1 :
ದೇವಪುರುಷನಾದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಯೇಲರನ್ನು ಕುರಿತು ಹೇಳಿದ ಆಶೀರ್ವಚನಗಳಿವು:
2 : ಸರ್ವೇಶ್ವರ ಸೀನಾಯ್
ಬೆಟ್ಟದಿಂದ ಬಂದರು,
ಸೇಯಿರ್ ಎಂಬ
ಸೀಮೆಯೊಳಗಿಂದ ಉದಯಿಸಿದರು,
ಪಾರಾನ್ ಎಂಬ ಪರ್ವತದಿಂದ
ಪ್ರಜ್ವಲಿಸಿದರು,
ಲಕ್ಷಾಂತರ ಸಂತರ ಮಧ್ಯೆಯಿಂದ
ದಯಮಾಡಿದರು,
ಅಗ್ನಿಸದೃಶವಾದ ಧರ್ಮಶಾಸ್ತ್ರ
ಅವರ ಬಲಪಾಶ್ರ್ವದಲ್ಲಿತ್ತು.
3 : ಹೌದು, ಆತ ಪ್ರೀತಿಸುತ್ತಾನೆ
ತನ್ನ ಪ್ರಜೆಯನು,
ಆಶ್ರಯ ನೀಡುತ್ತಾನೆ
ತನ್ನ ಭಕ್ತರೆಲ್ಲರಿಗು.
ಎಂದೇ ಆತನ ಆಜ್ಞೆಗಳಿಗೆ
ತಲೆಬಾಗುವೆವು.
ಆತನ ಪಾದಚರಣದಲೆ
ಕುಳಿತಿರುವೆವು.
4 : ಯಕೋಬ ಸಂತತಿಯಾದ ನಮಗೆ
ಇತ್ತನು ಮೋಶೆ ಧರ್ಮಶಾಸ್ತ್ರವನ್ನು
ಸೊತ್ತಾಗಿ.
5 : ಇಸ್ರಯೇಲರ ಕುಲಗಳು ಒಂದಾದಾಗ
ಜನನಾಯಕರು ಒಟ್ಟಾಗಿ ಕೂಡಿದಾಗ
ಯೆಶುರೂನಿನಲಿ ಸರ್ವೇಶ್ವರನೇ
ಅರಸನಾದ.
6 : ರೂಬೇನ್‍ಕುಲ ಕುರಿತು ಮೋಶೆ
ನುಡಿದದ್ದು:
“ರೂಬೇನ್ ಅಳಿಯದೆ ಉಳಿಯಲಿ
ಅವನ ಮಕ್ಕಳು ಅಸಂಖ್ಯಾತರಾಗದಿರಲಿ.”
7 : ಯೆಹೂದ ಕುಲ ಕುರಿತು ಮೋಶೆ ಹೇಳಿದ್ದು :
“ಸರ್ವೇಶ್ವರಾ, ಯೆಹೂದನ
ಮೊರೆಯನ್ನಾಲಿಸು
ಬಂಧುಗಳೊಡನೆ ಅವನನ್ನು
ಮರಳಿ ಸೇರಿಸು
ತನ್ನ ಹಕ್ಕುಬಾಧ್ಯತೆಗಳನ್ನು
ಕಾದಿರಿಸಿಕೊಳ್ಳಲು
ಶತ್ರುಗಳ ಕೈಯಿಂದ ಅವನನ್ನು ತಪ್ಪಿಸು.”
8 : ಲೇವಿಯ ಕುಲ ಕುರಿತು
ಮೋಶೆ ನುಡಿದದ್ದು:
“ಸರ್ವೇಶ್ವರಾ, ನೀಡಿವನಿಗೆ
ನಿನ್ನ ವಿಧಿ ತಿಳಿಸುವ ಊರಿಮ್,
ನಿನ್ನ ಭಕ್ತನಾದ ಇವನ
ವಶದಲ್ಲಿರಲಿ ಆ ತಮ್ಮೀಮ್.
