1 :
ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ ಗಿಲ್ಯಾದಿನಲ್ಲಿಯೂ ಇರುವ ಇಸ್ರಯೇಲರೆಲ್ಲರು ಏಕ ಮನಸ್ಸಿನಿಂದ ಹೊರಟು ಮಿಚ್ಫೆಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿದರು.
2 : ಆ ದೇವಪ್ರಜಾಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.
3 : (ಇಸ್ರಯೇಲರು ಕೂಡಿಕೊಂಡು ಮಿಚ್ಫೆಗೆ ಬಂದಿದ್ದಾರೆಂಬ ವರ್ತಮಾನ ಬೆನ್ಯಾವಿೂನ್ಯರಿಗೆ ಮುಟ್ಟಿತು.) ಇಸ್ರಯೇಲರು, “ಈ ದುಷ್ಟತನ ಹೇಗೆ ನಡೆಯಿತೆಂದು ತಿಳಿಸಿರಿ,” ಎಂದು ಕೇಳಿದರು.
4 : ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತನಾಗಿ ಬೆನ್ಯಾವಿೂನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಇಳಿದುಕೊಂಡಿದ್ದೆ.
5 : ಆ ಊರಿನ ಜನರು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು; ಮತ್ತು ನನ್ನ ಉಪಪತ್ನಿಯ ಮೇಲೆ ಅತ್ಯಾಚಾರಮಾಡಿದರು. ಆಕೆ ಸತ್ತಳು.
6 : ಅವರು ಇಸ್ರಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಹಾಗು ಹುಚ್ಚುಗೆಲಸ ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
7 : ಇಲ್ಲಿ ಕೂಡಿರುವ ಎಲ್ಲ ಇಸ್ರಯೇಲರೇ, ಈಗ ನಿಮ್ಮ ಆಲೋಚನೆಗಳನ್ನೂ ಅಭಿಪ್ರಾಯಗಳನ್ನೂ ಹೇಳಿ,” ಎಂದನು.
8 : ಇದನ್ನು ಕೇಳಿ ಆ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗಕೂಡದು.
9 : ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರುದ್ಧ ಯುದ್ಧಕ್ಕೆ ಹೋಗೋಣ.
10 : ಇಸ್ರಯೇಲರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರವೇ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾವಿೂನ್ಯರಾದ ಗಿಬೆಯದವರು ಇಸ್ರಯೇಲರಲ್ಲಿ ನಡೆಸಿದ ದುಷ್ಕರ್ಮಕ್ಕಾಗಿ ಅವರನ್ನು ದಂಡಿಸೋಣ,” ಎಂದುಕೊಂಡರು.
11 : ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರುದ್ಧವಾಗಿ ಕೂಡಿಕೊಂಡರು.
12 : ಅವರು ಬೆನ್ಯಾವಿೂನ್ಯರ ಸಮಸ್ತ ಕುಲಸ್ಥರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕರ್ಮ ಎಂಥದು?
13 : ಈಗ ಗಿಬೆಯ ಊರಲ್ಲಿರುವ ಆ ನೀಚರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಯೇಲರ ಮಧ್ಯೆಯಿಂದ ಇಂಥ ದುಷ್ಟತನವನ್ನು ತೆಗೆದು ಹಾಕುತ್ತೇವೆ,” ಎಂದು ಹೇಳಿಸಿದರು.
14 : ಆದರೆ ಬೆನ್ಯಾವಿೂನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಯೇಲರ ವಿರುದ್ಧ ಯುದ್ಧಕ್ಕೆ ನಿಂತರು.
15 : ಆ ದಿವಸದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ದರಾಗಿ ಕೂಡಿಬಂದ ಬೆನ್ಯಾವಿೂನ್ಯರ ಸಂಖ್ಯೆ ಇಪ್ಪತ್ತಾರು ಸಾವಿರ. ಇವರಲ್ಲದೆ ಗಿಬೆಯದಲ್ಲಿಯೇ ಏಳುನೂರು ಮಂದಿ ಯುದ್ಧವೀರರಿದ್ದರು.
16 : ಈ ಎಲ್ಲ ಜನರಲ್ಲಿ ಏಳುನೂರು ಮಂದಿ ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬನು ಕೂದಲ ಎಳೆಯಷ್ಟೂ ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣನು;
17 : ಬೆನ್ಯಾವಿೂನ್ಯರಲ್ಲದ ಇಸ್ರಯೇಲರಲ್ಲಿ ನಾಲ್ಕು ಲಕ್ಷ ಯೋಧರು ಇದ್ದರು; ಇವರೆಲ್ಲರು ವೀರರೇ.
18 :
ಇಸ್ರಯೇಲರು ಬೇತೇಲಿಗೆ ಹೋಗಿ, ಬೆನ್ಯಾವಿೂನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಸರ್ವೇಶ್ವರನನ್ನು ಕೇಳಲು ಅವರು, “ಮೊದಲು ಯೆಹೂದಕುಲದವರು ಹೋಗಲಿ,” ಎಂದು ಹೇಳಿದರು.
