Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಅವರು ಜಗದ ಎಲ್ಲ ಜನಾಂಗಗಳಿಗಿಂತ ನಿಮ್ಮನ್ನು ಉನ್ನತಸ್ಥಿತಿಗೆ ತರುವರು.
2 : ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಕೆಳಕಂಡ ಶುಭಗಳೆಲ್ಲ ನಿಮಗೆ ಪ್ರಾಪ್ತವಾಗುವುವು:
3 : “ನಿಮಗೆ ಊರಲ್ಲೂ ಅಡವಿಯಲ್ಲೂ ಶುಭವುಂಟಾಗುವುದು.
4 : ನಿಮ್ಮ ಸಂತಾನಕ್ಕೂ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವುದು.
5 : ನಿಮ್ಮ ಧಾನ್ಯಕ್ಕೂ ಅದರಿಂದ ಮಾಡುವ ಭೋಜನಕ್ಕೂ ಶುಭ ಉಂಟಾಗುವುದು.
6 : ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವುದು.
7 : “ನಿಮ್ಮ ಮೇಲೆ ಎರಗುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಸರ್ವೇಶ್ವರ ಮಾಡುವರು; ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.
8 : “ನಿಮ್ಮ ಕಣಜಗಳು ಯಾವಾಗಲು ತುಂಬಿ ಇರುವಂತೆ ಹಾಗು ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶುಭವನ್ನು ಅನುಗ್ರಹಿಸುವರು. ಅವರು ನಿಮಗೆ ಕೊಡುವ ನಾಡಿನಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವರು.
9 : “ನೀವು ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನು ಅನುಸರಿಸಿ, ಅವರು ಹೇಳಿದ ಮಾರ್ಗದಲ್ಲೇ ನಡೆದರೆ ಅವರು ವಾಗ್ದಾನಮಾಡಿದಂತೆ ನಿಮ್ಮನ್ನು ತಮ್ಮ ವಿೂಸಲಾದ ಜನರನ್ನಾಗಿ ನೆಲೆಗೊಳಿಸುವರು.
10 : ಜಗದ ಜನರೆಲ್ಲರು ನಿಮ್ಮನ್ನು ಸರ್ವೇಶ್ವರನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.
11 : “ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಮೇರೆಗೆ, ನಿಮಗೆ ಕೊಡುವ ನಾಡಿನಲ್ಲಿ ಅವರು ನಿಮಗೆ ಸಂತಾನ, ಪಶು, ವ್ಯವಸಾಯಗಳ ಸಮೃದ್ಧಿಯನ್ನುಂಟುಮಾಡುವರು.
12 : ಸರ್ವೇಶ್ವರ ಆಕಾಶದಲ್ಲಿರುವ ತಮ್ಮ ಜಲನಿಧಿಯನ್ನು ತೆರೆದು ನಿಮ್ಮ ನಾಡಿನ ಮೇಲೆ, ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ, ನಿಮ್ಮ ಎಲ್ಲ ವ್ಯವಸಾಯವನ್ನೂ ಫಲಭರಿತವಾಗಿ ಮಾಡುವರು. “ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವುದಿಲ್ಲ.
13 : ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ನೀವು ಬಿಟ್ಟು ಎಡಬಲಕ್ಕೆ ಹೋಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಲ್ಲೇ ಲಕ್ಷ್ಯವಿಟ್ಟು ಅವುಗಳನ್ನೇ ಅನುಸರಿಸಿ ನಡೆದರೆ ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ,
14 : ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು; ನೀವು ಎಲ್ಲರಿಗಿಂತಲೂ ಮೇಲಿನವರಾಗಿರುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.
15 : “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ, ಈ ಕೆಳಕಂಡ ಅಶುಭಗಳು ನಿಮಗೆ ಪ್ರಾಪ್ತವಾಗುವುವು:
16 : “ನಿಮಗೆ ಊರಲ್ಲೂ ಅಡವಿಯಲ್ಲೂ ಅಶುಭವುಂಟಾಗುವುದು.
