Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : ಮೋಶೆ ಹೋಗಿ ಇಸ್ರಯೇಲರೆಲ್ಲರಿಗೆ ಈ ಮಾತುಗಳನ್ನು ತಿಳಿಸಿದನು:
2 : “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು; ಸರ್ವೇಶ್ವರ ನನಗೆ, ‘ನೀನು ಈ ಜೋರ್ಡನ್ ನದಿಯನ್ನು ದಾಟಕೂಡದು’ ಎಂದು ಆಜ್ಞಾಪಿಸಿದ್ದಾರೆ.
3 : ನಿಮ್ಮ ದೇವರಾದ ಸರ್ವೇಶ್ವರ ತಾವೇ ನಿಮ್ಮ ಸೇನಾ ನಾಯಕರಾಗಿ ನದಿಯನ್ನು ದಾಟಿಹೋಗುವರು; ಅವರು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವರು. ಆಗ ನೀವು ಅವರ ನಾಡನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಸರ್ವೇಶ್ವರ ಆಜ್ಞಾಪಿಸಿದಂತೆ ಯೆಹೋಶುವನು ಕೂಡ ನಿಮ್ಮ ನಾಯಕನಾಗಿ ನದಿಯನ್ನು ದಾಟಿಹೋಗುವನು.
4 : ಸರ್ವೇಶ್ವರ, ಅಮೋರಿಯರ ಅರಸರಾದ ಸೀಹೋನ್ ಹಾಗು ಓಗರನ್ನು ನಾಶಮಾಡಿ ಅವರ ದೇಶವನ್ನು ನಿಮಗೆ ಸ್ವಾಧೀನಪಡಿಸಿದಂತೆ ಆ ಜನಾಂಗಗಳನ್ನೂ ನಾಶಮಾಡಿ ಅವರ ದೇಶವನ್ನು ನಿಮಗೆ ವಶಪಡಿಸುವರು.
5 : ಸರ್ವೇಶ್ವರ ಅವರನ್ನು ನಿಮ್ಮಿಂದ ಪರಾಜಯಪಡಿಸಿದಾಗ ನೀವು ಅವರ ವಿಷಯದಲ್ಲಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದುಕೊಳ್ಳಬೇಕು.
6 : ನೀವು ಶೂರರಾಗಿ ಧೈರ್ಯದಿಂದಿರಿ; ಅವರಿಗೆ ಅಂಜಬೇಡಿ, ಕಳವಳಪಡಬೇಡಿ. ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇರುತ್ತಾರೆ; ಅವರು ನಿಮ್ಮನ್ನು ಕೈಬಿಡುವುದಿಲ್ಲ, ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ,” ಎಂದು ಹೇಳಿದನು.
7 : ಅನಂತರ ಮೋಶೆ ಯೆಹೋಶುವನನ್ನು ಕರೆದು ಇಸ್ರಯೇಲರೆಲ್ಲರ ಮುಂದೆ, “ಸರ್ವೇಶ್ವರ ಇವರ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿಗೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿರು, ಧೈರ್ಯದಿಂದಿರು;
8 : ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ, ಅಂಜಬೇಡ; ಧೈರ್ಯದಿಂದಿರು,” ಎಂದು ಹೇಳಿದನು.
9 : ಮೋಶೆ ಈ ಧರ್ಮಶಾಸ್ತ್ರವನ್ನು ಬರೆದು ಸರ್ವೇಶ್ವರನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮತ್ತು ಹಿರಿಯರ ವಶಕ್ಕೆ ಕೊಟ್ಟನು.
10 : ಅವರಿಗೆ, “ಪ್ರತಿ ಏಳು ವರ್ಷಗಳು ಪೂರ್ತಿಯಾದಾಗ, ಬಿಡುಗಡೆಯ ಸಂವತ್ಸರದ ನೇಮಕ ಕಾಲದಲ್ಲಿ ಅಂದರೆ, ಪರ್ಣಕುಟೀರ ಜಾತ್ರೆಯಲ್ಲಿ
11 : ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಂಡ ಸ್ಥಳದಲ್ಲಿ, ಇಸ್ರಯೇಲರೆಲ್ಲರು ಅವರ ಸನ್ನಿಧಿಗೆ ಕೂಡಿ ಬಂದಾಗ ಅವರೆಲ್ಲರಿಗೂ ಕೇಳಿಸುವಂತೆ ನೀವು ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು.
12 : ಜನರೆಲ್ಲರು ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀ ಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗುವರು. ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು.
13 : ಸರ್ವೇಶ್ವರನ ಮಹತ್ಕಾರ್ಯಗಳನ್ನು ನೋಡದಿರುವ ನಿಮ್ಮ ಸಂತತಿಯವರು ಸಹ ಇವನ್ನು ಕೇಳಿ, ನೀವು ಜೋರ್ಡನ್ ನದಿಯನ್ನು ದಾಟಿ ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ವಾಸವಾಗಿರುವವರೆಗೂ, ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಲು ಕಲಿತುಕೊಳ್ಳುವರು,” ಎಂದು ಹೇಳಿದನು.
