Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು ಹಾಗೂ ಇಸ್ರಯೇಲ್ ಕುಲಾಧಿಪತಿಗಳು
2 : ಸರ್ವೇಶ್ವರ ಸ್ವಾಮಿ ಮೋಶೆಯ ಮೂಲಕ ಆಜ್ಞಾಪಿಸಿದಂತೆ ಜೋರ್ಡನಿನ ಪಶ್ಚಿಮದ ಕಾನಾನ್ ನಾಡನ್ನು ಚೀಟು ಹಾಕಿ ಇಸ್ರಯೇಲರ ಒಂಬತ್ತುವರೆ ಕುಲದವರಿಗೆ ಸ್ವಂತ ಆಸ್ತಿಯಾಗಿ ಹಂಚಿಕೊಟ್ಟರು.
3 : ಉಳಿದ ಎರಡುವರೆ ಕುಲಗಳ ಜನರಿಗೆ ಜೋರ್ಡನಿನ ಆಚೆಯಲ್ಲಿ ಮೋಶೆಯೇ ಸೊತ್ತನ್ನು ಕೊಟ್ಟಿದ್ದನು. ಲೇವಿಯರಿಗೆ ಮಾತ್ರ ಕೊಡಲಿಲ್ಲ.
4 : ಜೋಸೆಫ್ಯರರು ಮನಸ್ಸೆ ಮತ್ತು ಎಫ್ರಯಿಮ್ ಎಂಬ ಎರಡು ಕುಲಗಳಾಗಿ ಎಣಿಸಲ್ಪಟ್ಟಿದ್ದರು. ಲೇವಿಯರಿಗೆ, ತಂಗುವುದಕ್ಕೆ ಕೆಲವು ನಗರಗಳು ಹಾಗು ಅವರ ದನಕುರಿಗಳಿಗೆ ಅಲ್ಲಿನ ಕೆಲವು ಹುಲ್ಲುಗಾವಲುಗಳನ್ನು ಬಿಟ್ಟರೆ ಬೇರೇನೂ ಸಿಕ್ಕಲಿಲ್ಲ.
5 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ನಾಡನ್ನು ಹಂಚಿಕೊಂಡರು. ಕಾಲೇಬನ ಪಾಲಿಗೆ ಬಂದ ಆಸ್ತಿ
6 : ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನಿಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಯೆಹೋಶುವನಿಗೆ, “ಸರ್ವೇಶ್ವರ ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಭಕ್ತನಾದ ಮೋಶೆಗೆ ಹೇಳಿದ್ದು ನಿಮಗೆ ಚೆನ್ನಾಗಿ ಗೊತ್ತಿದೆ.
7 : ಸರ್ವೇಶ್ವರನ ದಾಸನಾದ ಮೋಶೆ ಈ ನಾಡನ್ನು ಸಂಚರಿಸಿ ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ನನ್ನನ್ನು ಕಳಿಸಿದಾಗ ನನಗೆ ನಾಲ್ವತ್ತು ವರುಷ.
8 : ನನ್ನ ಜೊತೆಯಲ್ಲಿ ಬಂದಿದ್ದ ಸಹೋದರರು ಜನರನ್ನು ಎದೆಗೆಡಿಸಿದರು. ನಾನಾದರೋ ನನ್ನ ದೇವರಾದ ಸರ್ವೇಶ್ವರನನ್ನೇ ಸಂಪೂರ್ಣವಾಗಿ ನಂಬಿ ಶ್ರದ್ಧೆಯಿಂದ ಅನುಸರಿಸಿದೆ.