ನೀನಿವನನ್ನು ಪರೀಕ್ಷಿಸಿದೆ ಮಸ್ಸದಲ್ಲಿ
ವಿವಾದಿಸಿದೆ ಜಲ ಹೊರಹೊಮ್ಮಿದ
ಮೆರೀಬದಲ್ಲಿ.
9 : ನಿನ್ನ ಆಜ್ಞೆಗಳನ್ನು ಕೈಗೊಳ್ಳಲೆಂದು
ನಿನ್ನ ಒಡಂಬಡಿಕೆಯನು ಕಾದಿರಿಸಲೆಂದು
‘ತಂದೆತಾಯಿಗಳ ಪರಿಚಯವಿಲ್ಲ
ಅಣ್ಣತಮ್ಮಂದಿರ ಅರಿವಿಲ್ಲ
ಸ್ವಂತ ಮಕ್ಕಳ ಗುರುತಿಲ್ಲ’
ಎಂದನಿವನು.
10 : ತಿಳಿಸುವನಿವನು ನಿನ್ನ ನಿರ್ಣಯವನು
ಯಕೋಬನಿಗೆ
ಕಲಿಸುವನು ನಿನ್ನ ಧರ್ಮಶಾಸ್ತ್ರವನು
ಇಸ್ರಯೇಲನಿಗೆ.
ಧೂಪಾರತಿ ಎತ್ತುವನು
ನಿನ್ನ ಸನ್ನಿಧಿಯಲಿ
ದಹನಬಲಿ ಸಮರ್ಪಿಸುವನು
ನಿನ್ನ ಬಲಿಪೀಠದಲಿ.
11 : ಸರ್ವೇಶ್ವರಾ, ವೃದ್ಧಿಪಡಿಸು
ಇವನ ಆಸ್ತಿಯನು
ಸಮರ್ಪಕವಾಗಿರಲಿ ನಿನಗೆ
ಇವನ ಸೇವೆಯು
ಇವನ ಶತ್ರುಗಳ ನಡುವನ್ನು ಮುರಿ
ಮರಳಿ ಏಳದಂತೆ ಮಾಡು ಇವನ ವೈರಿ.”
12 : ಬೆನ್ಯಾವಿೂನ್ ಕುಲ ಕುರಿತು ಮೋಶೆ
ನುಡಿದದ್ದು:
“ಸರ್ವೇಶ್ವರನಿಗೆ ಪ್ರಿಯನಾದ ಇವನು
ನಿರ್ಭಯವಾಗಿ ವಾಸಮಾಡುವನು.
ಇವನನ್ನಾತ ತಬ್ಬಿರುವನು ದಿನವಿಡೀ
ತನ್ನ ತೋಳತೆಕ್ಕೆಯಲಿ.”
13 : ಜೋಸೆಪ್ ಕುಲ ಕುರಿತು ಮೋಶೆ
ನುಡಿದದ್ದು:
“ಇವನ ಪ್ರಾಂತ್ಯ
ಆಶೀರ್ವದಿತವಾಗಲಿ ಸರ್ವೇಶ್ವರನಿಂದ
ಮೇಲಣ ಆಕಾಶದ ಮಂಜಿನಿಂದ
ಕೆಳಗಿನ ಸಾಗರದ ಒರೆತಗಳಿಂದ;
14 : ಸೂರ್ಯನಿಂದ ಫಲಿಸುವ ಪಸಲುಗಳಿಂದ
ತಿಂಗಳು ತಿಂಗಳು ಆಗುವ ಬೆಳೆಗಳಿಂದ;
15 : ಪುರಾತನ ಬೆಟ್ಟಗಳಿಂದ
ಒದಗುವ ಉತ್ಪನ್ನಗಳಿಂದ
ಶಾಶ್ವತ ಪರ್ವತಗಳಿಂದ
ಸಿಗುವ ಒಳಿತುಗಳಿಂದ.
16 : ಸೋದರರಿಗೆ ಸಾಮ್ರಾಟನಾದ
ಜೋಸೆಫನ ಪಾಲಿಗೆ ಬರಲಿ
ಇವನ ಕುಲದ ಮೇಲೆ ನೆಲಸಲಿ
ನೆಲಬೆಳೆಸುವ ಫಲಗಳಲಿ
ಶ್ರೇಷ್ಟವಾದುದೆಲ್ಲವು
ಮುಳ್ಳುಪೊದೆಯಲಿ
ಕಾಣಿಸಿಕೊಂಡಾತನ ದಯೆಯು!