17 : ನಿಮ್ಮ ಧಾನ್ಯಗಳಿಗೂ ಅವುಗಳಿಂದಾದ ಭೋಜನಗಳಿಗೂ ಅಶುಭ ಉಂಟಾಗುವುದು.
18 : ನಿಮ್ಮ ಸಂತಾನಗಳಿಗೆ, ವ್ಯವಸಾಯಗಳಿಗೆ, ಹಾಗು ದನಕುರಿಗಳಿಗೆ ಅಶುಭ ಉಂಟಾಗುವುದು.
19 : ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಅಶುಭವುಂಟಾಗುವುದು.
20 : “ನೀವು ದುರ್ನಡತೆಯುಳ್ಳವರಾಗಿ ಸರ್ವೇಶ್ವರನನ್ನು ಬಿಟ್ಟದ್ದರಿಂದ ಅವರು ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ವಿಪತ್ತು, ಕಳವಳ, ಶಾಪ, ಇವುಗಳನ್ನುಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವರು.
21 : ವ್ಯಾಧಿ ನಿಮಗೆ ಹತ್ತಿಕೊಂಡೇ ಇರುವಂತೆ ಮಾಡಿ ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಸರ್ವೇಶ್ವರ ಮಾಡುವರು.
22 : ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರ ಇವುಗಳಿಂದಲೂ, ನಾಡನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ಪೀಡಿಸುವರು. ನೀವು ಸಾಯುವ ತನಕ ಈ ಪೀಡೆಗಳು ನಿಮ್ಮನ್ನು ಬೆನ್ನತ್ತುವುವು.
23 : ಮೇಲೆ ಆಕಾಶ ಮಳೆಸುರಿಸದೆ ತಾಮ್ರದಂತೆಯೂ ಕೆಳಗೆ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವುವು.
24 : ನಿಮ್ಮ ನಾಡಿನ ಮೇಲೆ ಆಕಾಶದಿಂದ ಮಳೆಗೆ ಬದಲಾಗಿ ಧೂಳಿಯನ್ನೂ ಉಸುಬನ್ನೂ ಸರ್ವೇಶ್ವರ ಸುರಿಸುವರು; ಇದರಿಂದ ನೀವು ನಾಶವಾಗಿ ಹೋಗುವಿರಿ.
25 : ಶತ್ರುಗಳಿಂದ ನೀವು ಪರಾಜಯವನ್ನು ಹೊಂದುವಂತೆ ಸರ್ವೇಶ್ವರ ಮಾಡುವರು; ನೀವು ಒಂದೇ ದಾರಿಯಿಂದ ಅವರ ಮೇಲೆ ದಾಳಿಮಾಡಲು ಹೋಗಿ ಏಳು ದಾರಿ ಹಿಡಿದು ಓಡಿಹೋಗುವಿರಿ. ಜಗದ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವುವು.
26 : ನಿಮ್ಮ ಹೆಣಗಳು ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು; ಅವುಗಳನ್ನು ಬೆದರಿಸಿ ಓಡಿಸುವುದಕ್ಕೂ ಯಾರೂ ಇರುವುದಿಲ್ಲ.
27 : “ಈಜಿಪ್ಟರನ್ನು ಬಾಧಿಸಿದಂತೆ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಸರ್ವೇಶ್ವರ ನಿಮ್ಮನ್ನು ಬಾಧಿಸುವರು.
28 : ಹುಚ್ಚುತನ, ಕುರುಡುತನ, ಬೆಪ್ಪುತನ ಇವುಗಳಿಂದ ಸರ್ವೇಶ್ವರ ನಿಮ್ಮನ್ನು ಪೀಡಿಸುವರು.
