1 :
ಸಂಸೋನನು ತಿಮ್ನಾ ಊರಿಗೆ ಇಳಿದು ಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿದನು.
2 : ತಂದೆ ತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿ ಇದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಹೇಳಿದನು.
3 : ಆಗ ಅವರು ಅವನಿಗೆ, “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ವರಿಸಬೇಕೆಂದಿರುವೆಯಾ? ನಿನ್ನ ಬಂಧುಗಳಲ್ಲಿ ಅದೂ ನಮ್ಮ ಎಲ್ಲಾ ಜನರಲ್ಲಿ ನಿನಗೆ ಹೆಣ್ಣು ಸಿಕ್ಕುವುದಿಲ್ಲವೇ?” ಎಂದು ಪ್ರತಿಭಟಿಸಿದರು. ಅವನು, “ನನಗಾಗಿ ಆಕೆಯನ್ನೇ ತನ್ನಿ. ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ,” ಎಂದನು.
4 : ಫಿಲಿಷ್ಟಿಯರ ದಂಡನೆಗೆ ಕಾರಣವನ್ನು ಹುಡುಕುತ್ತಿದ್ದ ಸರ್ವೇಶ್ವರನ ಪ್ರೇರಣೆಯಿಂದಲೇ ಇದೆಲ್ಲ ಸಂಭವಿಸಿತೆಂದು ಅವನ ತಂದೆತಾಯಿಗಳಿಗೆ ಗೊತ್ತಾಗಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.
5 : ಸಂಸೋನನು ತನ್ನ ತಂದೆತಾಯಿಗಳ ಸಮೇತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿ ತೋಟಗಳ ಬಳಿಗೆ ಬಂದನು. ಅಲ್ಲಿ ಒಂದು ಪ್ರಾಯದ ಸಿಂಹ ಗರ್ಜಿಸುತ್ತಾ ಅವನೆದುರಿಗೆ ಬಂದಿತು.
6 : ಸರ್ವೇಶ್ವರನ ಆತ್ಮ ಅವನ ಮೇಲೆ ಫಕ್ಕನೆ ಇಳಿದು ಬಂದಿತು. ಆಗ ಅವನು ಕೈಯಲ್ಲಿ ಏನೂ ಇಲ್ಲದಿದ್ದರೂ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.
7 : ಅನಂತರ ಅವನು ಊರೊಳಗೆ ಹೋಗಿ ಆ ಮಹಿಳೆಯನ್ನು ಮಾತಾಡಿಸಿ ಆಕೆಯನ್ನು ಮೆಚ್ಚಿಕೊಂಡನು.
8 : ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕಾಗಿ ಮತ್ತೆ ಆ ಊರಿಗೆ ಹೋಗುತ್ತಿದ್ದಾಗ, ದಾರಿ ಬಿಟ್ಟು, ಸಿಂಹದ ಹೆಣವನ್ನು ನೋಡುವುದಕ್ಕೆ ಹೋದನು. ಅದರ ಒಡಲಲ್ಲಿ ಜೇನುಹುಳುಗಳನ್ನೂ ಜೇನನ್ನೂ ಕಂಡು
9 : ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಅದು ತನಗೆ ಸಿಂಹದ ಒಡಲಲ್ಲಿ ಸಿಕ್ಕಿತೆಂಬುದನ್ನು ಅವರಿಗೆ ತಿಳಿಸಲಿಲ್ಲ.
10 : ಸಂಸೋನನ ತಂದೆ ಹೆಣ್ಣಿನ ಮನೆಗೆ ಬಂದ ಮೇಲೆ ಸಂಸೋನನು ಯೌವನಸ್ಥರ ಪದ್ಧತಿಯ ಪ್ರಕಾರ ಅಲ್ಲಿ ಔತಣವನ್ನು ಸಿದ್ಧಮಾಡಿಸಿದನು.
11 : ಫಿಲಿಷ್ಟಿಯನು ಅವನನ್ನು ನೋಡಿದಾಗ ತಮ್ಮ ಮಧ್ಯದಿಂದ ಮೂವತ್ತು ಮಂದಿ ‘ಆಪ್ತರನ್ನು’ ಆರಿಸಿ ಅವನ ಜೊತೆಯಲ್ಲಿ ಇರಿಸಿದರು.
