Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಯೆಹೋಶುವನು ಆಯಿ ನಗರವನ್ನು, ಅದರ ಅರಸನನ್ನು ಹಿಡಿದು ಜೆರಿಕೋವನ್ನೂ ಅದರ ಅರಸನನ್ನೂ ಹೇಗೋ ಹಾಗೆ ಸಂಹರಿಸಿಬಿಟ್ಟನೆಂದು ಜೆರುಸಲೇಮಿನ ಅರಸ ಅದೋನೀಚೆದೆಕನು ತಿಳಿದುಕೊಂಡನು.
2 : ಆಯಿ ನಗರಕ್ಕಿಂತ ದೊಡ್ಡದೂ ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿದ್ದ ಗಿಬ್ಯೋನ್ ನಗರದಲ್ಲಿ ಇರುವ ಜನರೆಲ್ಲರು ಯುದ್ಧವೀರರಾಗಿದ್ದರೂ ಇಸ್ರಯೇಲರ ನಡುವೆ ಜೀವದಿಂದುಳಿಯಲು ಅವರ ಸಂಗಡ ಸಂಧಾನ ಮಾಡಿಕೊಂಡಿದ್ದಾರೆ ಎಂಬುದನ್ನು ಕೂಡ ಕೇಳಿ ಅವನು ಬಹಳವಾಗಿ ಭಯಪಟ್ಟನು.
3 : ಆದುದರಿಂದ ಹೆಬ್ರೋನಿನ ಅರಸ ಹೋಹಾಮ್, ಯರ್ಮೂತಿನ ಅರಸ ಪಿರಾಮ್, ಲಾಕೀಷಿನ ಅರಸ ಯಾಫೀಯ, ಎಗ್ಲೋನಿನ ಅರಸ ದೆಬೀರ್ ಇವರ ಬಳಿಗೆ ದೂತರನ್ನು ಕಳುಹಿಸಿದನು.
4 : “ನೀವು ಬಂದು ನನಗೆ ಸಹಾಯ ಮಾಡಿ, ನಾವು ಯೆಹೋಶುವನೊಂದಿಗೂ ಇಸ್ರಯೇಲರೊಂದಿಗೂ ಒಪ್ಪಂದ ಮಾಡಿಕೊಂಡು ಗಿಬ್ಯೋನ್ಯರನ್ನು ಸೋಲಿಸೋಣ,” ಎಂದು ಹೇಳಿಕಳಿಸಿದನು.
5 : ಅಂತೆಯೇ ಜೆರುಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ನಗರಗಳ ಐದು ಮಂದಿ ಅಮೋರಿಯ ರಾಜರು ದಂಡೆತ್ತಿ ಕೂಡಿ ಬಂದರು. ಗಿಬ್ಯೋನಿಗೆ ಮುತ್ತಿಗೆ ಹಾಕಿ ಯುದ್ಧ ಮಾಡಿದರು.
6 : ಗಿಬ್ಯೋನ್ಯರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ದೂತರನ್ನು ಕಳಿಸಿದರು. “ನಿಮ್ಮ ಸೇವಕರಾದ ನಮ್ಮನ್ನು ಕೈಬಿಡಬೇಡಿ. ಬೇಗನೆ ಬಂದು ಸಹಾಯ ಮಾಡಿ. ನಮಗೆ ವಿರುದ್ಧ ಕೂಡಿಬಂದಿರುವ ಈ ಬೆಟ್ಟದ ಸೀಮೆಯ ಎಲ್ಲ ಅಮೋರಿಯ ರಾಜರಿಂದ ನಮ್ಮನ್ನು ತಪ್ಪಿಸಿ,” ಎಂದು ಬೇಡಿಕೊಂಡರು.
7 : ಆಗ ಯೆಹೋಶುವ ಎಲ್ಲಾ ಯೋಧರ ಮತ್ತು ಯುದ್ಧವೀರರ ಸಮೇತ ಗಿಲ್ಗಾಲಿನಿಂದ ಹೊರಟನು.
8 : ಸರ್ವೇಶ್ವರಸ್ವಾಮಿ ಯೆಹೋಶುವನಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ,” ಎಂದರು.
9 : ಅವರು ಇಸ್ರಯೇಲರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ಮುಟ್ಟುವವರೆಗೂ ಸರ್ವೇಶ್ವರ ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಈ ಕಾರಣ ಅನೇಕರು ಸತ್ತರು. ಇಸ್ರಯೇಲರ ಕತ್ತಿಗೆ ಈಡಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚುಮಂದಿ.
9 : ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣ ಮಾಡಿ ತಟ್ಟನೆ ಅವರ ಮೇಲೆ ಬಿದ್ದನು.
10 : ಆ ಅಮೋರಿಯರಲ್ಲಿ ಇಸ್ರಯೇಲರ ಬಗ್ಗೆ ಸರ್ವೇಶ್ವರ ಭಯ ಹುಟ್ಟಿಸಿದರು. ಆದುದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‍ಹೋರೋನ್ ಎಂಬ ಮೇಡು ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೆ ಅವರನ್ನು ಹಿಂದಟ್ಟಿ ಸಂಹರಿಸಿದನು.
