Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಜೆರಿಕೋದ ಜನರು ಇಸ್ರಯೇಲರಿಗೆ ಹೆದರಿ ತಮ್ಮ ನಗರದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದರು. ಯಾರೂ ಹೊರಗೆ ಬರುತ್ತಿರಲಿಲ್ಲ, ಒಳಗೆ ಹೋಗುತ್ತಿರಲಿಲ್ಲ.
2 : ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೋಡು, ನಾನು ಜೆರಿಕೋವನ್ನು, ಅದರ ಅರಸನನ್ನು ಹಾಗೂ ಅದರ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ.
3 : ನಿನ್ನ ಯೋಧರೆಲ್ಲ ಆರು ದಿವಸಗಳವರೆಗೆ ದಿನಕ್ಕೆ ಒಂದು ಸಾರಿ ನಗರವನ್ನು ಸುತ್ತಲಿ.
4 : ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿವಸ ನೀವು ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ಕೊಂಬುಗಳನ್ನು ಊದಬೇಕು.
5 : ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿ ಕೇಳಿಸುತ್ತಲೇ ನೀವೆಲ್ಲರು ಗಟ್ಟಿಯಾಗಿ ಕೇಕೆ ಹಾಕಿ ಆರ್ಭಟಿಸಿರಿ. ಆಗ ನಗರದ ಗೋಡೆ ತಾನೇ ತಾನಾಗಿ ಬಿದ್ದು ಹೋಗುವುದು. ಆಗ ಪ್ರತಿಯೊಬ್ಬನು ನೆಟ್ಟಗೆ ಒಳನುಗ್ಗಬಹುದು,” ಎಂದು ಹೇಳಿದರು.
6 : ನೂನನ ಮಗ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಸರ್ವೇಶ್ವರನ ಮಂಜೂಷದ ಮುಂದೆ ನಡೆಯಲಿ,” ಎಂದು ತಿಳಿಸಿದನು.
7 : ಅಂತೆಯೆ ಜನರಿಗೆ, “ನೀವು ಮುಂದೆ ಹೋಗಿ ನಗರವನ್ನು ಸುತ್ತುವರೆಯಿರಿ. ಯುದ್ಧಸನ್ನದ್ಧರೆಲ್ಲರೂ ಸರ್ವೇಶ್ವರನ ಮಂಜೂಷದ ಮುಂದೆ ಹೋಗಲಿ,” ಎಂದು ಹೇಳಿದನು.
8 : ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ ಸರ್ವೇಶ್ವರನ ಮುಂದೆ ನಡೆದರು. ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.
9 : ಯುದ್ಧಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೆ ಇದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಕೊಂಬುಗಳು ಮೊಳಗುತ್ತಲೇ ಅವರು ಹೊರಟರು.
10 : ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಧ್ವನಿ ಕೇಳಿಸದಿರಲಿ. ನಿಮ್ಮ ಬಾಯಿಂದ ಒಂದು ಮಾತೂ ಬರಕೂಡದು. ಆರ್ಭಟಿಸಿರೆಂದು ನಾನು ಹೇಳುವಾಗ ಮಾತ್ರ ನೀವು ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು.
11 : ಸರ್ವೇಶ್ವರನ ಮಂಜೂಷವನ್ನು ಒಂದು ಸಾರಿ ನಗರ ಪ್ರದಕ್ಷಿಣೆ ಮಾಡಿಸಿದ ಮೇಲೆ, ಅವರು ಪಾಳೆಯಕ್ಕೆ ಹಿಂದಿರುಗಿ ಬಂದು ರಾತ್ರಿಯನ್ನು ಕಳೆದರು.
12 : ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಯಾಜಕರು ಮಂಜೂಷವನ್ನು ಹೊತ್ತುಕೊಂಡು ಹೊರಟರು.
13 : ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಸರ್ವೇಶ್ವರನ ಮಂಜೂಷದ ಮುಂದೆ ನಡೆದರು. ಯುದ್ಧಸನ್ನದ್ಧರು ಅವರ ಮುಂದಿದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಕೊಂಬುಗಳು ಮೊಳಗುತ್ತಲೇ ಅವರು ಹೊರಟರು.
14 : ಹೀಗೆ ಎರಡನೆಯ ದಿನದಲ್ಲೂ ನಗರವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು. ಆರು ದಿನ ಹೀಗೆಯೇ ಮಾಡಿದರು.
15 : ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ನಗರವನ್ನು ಏಳುಸಾರಿ ಸುತ್ತಿದರು.
16 : ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಿದರು. ಯೆಹೋಶುವ ಜನರಿಗೆ, “ಆರ್ಭಟಿಸಿರಿ, ಸರ್ವೇಶ್ವರಸ್ವಾಮಿ ನಿಮಗೆ ಈ ನಗರವನ್ನು ಕೊಟ್ಟಿದ್ದಾರೆ.
17 : ಇದೂ ಇದರಲ್ಲಿರುವುದೆಲ್ಲವೂ ಸರ್ವೇಶ್ವರನಿಗೆ ವಿೂಸಲಾಗಿ ಆಹುತಿಯಾಗತಕ್ಕದೆಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಸಂಗಡ ಮನೆಯಲ್ಲಿರುವವರೆಲ್ಲರು ಉಳಿಯಲಿ. ಏಕೆಂದರೆ ನಾವು ಕಳಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.