29 : ಕುರುಡರಂತೆ ನಡುಮಧ್ಯಾಹ್ನದಲ್ಲೂ ಕತ್ತಲಾಯಿತೆಂದು ನೀವು ತಡವರಿಸುವಿರಿ; ನೀವು ಮಾಡುವ ಕೆಲಸ ಯಾವುದೂ ಕೈಗೂಡುವುದಿಲ್ಲ. ಅನ್ಯರು ನಿಮ್ಮನ್ನು ನಿರಂತರವಾಗಿ ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು. ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.
30 : “ನೀವು ಮದುವೆಮಾಡಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿದ ದ್ರಾಕ್ಷಿ ತೋಟದ ಬೆಳೆ ನಿಮಗೆ ದೊರಕದು.
31 : ನಿಮ್ಮ ಪಶುಗಳನ್ನು ನಿಮ್ಮ ಕಣ್ಣಮುಂದೆಯೇ ಕೊಯ್ಯುವರು; ಆದರೆ ಅವುಗಳ ಮಾಂಸ ನಿಮಗೆ ಸಿಕ್ಕದು. ನಿಮ್ಮ ಕತ್ತೆಯನ್ನು ನಿಮ್ಮೆದುರಿಗೇ ಬಲಾತ್ಕಾರದಿಂದ ಹಿಡಿದುಕೊಂಡು ಹೋಗುವರು. ಆದರೆ ಅದನ್ನು ನಿಮಗೆ ಹಿಂದಕ್ಕೆ ಕೊಡುವುದಿಲ್ಲ. ನಿಮ್ಮ ಆಡುಕುರಿಗಳು ಶತ್ರುಗಳ ಪಾಲಾಗುವುವು. ನಿಮಗೆ ರಕ್ಷಕರು ಯಾರೂ ಇರುವುದಿಲ್ಲ.
32 : ನಿಮ್ಮ ಗಂಡು ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಹಿಡಿದು ಅನ್ಯರಿಗೆ ವಶಪಡಿಸುವರು; ನೀವು ಹಗಲೆಲ್ಲಾ ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಕಂಗೆಡುವಿರಿ; ಆದರೆ ನಿಮ್ಮ ಯತ್ನವೇನೂ ಸಾಗುವುದಿಲ್ಲ.
33 : ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದು ಬಿಡುವರು. ನಿವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.
34 : ನಿಮ್ಮ ಮುಂದೆ ನಡೆಯುವ ದೃಶ್ಯಗಳನ್ನು ನೋಡಿ ಹುಚ್ಚರಾಗಿ ಹೋಗುವಿರಿ.
35 : “ನಿಮ್ಮ ಮೊಣಕಾಲುಗಳಲ್ಲೂ ತೊಡೆಗಳಲ್ಲೂ ಮತ್ತು ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಸರ್ವೇಶ್ವರ ಹುಟ್ಟಿಸಿ ಬಾಧಿಸುವರು;
36 : ನಿಮಗೂ ನಿಮ್ಮ ಪಿತೃಗಳಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ನಿಮ್ಮನ್ನೂ ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯಿಸುವರು; ಅಲ್ಲಿ ನೀವು ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.
37 : ಸರ್ವೇಶ್ವರ ನಿಮ್ಮನ್ನು ಒಯ್ಯಿಸುವ ಜನಾಂಗಗಳಲ್ಲಿ ನೀವು ಭೀಕರತೆಗೂ ನಿಂದೆಲಾವಣಿಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.
38 : “ಹೊಲದಲ್ಲಿ ನೀವು ಎಷ್ಟು ಬೀಜ ಬಿತ್ತಿದರೂ ಮಿಡತೆಯ ದಂಡು ಬಂದು ಅದನ್ನು ತಿಂದುಬಿಡುವುದು; ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು;
39 : ದ್ರಾಕ್ಷಾವ್ಯವಸಾಯವನ್ನು ನೀವು ಎಷ್ಟುಮಾಡಿದರೂ ಅದರ ಹಣ್ಣುಗಳನ್ನು ಹುಳುಗಳೇ ತಿಂದುಹಾಕುವುವು; ನೀವು ಕೂಡಿಸಿಕೊಳ್ಳಲು ನಿಮಗೆ ಬಿಡವು. ಅವುಗಳ ರಸವನ್ನು ರುಚಿನೋಡಗೊಡಿಸವು.