19 : .ಇಸ್ರಯೇಲರು ಬೆಳಿಗ್ಗೆ ಹೊರಟುಹೋಗಿ ಗಿಬೆಯರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.
20 : ಬೆನ್ಯಾವಿೂನ್ಯರೊಡನೆ ಯುದ್ಧ ಮಾಡುವುದಕ್ಕೆ ಸಿದ್ಧರಾಗಿ ಗಿಬೆಯದ ಎದುರಿನಲ್ಲಿ ವ್ಯೂಹ ಕಟ್ಟಿ ನಿಂತರು.
21 : ಆ ದಿನ ಬೆನ್ಯಾವಿೂನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
22 : ಇಸ್ರಯೇಲರು ಪುನಃ ಧೈರ್ಯ ತಂದುಕೊಂಡು ಮೊದಲನೆಯ ದಿನ ವ್ಯೂಹಕಟ್ಟಿದ ಸ್ಥಳದಲ್ಲೇ ಮತ್ತೆ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
23 : (ಇಸ್ರಯೇಲರು ಹೋಗಿ ಸರ್ವೇಶ್ವರನ ಮುಂದೆ ದುಃಖಿಸುತ್ತಾ, “ನಾವು ನಮ್ಮ ಬಂದುಗಳಾದ ಬೆನ್ಯಾವಿೂನ್ಯರೊಡನೆ ಯುದ್ಧಮಾಡಬೇಕೆ?” ಎಂದು ಕೇಳಲು ಅವರು, “ಹೋಗಿ ಯುದ್ಧಮಾಡಿ”, ಎಂದರು.
24 : ಆದ್ದರಿಂದ ಅವರು ಎರಡನೆಯ ದಿನದಲ್ಲಿ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾವಿೂನ್ಯರ ಸವಿೂಪಕ್ಕೆ ಬಂದರು.)
25 : ಬೆನ್ಯಾವಿೂನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಯೇಲರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಬೀಳಿಸಿದರು.
26 : ಆಗ ಎಲ್ಲ ಜನರು ಬೇತೇಲಿಗೆ ಹೋಗಿ ಅಲ್ಲಿ ಸರ್ವೇಶ್ವರನ ಮುಂದೆ ಅಳುತ್ತಾ ಕುಳಿತು. ಸಾಯಂಕಾಲದವರೆಗೆ ಉಪವಾಸಮಾಡಿದರು. ಇದಲ್ಲದೆ ಅವರು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದರು.
27 : ಆ ಕಾಲದಲ್ಲಿ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಊರೊಳಗೆ ಇತ್ತು.
28 : ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕ ಸೇವೆಮಾಡುತ್ತಿದ್ದನು. ಇಂತಿರಲು ಇಸ್ರಯೇಲರು, “ನಾವು ನಮ್ಮ ಬಂಧುಗಳಾದ ಬೆನ್ಯಾವಿೂನ್ಯರೊಡನೆ ಯುದ್ಧಕ್ಕೆ ಹೋಗಬೇಕೋ ಬೇಡವೋ” ಎಂದು ಸರ್ವೇಶ್ವರನನ್ನು ಕೇಳಿದರು. ಸರ್ವೇಶ್ವರನು ಅವರಿಗೆ, “ಹೋಗಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು,” ಎಂದರು.
29 : ಆಗ ಇಸ್ರಯೇಲರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚುಹಾಕುವುದಕ್ಕೆ ಇರಿಸಿ,
30 : ಉಳಿದವರು ಬೆನ್ಯಾವಿೂನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನ ಗಿಬೆಯದ ಸವಿೂಪದಲ್ಲಿ ವ್ಯೂಹಕಟ್ಟಿದರು.
31 : ಬೆನ್ಯಾವಿೂನ್ಯರು ಇಸ್ರಯೇಲರೊಡನೆ ಯುದ್ಧ ಮಾಡುವುದಕ್ಕಾಗಿ ಪಟ್ಟಣವನ್ನು ಬಿಟ್ಟು ದೂರಕ್ಕೆ ಬಂದರು. ಅವರು ಮುಂಚಿನಂತೆ ಜನರನ್ನು ವಧಿಸುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಿಸಿದರು.
32 : ಬೆನ್ಯಾವಿೂನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ನೆನೆಸಿದರು. ಇಸ್ರಯೇಲರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿ ಹೋಗೋಣ,” ಎಂದು ಮಾತನಾಡಿಕೊಂಡು
34 : ಅವರ ಸಂಖ್ಯೆ ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧ ಬಹಳ ಘೋರವಾಯಿತು. ತಮಗೆ ಅಪಾಯ ಒದಗಿ ಬಂದಿದೆ ಎಂಬುದು ಬೆನ್ಯಾವಿೂನ್ಯರಿಗೆ ಇನ್ನೂ ಗೊತ್ತಾಗಲಿಲ್ಲ.