11 : ಅವರು ಇಸ್ರಯೇಲರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ಮುಟ್ಟುವವರೆಗೂ ಸರ್ವೇಶ್ವರ ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಈ ಕಾರಣ ಅನೇಕರು ಸತ್ತರು. ಇಸ್ರಯೇಲರ ಕತ್ತಿಗೆ ಈಡಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚುಮಂದಿ.
12 : ಸರ್ವೇಶ್ವರ ಅಮೋರಿಯರನ್ನು ಇಸ್ರಯೇಲರಿಗೆ ವಶಪಡಿಸಿದ ದಿನದಂದು ಯೆಹೋಶುವನು ಸರ್ವೇಶ್ವರನಲ್ಲಿ ಒಂದು ವಿಜ್ಞಾಪನೆ ಮಾಡಿ ಇಸ್ರಯೇಲರ ಕಣ್ಮುಂದೆಯೇ, “ಸೂರ್ಯನೇ, ನೀ ನಿಲ್ಲು ಗಿಬ್ಯೋನಿನಲ್ಲೇ; ಚಂದ್ರನೇ, ನೀ ನಿಲ್ಲು ಅಯ್ಯಾಲೋನ್ ಕಣಿವೆಯಲ್ಲೇ” ಎಂದು ಆಜ್ಞಾಪಿಸಿದನು.
13 : ಇಸ್ರಯೇಲರು ತಮ್ಮ ಶತ್ರುಗಳಿಗೆ ಮುಯ್ಯಿ ತೀರಿಸುವ ತನಕ ಸೂರ್ಯ ಚಂದ್ರರು ಹಾಗೆಯೇ ನಿಂತರು. ಇದನ್ನು ‘ಯಾಷಾರ್’ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯ ಮುಳುಗಲು ಆತುರಪಡದೆ ಹೆಚ್ಚುಕಡಿಮೆ ಒಂದು ದಿನವೆಲ್ಲ ಆಕಾಶದ ಮಧ್ಯದಲ್ಲೆ ನಿಂತಿತು.
14 : ಆ ಪ್ರಕಾರ ಹಿಂದೆಯಾಗಲಿ ಮುಂದೆಯಾಗಲಿ ಸರ್ವೇಶ್ವರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟಂಥ ದಿವಸ ಇಲ್ಲವೇ ಇಲ್ಲ! ಸರ್ವೇಶ್ವರಸ್ವಾಮಿ ತಾವೇ ಇಸ್ರಯೇಲರ ಪರವಾಗಿ ಯುದ್ಧಮಾಡುತ್ತಿದ್ದರು.
15 : ಯೆಹೋಶುವನು ಇಸ್ರಯೇಲರೆಲ್ಲರೊಂದಿಗೆ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
16 : ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗವಿಯಲ್ಲಿ ಅವಿತುಕೊಂಡರು
17 : ಜನರು ಯೆಹೋಶುವನಿಗೆ, “ಆ ಐದುಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅವಿತುಕೊಂಡಿದ್ದಾರೆ,” ಎಂದು ತಿಳಿಸಿದರು.
18 : ಆಗ ಯೆಹೋಶುವನು ಅವರಿಗೆ, “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕೆಲವರನ್ನಿಡಿ. ನೀವಾದರೋ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದಾದ ವ್ಯಕ್ತಿಗಳನ್ನು ಹತಮಾಡುತ್ತಾ ಹೋಗಿ.
19 : ಅವರನ್ನು ಅವರ ನಗರಗಳಲ್ಲಿ ಸೇರಗೊಡಿಸಬೇಡಿ. ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರಲ್ಲವೆ?” ಎಂದನು.
20 : ಹೀಗೆ ಯೆಹೋಶುವನು ಹಾಗೂ ಇಸ್ರಯೇಲರು ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿದರು. ಕೆಲವರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
21 : ಇಸ್ರಯೇಲರಾದರೋ ಮಕ್ಕೇದದಲ್ಲಿದ್ದ ಯೆಹೋಶುವನ ಬಳಿಗೆ ಸುರಕ್ಷಿತವಾಗಿ ಬಂದರು. ಇಸ್ರಯೇಲರ ವಿರುದ್ಧ ಯಾರೊಬ್ಬನೂ ನಾಲಿಗೆ ಮಸೆಯಲಿಲ್ಲ.
22 : ಅನಂತರ ಯೆಹೋಶುವನು ಜನರಿಗೆ, “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿ,” ಎಂದನು.
23 : ಅವರು ಹೋಗಿ ಜೆರುಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್ ಮತ್ತು ಎಗ್ಲೋನ್ ಎಂಬ ನಗರಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಅವನ ಬಳಿಗೆ ತಂದರು.
