Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿ ನಿಮಗೆ ಬೋಧಿಸಲು ನನಗೆ ಆಜ್ಞಾಪಿಸಿದ ಈ ಧರ್ಮೋಪದೇಶವನ್ನೂ ವಿಧಿನಿರ್ಣಯಗಳನ್ನೂ ನೀವು ನದಿದಾಟಿ ಸ್ವಾಧೀನಪಡಿಸಿಕೊಳ್ಳಲಿರುವ ಆ ನಾಡಿನಲ್ಲಿ ಅನುಸರಿಸಬೇಕು.
2 : ನೀವು ಹಾಗು ನಿಮ್ಮ ಪುತ್ರಪೌತ್ರಾದಿ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಈಗ ಬೋಧಿಸುವ ಅವರ ವಿಧಿನಿರ್ಣಯಗಳನ್ನೆಲ್ಲಾ ಅನುಸರಿಸಬೇಕು; ಆಗ ನೀವು ದೀರ್ಘಕಾಲ ಬಾಳುವಿರಿ. ಅದಕ್ಕಾಗಿಯೇ ಇವುಗಳನ್ನು ಆಜ್ಞಾಪಿಸಿದ್ದಾರೆ.
3 : ಆದುದರಿಂದ ಇಸ್ರಯೇಲರೇ, ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ವಾಗ್ದಾನ ಮಾಡಿದ ಪ್ರಕಾರ, ಹಾಲೂಜೇನೂ ಹರಿಯುವ ಆ ನಾಡಿನಲ್ಲಿ ನಿಮಗೆ ಶುಭವುಂಟಾಗುವಂತೆ, ನೀವು ಬಹಳವಾಗಿ ಹೆಚ್ಚಿ ಅಭಿವೃದ್ಧಿಯಾಗುವಂತೆ, ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಿರಿ.
4 : “ಇಸ್ರಯೇಲ್ ಜನಾಂಗವೇ ಕೇಳು: ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು.
5 : ನಿನ್ನ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು.
6 : ಈ ದಿನ ನಾನು ನಿನಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿ ನಾಟಿರಲಿ.
7 : ಇವುಗಳನ್ನು ನಿನ್ನ ಮಕ್ಕಳಿಗೆ ಮನದಟ್ಟಾಗಿಸು; ಮನೆಯಲ್ಲಿರುವಾಗಲು, ಪ್ರಯಾಣದಲ್ಲಿರುವಾಗಲು, ಮಲಗುವಾಗಲು, ಏಳುವಾಗಲು ಇವುಗಳನ್ನು ಕುರಿತು ಪಾಠಹೇಳು.
8 : ಜ್ಞಾಪಕಾರ್ಥವಾಗಿ ಅವುಗಳನ್ನು ನಿನ್ನ ಕೈಗೆ ಕಟ್ಟಿಕೊ; ಜ್ಞಾಪಕ ಪಟ್ಟಿಯಂತೆ ಹಣೆಗೆ ತೊಟ್ಟುಕೊ.
9 : ನಿನ್ನ ಮನೆ ಬಾಗಿಲಿನ ನಿಲುವುಪಟ್ಟಿಗಳಲ್ಲೂ ತಲೆಬಾಗಿಲಿನ ಮೇಲೂ ಅವುಗಳನ್ನು ಬರೆ.
10 : “ನಿನ್ನ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ನಿನ್ನ ದೇವರಾದ ಸರ್ವೇಶ್ವರ ಪ್ರಮಾಣಮಾಡಿದ ನಾಡಿಗೆ ನಿನ್ನನ್ನು ಸೇರಿಸಿದಾಗ,
11 : ನೀನು ಕಟ್ಟದ ಸುಂದರವಾದ ದೊಡ್ಡ ಪಟ್ಟಣಗಳನ್ನು, ನೀನು ಕೂಡಿಸದ ಉತ್ತಮೋತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನು, ನೀನು ತೋಡದ ನೀರುಗುಂಡಿಗಳನ್ನು, ನೀನು ಬೆಳಸದ ದ್ರಾಕ್ಷಿತೋಟಗಳನ್ನು ಹಾಗು ಎಣ್ಣೆಮರಗಳನ್ನು ಅನುಭವಿಸುತ್ತಾ ತೃಪ್ತನಾಗಿ ಇರುವೆ.
12 : ಈಜಿಪ್ಟ್ ದೇಶದಲ್ಲಿ ಗುಲಾಮನಾಗಿದ್ದ ನಿನ್ನನ್ನು ಬಿಡುಗಡೆ ಮಾಡಿದ ಸರ್ವೇಶ್ವರನನ್ನು ಆಗ ಮರೆತುಬಿಡದಂತೆ ಎಚ್ಚರಿಕೆಯಿಂದಿರು.
