Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನ್ಯಾಯ


1 : ತರುವಾಯ ಸಂಸೋನನು ಗಾಜಾಕ್ಕೆ ಹೋದಾಗ ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಅವಳ ಬಳಿಗೆ ಹೋದನು.
2 : ಸಂಸೋನನು ಬಂದಿರುವುದು ಗಾಜದವರಿಗೆ ಗೊತ್ತಾಯಿತು? ಅವರು ಬಂದು ಅವನನ್ನು ಸುತ್ತಿಕೊಂಡರು. ಸೂರ್ಯೋದಯವಾಗುತ್ತಲೇ ಅವನನ್ನು ಕೊಂದು ಹಾಕಬೇಕೆಂದುಕೊಂಡು ರಾತ್ರಿಯೆಲ್ಲಾ ಊರಬಾಗಿಲಲ್ಲೇ ಹೊಂಚುಹಾಕುತ್ತಾ ಸುಮ್ಮನಿದ್ದರು.
3 : ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರಬಾಗಿಲುಗಳನ್ನೂ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಬೆಟ್ಟದ ತುದಿಯ ಮೇಲೆ ಇಟ್ಟನು.
4 : ಸಂಸೋನನು ಮತ್ತು ದೆಲೀಲ ಅನಂತರ ಸಂಸೋನನು ಸೋರೇಕ್ ತಗ್ಗಿನಲ್ಲಿ ವಾಸವಾಗಿದ್ದ ದೆಲೀಲಾ ಎಂಬ ಮಹಿಳೆಯಿಂದ ಮೋಹಿತನಾದನು.
5 : ಫಿಲಿಷ್ಟಿಯರ ಮುಖಂಡರು ಅವಳ ಬಳಿಗೆ ಹೋಗಿ ಅವಳಿಗೆ, “ನೀನು ಅವನನ್ನು ಮರುಳುಗೊಳಿಸಿ ಅವನ ಮಹಾಶಕ್ತಿಯ ಮೂಲ ಯಾವುದೆಂಬುದನ್ನು ತಿಳಿದುಕೋ; ನಾವು ಅವನನ್ನು ಗೆದ್ದು, ಕಟ್ಟಿ, ಅಡಗಿಸುವ ವಿಧಾನವನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು. ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಸಾವಿರದ ನೂರು ಬೆಳ್ಳಿ ನಾಣ್ಯಗಳನ್ನು ಕೊಡುವೆವು,” ಎಂದು ಹೇಳಿದರು.
6 : ದೆಲೀಲಳು ಸಂಸೋನನಿಗೆ, “ನಿಮ್ಮ ಇಂಥ ಮಹಾಶಕ್ತಿ ಹೇಗೆ ಬಂತು? ನಿಮ್ಮನ್ನು ಕಟ್ಟಿ ಅಡಗಿಸುವುದು ಹೇಗೆ ಎಂಬುದನ್ನು ದಯವಿಟ್ಟು ನನಗೆ ತಿಳಿಸಿ,” ಎಂದಳು.
7 : ಅವನು, “ಕರುಳಿನ ಏಳು ಹಸಿ ತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು,” ಎಂದು ಹೇಳಿದನು.
8 : ಫಿಲಿಷ್ಟಿಯರ ಮುಖಂಡರು ಅಂಥ ಏಳು ಹಸಿ ತಂತಿಗಳನ್ನು ಅವಳಿಗೆ ತಂದುಕೊಟ್ಟರು.
9 : ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿಟ್ಟು ಅವುಗಳಿಂದ ಅವನನ್ನು ಕಟ್ಟಿ, “ಸಂಸೋನರೇ, ನಿಮ್ಮ ಮೇಲೆ ಫಿಲಿಷ್ಟಿಯರು ಬಂದರು,” ಎಂದು ಕೂಗಿದಳು. ಅವನು ಬೆಂಕಿತಗಲಿದ ಸೆಣಬಿನ ದಾರವನ್ನೋ ಎಂಬಂತೆ ಆ ತಂತಿಗಳನ್ನು ಹರಿದು ಬಿಟ್ಟನು. ಹೀಗೆ ಅವನ ಶಕ್ತಿಯ ರಹಸ್ಯ ತಿಳಿಯದೆ ಹೋಯಿತು.
