Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಸರ್ವೇಶ್ವರಸ್ವಾಮಿ, ತಮ್ಮ ದಾಸ ಮೋಶೆ ಮರಣಹೊಂದಿದ ಮೇಲೆ ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗ ಹೀಗೆಂದು ಆಜ್ಞಾಪಿಸಿದರು:
2 : ನೀನೀಗ ಎದ್ದು ಸಮಸ್ತ ಪ್ರಜೆಯೊಂದಿಗೆ ಜೋರ್ಡನ್ ನದಿಯನ್ನು ದಾಟಿ, ನಾನು ಇಸ್ರಯೇಲರಿಗೆ ಕೊಡುವ ನಾಡಿಗೆ ಹೋಗು.
3 : ನಾನು ಮೋಶೆಗೆ ಹೇಳಿದಂತೆ ನೀವು ಕಾಲಿಡುವ ಸ್ಥಳವನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ.
4 : ಬೆಂಗಾಡು ಹಾಗೂ ಲೆಬನೋನ್ ಪರ್ವತದಿಂದ ಯೂಪ್ರೆಟಿಸ್ ಮಹಾನದಿಯವರೆಗಿರುವ ಹಿತ್ತಿಯರ ನಾಡೆಲ್ಲ ನಿಮ್ಮದಾಗುವುದು. ನಿಮ್ಮ ಸೀಮೆ ಪಶ್ಚಿಮ ದಿಕ್ಕಿನ ಮಹಾಸಾಗರದವರೆಗೆ ವಿಸ್ತರಿಸಿಕೊಳ್ಳುವುದು.
5 : ನಿನ್ನ ಜೀವಮಾನವಿಡೀ ಯಾರೊಬ್ಬನು ನಿನ್ನನ್ನು ಎದುರಿಸಿ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುವೆನು. ನಿನ್ನನ್ನು ಕೈಬಿಡುವುದಿಲ್ಲ, ನಿನ್ನನ್ನು ತೊರೆದುಬಿಡುವುದಿಲ್ಲ.
6 : “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರ ಪೂರ್ವಜರಿಗೆ ಪ್ರಮಾಣ ಮಾಡಿಕೊಟ್ಟ ನಾಡನ್ನು ಇವರಿಗೆ ಸ್ವಾಧೀನಪಡಿಸಬೇಕಾದವನು ನೀನೇ.
7 : ನನ್ನ ದಾಸನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನು ಮಾತ್ರ ಧೈರ್ಯಸ್ಥೈರ್ಯದಿಂದ ಪರಿಪಾಲಿಸು. ಅದನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗಬೇಡ. ಆಗ ನೀನು ಎಲ್ಲಿ ಹೋದರೂ ಕೃತಾರ್ಥನಾಗುವೆ.
8 : ಈ ಧರ್ಮಶಾಸ್ತ್ರ ಸದಾ ನಿನ್ನ ಬಾಯಲ್ಲಿರಲಿ. ಹಗಲಿರುಳು ಅದನ್ನು ಧ್ಯಾನಿಸು. ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಗೊಂಡು ನಡೆ. ಆಗ ನಿನ್ನ ಕಾರ್ಯವೆಲ್ಲಾ ಕೈಗೂಡುವುದು. ನೀನು ಕೃತಾರ್ಥನಾಗುವೆ.
9 : ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವ ಎಡೆಗಳಲ್ಲೆಲ್ಲ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನ್ನ ಸಂಗಡ ಇರುತ್ತೇನೆ,” ಎಂದು ಹೇಳಿದರು.
10 : ಆಗ ಯೆಹೋಶುವ ಜನಾಧಿಪತಿಗಳಿಗೆ,
11 : “ನೀವು ಪಾಳೆಯದ ಎಲ್ಲೆಡೆಗೆ ಹೋಗಿ ಜನರಿಗೆ, ‘ನೀವು ಇನ್ನು ಮೂರು ದಿನಗಳಲ್ಲಿ ಈ ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವಂತ ಸೊತ್ತಾಗಿ ಕೊಡುವ ನಾಡನ್ನು ವಶಪಡಿಸಿಕೊಳ್ಳಲು ಹೋಗಬೇಕು. ಆದುದರಿಂದ ನಿಮಗೆ ಬೇಕಾದ ಆಹಾರ ಪದಾರ್ಥಗಳನ್ನು ಸಿದ್ಧಮಾಡಿಕೊಳ್ಳಿ’ ಎಂದು ತಿಳಿಸಿರಿ,” ಎಂದನು.