24 : ತಂದ ಮೇಲೆ ಯೆಹೋಶುವನು ಎಲ್ಲಾ ಇಸ್ರಯೇಲರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೇನಾಧಿಪತಿಗಳಿಗೆ, “ಹತ್ತಿರ ಬಂದು ಆ ಅರಸರ ಕೊರಳಿನ ಮೇಲೆ ನಿಮ್ಮ ಪಾದಗಳನ್ನಿಡಿ,” ಎಂದು ಹೇಳಿದನು. ಅಂತೆಯೇ ಅವರು ಹತ್ತಿರ ಬಂದು ಕುತ್ತಿಗೆಯ ಮೇಲೆ ಕಾಲಿಟ್ಟರು.
25 : ಆಗ ಅವನು ಅವರಿಗೆ, “ಅಂಜಬೇಡಿ, ಕಳವಳಗೊಳ್ಳಬೇಡಿ, ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲ ಶತ್ರುಗಳಿಗೂ ಸರ್ವೇಶ್ವರ ಹೀಗೆಯೇ ಮಾಡುವರು,” ಎಂದು ಹೇಳಿದರು.
26 : ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತು ಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
27 : ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇವೆ.
28 : ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿಕೊಂಡನು. ಅದರ ರಾಜನನ್ನೂ ಪ್ರಜೆಗಳೆಲ್ಲರನ್ನೂ ಕತ್ತಿಗೆ ತುತ್ತಾಗಿಸಿದನು.
29 : ಯೆಹೋಶುವನು ಜನರೆಲ್ಲರ ಸಮೇತ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
30 : ಸರ್ವೇಶ್ವರ ಅದನ್ನೂ ಅದರ ಅರಸನನ್ನೂ ಇಸ್ರಯೇಲರ ಕೈವಶಮಾಡಿದರು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಗೆ ತುತ್ತಾಗಿಸಿದರು. ಜೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
31 : ಅಲ್ಲಿಂದ ಯೆಹೋಶುವನು ಇಸ್ರಯೇಲರ ಸಹಿತ ಲಾಕೀಷಿಗೆ ಹೋಗಿ ಮುತ್ತಿಗೆ ಹಾಕಿ ಯುದ್ಧಮಾಡಿದನು.
32 : ಸರ್ವೇಶ್ವರ ಇದನ್ನೂ ಇಸ್ರಯೇಲರ ಕೈಗೊಪ್ಪಿಸಿದರು. ಎಂದೇ ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನ ಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು.
33 : ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ.
34 : ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಯೇಲರೆಲ್ಲರ ಸಹಿತ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
35 : ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನಲ್ಲಿ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕೊಂದು ನಾಶಮಾಡಿದರು.
36 : ಅನಂತರ ಯೆಹೋಶುವನು ಮತ್ತು ಇಸ್ರಯೇಲರು ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರುದ್ಧ ಯುದ್ಧಮಾಡಿದರು.
37 : ಅದನ್ನೂ ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಗೆ ಈಡಾಗಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ. ನಗರವನ್ನೂ ಜನರನ್ನೂ ನಾಶಮಾಡಿದರು.
38 : ಅಲ್ಲಿಂದ ಯೆಹೋಶುವನು ಹಾಗು ಎಲ್ಲ ಇಸ್ರಯೇಲರು ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು.
39 : ಅದನ್ನು ಹಾಗು ಅದಕ್ಕೆ ಸೇರಿದ ಊರುಗಳನ್ನು ಹಿಡಿದುಕೊಂಡರು. ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ನಾಶಮಾಡಿದರು. ಒಬ್ಬನನ್ನೂ ಉಳಿಸಲಿಲ್ಲ. ಹೆಬ್ರೋನಿಗೂ ಅದರ ಅರಸನಿಗೂ ಆದ ಗತಿಯೇ ದೆಬೀರಿಗೂ ಅದರ ಅರಸನಿಗೂ ಆಯಿತು.
40 : ಹೀಗೆ ಯೆಹೋಶುವನು ಮಲೆನಾಡಿನ ಪ್ರದೇಶ, ದಕ್ಷಿಣಪ್ರಾಂತ್ಯ, ಇಳಿಜಾರಿನ ಪ್ರದೇಶ, ಬೆಟ್ಟಗುಡ್ಡಗಳ ಬುಡ ಪ್ರದೇಶ ಇವುಗಳನ್ನು ಸ್ವತಂತ್ರಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಯೇಲ್ ದೇವರಾದ ಸರ್ವೇಶ್ವರನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಶಾಪನಾಶಕ್ಕೆ ಗುರಿಮಾಡಿದನು.
41 : ಕಾದೇಶ್ ಬರ್ನೇಯದಿಂದ ಗಾಜಾ ಊರಿನವರೆಗೂ ಗೋಷನ್ ಪ್ರಾಂತ್ಯದಿಂದ ಗಿಬ್ಯೋನಿನವರೆಗೂ ಎಲ್ಲರನ್ನು ಸೋಲಿಸಿದನು.
42 : ಇಸ್ರಯೇಲ್ ದೇವರಾದ ಸರ್ವೇಶ್ವರ ಅವರ ಪರವಾಗಿ ಯುದ್ಧಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು.
43 : ಇದಾದ ಮೇಲೆ ಯೆಹೋಶುವನು ಎಲ್ಲ ಇಸ್ರಯೇಲರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.

· © 2017 kannadacatholicbible.org Privacy Policy