Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಜೋರ್ಡನಿನ ಪಶ್ಚಿಮದಲ್ಲಿದ್ದ ಅಮೋರಿಯರ ಎಲ್ಲ ಅರಸರು ಮತ್ತು ಸಮುದ್ರದ ಬಳಿಯಿದ್ದ ಸರ್ವ ಕಾನಾನ್‍ರಾಜರು ಸರ್ವೇಶ್ವರಸ್ವಾಮಿ ಇಸ್ರಯೇಲರ ಕಣ್ಮುಂದೆಯೇ ಜೋರ್ಡನನ್ನು ಬತ್ತಿಸಿ ಆ ನದಿ ದಾಟಿಸಿದರೆಂದು ಕೇಳಿದರು. ಆಗ ಅವರ ಎದೆ ಒಡೆದುಹೋಯಿತು. ಇಸ್ರಯೇಲರ ಮುಂದೆ ಅವರಿಗೆ ಧೈರ್ಯವಿಲ್ಲದೆ ಹೋಯಿತು.
2 : ಆಗ ಸರ್ವೇಶ್ವರ ಯೆಹೋಶುವನಿಗೆ, “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಇಸ್ರಯೇಲರಿಗೆ ಸುನ್ನತಿ ಮಾಡು,” ಎಂದು ಹೇಳಿದರು.
3 : ಅಂತೆಯೇ ಅವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಸುನ್ನತಿಗುಡ್ಡದಲ್ಲಿ ಇಸ್ರಯೇಲರಿಗೆ ಸುನ್ನತಿ ಮಾಡಿದನು.
4 : ಹೀಗೆ ಯೆಹೋಶುವನು ಸುನ್ನತಿ ಮಾಡುವುದಕ್ಕೆ ಕಾರಣ ಏನೆಂದರೆ - ಈಜಿಪ್ಟಿನಿಂದ ಹೊರಟುಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು, ಅನಂತರ ಅರಣ್ಯದಲ್ಲಿ ಸತ್ತುಹೋದರು.
5 : ಅಲ್ಲಿಂದ ಬಂದ ಗಂಡಸರೆಲ್ಲರಿಗೆ ಸುನ್ನತಿ ಆಗಿತ್ತು. ಈಜಿಪ್ಟನ್ನು ಬಿಟ್ಟ ಅನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ.
6 : ಈಜಿಪ್ಟಿನಿಂದ ಬಂದ ಇಸ್ರಯೇಲರು ಸರ್ವೇಶ್ವರನ ಮಾತನ್ನು ಕೇಳದೆ ಹೋದುದರಿಂದ ಅವರು, ತಮ್ಮ ಯೋಧರೆಲ್ಲರು ಸಂಹಾರವಾಗುವ ತನಕ ನಾಲ್ವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಸರ್ವೇಶ್ವರ, ತಾವು ಅವರ ಪೂರ್ವಜರಿಗೆ ವಾಗ್ದಾನಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟಿದ್ದರು.
7 : ಅವರಿಗೆ ಬದಲಾಗಿ ಹುಟ್ಟಿದ ಅವರ ಗಂಡುಮಕ್ಕಳಿಗೆ ಯೆಹೋಶುವ ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿ ಮಾಡಿರಲಿಲ್ಲ. ಆದ್ದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು.
8 : ಸುನ್ನತಿಯಾದ ಮೇಲೆ ವಾಸಿಯಾಗುವವರೆಗೆ ಜನರೆಲ್ಲರು ಪಾಳೆಯದ ತಮ್ಮ ತಮ್ಮ ಸ್ಥಳಗಳಲ್ಲೇ ಇದ್ದರು.
9 : ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನಾನು ಈಜಿಪ್ಟಿನ ಕಳಂಕವನ್ನು ಈ ದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ,” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ.
10 : ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕಹಬ್ಬವನ್ನಾಚರಿಸಿದರು.
11 : ಮಾರನೆಯ ದಿನದಿಂದ ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು - ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು.
12 : ಆ ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ಈ ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.
13 : ಯೆಹೋಶುವನು ಜೆರಿಕೋವಿಗೆ ಹತ್ತಿರವಿದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಇಗೋ, ಒಬ್ಬ ವ್ಯಕ್ತಿ ಕಾಣಿಸಿಕೊಂಡನು. ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ನಿಂತಿದ್ದನು. ಯೆಹೋಶುವ ಅವನನ್ನು ಸವಿೂಪಿಸಿ, “ನೀನು ನಮ್ಮವನೋ ಅಥವಾ ಶತ್ರು ಕಡೆಯವನೋ?” ಎಂದು ಕೇಳಿದನು.
14 : ಆಗ ಆ ವ್ಯಕ್ತಿ, “ನಾನು ಅಂಥವನಲ್ಲ; ನಾನು ಸರ್ವೇಶ್ವರನ ಸೇನಾಪತಿ. ಇದೀಗಲೆ ಬಂದವನು,” ಎಂದು ಉತ್ತರಿಸಿದನು. ಕೂಡಲೆ ಯೆಹೋಶುವ ಅವನಿಗೆ ಸಾಷ್ಟಾಂಗವೆರಗಿ, “ಒಡೆಯಾ, ತಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಎಂದನು.
15 : ಆಗ ಸರ್ವೇಶ್ವರನ ಸೇನಾಪತಿ, “ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು,” ಎಂದು ಹೇಳಿದರು. ಯೆಹೋಶುವ ಅಂತೆಯೇ ಮಾಡಿದನು.

· © 2017 kannadacatholicbible.org Privacy Policy