿ ಬಾರಾಕನೊಡನೆ ಕೆದೆಷಿಗೆ ಹೋದಳು.
10 : ಬಾರಾಕನು ಜೆಬುಲೂನ್ಯರನ್ನೂ, ನಫ್ತಾಲ್ಯರನ್ನೂ ಕೆದೆಷಿಗೆ ಕರೆಸಿದನು. ಅವರಲ್ಲಿ ಹತ್ತು ಸಾವಿರ ಮಂದಿ ಅವನ ಹೆಜ್ಜೆಹಿಡಿದು ಯುದ್ಧಕ್ಕೆ ಹೋದರು. ದೆಬೋರಳೂ ಹೋದಳು.
11 : ಕೇನ್ಯನಾದ ಹೆಬೆರನು ಮೋಶೆಯ ಮಾವ ಹೋಬಾಬನ ವಂಶದ ಉಳಿದ ಕೇನ್ಯರನ್ನು ಬಿಟ್ಟು ಕೆದೆಷಿನ ಹತ್ತಿರ ಇರುವ ‘ಚಾನನ್ನೀಮ್’ ಎಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.
12 : ಅಬೀನೋವಮನ ಮಗ ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನ ಸೀಸೆರನಿಗೆ ಮುಟ್ಟಿದಾಗ
13 : ಅವನು ತನ್ನ ಒಂಬೈನೂರು ಕಬ್ಬಿಣದ ರಥಗಳನ್ನೂ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಮ್ಲೇಚ್ಫರ ಹರೋಷೆತಿನಿಂದ ಕೀಷೋನ್ ಹಳ್ಳಕ್ಕೆ ಬಂದನು.
14 : ಆಗ ದೆಬೋರಳು ಬಾರಾಕನಿಗೆ, “ಏಳು, ಸರ್ವೇಶ್ವರ ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನ ಇದೇ; ನಿಶ್ಚಯವಾಗಿ ಅವರು ತಾವೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವರು,” ಎಂದಳು. ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತ ತಾಬೋರ್ ಬೆಟ್ಟದಿಂದಿಳಿದನು.
15 : ಸರ್ವೇಶ್ವರ ಸೀಸೆರನನ್ನೂ ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಪಡಿಸಿ ಕತ್ತಿಗೆ ತುತ್ತಾಗಿಸಿದರು. ಸೀಸೆರನು ರಥದಿಂದ ಹಾರಿ ಓಡಿ ಹೋದನು.
16 : ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಫರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
17 : ಹಾಚೋರಿನ ಅರಸ ಯೂಬೀನನಿಗೂ ಕೇನ್ಯನಾದ ಹೆಬೆರನ ಮನೆಯವರಿಗೂ ಸಮಾಧಾನ ಇದ್ದುದರಿಂದ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರದ ಕಡೆಗೆ ಹೋದನು.
18 : ಯಾಯೇಲಳು ಹೊರಗೆಹೋಗಿ ಸೀಸೆರನನ್ನು ಎದುರುಗೊಂಡು ಅವನಿಗೆ, “ಒಡೆಯಾ, ಒಳಗೆ ಬನ್ನಿ; ಹೆದರಬೇಡಿ, ನಮ್ಮಲ್ಲಿಗೆ ಬನ್ನಿ,” ಎನ್ನಲು ಅವನು ಗುಡಾರದೊಳಗೆ ಹೋದನು. ಆಗ ಆಕೆ ಅವನನ್ನು ಕಂಬಳಿಯಿಂದ ಮುಚ್ಚಿದಳು.
20 : ಅವನು ಆಕೆಗೆ, “ನೀನು ಗುಡಾರದ ಬಾಗಿಲಲ್ಲೇ ನಿಂತಿರು; ಯಾರಾದರೂ ಬಂದು ‘ಇಲ್ಲಿ ಒಬ್ಬ ಮನುಷ್ಯ ಇರುವನೇ?’ ಎಂದು ವಿಚಾರಿಸಿದರೆ, ‘ಇಲ್ಲ’ ಎನ್ನು” ಎಂದು ಹೇಳಿದನು.
21 : ಆದರೆ ಹೆಬೆರನ ಹೆಂಡತಿ ಯಾಯೇಲಳು ಕೈಯಲ್ಲಿ ಗುಡಾರದ ಗೂಟವನ್ನೂ ಒಂದು ಕೊಡತಿಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ ಮೆಲ್ಲಗೆ ಹತ್ತಿರ ಹೋಗಿ ಅವನ ಕಣತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು.
22 : ಅದೇ ಕ್ಷಣದಲ್ಲಿ ಸೀಸೆರನನ್ನ ಹಿಂದಟ್ಟುತ್ತಿದ್ದ ಬಾರಾಕನು ಅಲ್ಲಿಗೆ ಬಂದನು. ಯಾಯೇಲಳು ಹೊರಗೆ ಹೋಗಿ ಅವನನ್ನು ಎದುರುಗೊಂಡು, “ಬಾ, ನೀನು ಹುಡುಕುವ ಮನುಷ್ಯನನ್ನು ತೋರಿಸುತ್ತೇನೆ,” ಎಂದು ಹೇಳಲು ಅವನು ಒಳಗೆ ಹೋಗಿ ಸೀಸೆರನು ಸತ್ತುಬಿದ್ದದ್ದನ್ನು ಕಂಡನು. ಅವನ ತಲೆಯಲ್ಲಿ ಗೂಟವು ಜಡಿದಿತ್ತು.
23 : ಆ ದಿನದಂದು ದೇವರು ಕಾನಾನ್ಯ ರಾಜನಾದ ಯಾಬೀನನನ್ನು ಇಸ್ರಯೇಲರಿಗೆ ಶರಣಾಗತನಾಗುವಂತೆ ಮಾಡಿದರು.
24 : ಇಸ್ರಯೇಲರು ಹೆಚ್ಚು ಹೆಚ್ಚು ಬಲಗೊಂಡದ್ದರಿಂದ ಕಾನಾನ್ಯರ ಅರಸ ಯಾಬೀನನು ಪೂರ್ಣವಾಗಿ ಸೋತು ನಿರ್ನಾಮವಾದನು.

· © 2017 kannadacatholicbible.org Privacy Policy