10 : ದೆಲೀಲಳು ಮತ್ತೊಮ್ಮೆ ಸಂಸೋನನಿಗೆ, “ನೀವು ನನ್ನನ್ನು ವಂಚಿಸಿದಿರಿ; ಸುಳ್ಳಾಡದೆ ನಿಮ್ಮನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ದಯವಿಟ್ಟು ನನಗೆ ತಿಳಿಸಿ,” ಎಂದಳು.
11 : ಅವನು ಅವಳಿಗೆ, “ಯಾವುದಕ್ಕೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು,” ಎಂದನು.
12 : ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿರಿಸಿ ಹೊಸ ಹಗ್ಗಗಳನ್ನು ತೆಗೆದುಕೊಂಡು ಅವುಗಳಿಂದ ಅವನನ್ನು ಕಟ್ಟಿ, “ಸಂಸೋನರೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಲು ಅವನೆದ್ದು ತೋಳುಗಳಿಗೆ ಕಟ್ಟಿದ್ದ ಹಗ್ಗಗಳನ್ನು ದಾರವನ್ನೋ ಎಂಬಂತೆ ಹರಿದುಬಿಟ್ಟನು.
13 : ಆಗ ದೆಲೀಲಳು ಸಂಸೋನನಿಗೆ, “ನೀವು ತಿರುಗಿ ನನ್ನನ್ನು ವಂಚಿಸಿದಿರಿ, ಸುಳ್ಳಾಡಿದಿರಿ; ನಿಮ್ಮನ್ನು ಯಾವುದರಿಂದ ಕಟ್ಟಬಹುದೆಂದು ತಿಳಿಸಿ,” ಎನ್ನಲು ಅವನು, “ನನ್ನ ತಲೆಗೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದರೆ ಸಾಕು,” ಎಂದು ಹೇಳಿದನು.
14 : ಅವಳು ಅವನ ತಲೆಗೂದಲಿನ ಏಳು ಜಡೆಗಳನ್ನು ಗೂಟಕ್ಕೆ ಭದ್ರಮಾಡಿ, “ಸಂಸೋನರೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ನಿದ್ರೆಯಿಂದ ಎಚ್ಚೆತ್ತು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು.
15 : ಆಕೆ ಇನ್ನೊಮ್ಮೆ ಅವನಿಗೆ, “ನಿನ್ನನ್ನು ಪ್ರೀತಿಸುತ್ತೇನೆ” ಎಂದು ನೀವು ನನಗೆ ಹೇಗೆ ಹೇಳಬಹುದು? ನಿಮ್ಮ ಮನಸ್ಸು ನನ್ನ ಮೇಲೆ ಇಲ್ಲವೇ ಇಲ್ಲ; ಮೂರು ಸಾರಿ ವಂಚಿಸಿದಿರಿ. ನಿಮಗೆ ಇಂಥ ಮಹಾಶಕ್ತಿ ಯಾವುದರಿಂದ ಬಂದಿತೆಂಬುದನ್ನು ನನಗೆ ತಿಳಿಸಲಿಲ್ಲ” ಎಂದಳು.
16 : ಇದಲ್ಲದೆ, ಅವಳು ಅವನನ್ನು ದಿನದಿನವೂ ಮಾತಿನಿಂದ ಪೀಡಿಸುತ್ತಿದ್ದುದರಿಂದ ಅವನಿಗೆ ಸಾಯುವುದೇ ಒಳ್ಳೆಯದೆನ್ನುವಷ್ಟು ಬೇಸರ ಆಯಿತು.
