Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನ್ಯಾಯ


1 : ಎಫ್ರಯಿಮ್ ಬೆಟ್ಟದ ಪ್ರಾಂತ್ಯದಲ್ಲಿ ವಿೂಕ ಎಂಬ ಒಬ್ಬ ಮನುಷ್ಯನು ಇದ್ದನು.
2 : ಅವನು ಒಂದು ದಿನ ತನ್ನ ತಾಯಿಗೆ, “ಅಮ್ಮಾ, ಕಳವಾಗಿದ್ದ ನಿನ್ನ ಸಾವಿರದ ನೂರು ಬೆಳ್ಳಿ ನಾಣ್ಯಗಳಿಗಾಗಿ ನೀನು ನನಗೆ ಕೇಳಿಸುವಂತೆ ಶಪಿಸಿದೆಯಲ್ಲವೆ? ಇಗೋ, ಆ ನಾಣ್ಯಗಳು ನನ್ನ ಹತ್ತಿರವೇ ಇವೆ; ನಾನೇ ತೆಗೆದುಕೊಂಡಿದ್ದೇನೆ,” ಎಂದು ಹೇಳಿದನು. ಆಕೆ, “ನನ್ನ ಮಗನೇ, ಸರ್ವೇಶ್ವರಸ್ವಾಮಿ ನಿನ್ನನ್ನು ಆಶೀರ್ವದಿಸಲಿ!” ಎಂದಳು.
3 : ಅವನು ಆ ಸಾವಿರದ ನೂರು ಬೆಳ್ಳಿ ನಾಣ್ಯಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಟ್ಟನು. ಆಕೆ, “ನನ್ನ ಮಗನಿಗೆ ಹಿತವಾಗಲೆಂದು ಈ ಹಣವನ್ನು ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ. ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುತ್ತೇನೆ,” ಎಂದು ಹೇಳಿ
4 : ಮಗನು ಹಿಂದಕ್ಕೆ ಕೊಟ್ಟ ನಾಣ್ಯಗಳಲ್ಲಿ ಇನ್ನೂರು ನಾಣ್ಯಗಳನ್ನು ತೆಗೆದು ಅಕ್ಕಸಾಲಿಗನಿಗೆ ಕೊಟ್ಟಳು. ಅವನು ಅವುಗಳಿಂದ ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನು ಮಾಡಿಕೊಟ್ಟನು. ವಿೂಕನು ಅದನ್ನು ತನ್ನ ಮನೆಯಲ್ಲೇ ಇಟ್ಟುಕೊಂಡನು.
5 : ಈ ವಿೂಕನು ‘ಏಫೋದ’ನ್ನೂ ವಿಗ್ರಹಗಳನ್ನೂ ಮಾಡಿಸಿ ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು ತನ್ನ ಕುಮಾರರಲ್ಲೊಬ್ಬನನ್ನು ಅರ್ಚಕ ಸೇವೆಗೆ ಪ್ರತಿಷ್ಠಿಸಿದನು.
6 : ಆ ಕಾಲದಲ್ಲಿ ಇಸ್ರಯೇಲರಲ್ಲಿ ಅರಸನಿರಲಿಲ್ಲ. ಪ್ರತಿಯೊಬ್ಬನು ಮನಸ್ಸಿಗೆ ಬಂದಹಾಗೆ ನಡೆಯುತ್ತಾ ಇದ್ದನು.
7 : ಯೆಹೂದದ ಬೆತ್ಲೆಹೇಮಿನವನೂ ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿ,
8 : ಜೀವನಕ್ಕೆ ಅನುಕೂಲವಾದ ಬೇರೆಲ್ಲಾದರು ವಾಸಿಸಬೇಕೆಂದು ಸ್ವಂತ ಊರನ್ನು ಬಿಟ್ಟು ಪ್ರಯಾಣಮಾಡುತ್ತಾ ಎಫ್ರಯಿಮ್ ಬೆಟ್ಟದ ಸೀಮೆಯಲ್ಲಿದ್ದ ವಿೂಕನ ಮನೆಗೆ ಬಂದನು.
9 : ನೀನು ಎಲ್ಲಿಂದ ಬಂದೆ?’ ಎಂದು ವಿೂಕನು ಅವನನ್ನು ಕೇಳಿದನು. ಅವನು, “ನಾನು ಯೆಹೂದದ ಬೆತ್ಲೆಹೇಮಿನವನಾದ ಲೇವಿಯನು; ಜೀವನಕ್ಕೆ ಅನುಕೂಲವಾದ ಬೇರೆಲ್ಲಾದರು ವಾಸಿಸಬೇಕೆಂದು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು.
10 : ವಿೂಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ ಯಾಜಕನೂ ಆಗಿರು. ನಿನಗೆ ವರ್ಷಕ್ಕೆ ಹತ್ತು ಬೆಳ್ಳಿ ನಾಣ್ಯಗಳನ್ನು, ಉಡಿಗೆತೊಡಿಗೆಯನ್ನು ಹಾಗು ಆಹಾರವನ್ನು ಕೊಡುತ್ತೇನೆ,” ಎನ್ನಲು
11 : ಆ ಲೇವಿ ಒಪ್ಪಿಕೊಂಡು ಅಲ್ಲೇ ವಾಸಮಾಡಿದನು. ಹೀಗೆ ಆ ಯೌವನಸ್ಥನು ಅವನ ಮಕ್ಕಳಲ್ಲಿ ಒಬ್ಬನಂತಾದನು.
12 : ವಿೂಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕ ಸೇವೆಗಾಗಿ ಪ್ರತಿಷ್ಠಿಸಿ ತನ್ನ ಮನೆಯಲ್ಲೇ ಇಟ್ಟುಕೊಂಡನು. “ಒಬ್ಬ ಲೇವಿ ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಸರ್ವೇಶ್ವರ ನನ್ನನ್ನು ಆಶೀರ್ವದಿಸುವರೆಂದು ಬಲ್ಲೆ,” ಎಂದುಕೊಂಡನು.

· © 2017 kannadacatholicbible.org Privacy Policy