1 : ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ಅಂಜಬೇಡ, ಕಳವಳಗೊಳ್ಳಬೇಡ; ಯೋಧರೆಲ್ಲರನ್ನು ನಿನ್ನೊಡನೆ ಕರೆದುಕೊಂಡು ಆಯಿಗೆ ಹೋಗು. ಆಯಿ ಎಂಬ ಊರಿನ ರಾಜ, ಪ್ರಜೆ, ನಗರ, ನಾಡು ಇವೆಲ್ಲವನ್ನು ನಿನಗೆ ಕೊಟ್ಟಿದ್ದೇನೆ, ಹೋಗು.
2 : ಜೆರಿಕೋವಿಗೂ ಅದರ ಅರಸನಿಗೂ ಮಾಡಿದಂತೆಯೇ ಆಯಿಗೂ ಅದರ ಅರಸನಿಗೂ ಮಾಡು. ಆದರೆ ಕೊಳ್ಳೆಯನ್ನೂ ಪಶುಪ್ರಾಣಿಗಳನ್ನೂ ಈ ಸಾರಿ ನೀವೇ ಇಟ್ಟುಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಆ ಊರಿನ ಹಿಂಬದಿಯಲ್ಲಿ ಹೊಂಚುಹಾಕಿ ಕೊಂಡಿರಲಿ,” ಎಂದು ಆಜ್ಞಾಪಿಸಿದರು.
3 : ಅಂತೆಯೇ ಯೆಹೋಶುವನು ಯೋಧರೆಲ್ಲರ ಸಹಿತವಾಗಿ ಆಯಿಗೆ ಹೊರಡಲು ಸಿದ್ಧನಾದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು.
4 : ಅವರಿಗೆ, “ನೀವು ನಗರದ ಹಿಂಭಾಗದಲ್ಲಿ ಹೊಂಚುಹಾಕಿ ಕುಳಿತಿರಬೇಕು. ನಗರದಿಂದ ಬಹುದೂರವಾಗಿರಬೇಡಿ. ಎಲ್ಲರೂ ಸಿದ್ಧವಾಗಿರಿ.
5 : ನಾನು ಮತ್ತು ನನ್ನ ಸಂಗಡದವರೆಲ್ಲರು ನಗರದ ಸವಿೂಪಕ್ಕೆ ಹೋಗತ್ತೇವೆ. ಆಯಿಯ ಜನರು ಮುಂಚಿನಂತೆ ನಮ್ಮೊಡನೆ ಯುದ್ಧಕ್ಕೆ ಬರುವರು. ಕೂಡಲೆ ನಾವು ಅಲ್ಲಿಂದ ಓಡಿಹೋಗುತ್ತೇವೆ.
6 : ‘ಇವರು ಮುಂಚಿನಂತೆ ನಮಗೆ ಹೆದರಿ ಓಡಿ ಹೋಗುತ್ತಿದ್ದಾರೆ’ ಎಂದು ಭಾವಿಸಿ, ಅವರು ನಮ್ಮನ್ನು ಹಿಂದಟ್ಟುವರು. ನಾವು ಓಡುತ್ತಲೇ ಇರುತ್ತೇವೆ.
7 : ನಾವು ಮತ್ತು ಅವರು ನಗರಕ್ಕೆ ದೂರವಾದ ಮೇಲೆ ನೀವು ಹೊಂಚಿ ನೋಡುವ ಸ್ಥಳದಿಂದ ಎದ್ದು ನಗರದೊಳಗೆ, ನುಗ್ಗಿ ಅದನ್ನು ಸ್ವಾಧೀನ ಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನಿಮ್ಮ ಕೈಗೆ ಒಪ್ಪಿಸುವರು.
8 : ನೀವು ನಗರವನ್ನು ಹಿಡಿದ ಕೂಡಲೇ ಅದಕ್ಕೆ ಬೆಂಕಿ ಹೊತ್ತಿಸಿರಿ. ಸರ್ವೇಶ್ವರನ ಮಾತಿನಂತೆ ನಡೆಯಿರಿ. ಇದೇ ನಾನು ನಿಮಗೆ ಕೊಡುವ ಆಜ್ಞೆ,” ಎಂದು ಹೇಳಿ ಅವರನ್ನು ರಾತ್ರಿಯಲ್ಲೇ ಕಳಿಸಿದನು.