18 : ನೀವಾದರೋ ಸರ್ವೇಶ್ವರನಿಗೆ ವಿೂಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ ಇಸ್ರಯೇಲರ ಪಾಳೆಯವೇ ಶಾಪಕ್ಕೆ ಗುರಿಯಾಗಿ ನಾಶವಾದೀತು.
19 : ಎಲ್ಲ ಬೆಳ್ಳಿ ಬಂಗಾರ ಹಾಗೂ ತಾಮ್ರ ಕಬ್ಬಿಣಗಳ ಪಾತ್ರೆಗಳು ಸರ್ವೇಶ್ವರಸ್ವಾಮಿಗೆ ವಿೂಸಲಾಗಿದ್ದು ಅವರ ಭಂಡಾರಕ್ಕೆ ಸೇರತಕ್ಕವುಗಳು,” ಎಂದನು.
20 : ಕೂಡಲೆ ಜನರು ಆರ್ಭಟಿಸಿದರು. ಕೊಂಬುಗಳು ಮೊಳಗಿದವು. ಕೊಂಬಿನ ಧ್ವನಿ ಕೇಳಿ ಜನರು ಇನ್ನೂ ಗಟ್ಟಿಯಾಗಿ ಆರ್ಭಟಿಸಿದರು. ನಗರದ ಗೋಡೆ ತಾನಾಗಿ ಬಿದ್ದುಹೋಯಿತು. ಪ್ರತಿ ಒಬ್ಬನೂ ನೆಟ್ಟಗೆ ನಗರಕ್ಕೆ ನುಗ್ಗಿದನು. ಅದು ಅವರ ಸ್ವಾಧೀನವಾಯಿತು.
21 : ಅಲ್ಲಿದ್ದ ಗಂಡಸರು, ಹೆಂಗಸರು, ಯುವಕರು, ಮುದಕರು, ದನ, ಕುರಿ, ಕತ್ತೆ ಇವುಗಳನ್ನೆಲ್ಲಾ ನಿಶ್ಯೇಷವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
22 : ಯೆಹೋಶುವನು ಆ ನಾಡಿನಲ್ಲಿ ಬೇಹುಗಾರಿಕೆ ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳಿಗೆ ಪ್ರಮಾಣ ಮಾಡಿದಂತೆ ಅವಳನ್ನೂ ಅವಳಿಗಿರುವುದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿ,” ಎಂದು ಹೇಳಿದನು.
23 : ಅಂತೆಯೇ ಅವರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಗಳನ್ನೂ ಸಹೋದರರನ್ನೂ ಅವಳಿಗಿದ್ದುದೆಲ್ಲವನ್ನೂ ಅವಳ ಎಲ್ಲಾ ಸಂಬಂಧಿಕರನ್ನೂ ತಂದು ಇಸ್ರಯೇಲರ ಪಾಳೆಯದ ಹೊರಗಡೆ ಸುಭದ್ರವಾಗಿರಿಸಿದರು.
24 : ಬಳಿಕ ನಗರವನ್ನೂ - ಅದರಲ್ಲಿದ್ದುದೆಲ್ಲವನ್ನೂ ಬೆಂಕಿಯಿಂದ ಸುಟ್ಟುಹಾಕಿದರು. ಆದರೆ ಬೆಳ್ಳಿ ಬಂಗಾರವನ್ನು, ಕಂಚುಕಬ್ಬಿಣಗಳ ಪಾತ್ರೆಗಳನ್ನು ಸರ್ವೇಶ್ವರನ ಆಲಯದ ಭಂಡಾರಕ್ಕೆ ಒಪ್ಪಿಸಿದರು.
25 : ವೇಶ್ಯೆಯಾದ ರಾಹಾಬಳು, ಜೆರಿಕೋನಗರದಲ್ಲಿ ಸಂಚರಿಸಿ ನೋಡಲು ಬಂದಿದ್ದ ಯೆಹೋಶುವನ ಗೂಢಚಾರರನ್ನು ಬಚ್ಚಿಟ್ಟಿದ್ದರಿಂದ ಅವಳನ್ನೂ ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದುದೆಲ್ಲವನ್ನೂ ಉಳಿಸಿದರು. ಅವಳು ಇಂದಿನವರೆಗೂ ಇಸ್ರಯೇಲರಲ್ಲೇ ವಾಸವಾಗಿದ್ದಾಳೆ.
26 : ಅದೇ ಸಮಯಕ್ಕೆ ಯೆಹೋಶುವನು ಇಸ್ರಯೇಲರಿಂದ ಪ್ರಮಾಣಮಾಡಿಸಿ ಅವರಿಗೆ, “ಜೆರಿಕೋ ಎಂಬ ಈ ನಗರವನ್ನು ಕಟ್ಟುವುದಕ್ಕೆ ಕೈಹಾಕುವವನು ಸರ್ವೇಶ್ವರನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ ! ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ಹಿರಿಯ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರಿಯ ಮಗನನ್ನೂ ಕಳೆದುಕೊಳ್ಳಲಿ,” ಎಂದು ಹೇಳಿದನು.
27 : ಸರ್ವೇಶ್ವರಸ್ವಾಮಿ ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ನಾಡಿನಲ್ಲೆಲ್ಲಾ ಹರಡಿತು.

· © 2017 kannadacatholicbible.org Privacy Policy