Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಅವನೊಂದಿಗೆ ಇಸ್ರಯೇಲರು ಎಲ್ಲರೂ ಶಿಟ್ಟೀಮನ್ನು ಬಿಟ್ಟು ಜೋರ್ಡನ್ನಿನ ಹತ್ತಿರಕ್ಕೆ ಬಂದು ಅದನ್ನು ದಾಟುವ ಮೊದಲು ಅಲ್ಲೇ ಇಳಿದುಕೊಂಡರು.
2 : ಮೂರು ದಿನಗಳಾದ ಮೇಲೆ ಜನನಾಯಕರು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ,
3 : “ನಿಮ್ಮ ದೇವರಾದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಯಾಜಕರಾದ ಲೇವಿಯರು ಹೊತ್ತಿರುವುದನ್ನು ನೀವು ಕಂಡಕೂಡಲೆ ನೀವು ಕೂಡ ನಿಮ್ಮ ನಿಮ್ಮ ಸ್ಥಳವನ್ನು ಬಿಟ್ಟು ಅದರ ಹಿಂದೆ ಹೋಗಿ.
4 : ಆದರೆ ಅದರ ಹತ್ತಿರ ನೀವು ಹೋಗಬಾರದು. ನಿಮಗೂ ಮಂಜೂಷಕ್ಕೂ ಸುಮಾರು ಒಂದು ಕಿಲೋವಿೂಟರ್ ಅಂತರವಿರಬೇಕು. ಹೀಗೆ ನೀವು ಹೋಗಬೇಕಾದ ಮಾರ್ಗ ನಿಮಗೆ ಗೊತ್ತಾಗುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇಲ್ಲಿಯವರೆಗೆ ಪ್ರಯಾಣ ಮಾಡಿದ್ದಿಲ್ಲ,” ಎಂದು ತಿಳಿಸಿದರು.
5 : ಇದಲ್ಲದೆ, ಯೆಹೋಶುವನು ಜನರಿಗೆ, “ಸರ್ವೇಶ್ವರ ನಾಳೆ ನಿಮ್ಮ ಮಧ್ಯೆ ಅದ್ಭುತಗಳನ್ನು ಮಾಡಲಿದ್ದಾರೆ. ಆದುದರಿಂದ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ,” ಎಂದು ಹೇಳಿದನು.
6 : ಯಾಜಕರಿಗೆ, “ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ನಡೆದು ನದಿದಾಟಿರಿ,” ಎಂದು ಆಜ್ಞಾಪಿಸಿದನು. ಅವರು ಅಂತೆಯೇ ಮಂಜೂಷವನ್ನು ಹೊತ್ತುಕೊಂಡು ಹೋದರು.
7 : ಆಗ ಸರ್ವೇಶ್ವರ, ಯೆಹೋಶುವನಿಗೆ: “ನಾನು ಇಂದಿನಿಂದ ನಿನ್ನನ್ನು ಇಸ್ರಯೇಲರ ಮುಂದೆ ಮಹಾತ್ಮನನ್ನಾಗಿಸುವೆನು. ನಾನು ಮೋಶೆಯ ಸಂಗಡ ಇದ್ದಹಾಗೆ ನಿನ್ನ ಸಂಗಡವೂ ಇರುವೆನೆಂದು ಅವರಿಗೆ ಗೊತ್ತಾಗುವುದು.
8 : ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು,” ಎಂದರು.
9 : ಆಗ ಯೆಹೋಶುವನು ಇಸ್ರಯೇಲರಿಗೆ, “ಇಲ್ಲಿಗೆ ಬಂದು ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಮಾತುಗಳನ್ನು ಕೇಳಿ:
10 : ಚೈತನ್ಯ ಸ್ವರೂಪರಾದ ದೇವರು ನಿಮ್ಮ ಮಧ್ಯೆ ಇದ್ದಾರೆಂದು ನಿಮಗೆ ಈಗ ತಿಳಿಯುವುದು. ಅದೇ ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು ಹಾಗೂ ಯೆಬೂಸಿಯರನ್ನು ನಿಮ್ಮ ಮುಂದಿನಿಂದ ಓಡಿಸಿಬಿಡುವರೆಂದು ನಿಮಗೆ ಗೊತ್ತಾಗುವುದು.
11 : ಹೇಗೆಂದರೆ - ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಜೋರ್ಡನಿನಲ್ಲಿ ಇಳಿಯುವುದು.
12 : ಆಗ ನೀವು ಇಸ್ರಯೇಲ್ ಕುಲಗಳಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಬೇಕು.
13 : ಸರ್ವಲೋಕದ ಒಡೆಯನಾದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಜೋರ್ಡನ್ ನದಿಯ ನೀರಿನಲ್ಲಿ ಇಡುತ್ತಲೇ ಮೇಲಿಂದ ಹರಿದು ಬರುವ ನೀರು ಮುಂದೆ ಸಾಗದೆ ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು,” ಎಂದು ತಿಳಿಸಿದನು.
14 : ಜನರು ಜೋರ್ಡನ್ ನದಿಯನ್ನು ದಾಟಲು ತಮ್ಮ ತಮ್ಮ ಡೇರೆಗಳಿಂದ ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು.
15 : ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿಗೆ ಬಂದರು. ಅದು ಸುಗ್ಗಿಯ ಕಾಲ. ನದಿ ದಡವಿೂರಿ ಹರಿಯುತ್ತಿತ್ತು. ಯಾಜಕರು ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಹರಿಯುತ್ತಿದ್ದ ಜೋರ್ಡನ್ ನದಿಯ ನೀರು ನಿಂತುಹೋಯಿತು.
16 : ಮೇಲಿಂದ ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಬಳಿಯಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು. ಜನರು ಜೆರಿಕೋವಿನ ಎದುರಿನಲ್ಲಿ ನದಿ ದಾಟಿದರು.
17 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನ ನಡುವೆ ನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಯೇಲರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಹೀಗೆ ಜನರೆಲ್ಲರೂ ಜೋರ್ಡನಿನ ಆಚೆಗೆ ಸೇರಿದರು.

· © 2017 kannadacatholicbible.org Privacy Policy