9 : ಅವರು ಹೊಂಚುಹಾಕುವ ಸಲುವಾಗಿ ಬೇತೇಲಿಗೂ ಆಯಿಗೂ ನಡುವೆ ಆಯಿಯ ಪಶ್ಚಿಮಕ್ಕೆ ಹೋಗಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯನ್ನು ಜನರ ಮಧ್ಯೆ ಕಳೆದನು.
10 : ಬೆಳಿಗ್ಗೆ ಅವನೆದ್ದು ಇಸ್ರಯೇಲರ ಹಿರಿಯರ ಸಂಗಡ ಸೈನ್ಯವನ್ನು ಕೂಡಿಸಿ ಅವರ ಮುಂದೆ ಆಯಿಗೆ ಹೊರಟನು.
11 : ಅವನೊಂದಿಗಿದ್ದ ಯೋಧರೆಲ್ಲರು ನಗರದ ಸವಿೂಪಕ್ಕೆ ಏರಿಬಂದು ಅದರ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಅವರಿಗೂ ಆಯಿಗೂ ನಡುವೆ ಒಂದು ಕಣಿವೆ ಇತ್ತು.
12 : ಯೆಹೋಶುವ ಸುಮಾರು ಐದು ಸಾವಿರ ಜನರನ್ನು ಆರಿಸಿಕೊಂಡು ಬೇತೇಲಿಗೂ ಆಯಿಗೂ ನಡುವೆ ನಗರದ ಪಶ್ಚಿಮದಲ್ಲಿ ಹೊಂಚಿನೋಡುವುದಕ್ಕಾಗಿ ಇರಿಸಿದನು.
13 : ನಗರದ ಉತ್ತರದಲ್ಲಿದ್ದ ಸಮಸ್ತ ಸೈನ್ಯವನ್ನು, ನಗರದ ಪಶ್ಚಿಮದಲ್ಲಿ ಹೊಂಚಿನೋಡುತ್ತಿದ್ದ ಸೈನ್ಯವನ್ನು ಕ್ರಮಪಡಿಸಿದ ನಂತರ ಅವನು ಆ ರಾತ್ರಿಯನ್ನು ಕಣಿವೆಯಲ್ಲಿ ಕಳೆದನು.
14 : ಬೆಳಿಗ್ಗೆ ಆಯಿ ಊರಿನರಸನು ಈ ಸಮಾಚಾರವನ್ನು ತಿಳಿದು ತ್ವರೆಯಾಗಿ ಜನರೆಲ್ಲರ ಸಹಿತ ಇಸ್ರಯೇಲರ ಸಂಗಡ ಯುದ್ಧಮಾಡಲು ಹೊರಟನು. ಅವನೂ ಅವನ ಜನರೂ ಅರಾಬಾ ಎಂಬ ಸ್ಥಳಕ್ಕೆ ಎದುರಾಗಿದ್ದ ಆ ಕಣಿವೆಗೆ ಬಂದರು. ನಗರದ ಹಿಂಭಾಗದಲ್ಲಿ ಹೊಂಚಿ ನೋಡುತ್ತಿರುವವರ ವಿಷಯ ಅವನಿಗೆ ಗೊತ್ತಿರಲಿಲ್ಲ.
15 : ಯೆಹೋಶುವನೂ ಅವನ ಸಂಗಡ ಇದ್ದ ಇಸ್ರಯೇಲರೆಲ್ಲರೂ ತಾವು ಸೋತವರೋ ಎಂಬಂತೆ ಅರಣ್ಯಮಾರ್ಗವಾಗಿ ಓಡತೊಡಗಿದರು.
16 : ಇತ್ತ ಆಯಿಯಲ್ಲಿ ಹಾಗೂ ಬೇತೇಲಿನಲ್ಲಿ ಗಂಡಸರು ಇರಲಿಲ್ಲ. ಊರಬಾಗಿಲುಗಳನ್ನು ತೆರೆದಿಟ್ಟು ಎಲ್ಲರೂ ಇಸ್ರಯೇಲರನ್ನು ಹಿಂದಟ್ಟಿ ಹೋಗಿದ್ದರು.
17 : ಆಗ ಸರ್ವೇಶ್ವರ ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿಕಡೆಗೆ ಚಾಚು. ಆ ನಗರವನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ,” ಎಂದರು. ಅವನು ಅಂತೆಯೇ ಚಾಚಿದನು.