17 : ಜೋಸೆಫನದು ಜೇಷ್ಠಸಂತತಿಯು
ಗೂಳಿಯ ಗಾಂಭೀರ್ಯವೂ
ಅವನ ಕೊಂಬುಗಳು,
ಕಾಡುಕೋಣದ ಕೊಂಬುಗಳು
ಅವುಗಳಿಂದ ಇರಿದು ಓಡಿಸಬಲ್ಲನು
ಜಗದ ಜನಾಂಗಗಳನು
ಇವನಂಥವರು ಎಫ್ರಯಿಮ್
ಕುಲದ ಕೋಟ್ಯಾಂತರ ಜನರು
ಇವನಂಥವರು ಮನಸ್ಸೆಕುಲದ
ಲಕ್ಷಾಂತರ ಮಂದಿಗಳು.”
18 : ಜೆಬುಲೂನ್ ಮತ್ತು ಇಸ್ಸಾಕಾರ
ಕುಲ ಕುರಿತು ಮೋಶೆ ನುಡಿದದ್ದು:
“ಜೆಬುಲೂನೇ, ಸಂತೋಷವಾಗಿರು
ನಿನ್ನ ಪಯಣಗಳಲ್ಲಿ
ಇಸ್ಸಾಕಾರನೇ, ಆನಂದವಾಗಿರು
ನಿನ್ನ ಪಾಳೆಯಗಳಲ್ಲಿ.
19 : ಇವರು ಕರೆದುತರುವರು
ಅನ್ಯಜನಗಳನು ಮಲೆನಾಡಿಗೆ
ಅರ್ಪಿಸತರುವರು ನ್ಯಾಯಯುತವಾದ
ಬಲಿಗಳನು ಅಲ್ಲಿಗೆ.
ಸವಿವರು ಕಡಲ ಸಿರಿಯನು
ನೆಲದಲ್ಲಡಗಿರುವ ಸಂಪದವನು.”
20 : ಗಾದ್‍ಕುಲ ಕುರಿತು ಮೋಶೆ ನುಡಿದದ್ದು:
“ಗಾದ್ಯರ ಪ್ರಾಂತ್ಯವನು
ವಿಸ್ತರಿಸಿದ ಸರ್ವೇಶ್ವರನಿಗೆ ಸ್ತೋತ್ರವು!
ಸಿಂಹದಂತೆ ಹೊಂಚುಹಾಕಿ
ಮುರಿವನು ಗಾದನು
ಶತ್ರುಗಳ ಭುಜವನು, ಶಿರವನು.
21 : ತನಗೆಂದು ತೆಗೆದುಕೊಂಡನು
ನಾಡಿನ ಮೊದಲಭಾಗವನು
ದೊರಕಿತಲ್ಲಿ ಅವನಿಗೆ
ಮುಖ್ಯಸ್ಥನಿಗಾಗುವ ಸ್ವಾಸ್ತ್ಯವು.
ಜನಾದಿಪತಿಗಳ ಜೊತೆಬಂದು
ನೆರವೇರಿಸಿದನು ಸರ್ವೇಶ್ವರನ
ಆಣತಿಯನು;
ಇಸ್ರಯೇಲನೊಡನೆ ಸ್ಥಾಪಿಸಿದನು
ಸರ್ವೇಶ್ವರನ ನ್ಯಾಯನೀತಿಯನು.”
22 : ದಾನ್‍ಕುಲ ಕುರಿತು ಮೋಶೆ ನುಡಿದದ್ದು:
“ದಾನನು ಬಾಷಾನ್ ದೇಶದಿಂದ
ಧಾವಿಸಿಬಂದ ಯುವಸಿಂಹನು!”
