Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಹತ್ತಿ ಹೋದೆವು. ಆಗ ಬಾಷಾನಿನ ಅರಸ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರುದ್ಧ ಯುದ್ಧ ಮಾಡುವುದಕ್ಕೆ ಎದ್ರೈವೂರಿಗೆ ಹೊರಟು ಬಂದನು.
2 : ಆಗ ಸರ್ವೇಶ್ವರ ನನಗೆ, ‘ಅವನಿಗೆ ಭಯಪಡಬೇಡ; ನಾನು ಅವನನ್ನು, ಅವನ ಸಮಸ್ತ ಜನರನ್ನು ಹಾಗು ನಾಡನ್ನು ನಿನ್ನ ಕೈವಶಮಾಡಿದ್ದೇನೆ; ನೀನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನನಿಗೆ ಮಾಡಿದಂತೆಯೇ ಇವನಿಗೂ ಮಾಡು,’ ಎಂದು ಆಜ್ಞಾಪಿಸಿದರು.
3 : “ಬಾಷಾನಿನ ಅರಸ ಓಗನು ಹಾಗು ಅವನ ಜನರೆಲ್ಲರು ನಮ್ಮಿಂದ ಸೋತುಹೋಗುವಂತೆ ನಮ್ಮ ದೇವರಾದ ಸರ್ವೇಶ್ವರ ಮಾಡಿದರು. ಅವರಲ್ಲಿ ಒಬ್ಬರಾದರು ಉಳಿಯದಂತೆ ಅವರನ್ನು ಹತಮಾಡಿದೆವು.
4 : ಅಂದು ಅವನ ಎಲ್ಲ ಪಟ್ಟಣಗಳನ್ನು ಜಯಿಸಿದೆವು; ನಾವು ಜಯಿಸದ ಕೋಟೆ ಒಂದೂ ಇರಲಿಲ್ಲ; ಬಾಷಾನಿನಲ್ಲಿರುವ ಓಗನ ರಾಜ್ಯದಲ್ಲಿ ಅಂದರೆ, ಅರ್ಗೋಬ್ ಎಂಬ ಸಮಸ್ತ ಪ್ರದೇಶದಲ್ಲಿ ಅರವತ್ತು ಪಟ್ಟಣಗಳನ್ನು ತೆಗೆದುಕೊಂಡೆವು.
5 : ಅವೆಲ್ಲವು ಎತ್ತರವಾದ ಪೌಳಿಗೋಡೆಗಳಿಂದ, ಕದಗಳಿಂದ ಹಾಗು ಅಗುಳಿಗಳಿಂದ ಸುಭದ್ರವಾದ ಪಟ್ಟಣಗಳಾಗಿದ್ದವು. ಅವುಗಳಲ್ಲದೆ ಅನೇಕ ಹಳ್ಳಿಪಳ್ಳಿಗಳು ಇದ್ದವು.
6 : ನಾವು ಹೆಷ್ಬೋನಿನ ಅರಸನಾದ ಸೀಹೋನನ ಪಟ್ಟಣಗಳಲ್ಲಿದ್ದ ಗಂಡಸರನ್ನು, ಹೆಂಗಸರನ್ನು, ಮಕ್ಕಳನ್ನು ನಿಶ್ಯೇಷವಾಗಿ ನಾಶಮಾಡಿದೆವು.
7 : ಪಶುಪ್ರಾಣಿಗಳನ್ನು ಮಾತ್ರ ಉಳಿಸಿ ಸ್ವಂತ ಉಪಯೋಗಕ್ಕೆ ತೆಗೆದುಕೊಂಡು ಊರುಗಳನ್ನೆಲ್ಲ ಸೂರೆಮಾಡಿ ಬಿಟ್ಟೆವು.
8 : “ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ ಜೋರ್ಡನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.