18 : ಚಾಚಿದ ಕೂಡಲೆ ಹೊಂಚುಗಾರರು ತಾವಿದ್ದ ಸ್ಥಳದಿಂದ ಎದ್ದು ಓಡಿಬಂದು ನಗರದೊಳಕ್ಕೆ ನುಗ್ಗಿ ಒಡನೆ ಬೆಂಕಿ ಹೊತ್ತಿಸಿದರು.
19 : ಆಯಿಯ ಜನರು ಹಿಂದಿರುಗಿ ನೋಡಿದಾಗ ನಗರದ ಹೊಗೆ ಆಕಾಶಕ್ಕೆ ಏರುತ್ತಿತ್ತು. ಯಾವ ಮಾರ್ಗದಿಂದಲೂ ಅವರಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಏಕೆಂದರೆ ಅರಣ್ಯದ ಕಡೆಗೆ ಓಡಿ ಹೋಗುತ್ತಿದ್ದ ಇಸ್ರಯೇಲರು ಹಿಂದಟ್ಟಿ ಬರುವವರ ಕಡೆಗೆ ತಿರುಗಿದ್ದರು.
20 : ನಗರವು ಹೊಂಚುಗಾರರಿಗೆ ಸ್ವಾಧೀನವಾದುದನ್ನೂ ಹೊಗೆ ಆಕಾಶಕ್ಕೆ ಏರುತ್ತಿದ್ದುದನ್ನೂ ನೋಡಿದ ಯೆಹೋಶುವ ಹಾಗೂ ಇಸ್ರಯೇಲರು ಹಿಂದಿರುಗಿ ಆಯಿ ಜನರ ಮೇಲೆ ಬಿದ್ದರು.
21 : ನಗರಕ್ಕೆ ನುಗ್ಗಿದವರೂ ಹೊರಗೆ ಬಂದು ಆ ಜನರ ಮೇಲೆ ಎರಗಿದರು. ಹೀಗೆ ಆ ಕಡೆಯಿಂದಲೂ ಈ ಕಡೆಯಿಂದಲೂ ಇಸ್ರಯೇಲರ ಕೈಗೆ ಸಿಕ್ಕಿಬಿದ್ದರು. ಎಲ್ಲರನ್ನು ಸದೆಬಡಿಯಲಾಯಿತು. ಒಬ್ಬನಾದರೂ ಉಳಿಯಲಿಲ್ಲ. ಯಾವನೂ ತಪ್ಪಿಸಿಕೊಳ್ಳಲಿಲ್ಲ.
22 : ಆಯಿಯ ಅರಸನನ್ನು ಮಾತ್ರ ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ಕರೆದುಕೊಂಡು ಬಂದರು.
23 : ಇಸ್ರಯೇಲರು ತಮ್ಮನ್ನು ಅರಣ್ಯದವರೆಗೂ ಬೆನ್ನಟ್ಟಿ ಬಂದ ಆಯಿ ಜನರನ್ನು ಅಲ್ಲೇ ಕತ್ತಿಯಿಂದ ಸಂಹರಿಸಿದ ನಂತರ ಅವರೆಲ್ಲರು ನಗರಕ್ಕೆ ಹೋಗಿ ಅಲ್ಲಿದ್ದವರನ್ನೂ ಕೊಂದರು.
24 : ಆ ದಿನ ಆಯಿ ಜನರಲ್ಲಿ ಸತ್ತ ಗಂಡಸರ ಮತ್ತು ಹೆಂಗಸರ ಸಂಖ್ಯೆ ಹನ್ನೆರಡು ಸಾವಿರ.
25 : ಆ ನಗರದವರೆಲ್ಲರು ಹತರಾಗುವವರೆಗೆ ಯೆಹೋಶುವ ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
26 : ಸರ್ವೇಶ್ವರ ಯೆಹೋಶುವನಿಗೆ ಆಜ್ಞಾಪಿಸಿದಂತೆ ಇಸ್ರಯೇಲರು ಆ ನಗರದಿಂದ ಪಶುಪ್ರಾಣಿ ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು.
27 : ಯೆಹೋಶುವನು ಆಯಿ ನಗರವನ್ನು ಸುಟ್ಟು ಅದು ಎಂದಿಗೂ ಮರಳಿ ಕಟ್ಟಲಾಗದಂತೆ ಹಾಳು ದಿಬ್ಬವಾಗಿಸಿಬಿಟ್ಟನು. ಅದು ಇಂದಿನವರೆಗೂ ಹಾಗೆಯೆ ಉಳಿದಿದೆ.