23 : ನಫ್ತಾಲಿ ಕುಲ ಕುರಿತು ಮೋಶೆ
ನುಡಿದದ್ದು:
“ಎಲೈ ನಫ್ತಾಲಿ,
ಸರ್ವೇಶ್ವರನ ದಯೆಹೊಂದಿ ನೀ
ತೃಪ್ತನಾದೆ
ಆತನ ಆಶೀರ್ವಾದದಿಂದ
ಸಮೃದ್ಧಿಯುಂಟು ನಿನಗೆ
ಸಮುದ್ರದ ದಕ್ಷಿಣಪ್ರದೇಶ
ಸೊತ್ತಾಗಲಿ ನಿನಗೆ.”
24 : ಆಶೇರ್‍ಕುಲ ಕುರಿತು ಮೋಶೆ ನುಡಿದದ್ದು:
“ಕುಲೋತ್ತಮನಾದ ಆಶೇರನು
ಭಾಗ್ಯಹೊಂದಲಿ ಎಲ್ಲದರಲಿ
ಸೋದರರಲ್ಲಿ ಶ್ರೇಷ್ಠತೆಯನು ಪಡೆಯಲಿ
ಎಣ್ಣೆಯಲಿ ಪಾದಸ್ನಾನ
ಮಾಡುವಂತಾಗಲಿ
25 : ನನ್ನ ಕೋಟೆಯ ಬಾಗಿಲು ಕಬ್ಬಿಣದವು
ಅವುಗಳ ಅಗುಳಿಗಳು ಕಂಚಿನವು
ನೀನಿರುವಷ್ಟುಕಾಲ ನಿನಗಿರುವುದು
ಬಲವು.”
26 : ಇಸ್ರಯೆಲಿನ ಜನರೇ,
ನಿಮ್ಮ ದೇವರಿಗೆ ಸಮಾನನಾರೂ ಇಲ್ಲ.
ಆತ ಬರುವನು ಆಕಾಶವನ್ನೇರಿ,
ಮೇಘರೂಢನಾಗಿ
ಮಹಾಗಾಂಭೀರ್ಯದಿಂದ ಬರುವನು
ನಿಮ್ಮ ನೆರವಿಗಾಗಿ.
27 : ಆದಿಯಿಂದ ದೇವರೇ ನಿಮಗೆ ಶ್ರೀನಿವಾಸ
ಆತನ ಹಸ್ತವೇ ನಿಮಗೆ ನಿತ್ಯಾಧಾರ !
ಶತ್ರುಗಳನು ಹೊರಡಿಸುವನು
ನಿಮ್ಮ ಬಳಿಯಿಂದ
ಅವರನು ಸಂಹರಿಸಲು
ಆಜ್ಞಾಪಿಸಿಹನು ಆತ.
28 : ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ
ಯಕೋಬನ ಸಂತತಿಯೇ, ಸುರಕ್ಷಿತವಾಗಿ
ಆಗಸದಿಂದ ಮಳೆಸುರಿಯುವ ನಾಡಿನಲ್ಲಿ
ಧಾನ್ಯ, ದ್ರಾಕ್ಷಾರಸ
ಸಮೃದ್ಧಿಯಾಗಿರುವಲ್ಲಿ !
29 : ಇಸ್ರಯೇಲ್, ನೀನು ಎಷ್ಟೋ ಧನ್ಯ !
ಯಾರಿಗಿದೆ ನಿನಗಿರುವಂತೆ ಭಾಗ್ಯ !
ಜಯಗಳಿಸಿರುವೆ ಸರ್ವೇಶ್ವರನ
ಅನುಗ್ರಹದಿಂದ.
ಆತನೇ ನಿನ್ನ ಕಾಪಾಡುವ ಗುರಾಣಿ,
ನಿನ್ನ ಗೌರವವನ್ನು ಕಾಯುವ ಕತ್ತಿ.
ಎಂದೇ ಮುದುರಿಕೊಳ್ಳುವರು
ಶತ್ರುಗಳು ನಿನ್ನ ಮುಂದೆ
ಜಯಶೀಲನಾಗಿ ನೀ ಮೆರೆವೆ
ಅವರ ಮಲೆನಾಡಿನಲ್ಲೆ.