9 : (ಹೆರ್ಮೋನ್ ಪರ್ವತಕ್ಕೆ ಸಿದೋನ್ಯರು ಸಿರ್ಯೋನೆಂದೂ ಅಮೋರಿಯರು ಸೆನೀರ್ ಎಂದೂ ಹೆಸರಿಟ್ಟುಕೊಂಡಿದ್ದರು.)
10 : ಹೀಗೆ ವಿೂಶೋರೆಂಬ ಎತ್ತರವಾದ ಬೈಲುಸೀಮೆಯ ಎಲ್ಲಾ ಪಟ್ಟಣಗಳನ್ನೂ ಗಿಲ್ಯಾದ್ ಸೀಮೆಯನ್ನೂ ಓಗನ ರಾಜ್ಯವಾದ ಸಲ್ಕಾ, ಎದ್ರೈ ಎಂಬ ಪಟ್ಟಣಗಳಿಂದ ಕೂಡಿರುವ ಬಾಷಾನ್ ಸೀಮೆಯನ್ನೂ ಸ್ವಾಧೀನಮಾಡಿಕೊಂಡೆವು.
11 : (ರೆಫಾಯರೊಳಗೆ ಬಾಷಾನಿನ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈಯಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.
12 : “ಆ ಕಾಲದಲ್ಲಿ ನಾವು ಆ ನಾಡನ್ನೆಲ್ಲ ಸ್ವಾಧೀನಮಾಡಿಕೊಂಡೆವು. ಅರ್ನೋನ್ ಹಳ್ಳದ ಬಳಿಯಲ್ಲಿರುವ ಅರೋಯೇರ್ ಮೊದಲುಗೊಂಡು ಗಿಲ್ಯಾದ್ ಸೀಮೆಯ ಮಧ್ಯದವರೆಗೂ ಇರುವ ಪ್ರದೇಶವನ್ನೆಲ್ಲಾ ಅದರ ಪಟ್ಟಣಗಳ ಸಹಿತವಾಗಿ ನಾನು ರೂಬೇನ್ಯರಿಗೂ ಗಾದ್ಯರಿಗೂ ಕೊಟ್ಟೆನು.
13 : ಗಿಲ್ಯಾದಿನ ಮಿಕ್ಕ ಭಾಗವನ್ನೂ ಓಗನ ರಾಜ್ಯ ಆಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ನಾಡನ್ನೂ ಮನಸ್ಸೆಕುಲದ ಅರ್ಧ ಜನರಿಗೆ ಕೊಟ್ಟೆನು.
14 : (ಬಾಷಾನ್ ನಾಡು ರೆಫಾಯರ ನಾಡೆನಿಸಿಕೊಳ್ಳುತ್ತದೆ. ಮನಸ್ಸೆಯ ವಂಶಸ್ಥನಾದ ಯಾಯಿರನು ಗೆಷೂರ್ಯರ ಮತ್ತು ಮಾಕಾತ್ಯರ ಮೇರೆಯವರೆಗೆ ಅರ್ಗೋಬ್ ಎಂಬ ಪ್ರದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಬಾಷಾನಿಗೆ ಸೇರಿರುವ ಆ ಪ್ರಾಂತ್ಯಕ್ಕೆ ಯಾಯಿರನ ಗ್ರಾಮಗಳೆಂದು ತನ್ನ ಹೆಸರಿಟ್ಟನು. ಈ ಹೆಸರು ಇಂದಿನವರೆಗೂ ಉಂಟು).