14 : ಸರ್ವೇಶ್ವರಸ್ವಾಮಿ, ಮೋಶೆಗೆ, “ನಿನ್ನ ಮರಣದ ಕಾಲ ಸವಿೂಪವಾಯಿತು; ಆದಕಾರಣ ನೀನು ಯೆಹೋಶುವನನ್ನು ಕರೆದುಕೊಂಡು ಬಂದು, ದೇವದರ್ಶನದ ಗುಡಾರದೊಳಗೆ ನನ್ನ ಸನ್ನಿಧಿಯಲ್ಲಿ ನಿಲ್ಲಬೇಕು; ಆಗ ನಾನು ಅವನಿಗೆ ಅಧಿಕಾರವನ್ನು ಕೊಡುವೆನು,” ಎಂದು ಆಜ್ಞಾಪಿಸಿದರು. ಮೋಶೆಯೂ ಯೆಹೋಶುವನೂ ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಬಂದು ನಿಂತುಕೊಂಡರು.
15 : ಅಲ್ಲಿ ಸರ್ವೇಶ್ವರ ಮೇಘಸ್ತಂಭದಲ್ಲಿ ಕಾಣಿಸಿದರು; ಆ ಮೇಘಸ್ತಂಭವು ಗುಡಾರದ ಬಾಗಿಲಿನ ಬಳಿಯಲ್ಲಿ ನಿಂತಿತು.
16 : ಸರ್ವೇಶ್ವರ ಮೋಶೆಗೆ, “ನೀನು ಮೃತನಾಗಿ ಪಿತೃಗಳಲ್ಲಿಗೆ ಸೇರಿದ ಮೇಲೆ ಈ ಜನರು ನನ್ನನ್ನು ಬಿಟ್ಟು, ನಾನು ಅವರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ವಿೂರಿ, ದೇವದ್ರೋಹಿಗಳಾಗಿ ತಾವು ಹೋಗುವ ನಾಡಿನಲ್ಲಿರುವ ಅನ್ಯದೇವತೆಗಳನ್ನು ಪೂಜಿಸುವರು.
17 : ಆಗ ನಾನು ಅವರ ಮೇಲೆ ಬಹಳ ಸಿಟ್ಟುಗೊಂಡು, ಅವರನ್ನು ಬಿಟ್ಟು, ಅವರಿಗೆ ವಿಮುಖನಾಗುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಅನೇಕ ಕಷ್ಟಗಳೂ ವಿಪತ್ತುಗಳೂ ಅವರಿಗೆ ಒದಗುವುವು. ಆಗ ಅವರು, ‘ನಮ್ಮ ದೇವರು, ನಮ್ಮ ಮಧ್ಯೆ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿವೆ’ ಎಂದುಕೊಳ್ಳುವರು.
18 : ಅವರು ನನ್ನನ್ನು ಬಿಟ್ಟು, ಇತರ ದೇವರುಗಳನ್ನು ಆಶ್ರಯಿಸಿ, ಬಹಳ ದುಷ್ಕøತ್ಯಗಳನ್ನು ನಡೆಸುವುದರಿಂದ ನಾನು ಆ ಕಾಲದಲ್ಲಿ ಖಂಡಿತವಾಗಿ ಅವರಿಗೆ ವಿಮುಖನಾಗುವೆನು.
19 : “ಆದಕಾರಣ ನೀನು ಈ ಗೀತೆಯನ್ನು ಬರೆದು ಇಸ್ರಯೇಲರಿಗೆ ಕಲಿಸಿಕೊಡು; ಈ ಗೀತೆ ಇಸ್ರಯೇಲರಿಗೆ ವಿರೋಧವಾದ, ನನಗೆ ಪರವಾದ ಸಾಕ್ಷಿಯಾಗಿರುವಂತೆ ಇದನ್ನು ಅವರಿಗೆ ಬಾಯಿಪಾಠ ಮಾಡಿಸು.
20 : ನಾನು ಪ್ರಮಾಣಮಾಡಿ ಕೊಟ್ಟ ನಾಡಿಗೆ ಇವರು ಸೇರುವುದಕ್ಕಿಂತ ಮುಂಚಿತವಾಗಿಯೇ ಇವರು ಈಗಲೂ ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆ.
21 : ನಾನು ಇವರ ಪಿತೃಗಳಿಗೆ ಪ್ರಮಾಣಮಾಡಿದಂತೆ ಹಾಲೂ ಜೇನೂ ಹರಿಯುವ ನಾಡಿಗೆ ಇವರನ್ನು ಸೇರಿಸಿದ ಮೇಲೆ ಇವರು ಚೆನ್ನಾಗಿ ಉಂಡು ಕೊಬ್ಬಿದವರಾದಾಗ, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿ, ನನ್ನನ್ನು ತಾತ್ಸಾರ ಮಾಡಿ, ನನ್ನ ನಿಬಂಧನೆಯನ್ನು ವಿೂರುವರು. ಅನಂತರ ಅನೇಕ ಕಷ್ಟಗಳೂ ವಿಪತ್ತುಗಳೂ ಸಂಭವಿಸಿದಾಗ ಈ ಗೀತೆ ಇವರ ಸಂತತಿಯವರ ಬಾಯಲ್ಲಿದ್ದು ಅವರ ಮುಂದೆ ಸಾಕ್ಷಿಕೊಡುವುದು,” ಎಂದು ಹೇಳಿದರು.