17 : ಕೊನೆಗೆ ಅವನು, “ಕ್ಷೌರಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ಮಾತೃಗರ್ಭ ಬಿಟ್ಟಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾದವನು. ನನ್ನ ತಲೆಯನ್ನು ಕ್ಷೌರಮಾಡಿದರೆ ನನ್ನ ಶಕ್ತಿ ಹೋಗುವುದು; ಮತ್ತು ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು,” ಎಂದು ತನ್ನ ಗುಟ್ಟನ್ನೆಲ್ಲಾ ಆಕೆಯ ಮುಂದೆ ಬಿಚ್ಚಿ ಹೇಳಿದನು.
18 : ಅವನು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದನೆಂದು ದೆಲೀಲಳು ತಿಳಿದು ಫಿಲಿಷ್ಟಿಯ ಮುಖಂಡರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ಇದೊಂದು ಸಾರಿ ಬನ್ನಿ; ಅವರು ನನಗೆ ತಮ್ಮ ಹೃದಯವನ್ನೆಲ್ಲಾ ಬಿಚ್ಚಿದ್ದಾರೆ,” ಎಂದು ಹೇಳಿ ಕರೆಸಿದಳು. ಅವರು ಹಣವನ್ನು ತೆಗೆದುಕೊಂಡು ಆಕೆಯ ಬಳಿಗೆ ಬಂದರು.
19 : ಆಕೆ ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ ಅವನನ್ನು ದುರ್ಬಲಪಡಿಸಿದಳು.
20 : ಅವನ ಶಕ್ತಿ ಇಂಗಿಹೋಯಿತು. ಆಗ ಅವಳು, “ಸಂಸೋನರೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತು, “ಮುಂಚಿನಂತೆಯೇ ಈಗಲೂ ಕೊಸರಿಕೊಂಡು ಹೋಗುವೆನು” ಎಂದುಕೊಂಡನು. ಆದರೆ ಸರ್ವೇಶ್ವರ ತನ್ನನ್ನು ಬಿಟ್ಟು ಹೋಗಿ ಇದ್ದಾರೆಂಬುದು ಅವನಿಗೆ ತಿಳಿಯಲಿಲ್ಲ.
21 : ಫಿಲಿಷ್ಟಿಯರು ಅವನನ್ನು ಹಿಡಿದು, ಕಣ್ಣುಗಳನ್ನು ಕಿತ್ತು, ಗಾಜಾಕ್ಕೆ ಒಯ್ದು, ಕಬ್ಬಿಣದ ಬೇಡಿಗಳನ್ನು ಹಾಕಿ, ಸೆರೆಮನೆಯಲ್ಲಿ ಬೀಸುವುದಕ್ಕೆ ಹಚ್ಚಿದರು.
22 : ಅಷ್ಟರಲ್ಲಿ ಅವನ ತಲೆಗೂದಲುಗಳು ಬೆಳೆಯ ತೊಡಗಿದವು.
23 : ಸಂಸೋನನ ಮರಣ ಶತ್ರುವಾದ ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದ ತಮ್ಮ ದೇವರಾದ ದಾಗೋನನಿಗೆ ಮಹಾಬಲಿಯನ್ನು ಸಮರ್ಪಿಸಿ ಸಂತೋಷಪಡಬೇಕೆಂದು ಫಿಲಿಷ್ಟಿಯರ ಮುಖಂಡರು ಕೂಡಿ ಬಂದರು.
24 : ಜನರು ಸಂಸೋನನನ್ನು ನೋಡಿ: ‘ನಮ್ಮ ದೇಶವನ್ನು ಹಾಳುಮಾಡಿದ, ನಮ್ಮಲ್ಲಿ ಅನೇಕರನ್ನು ಕೊಂದುಹಾಕಿದ, ಈ ಶತ್ರುವನ್ನು ನಮ್ಮ ದೇವರೇ ನಮ್ಮ ಕೈಗೊಪ್ಪಿಸಿದ,’ ಎಂದು ಗಾನ ಮಾಡಿದರು.