9 : ಮೋಶೆ ಅಂದು ನನಗೆ, ‘ನೀನು ಪೂರ್ಣ ಮನಸ್ಸಿನಿಂದ ನನ್ನ ದೇವರಾದ ಸರ್ವೇಶ್ವರನನ್ನೇ ಶ್ರದ್ಧೆಯಿಂದ ಅನುಸರಿಸಿದ ಕಾರಣ ನೀನು ಸಂಚರಿಸಿದ ಪ್ರದೇಶ ನಿನಗೂ ನಿನ್ನ ಸಂತಾನದವರಿಗೂ ಶಾಶ್ವತ ಸೊತ್ತಾಗುವುದು,’ ಎಂದು ಪ್ರಮಾಣಮಾಡಿ ಹೇಳಿದನು.
10 : ಸರ್ವೇಶ್ವರ ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಯೇಲರು ಅರಣ್ಯದಲ್ಲಿ ಅಲೆಯುತ್ತಿದ್ದ ವರ್ಷಗಳೂ ಸೇರಿ ನಾಲ್ವತ್ತೈದು ವರ್ಷಗಳು ದಾಟಿದವು. ಸರ್ವೇಶ್ವರ ತಾವು ನುಡಿದಂತೆಯೇ ಈ ಕಾಲವೆಲ್ಲ ನನ್ನನ್ನು ಜೀವದಿಂದುಳಿಸಿದ್ದಾರೆ. ಈಗ ನನಗೆ ಎಂಬತ್ತೈದು ವರ್ಷ.
11 : ಮೋಶೆ ನನ್ನನ್ನು ಕಳಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟೇ ಬಲವಿದೆ. ಯುದ್ಧಮಾಡುವುದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿದೆ.
12 : ಹೀಗಿರಲು ಸರ್ವೇಶ್ವರ ಆ ದಿನದಂದು ಸೂಚಿಸಿದಂತೆ ಈ ಮಲೆನಾಡನ್ನು ನನಗೆ ಕೊಡು. ‘ಇದರಲ್ಲಿ ಎತ್ತರದ ವ್ಯಕ್ತಿಗಳಿದ್ದಾರೆ, ದೊಡ್ಡ ದೊಡ್ಡ ನಗರಗಳಿವೆ, ಕೋಟೆಕೊತ್ತಲಗಳಿವೆ’ ಎಂದು ಆ ಕಾಲದಲ್ಲಿ ನೀನು ಕೇಳಿದ್ದುಂಟು. ಅವರೆಲ್ಲರನ್ನು ಓಡಿಸಿಬಿಡಲು ಸರ್ವೇಶ್ವರ ತಮ್ಮ ಮಾತಿಗನುಸಾರ ನನಗೆ ಸಹಾಯಮಾಡುವರೆಂಬ ನಂಬಿಕೆ ನನಗಿದೆ,” ಎಂದನು.
13 : ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ, ಹೆಬ್ರೋನ್ ನಗರವನ್ನು ಅವನಿಗೆ ಸೊತ್ತಾಗಿ ಕೊಟ್ಟನು.
14 : ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಯೇಲಿನ ದೇವರಾದ ಸರ್ವೇಶ್ವರನನ್ನು ಸಂಪೂರ್ಣವಾಗಿ ಶ್ರದ್ಧೆಯಿಂದ ಅನುಸರಿಸಿದ್ದ ರಿಂದ ಹೆಬ್ರೋನ್ ಅವನಿಗೆ ಸೊತ್ತಾಗಿ ಸಿಕ್ಕಿತು. ಅದು ಇಂದಿನವರೆಗೂ ಅವನದೇ ಆಗಿದೆ. ಅದರ ಹಿಂದಿನ ಹೆಸರು ‘ಕಿರ್ಯತ್ ಅರ್ಬ’ ಎಂದು. ಅರ್ಬ ಎಂಬವನು ಈ ಎತ್ತರದ ವ್ಯಕ್ತಿಗಳಲ್ಲಿ ಪ್ರಮುಖನು. ಯುದ್ಧವು ನಿಂತಿತು. ನಾಡನಲ್ಲಿ ಶಾಂತಿಸಮಾಧಾನ ನೆಲೆಸಿತು.

· © 2017 kannadacatholicbible.org Privacy Policy