12 : ಸಂಸೋನನು ಇವರಿಗೆ, “ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ ಏಳು ದಿನಗಳಲ್ಲಿಯೇ ಅದನ್ನು ಬಿಡಿಸಿ ಅದರ ಅರ್ಥವನ್ನು ಹೇಳಿದರೆ ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷ ವಸ್ತ್ರಗಳನ್ನೂ ಕೊಡುತ್ತೇನೆ.
13 : ನಿಮ್ಮಿಂದ ಆಗದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷ ವಸ್ತ್ರಗಳನ್ನೂ ಕೊಡಬೇಕು” ಎನ್ನಲು ಅವರು ಅವನಿಗೆ, “ನಿನ್ನ ಒಗಟನ್ನು ಹೇಳು, ಕೇಳೋಣ,” ಎಂದು ಹೇಳಿದರು.
14 : ಆಗ ಅವನು,
“ತಿಂದುಬಿಡುವಂಥದರಿಂದ ತಿನ್ನತಕ್ಕದ್ದು
ದೊರಕಿತು;
ಕ್ರೂರವಾದದ್ದರಿಂದ ಮಧುರವಾದದ್ದು
ಸಿಕ್ಕಿತು”
ಎಂದು ಹೇಳಿದನು. ಮೂರು ದಿನಗಳಾದರೂ ಅವರು ಅದನ್ನು ಬಿಡಿಸಲಾರದೆ ಹೋದರು.
15 : ಅವರು ಏಳನೆಯ ದಿನದಲ್ಲಿ ಸಂಸೋನನ ಹೆಂಡತಿಗೆ, “ನಿನ್ನ ಗಂಡನನ್ನು ಮರಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುತ್ತೇವೆ; ನಮಗಿರುವುದಲ್ಲವನ್ನೂ ಕಸಿದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ಕರಿಸಿದಿರೋ?” ಎಂದರು.
16 : ಆಕೆ ಸಂಸೋನನ ಮುಂದೆ ಅಳುತ್ತಾ, “ನೀವು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀರಷ್ಟೇ; ನನ್ನ ಜನರಿಗೆ ಒಗಟನ್ನು ಹೇಳಿದ್ದೀರಿ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ಪೀಡಿಸಿದಳು. ಅವನು ಆಕೆಗೆ, “ಇದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರಕೊಟ್ಟನು.
17 : ಆಕೆ ಔತಣದ ಏಳು ದಿನಗಳಲ್ಲೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನ ಆಕೆ ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳೇಬಿಟ್ಟನು. ಆಕೆ ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.
18 : ಅವರು ಏಳನೆಯ ದಿನ ಸೂರ್ಯಾಸ್ತಮಾನಕ್ಕೆ ಮೊದಲೇ ಅವನಿಗೆ,
“ಜೇನಿಗಿಂತ ಸಿಹಿಯಾದದ್ದು ಯಾವುದು?
ಸಿಂಹಕ್ಕಿಂತ ಕ್ರೂರವಾದದ್ದು ಯಾವುದು?”
ಎಂದು ಹೇಳಿದರು. ಅವನು.
“ನೀವು ನನ್ನ ಕಡಸಿನಿಂದ ಉಳದಿದ್ದರೆ
ಒಗಟನ್ನು ಬಿಡಿಸಲು ನಿಮ್ಮಂದಾಗುತ್ತಿರ
ಲಿಲ್ಲ,”
ಎಂದನು.
19 : ಸರ್ವೇಶ್ವರನ ಆತ್ಮ ಫಕ್ಕನೆ ಅವನ ಮೇಲೆ ಬಂದಿತು. ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು ಅವರ ವಸ್ತ್ರಗಳನ್ನು ಸುಲಿದುಕೊಂಡು ಒಗಟನ್ನು ಬಿಡಿಸಿದವರಿಗೆ ತಂದುಕೊಟ್ಟನು. ಬಳಿಕ ಕೋಪಗೊಂಡು ತನ್ನ ತಂದೆಯ ಮನೆಗೆ ಹೋದನು.
20 : ಇತ್ತ ಸಂಸೋನನ ಹೆಂಡತಿಯನ್ನು ಅವನ ಆಪ್ತರೊಬ್ಬನಿಗೆ ಮದುವೆ ಮಾಡಿಕೊಟ್ಟರು.