12 : ಬಳಿಕ ರೂಬೇನ್ಯರಿಗೂ ಗಾದ್ಯರಿಗೂ ಹಾಗೂ ಮನಸ್ಸೆಕುಲದ ಅರ್ಧಜನರಿಗೂ ಯೆಹೋಶುವನು ಹೇಳಿದ್ದೇನೆಂದರೆ:
13 : “ಸರ್ವೇಶ್ವರಸ್ವಾಮಿಯ ದಾಸ ಮೋಶೆ ನಿಮಗೆ ಆಜ್ಞಾಪಿಸಿದ್ದನ್ನು ನೆನಪಿಗೆ ತಂದುಕೊಳ್ಳಿ: ನಿಮ್ಮ ದೇವರಾದ ಸರ್ವೇಶ್ವರ ಈ ನಾಡನ್ನು ನಿಮಗೆ ಕೊಟ್ಟು ನೆಮ್ಮದಿಯನ್ನು ಉಂಟು ಮಾಡಿದ್ದಾರೆ.
14 : ನಿಮ್ಮ ಮಡದಿಮಕ್ಕಳು ಮತ್ತು ದನಕುರಿಗಳು ಮೋಶೆ ನಿಮಗೆ ಜೋರ್ಡನಿನ ಆಚೆ ಕೊಟ್ಟ ನಾಡಿನಲ್ಲೇ ಇರಲಿ. ಆದರೆ ನಿಮ್ಮ ಯೋಧರೆಲ್ಲರು ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಮುಂದಾಗಿ ಹೊರಟು, ನದಿದಾಟಿ, ಅವರಿಗೆ ನೆರವಾಗಬೇಕು.
15 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನೂ ನೆಮ್ಮದಿಪಡಿಸಿ, ಸರ್ವೇಶ್ವರನಾದ ದೇವರು ತಮಗೆ ನೀಡುವ ನಾಡನ್ನು ಅವರು ಸ್ವತಂತ್ರಿಸಿಕೊಳ್ಳುವವರೆಗೆ ಅವರಿಗೆ ಸಹಾಯ ಮಾಡಲಿ. ತರುವಾಯ ಸರ್ವೇಶ್ವರನ ದಾಸ ಮೋಶೆ ಜೋರ್ಡನ್ನಿಗೆ ಈಚೆ ಸೂರ್ಯೋದಯದ ದಿಕ್ಕಿನಲ್ಲಿ, ನಿಮಗೆ ಕೊಟ್ಟ ಸ್ವಂತ ನಾಡಿಗೆ ಹಿಂದಿರುಗಿ ಬಂದು ಅದನ್ನು ಅನುಭವಿಸಬಹುದು.”
16 : ಅವರು ಯೆಹೋಶುವನಿಗೆ, “ನೀವು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ. ಎಲ್ಲಿಗೆ ಕಳಿಸಿದರೂ ಹೋಗುತ್ತೇವೆ.
17 : ಮೋಶೆಯ ಮಾತುಗಳನ್ನೆಲ್ಲ ಕೇಳಿದಂತೆ ನಿಮ್ಮ ಮಾತುಗಳನ್ನೂ ಕೇಳುತ್ತೇವೆ. ದೇವರಾದ ಸರ್ವೇಶ್ವರ ಮೋಶೆಯ ಸಂಗಡ ಇದ್ದ ಹಾಗೆ ನಿಮ್ಮ ಸಂಗಡವೂ ಇರಲಿ.
18 : ನಿಮ್ಮ ಆಜ್ಞೆಗಳಲ್ಲಿ ಒಂದನ್ನಾದರೂ ಅಲಕ್ಷ್ಯಮಾಡಿ ನಿಮ್ಮ ವಿಧಿಗಳನ್ನು ಎದುರಿಸುವವನು ಮರಣ ದಂಡನೆಗೆ ಗುರಿಯಾಗತಕ್ಕವನು. ಆದುದರಿಂದ ಧೈರ್ಯ ಸ್ಥೈರ್ಯದಿಂದಿರಿ,” ಎಂದರು.

· © 2017 kannadacatholicbible.org Privacy Policy