Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ನೂನನ ಮಗನಾದ ಯೆಹೋಶುವನು ಕಾನಾನ್ ನಾಡನ್ನೂ ಜೆರಿಕೊ ನಗರವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಇಬ್ಬರು ಗೂಢಚಾರರನ್ನು ಕಳುಹಿಸಿದನು. ಅವರು ಹೊರಟು ಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು.
2 : ಇಸ್ರಯೇಲಿನ ಕೆಲವು ಜನರು ನಮ್ಮ ನಾಡಿನಲ್ಲಿ ಸಂಚರಿಸಿ ನೋಡಲು ಈ ರಾತ್ರಿ ನಗರಕ್ಕೆ ಬಂದಿದ್ದಾರೆಂದು ಜೆರಿಕೋವಿನ ಅರಸನಿಗೆ ತಿಳಿಸಲಾಯಿತು.
3 : ಅವನು ರಾಹಾಬಳಿಗೆ, “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ವ್ಯಕ್ತಿಗಳನ್ನು ತಂದೊಪ್ಪಿಸು. ಅವರು ನಾಡನ್ನೆಲ್ಲಾ ಸಂಚರಿಸಿ ಬೇಹು ಮಾಡಲು ಬಂದವರು” ಎಂದು ಹೇಳಿ ಕಳಿಸಿದನು.
4 : ವೇಶ್ಯೆ ಆ ಇಬ್ಬರನ್ನು ಅಡಗಿಸಿಟ್ಟು, ಕೇಳಲು ಬಂದವರಿಗೆ, “ಆ ವ್ಯಕ್ತಿಗಳು ನನ್ನ ಬಳಿಗೆ ಬಂದದ್ದೇನೋ ನಿಜ. ಅವರು ಎಲ್ಲಿಯವರೆಂದು ನನಗೆ ತಿಳಿಯದೆ ಹೋಗಿದೆ.
5 : ಊರಬಾಗಿಲನ್ನು ಮುಚ್ಚುವ ಹೊತ್ತಿಗೆ ಕತ್ತಲಲ್ಲೇ ಹೊರಟು ಹೋದರು. ಎಲ್ಲಿಗೆ ಹೋದರೆಂಬುದೂ ನನಗೆ ಗೊತ್ತಿಲ್ಲ. ಬೇಗನೆ ಅವರ ಬೆನ್ನಟ್ಟಿರಿ. ಅವರು ನಿಮಗೆ ಸಿಕ್ಕುವರು,” ಎಂದು ಹೇಳಿದಳು.
6 : ಆದರೆ ಅವಳು ಆ ವ್ಯಕ್ತಿಗಳನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳೊಳಗೆ ಬಚ್ಚಿಟ್ಟಿದ್ದಳು.
7 : ಅರಸನ ಆಳುಗಳು ಜೋರ್ಡನ್ ದಾರಿ ಹಿಡಿದು ಹೋಗಿ ನದಿದಾಟುವ ಸ್ಥಳದವರೆಗೂ ಹುಡುಕಿದರು. ಹುಡುಕುವವರು ಹೊರಟಕೂಡಲೆ ಊರಬಾಗಿಲನ್ನು ಮುಚ್ಚಲಾಯಿತು.
8 : ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆ ಮಾಳಿಗೆ ಹತ್ತಿ, ಅವರ ಬಳಿಗೆ ಬಂದು,
9 : “ಸರ್ವೇಶ್ವರ ಈ ನಾಡನ್ನು ನಿಮಗೆ ಕೊಟ್ಟಿದ್ದಾರೆಂದು ನಾನು ಬಲ್ಲೆ; ನಿಮ್ಮ ವಿಷಯದಲ್ಲಿ ನಮಗೆ ಮಹಾಭೀತಿ ಉಂಟಾಗಿದೆ. ನಾಡಿನ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆ.
10 : ನೀವು ಈಜಿಪ್ಟಿನಿಂದ ಹೊರಟುಬಂದ ಮೇಲೆ ಸರ್ವೇಶ್ವರ ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟರೆಂದು ಕೇಳಿದ್ದೇವೆ. ಅಲ್ಲದೆ ಜೋರ್ಡನ್ನಿನ ಆಚೆ ಇರುವ ಅಮೋರಿಯರ ಅರಸರಿಬ್ಬರನ್ನು ಅಂದರೆ, ಸೀಹೋನ್ ಮತ್ತು ಓಗ್ ಎಂಬುವರನ್ನು ನೀವು ನಾಶಮಾಡಿದಿರೆಂದು ಕೇಳಿದ್ದೇವೆ.