15 : ನಾನು ಗಿಲ್ಯಾದ್ ನಾಡನ್ನು ಮಾಕೀರನಿಗೂ
16 : ಗಿಲ್ಯಾದ್ ಮೊದಲುಗೊಂಡು (ದಕ್ಷಿಣ ಕಡೆಯಲ್ಲಿ) ಅರ್ನೋನ್ ತಗ್ಗಿನವರೆಗೂ (ಪೂರ್ವಕಡೆಯಲ್ಲಿ) ಯಬ್ಬೋಕ್ ಹೊಳೆಯವರೆಗೂ ಇರುವ ಪ್ರದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಕೊಟ್ಟೆ. ಅರ್ನೋನ್ ತಗ್ಗಿನ ಮಧ್ಯಭಾಗವೇ ಅವರ ದಕ್ಷಿಣ ಎಲ್ಲೆ. ಅವರಿಗೂ ಅಮ್ಮೋನಿಯರಿಗೂ ನಡುವೆ ಇರುವ ಯಬ್ಬೋಕ್ ಹೊಳೆಯು ಅವರ ಪೂರ್ವದಿಕ್ಕಿನ ಎಲ್ಲೆ.
17 : ಪಶ್ಚಿಮದಲ್ಲಿ ಅವರ ಪ್ರದೇಶ ಜೋರ್ಡನ್ ನದಿಯವರೆಗೆ ಹರಡಿತ್ತು. ಉತ್ತರದಲ್ಲಿ ಕಿನ್ನೆರೆತ್ ಸರೋವರ ಮೊದಲ್ಗೊಂಡು ದಕ್ಷಿಣದಲ್ಲಿ ಲವಣ ಸಮುದ್ರದವರೆಗೆ ವಿಸ್ತರಿಸಿತ್ತು. ಅದು ಪೂರ್ವದಲ್ಲಿ ಪಿಸ್ಗಾ ಬೆಟ್ಟದ ಬುಡದವರೆಗೆ ವ್ಯಾಪಿಸಿತ್ತು.
18 : ಮೋಶೆ ಜೋರ್ಡನ್ ದಾಟುವಂತಿಲ್ಲ “ಆ ಕಾಲದಲ್ಲಿ ನಾನು ನಿಮಗೆ, ‘ನಿಮ್ಮ ದೇವರಾದ ಸರ್ವೇಶ್ವರ ಈ ಪ್ರದೇಶವನ್ನೇ ನಿಮಗೆ ಸೊತ್ತಾಗಿ ಕೊಟ್ಟಿದ್ದಾರೆ. ಆದರೆ ನಿಮ್ಮ ಯೋಧರೆಲ್ಲರು ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಾದ ಇಸ್ರಯೇಲರ ಮುಂದೆ ಹೊರಟು ನದಿ ದಾಟಿಹೋಗಬೇಕು.
19 : ನಿಮಗೆ ಬಹಳ ದನ ಕುರಿಗಳುಂಟೆಂಬುದನ್ನು ನಾನು ಬಲ್ಲೆ. ನಿಮ್ಮ ದೇವರಾದ ಸರ್ವೇಶ್ವರ ಜೋರ್ಡನ್ ನದಿಯ ಆಚೆ ನಿಮ್ಮ ಸಹೋದರರಿಗೆ ಕೊಡುವ ನಾಡು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಮಡದಿ ಮಕ್ಕಳೂ ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ.
20 : ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಸರ್ವೇಶ್ವರನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿ ಒಬ್ಬನೂ ನಾನು ಕೊಟ್ಟ ಸೊತ್ತಿಗೆ ತಿರುಗಿ ಬರಬಹುದು’ ಎಂದು ಆಜ್ಞಾಪಿಸಿದೆ.
21 : “ಆ ಕಾಲದಲ್ಲಿ ನಾನು ಯೆಹೋಶುವನಿಗೆ, ‘ನಿಮ್ಮ ದೇವರಾದ ಸರ್ವೇಶ್ವರ ಆ ಇಬ್ಬರು ಅರಸರಿಗೆ ಮಾಡಿದ್ದನ್ನು ನೀನೇ ನೋಡಿರುವೆ. ನೀನು ನದಿ ದಾಟಿ ಹೋಗುವ ಎಲ್ಲ ರಾಜ್ಯಗಳನ್ನೂ ಅವರು ಹಾಗೆಯೇ ನಾಶಮಾಡುವರು.