35 : ಸರ್ವೇಶ್ವರ ಇಸ್ರಯೇಲರಿಗೆ ಜಯಕೊಟ್ಟದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾವಿೂನ್ಯ ಯೋಧರನ್ನು ಕೊಂದುಹಾಕಿದರು. 36ತಾವು ಸೋತುಹೋದೆವೆಂಬುದು ಬೆನ್ಯಾವಿೂನ್ಯರಿಗೆ ಆಗ ತಿಳಿಯಿತು.
36 : ತಾವು ಸೋತುಹೋದೆವೆಂಬುದು ಬೆನ್ಯಾವಿೂನ್ಯರಿಗೆ ಆಗ ತಿಳಿಯಿತು.
ಇಸ್ರಯೇಲರ ವಿಜಯ
(ಇಸ್ರಯೇಲರಿಗೆ ತಾವು ಗಿಬೆಯದ ಸವಿೂಪದಲ್ಲಿ ಹೊಂಚುಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸೆಯಿತ್ತು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾವಿೂನ್ಯರ ಮುಂದೆ ಓಡಿಹೋದರು.
37 : ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ ಅದರೊಳಗಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿದರು.
38 : ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ ಓಡಿ ಹೋಗುತ್ತಿದ್ದವರು ತಿರುಗಿಕೊಂಡು ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚುಗಾರರೂ ಉಳಿದ ಇಸ್ರಯೇಲರೂ ತಮ್ಮತಮ್ಮೊಳಗೆ ಗೊತ್ತುಮಾಡಿದ್ದರು.
39 : ಬೆನ್ಯಾವಿೂನ್ಯರಾದರೋ, ಇಸ್ರಯೇಲರು ಮುಂಚಿನಂತೆ ನಮ್ಮ ಮುಂದೆ ಸೋತು ಹೋದರೆಂದು ನೆನೆಸಿ ಅವರನ್ನು ಸಂಹರಿಸಲು ಪ್ರಾರಂಭಿಸಿ ಸುಮಾರು ಮೂವತ್ತು ಮಂದಿಯನ್ನು ಕೊಂದು ಹಾಕಿದರು.
40 : ಆದರೆ ಪಟ್ಟಣದಿಂದ ಹೊಗೆಯೆದ್ದು ಸ್ತಂಭದೋಪಾದಿಯಲ್ಲಿ ಕಾಣಿಸಲು ಇಸ್ರಯೇಲರು ತಿರುಗಿ ನಿಂತರು.
41 : ಬೆನ್ಯಾವಿೂನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣ ಅಗ್ನಿಗೆ ಆಹುತಿ ಆದದ್ದನ್ನು ಕಂಡು ತಮಗೆ ಅಪಾಯ ಪ್ರಾಪ್ತ ಆಯಿತೆಂದು ಕಳವಳಗೊಂಡರು.
42 : ಅವರು ಇಸ್ರಯೇಲರಿಗೆ ಬೆನ್ನುತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಸೈನಿಕರು ಅವರನ್ನು ಹಿಂದಟ್ಟಿದ್ದರಿಂದಲೂ ಪಟ್ಟಣಕ್ಕೆ ಬೆಂಕಿಹೊತ್ತಿಸಿದವರು ಬಂದುಬಿಟ್ಟದ್ದರಿಂದಲೂ ಅವರು ಉಭಯರ ಮಧ್ಯದಲ್ಲಿ ಸಿಕ್ಕಿಹಾಳಾದರು.
43 : ಇಸ್ರಯೇಲರು ಅವರನ್ನು ಸುತ್ತಿಕೊಂಡು ಎಲ್ಲಿಯೂ ಓಡಗೊಡದೆ ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಇರುವ ಮೆನೂಹದಲ್ಲಿ ತುಳಿದುಬಿಟ್ಟರು.
44 : ಈ ಪ್ರಕಾರ ಬೆನ್ಯಾವಿೂನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು.
45 : ಇದಲ್ಲದೆ ಅವರು ಮರುಭೂಮಿಯಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲು ತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದುಹಾಕಿದರು. ಅಲ್ಲಿಂದ ಗಿದೋಮಿನವರೆಗೆ ಹಿಂದಟ್ಟಿ ಇನ್ನೂ ಎರಡು ಸಾವಿರ ಜನರನ್ನು ಹತಮಾಡಿದರು.
46 : ಹೀಗೆ ಆ ದಿವಸ ಬೆನ್ಯಾವಿೂನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ದಸನ್ನದ್ಧರಾದ ಯೋಧರು ಸಂಹೃತರಾದರು.)
47 : ಆದರೆ ಆರುನೂರು ಮಂದಿ ಮರುಭೂಮಿಮಾರ್ಗವಾಗಿ ಓಡಿಹೋಗಿ ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು.
48 : ಇಸ್ರಯೇಲರು ತಿರುಗಿಕೊಂಡು ಬೆನ್ಯಾವಿೂನ್ಯ ಪ್ರಾಂತ್ಯದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ ದನಕುರಿಗಳನ್ನೂ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ ಎಲ್ಲ ಊರುಗಳಿಗೆ ಬೆಂಕಿ ಹೊತ್ತಿಸಿದರು.