11 : ಇದನ್ನೆಲ್ಲಾ ಕೇಳಿ ನಮ್ಮ ಎದೆ ಒಡೆದು ಹೋಗಿದೆ. ನಿಮ್ಮನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ. ನಿಮ್ಮ ದೇವರಾದ ಸರ್ವೇಶ್ವರರೊಬ್ಬರೇ ಪರಲೋಕದಲ್ಲೂ ಭೂಲೋಕದಲ್ಲೂ ದೇವರು.
12 : ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆ ತೋರಿದಂತೆ ನೀವೂ ನನ್ನ ತಂದೆಯ ಮನೆಯವರಿಗೆ ದಯೆ ತೋರಬೇಕು.
13 : ನನ್ನ ತಂದೆ ತಾಯಿಗಳನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನೂ ನಾಶಮಾಡದೆ ಉಳಿಸುವುದಾಗಿ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದಳು.
14 : ಆಗ ಆ ಗೂಢಚಾರರು, “ನೀವು ನಮ್ಮ ಸಂಗತಿಯನ್ನು ಹೊರಪಡಿಸದಿದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ. ಸರ್ವೇಶ್ವರಸ್ವಾಮಿ ಈ ನಾಡನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ದಯೆಯಿಂದ ನಡೆದುಕೊಳ್ಳುತ್ತೇವೆ,” ಎಂದರು.
15 : ಅವಳ ಮನೆ ಊರಗೋಡೆಯ ಮೇಲಿತ್ತು. ಆದ್ದರಿಂದ ಅವರನ್ನು ಹಗ್ಗದ ಮೂಲಕ ಕಿಟಕಿಯಿಂದ ಕೆಳಕ್ಕೆ ಇಳಿಸಿದಳು.
16 : ಅಲ್ಲದೆ ಅವರಿಗೆ, “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿಹೋಗಿ, ಮೂರುದಿನ ಅವಿತುಕೊಂಡಿರಿ. ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿ,” ಎಂದಳು.
17 : ಆಗ ಅವರು ಆಕೆಗೆ, “ನೀನು ನಮ್ಮಿಂದ ಮಾಡಿಸಿದ ಪ್ರಮಾಣದಂತೆ ನಡೆದುಕೊಳ್ಳುತ್ತೇವೆ.
18 : ನಾವು ಈ ನಾಡನ್ನು ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಕಿಗೆ ಈ ಕೆಂಪುದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನು, ಅಣ್ಣತಮ್ಮಂದಿರನ್ನು, ಎಲ್ಲಾ ಬಂಧುಬಳಗದವರನ್ನು ನಿನ್ನ ಮನೆಯಲ್ಲೇ ಸೇರಿಸಿಕೊಂಡಿರಬೇಕು.
19 : ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು ಆಗುವರು. ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈಮಾಡಿದ್ದಾದರೆ ಆ ರಕ್ತಾಪರಾಧ ನಮ್ಮ ತಲೆಯ ಮೇಲಿರುವುದು.
20 : ನೀನೇನಾದರೂ ಈ ನಮ್ಮ ವಿಷಯವನ್ನು ಬಹಿರಂಗಪಡಿಸಿದ್ದೇ ಆದರೆ ನಮ್ಮಿಂದ ಮಾಡಿಸಿದ ಪ್ರಮಾಣದಿಂದ ನಾವು ಬಿಡುಗಡೆಯಾಗಿರುತ್ತೇವೆ,” ಎಂದು ಹೇಳಿದರು.
21 : ಅದಕ್ಕವಳು, “ನಿಮ್ಮ ಮಾತಿನಂತೆಯೇ ಆಗಲಿ,” ಎಂದು ಹೇಳಿ ಅವರನ್ನು ಕಳುಹಿಸಿದಳು. ಅವರು ಹೊರಟುಹೋದ ಮೇಲೆ ಆ ಕೆಂಪುದಾರವನ್ನು ಕಿಟಕಿಗೆ ಕಟ್ಟಿದಳು.
22 : ಗೂಢಚಾರರು ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವತಕ ಮೂರು ದಿನ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು.
23 : ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ನದಿದಾಟಿ, ನೂನನ ಮಗ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು.
24 : ಇದಲ್ಲದೆ, ಅವರು ಯೆಹೋಶುವನಿಗೆ, “ಸರ್ವೇಶ್ವರಸ್ವಾಮಿ ನಿಜವಾಗಿ ಈ ನಾಡನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ಅದರ ನಿವಾಸಿಗಳೆಲ್ಲ ನಮ್ಮನ್ನು ಕಂಡು ನಡುಗುತ್ತ ಇದ್ದಾರೆ,” ಎಂದು ತಿಳಿಸಿದರು.

· © 2017 kannadacatholicbible.org Privacy Policy