22 : ನೀವು ಅವರಿಗೆ ಭಯಪಡಬೇಡಿ; ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ನಿಮ್ಮ ಕಡೆಯವರಾಗಿ ಯುದ್ಧಮಾಡುವರು’ ಎಂದು ಆಜ್ಞಾಪಿಸಿದೆ.
23 : “ಆ ಕಾಲದಲ್ಲಿ ನಾನು ಸರ್ವೇಶ್ವರ ಸ್ವಾಮಿಗೆ, ‘ಸ್ವಾಮಿ ಸರ್ವೇಶ್ವರಾ, ನೀವು ನಿಮ್ಮ ಮಹತ್ವವನ್ನೂ ಭುಜಬಲವನ್ನೂ ನಿಮ್ಮ ದಾಸನಿಗೆ ತೋರಿಸಲಾರಂಭಿಸಿದಿರಿ.
24 : ನೀವು ನಡೆಸುವ ಈ ಮಹತ್ಕಾರ್ಯಗಳಿಗೆ ಸಮಾನವಾದ ಕಾರ್ಯಗಳನ್ನು ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಬೇರೆ ಯಾವ ದೇವರು ತಾನೆ ನಡೆಸಬಲ್ಲನು?
25 : ಸರ್ವೇಶ್ವರಾ, ನಾನು ಕೂಡ ಈ ನದಿಯನ್ನು ದಾಟಿ, ಆಚೆಯಿರುವ ಒಳ್ಳೆಯ ನಾಡನ್ನು ಅಂದರೆ, ಆ ಅಂದವಾದ ಮಲೆನಾಡನ್ನೂ ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ’ ಎಂದು ಭಿನ್ನಯಿಸಿದೆ.
26 : ಆದರೆ ಸರ್ವೇಶ್ವರ ನಿಮ್ಮ ನಿಮಿತ್ತ ನನ್ನ ಮೇಲೆ ಕೋಪಗೊಂಡರು. ನನ್ನ ಮನವಿಯನ್ನು ಕೇಳದೆ, ‘ಸಾಕು; ಇದರ ಬಗ್ಗೆ ಇನ್ನು ನನ್ನ ಸಂಗಡ ಮಾತಾಡಬೇಡ; ನೀನು ಜೋರ್ಡನ್ ನದಿಯನ್ನು ದಾಟಕೂಡದು.
27 : ಆದರೆ ಪಿಸ್ಗಾ ಬೆಟ್ಟವನ್ನು ಹತ್ತಿ, ತುದಿಯಲ್ಲಿ ನಿಂತು, ಚತುರ್ದಿಕ್ಕುಗಳಲ್ಲಿ ಸುತ್ತಲೂ ಇರುವ ನಾಡನ್ನು ಕಣ್ಣು ತುಂಬಾ ನೋಡಬಹುದು.
28 : ಯೆಹೋಶುವನೇ ಈ ಜನರ ನಾಯಕನಾಗಿ ಹೋಗಿ, ನೀನು ನೋಡುವ ನಾಡನ್ನು ಅವರಿಗೆ ಸ್ವಾಧೀನಪಡಿಸುವನು. ಅವನಿಗೇ ಈ ಅಧಿಕಾರವನ್ನು ಕೊಡಬೇಕು; ಅವನು ದೃಢನಾಗುವಂತೆ ಅವನನ್ನು ಧೈರ್ಯಪಡಿಸಬೇಕು,’ ಎಂದು ಉತ್ತರಕೊಟ್ಟರು.
29 : “ಆಗ ನಾವು ಬೇತಪ್‍ಗೋರಿಗೆ ಎದುರಾಗಿರುವ ಕಣಿವೆಯಲ್ಲಿ ವಾಸವಾಗಿದ್ದೆವು.”

· © 2017 kannadacatholicbible.org Privacy Policy