25 : ಅವರು ಆನಂದ ಲಹರಿಯಲ್ಲಿದ್ದಾಗ, “ನಮ್ಮ ಮನೋರಂಜನೆಗಾಗಿ ಸಂಸೋನನನ್ನು ಕರೆದುಕೊಂಡು ಬನ್ನಿ,” ಎಂದರು. ಅದರಂತೆಯೇ ಸಂಸೋನನನ್ನು ಸೆರೆಮನೆಯಿಂದ ಕರೆದುಕೊಂಡು ಬಂದರು. ಅವನು ಎರಡು ಸ್ತಂಭಗಳ ನಡುವೆ ನಿಂತು ಅವರೆಲ್ಲರ ಮನರಂಜಿಸಬೇಕಾಯಿತು.
26 : ಆಗ ಸಂಸೋನನು ತನ್ನನ್ನು ಕೈ ಹಿಡಿದು ನಡೆಸುತ್ತಿದ್ದ ಹುಡುಗನಿಗೆ, “ನನ್ನ ಕೈಗಳನ್ನು ಬಿಡು; ನಾನು ಕೈಯಾಡಿಸಿ ಮನೆಗೆ ಆಧಾರವಾಗಿರುವ ಸ್ತಂಭಗಳನ್ನು ಹುಡುಕಿ ಅವುಗಳಿಗೆ ಸ್ವಲ್ಪ ಒರಗಿಕೊಳ್ಳುತ್ತೇನೆ,” ಎಂದನು.
27 : ಆ ಮನೆ ಸ್ತ್ರೀಪುರುಷರಿಂದ ಕಿಕ್ಕಿರಿದಿತ್ತು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು. ಸಂಸೋನನು ತೋರಿಸುತ್ತಿದ್ದ ಮನೋರಂಜನಾ ಕಾರ್ಯಗಳನ್ನು ನೋಡುವುದಕ್ಕಾಗಿ ಬಂದವರಲ್ಲಿ ಸುಮಾರು ಮೂರುಸಾವಿರ ಮಂದಿ ಸ್ತ್ರೀಪುರುಷರು ಮಾಳಿಗೆಯ ಮೇಲಿದ್ದರು.
28 : ಆಗ ಸಂಸೋನನು ಸರ್ವೇಶ್ವರನಿಗೆ, “ಪ್ರಭು ಸರ್ವೇಶ್ವರಾ, ಫಿಲಿಷ್ಟಿಯರು ಕಿತ್ತು ಹಾಕಿದ ನನ್ನ ಎರಡು ಕಣ್ಣುಗಳಲ್ಲಿ ಒಂದಕ್ಕಾದರು ನಾನು ಅವರಿಗೆ ಮುಯ್ಯಿ ತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸಿರಿ,” ಎಂದು ಮೊರೆಯಿಟ್ಟನು.
29 : ಆ ಮನೆಯ ಆಧಾರ ಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ ಇನ್ನೊಂದನ್ನು ಎಡಗೈಯಿಂದಲೂ ಹಿಡಿದು ಅವುಗಳನ್ನು ಒತ್ತಿ,
30 : “ನಾನು ಫಿಲಿಷ್ಟಿಯರ ಸಂಗಡ ಸಾಯುವೆನು,” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆ ಮನೆಯು ಅಧಿಪತಿಗಳ ಮೇಲೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.
31 : ಅವನ ಬಂಧುಗಳೂ ತಂದೆಯ ಮನೆಯವರೆಲ್ಲರೂ ಬಂದು ಅವನ ಶವವನ್ನು ಎತ್ತಿಕೊಂಡು ಹೋಗಿ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿದ್ದ ಅವನ ತಂದೆ ಮಾನೋಹನ ಸಮಾಧಿಯಲ್ಲಿ ಸ್ಥಾಪನೆಮಾಡಿದರು. ಅವನು ಇಸ್ರಯೇಲರನ್ನು ಇಪ್ಪತ್ತು ವರ್ಷ ಪಾಲಿಸಿದನು.

· © 2017 kannadacatholicbible.org Privacy Policy