22 : ಆದಕಾರಣ ಮೋಶೆ ಆ ದಿನದಲ್ಲೇ ಈ ಗೀತೆಯನ್ನು ಬರೆದು ಇಸ್ರಯೇಲರಿಗೆ ಕಲಿಸಿದನು.
23 : ಆಗ ಸರ್ವೇಶ್ವರಸ್ವಾಮಿ ನೂನನ ಮಗ ಯೆಹೋಶುವನಿಗೆ, “ನಾನು ಇಸ್ರಯೇಲರಿಗೆ ಪ್ರಮಾಣಮಾಡಿಕೊಟ್ಟ ನಾಡಿಗೆ ನೀನೇ ಅವರನ್ನು ಸೇರಿಸಬೇಕು; ಆದುದರಿಂದ ಶೂರನಾಗಿರು, ಧೈರ್ಯದಿಂದಿರು; ನಾನೇ ನಿನ್ನೊಂದಿಗೆ ಇರುವೆನು,” ಎಂದು ಆಜ್ಞಾಪಿಸಿದರು.
24 : ಮೋಶೆ ಈ ಧರ್ಮಶಾಸ್ತ್ರವನ್ನು ಗ್ರಂಥ ರೂಪವಾಗಿ ಬರೆದು ಪೂರೈಸಿದನು; ಬಳಿಕ ಸರ್ವೇಶ್ವರನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಿಗೆ,
25 : “ನೀವು ಈ ಧರ್ಮಶಾಸ್ತ್ರ ಪುಸ್ತಕವನ್ನು ನಿಮ್ಮ ವಶಕ್ಕೆ ತೆಗೆದುಕೊಂಡು ನಿಮ್ಮ ದೇವರಾದ ಸರ್ವೇಶ್ವರನ ಆಜ್ಞಾಶಾಸನಗಳುಳ್ಳ ಮಂಜೂಷದ ಬಳಿಯಲ್ಲೇ ಇಡಿ.
26 : ಇಸ್ರಯೇಲರೇ, ಅಲ್ಲಿ ಇದು ನಿಮಗೆ ವಿರೋಧವಾಗಿ ಸಾಕ್ಷಿಕೊಡಲಿ.
27 : ಏಕೆಂದರೆ ನೀವು ಹಟಮಾರಿಗಳು, ಆಜ್ಞೆಗೆ ಒಳಗಾಗದವರೆಂಬುದು ನನಗೆ ತಿಳಿದೇ ಇದೆ. ನಾನು ಇನ್ನೂ ಜೀವದಿಂದಿರುವಾಗಲೇ ನೀವು ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದ್ದೀರಿ; ನಾನು ಹೋದ ತರುವಾಯ ನೀವು ಪ್ರತಿಭಟಿಸುವುದು ಮತ್ತಷ್ಟು ನಿಶ್ಚಯ.
28 : ನಿಮ್ಮ ಕುಲಗಳ ಹಿರಿಯರನ್ನೂ ಅಧಿಪತಿಗಳನ್ನೂ ನನ್ನ ಬಳಿಗೆ ಸೇರಿಸಿರಿ. ನಾನು ಈ ಮಾತುಗಳನ್ನು ಅವರಿಗೆ ತಿಳಿಸಿ, ಅವರಿಗೆ ವಿರುದ್ಧ ಸಾಕ್ಷಿಗಳಾಗುವುದಕ್ಕೆ ಭೂಮ್ಯಾಕಾಶಗಳನ್ನೇ ಕರೆಯುವೆನು.
29 : ನಾನು ಹೋದ ಮೇಲೆ, ನೀವು ದ್ರೋಹಿಗಳಾಗಿ, ನಾನು ಬೋಧಿಸಿದ ಮಾರ್ಗವನ್ನು ತಪ್ಪಿಹೋಗುವಿರಿ; ಅನಂತರ ನೀವು ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡೆಸಿ, ದುರಾಚಾರಿಗಳಾಗುವಿರಿ; ಅವರನ್ನು ಕೋಪಗೊಳಿಸುವುದರಿಂದ ನಿಮಗೆ ಆಪತ್ತುಗಳು ಬಂದೊದಗುವುದೆಂದು ನಾನು ಬಲ್ಲೆ,” ಎಂದು ಹೇಳಿದನು. ಆಗ ಮೋಶೆ ಇಸ್ರಯೇಲರ ಸರ್ವಸಮೂಹಕ್ಕೆ ಕೇಳಿಸುವಂತೆ ಈ ಗೀತಾವಚನಗಳನ್ನು ಹೇಳಿದನು:

· © 2017 kannadacatholicbible.org Privacy Policy