Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನ್ಯಾಯ


1 : ಎಫ್ರಯಿಮ್ಯರು ಒಟ್ಟುಗೂಡಿ ಜೋರ್ಡನನ್ನು ದಾಟಿ ಉತ್ತರದಿಕ್ಕಿಗೆ ಯೆಪ್ತಾಹನಿದ್ದಲ್ಲಿಗೆ ಹೋದರು. ಅವನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಏಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟು ಬಿಡುತ್ತೇವೆ,” ಎಂದರು.
2 : ಅದಕ್ಕೆ ಅವನು, “ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆ; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ.
3 : ನೀವು ಸಹಾಯ ಮಾಡುವುದಿಲ್ಲ ಎಂದು ತಿಳಿದು ಪ್ರಾಣವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆ; ಸರ್ವೇಶ್ವರ ಅವರನ್ನು ನನ್ನ ಕೈಗೆ ಒಪ್ಪಿಸಿದರು. ಹೀಗಿರಲು, ನೀವು ಈಗ ಬಂದು ನನ್ನೊಡನೆ ಕಲಹಮಾಡುವುದೇಕೆ?” ಎಂದು ಉತ್ತರಕೊಟ್ಟನು.
4 : ಬಳಿಕ ಗಿಲ್ಯಾದಿನವರೆಲ್ಲರನ್ನು ಕೂಡಿಸಿ, ಎಫ್ರಯಿಮರಿಗೆ ವಿರುದ್ಧ ಯುದ್ದಕ್ಕೆ ನಿಂತನು. “ಗಿಲ್ಯಾದ್ಯರಾದ ನೀವು ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿರಿ” ಎಂದು ಎಫ್ರಯಿಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಕೋಪಗೊಂಡು ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು.
5 : ಇದಲ್ಲದೆ, ಅವರು ತಪ್ಪಿಸಿಕೊಂಡು ಹೋಗದಂತೆ ಎಫ್ರಯಿಮಿಗೆ ಹೋಗುವ ಜೋರ್ಡನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಯಿಮ್ಯರಲ್ಲಿ ಒಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿರಿ ಎಂದು ಅವರನ್ನು ಕೇಳಿದಾಗ ಅವರು, “ನೀನು ಎಫ್ರಯಿಮನೋ?” ಎಂದು ಕೇಳುತ್ತಿದ್ದರು.
6 : ಅವನು “ಇಲ್ಲ” ಎಂದರೆ ಅವನಿಗೆ, “ನೀನು ‘ಷಿಬ್ಬೋಲೆತ್’ ಅನ್ನು” ಎಂದು ಹೇಳುತ್ತಿದ್ದರು. ಹಾಗೆ ಉಚ್ಚರಸಲಿಕ್ಕೆ ಬಾರದೆ ಅವನು “ಸಿಬ್ಬೋಲೆತ್” ಅನ್ನುತ್ತಿದ್ದನು. ಕೂಡಲೇ ಅವರು ಅವನನ್ನು ಹಿಡಿದು ಜೋರ್ಡನಿನ ಹಾಯಗಡಗಳ ಬಳಿಯಲ್ಲೇ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಯಿಮರಲ್ಲಿ ನಾಲ್ವತ್ತೆರಡು ಸಾವಿರ ಜನರು ನಾಶವಾದರು.
7 : ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಯೇಲರನ್ನು ಆರು ವರ್ಷ ಪಾಲಿಸಿದನಂತರ ಸತ್ತನು. ಅವನ ಶವವನ್ನು ಗಿಲ್ಯಾದಿನ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು.
8 : ಯೆಪ್ತಾಹನ ತರುವಾಯ ಬೆತ್ಲೆಹೇಮಿನವನಾದ ಇಬ್ಚಾನನು ಇಸ್ರಯೇಲರ ನ್ಯಾಯಸ್ಥಾಪಕನಾದ.
9 : ಅವನಿಗೆ ಮೂವತ್ತು ಮಂದಿ ಗಂಡು ಮಕ್ಕಳೂ ಮೂವತ್ತು ಮಂದಿ ಹೆಣ್ಣು ಮಕ್ಕಳೂ ಇದ್ದರು. ತನ್ನ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಕೊಟ್ಟು ಗಂಡುಮಕ್ಕಳಿಗಾಗಿ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು.
10 : ಇವನು ಇಸ್ರಯೇಲರನ್ನು ಏಳು ವರ್ಷ ಪಾಲಿಸಿದನಂತರ ಮೃತನಾದನು. ಅವನ ಶವವನ್ನು ಬೆತ್ಲೆಹೇಮಿನಲ್ಲಿ ಸಮಾಧಿಮಾಡಿದರು.
11 : ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಯೇಲರ ಪಾಲಕನಾಗಿ ಹತ್ತು ವರ್ಷಗಳವರೆಗೆ ಅವರನ್ನು ಪಾಲಿಸಿದನಂತರ ಮರಣ ಹೊಂದಿದನು.
12 : ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು.
13 : ಇವನ ತರುವಾಯ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಯೇಲರ ಪಾಲಕನಾದನು.
14 : ಇವನಿಗೆ ನಾಲ್ವತ್ತು ಮಂದಿ ಮಕ್ಕಳೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿ ಮಾಡುವುದಕ್ಕಾಗಿ ಎಪ್ಪತ್ತು ಹೇಸರಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಯೇಲರನ್ನು ಎಂಟು ವರ್ಷ ಪಾಲಿಸಿದ ನಂತರ ಮರಣ ಹೊಂದಿದನು.
15 : ಅವನ ಶವವನ್ನು ಎಫ್ರ¬ೂಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು.

· © 2017 kannadacatholicbible.org Privacy Policy