1 :
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೆ ಹೋದನು. ಆಕೆಯ ತಂದೆ ಬಳಿಗೆ ಬಂದನು; “ನನ್ನ ಹೆಂಡತಿಯ ಒಳಗಿನ ಕೋಣೆಗೆ ಹೋಗಬಿಡು,” ಎಂದನು. ಅವನು, “ಹೋಗಕೂಡದು.
2 : ನೀನು ನಿಜವಾಗಿ ಆಕೆಯನ್ನು ದ್ವೇಷಮಾಡುತ್ತೀಯೆಂದು ನಿನ್ನ ಆಪ್ತರೊಬ್ಬನಿಗೆ ಮದುವೆಮಾಡಿಕೊಟ್ಟೆ. ಆಕೆಯ ತಂಗಿ ಆಕೆಗಿಂತ ಸುಂದರಿಯಾಗಿದ್ದಾಳೆ; ಈಕೆ ನಿನಗೆ ಇರಲಿ,” ಎಂದನು.
3 : ಆಗ ಸಂಸೋನನು, “ಈ ಸಾರಿ ಫಿಲಿಷ್ಟಿಯರಿಗೆ ನಷ್ಟ ಉಂಟುಮಾಡಿದರೆ ತಪ್ಪು ನನ್ನದಲ್ಲ” ಎಂದುಕೊಂಡು ಹೋಗಿ
4 : ಮುನ್ನೂರು ನರಿಗಳನ್ನು ಹಿಡಿದನು. ಒಂದರ ಬಾಲಕ್ಕೆ ಇನ್ನೊಂದರ ಬಾಲವನ್ನು ಸೇರಿಸಿ ಕಟ್ಟಿದನು. ಹೀಗೆ ಎರಡೆರಡು ಬಾಲಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ ಪಂಜುಗಳಿಗೆ ಬೆಂಕಿಹೊತ್ತಿಸಿ
5 : ಆ ನರಿಗಳನ್ನು ‘ಫಿಲಿಷ್ಟಿಯರ ಬೆಳೆತುಂಬಿದ ಹೊಲಗಳಿಗೆ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಸುಟ್ಟುಬಿಟ್ಟನು. ಎಣ್ಣೆಯ ಮರಗಳ ತೋಟಗಳು ಸಹ ಸುಟ್ಟು ಹೋದವು.
6 : ಫಿಲಿಷ್ಟಿಯರು ಇದನ್ನು ಮಾಡಿದವರಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವ ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಅಲ್ಲಿಗೆ ಬಂದು ಆಕೆಯನ್ನೂ ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು.
7 : ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದು ಹೇಳಿ
8 : ಅವರ ತೊಡೆ ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿಬಿಟ್ಟನು. ಅನಂತರ ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
9 :
ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯ ಮಾಡಿಕೊಂಡು ಯುದ್ಧಕ್ಕೆ ನಿಂತರು.
10 : “ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ?” ಎಂದು ಯೆಹೂದ್ಯರು ಅವರನ್ನು ಕೇಳಿದರು. ಅವರು, “ಸಂಸೋನನನ್ನು ಹಿಡಿದು, ಬಂಧಿಸಿ, ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು,” ಎಂದು ಉತ್ತರ ಕೊಟ್ಟರು.
11 : ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್‍ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತಿಲ್ಲವೇ? ಹೀಗೆ ಏಕೆ ಮಾಡಿದೆ” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ,” ಎಂದನು.
12 : ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ,” ಎನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿ” ಎಂದನು.
13 : ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ,” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗಿರಿಯಿಂದ ತಂದರು.
14 : ಸಂಸೋನನು ಲೆಹೀಯ ಸವಿೂಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.
15 : ಅಲ್ಲೇ ಒಂದು ಕತ್ತೆಯ ದವಡೆ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿ ಇತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಹತ್ತಿಸಿಬಿಟ್ಟು,
16 : “ಕತ್ತೆಯ ದವಡೆ ಎಲುಬಿನಿಂದ
ಸಾವಿರ ಜನರನ್ನು ವಧಿಸಿದೆ;
ಕತ್ತೆಯ ದವಡೆ ಎಲುಬಿನಿಂದ
ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆ” ಎಂದು ಹೇಳಿ
17 : ತನ್ನ ಕೈಯಲ್ಲಿದ್ದ ಎಲುಬನ್ನು ಬಿಸಾಡಿದನು. ಆ ಸ್ಥಳಕ್ಕೆ ‘ರಾಮತ್ ಲೆಹೀ’ ಎಂದು ಹೆಸರಾಯಿತು.
18 : ಇದರಿಂದಾಗಿ ಸಂಸೋನನಿಗೆ ಬಹಳ ದಾಹವಾಯಿತು. ಅವನು ಸರ್ವೇಶ್ವರನಿಗೆ, “ನೀವು ನಿಮ್ಮ ದಾಸನ ಮುಖಾಂತರ ಇಂಥ ಮಹಾ ಜಯವನ್ನು ದಯಪಾಲಿಸಿದಿರಿ. ಆದರೆ ಈಗ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೇ?” ಎಂದು ಮೊರೆಯಿಟ್ಟನು.
19 : ದೇವರು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದರು. ಅವನು ಕುಡಿದು ಪುನಃ ಚೇತನಗೊಂಡನು. ಆದುದರಿಂದ ಅದಕ್ಕೆ ‘ಏನ್ ಹಕ್ಕೋರೇ’ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿದೆ.
20 : ಫಿಲಿಷ್ಟಿಯರ ಕಾಲದಲ್ಲಿ ಸಂಸೋನನು ಇಸ್ರಯೇಲರನ್ನು ಇಪ್ಪತ್ತು ವರ್ಷಗಳವರೆಗೆ ಪಾಲಿಸಿದನು.