27 : ಸರ್ವೇಶ್ವರ ಯೆಹೋಶುವನಿಗೆ ಆಜ್ಞಾಪಿಸಿದಂತೆ ಇಸ್ರಯೇಲರು ಆ ನಗರದಿಂದ ಪಶುಪ್ರಾಣಿ ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು.
28 : ಯೆಹೋಶುವನು ಆಯಿ ನಗರವನ್ನು ಸುಟ್ಟು ಅದು ಎಂದಿಗೂ ಮರಳಿ ಕಟ್ಟಲಾಗದಂತೆ ಹಾಳು ದಿಬ್ಬವಾಗಿಸಿಬಿಟ್ಟನು. ಅದು ಇಂದಿನವರೆಗೂ ಹಾಗೆಯೆ ಉಳಿದಿದೆ.
29 : ಆಯಿಯ ಅರಸನನ್ನು ಸಂಜೆಯವರೆಗೂ ಮರಕ್ಕೆ ನೇತುಹಾಕಿಸಿದನು. ಸೂರ್ಯನು ಅಸ್ತಮಿಸುತ್ತಲೆ ಅವನ ಶವವನ್ನು ಕೆಳಗಿಳಿಸಿ ಅದನ್ನು ಊರಬಾಗಿಲಲ್ಲಿ ಹಾಕಿಸಿ ಅದರ ಮೇಲೆ ಕಲ್ಲಿನ ದೊಡ್ಡ ರಾಶಿಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
30 : ಸರ್ವೇಶ್ವರನ ದಾಸ ಮೋಶೆ ಇಸ್ರಯೇಲರಿಗೆ ಆಜ್ಞಾಪಿಸಿದ್ದಂತೆ ಹಾಗೂ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಯೆಹೋಶುವನು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಏಬಾಲ್ ಬೆಟ್ಟದಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಯಾವ ಕಬ್ಬಿಣವೂ ಮುಟ್ಟದ ಹುಟ್ಟುಕಲ್ಲುಗಳಿಂದಲೇ ಅದನ್ನು ಕಟ್ಟಿಸಿದನು.
31 : ಜನರು ಅದರ ಮೇಲೆ ಸರ್ವೇಶ್ವರನಿಗೆ ದಹನ ಹೋಮಬಲಿಗಳನ್ನೂ ಸಮಾಧಾನಬಲಿಗಳನ್ನೂ ಸಮರ್ಪಿಸಿದರು.
32 : ಯೆಹೋಶುವನು ಅಲ್ಲಿದ್ದ ಕಲ್ಲುಗಳ ಮೇಲೆ ಜನರೆಲ್ಲರ ಸಮಕ್ಷಮದಲ್ಲಿ ಮೋಶೆಯ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದನು.
33 : ಎಲ್ಲ ಇಸ್ರಯೇಲರು, ಅಂದರೆ ಹಿರಿಯರು, ಅಧಿಕಾರಿಗಳು, ನ್ಯಾಯಾಧಿಪತಿಗಳು, ಅನ್ಯದೇಶೀಯರು ಹಾಗೂ ಸ್ವದೇಶೀಯರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಎಡಬಲಗಳಲ್ಲಿ ನಿಂತರು. ಆ ಮಂಜೂಷವನ್ನು ಹೊತ್ತು ಲೇವಿಯರಾದ ಯಾಜಕರಿಗೆ ಅಭಿಮುಖರಾಗಿ ನಿಂತರು. ಗೆರಿಜ್ಜೀಮ್ ಬೆಟ್ಟದ ಕಡೆ ಅರ್ಧ ಜನ, ಏಬಾಲ್ ಬೆಟ್ಟದ ಕಡೆ ಅರ್ಧ ಜನ, ಹೀಗೆ ಸರ್ವೇಶ್ವರನ ದಾಸ ಮೋಶೆ ಮೊದಲೇ ಹೇಳಿದ್ದಂತೆ ಆಶೀರ್ವಾದಗಳನ್ನು ಪಡೆಯುವುದಕ್ಕೋಸ್ಕರ ನಿಂತರು.
34 : ಅನಂತರ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದ ಹಾಗು ಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು.
35 : ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ ಮಕ್ಕಳಿಗೂ ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.