13 : ನಿನ್ನ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಾಗಿರು; ಅವರಿಗೇ ಸೇವೆಮಾಡು; ಅವರ ಹೆಸರು ಹೇಳಿ ಪ್ರಮಾಣಮಾಡು.
14 : ಸುತ್ತಮುತ್ತಲಿರುವ ಜನಾಂಗಗಳು ಹಿಂಬಾಲಿಸುವ ದೇವರುಗಳನ್ನು ನೀನು ಆರಾಧಿಸಬಾರದು.
15 : ನಿಮ್ಮ ಮಧ್ಯೆಯಿರುವ ನಿಮ್ಮ ದೇವರಾದ ಸರ್ವೇಶ್ವರ ತಮಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸದ ದೇವರು; ಅವರು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂಮಿಯ ಮೇಲೆ ಉಳಿಯದಂತೆ ನಾಶಮಾಡಬಹುದು.
16 : “ಮಸ್ಸದಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮಾಡಿದಂತೆ ಇನ್ನು ಮುಂದೆ ಮಾಡಬೇಡಿ.
17 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ನೇಮಿಸಿದ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಲೇಬೇಕು.
18 : ಸರ್ವೇಶ್ವರನ ದೃಷ್ಟಿಯಲ್ಲಿ ಯಾವುದು ನ್ಯಾಯವೋ, ಯೋಗ್ಯವೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭ ಉಂಟಾಗುವುದು ಮತ್ತು ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮ ನಾಡನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
19 : ಅಲ್ಲದೆ, ಅವರೇ ಮಾತುಕೊಟ್ಟಿರುವಂತೆ ನಿಮ್ಮ ಶತ್ರುಗಳನ್ನು ನಿಮ್ಮ ಮುಂದೆಯೇ ತೊಲಗಿಸುವರು.
20 : “ಇನ್ನು ಮುಂದೆ ನಿಮ್ಮ ಮಕ್ಕಳು, ‘ಈ ಆಜ್ಞಾವಿಧಿನಿರ್ಣಯಗಳನ್ನು ನಮ್ಮ ದೇವರಾದ ಸರ್ವೇಶ್ವರ ಏಕೆ ನೇಮಿಸಿದರು?’ ಎಂದು ವಿಚಾರಿಸುವರು.
21 : ಆಗ ನೀವು ಅವರಿಗೆ, ‘ನಾವು ಈಜಿಪ್ಟಿನಲ್ಲಿ ಫರೋಹನಿಗೆ ಗುಲಾಮರಾಗಿ ಇದ್ದೆವು. ಸರ್ವೇಶ್ವರ ತಮ್ಮ ಭುಜಬಲದಿಂದ ನಮ್ಮನ್ನು ಬಿಡುಗಡೆ ಮಾಡಿದರು;
22 : ಭಯಂಕರ ಆದ ಮಹತ್ಕಾರ್ಯಗಳಿಂದ ಮತ್ತು ಸೂಚಕ ಕಾರ್ಯಗಳಿಂದ ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಮನೆಯವರನ್ನೂ ನಮ್ಮ ಕಣ್ಣೆದುರಿನಲ್ಲೇ ಶಿಕ್ಷಿಸಿದರು.
23 : ನಮ್ಮ ಪಿತೃಗಳಿಗೆ ಪ್ರಮಾಣ ಪೂರ್ವಕವಾಗಿ ಕೊಟ್ಟ ನಾಡಿಗೆ ನಮ್ಮನ್ನು ಸೇರಿಸುವುದಕ್ಕೆ ಈಜಿಪ್ಟಿನಿಂದ ನಮ್ಮನ್ನು ಬರಮಾಡಿದರು.
24 : ಈ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ನಮಗೆ ಅಪ್ಪಣೆಮಾಡಿದ್ದಾರೆ. ಸದಾ ಶುಭವುಂಟಾಗಬೇಕಾದರೆ, ಅವರು ಎಂದಿನಂತೆ ನಮ್ಮ ಪ್ರಾಣಗಳನ್ನು ಕಾಪಾಡಬೇಕಾದರೆ ನಾವು ನಮ್ಮ ದೇವರಾದ ಸರ್ವೇಶ್ವರನಿಗೆ ಭಯಭಕ್ತಿಯುಳ್ಳವರಾಗಿರಬೇಕು.
25 : ನಮ್ಮ ದೇವರಾದ ಸರ್ವೇಶ್ವರ ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಅವರ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿತರಾಗುವೆವು,’ ಎಂದು ನೀವು ಉತ್ತರಕೊಡಬೇಕು.

· © 2017 kannadacatholicbible.org Privacy Policy