40 : ನಿಮ್ಮ ದೇಶ ಪ್ರದೇಶಗಳಲ್ಲಿ ಎಣ್ಣೇಮರಗಳು ಎಷ್ಟಿದ್ದರೂ ಅವುಗಳ ಕಾಯಿಗಳು ಉದುರಿಹೋಗುವುವು; ಮೈಗೆ ಹಚ್ಚಿಕೊಳ್ಳಲು ಎಣ್ಣೆ ಸಿಗದು.
41 : ನಿಮಗೆ ಗಂಡುಹೆಣ್ಣು ಮಕ್ಕಳು ಎಷ್ಟು ಹುಟ್ಟಿದರೂ ಅವರು ಸೆರೆಯವರಾಗಿ ಒಯ್ಯಲ್ಪಡುವರು; ನಿಮ್ಮ ಬಳಿ ಅವರು ಇರರು.
42 : ನಿಮ್ಮ ಗಿಡಮರಗಳೂ ಪಚ್ಚೆ ಪೈರುಗಳೂ ಮಿಡತೆಯ ಪಾಲಾಗುವುವು.
43 : ನಿಮ್ಮ ಮಧ್ಯೆಯಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆ ಆಗುತ್ತಾ ಹೀನಸ್ಥಿತಿಗೆ ಇಳಿಯುವಿರಿ.
44 : ಅವರು ನಿಮಗೆ ಸಾಲಕೊಡುವರೇ ಹೊರತು ನೀವು ಅವರಿಗೆ ಕೊಡುವುದಿಲ್ಲ. ನೀವು ಅವರಿಗೆ ಅಧೀನರಾಗುವಿರಿ; ಅವರು ನಿಮಗೆ ಶಿರಸ್ಸಾಗುವರು.
45 : “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ ಅವರು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದುದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ, ನಿಮ್ಮನ್ನು ಹಿಂದಟ್ಟಿ ಹಿಡಿದು, ಕಡೆಗೆ ನಾಶ ಮಾಡುವುವು.
46 : ಇವು ನಿಮಗೂ ನಿಮ್ಮ ಸಂತತಿಯವರಿಗೂ ನಿರಂತರವಾಗಿ ಪ್ರಾಪ್ತವಾಗುವುವು; ಸರ್ವರಿಗೆ ಬೆರಗನ್ನೂ ಎಚ್ಚರಿಕೆಯನ್ನೂ ಉಂಟುಮಾಡುವುವು.
47 : “ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಹರ್ಷಾನಂದದಿಂದ ಸೇವೆಮಾಡದೆ ಹೋದಿರಿ.
48 : ಆದುದರಿಂದ ಸರ್ವೇಶ್ವರ ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವರು; ಆಗ ನೀವು ಹಸಿವು ಬಾಯಾರಿಕೆಗಳಿಗೆ ಗುರಿಯಾಗಿ ಬಟ್ಟೆಬರೆ ಏನೂ ಇಲ್ಲದೆ, ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಕಬ್ಬಿಣದ ನೊಗವನ್ನು ಹೇರಿಸಿ ಸರ್ವೇಶ್ವರ ನಿಮ್ಮನ್ನು ನಾಶಮಾಡುವರು;
49 : ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗ, ರಣಹದ್ದು ಹೇಗೆ ದೂರದಿಂದ ಹಾರಿಬರುವುದೊ ಹಾಗೆಯೇ ದೂರದಿಂದ ನಿಮ್ಮ ಮೇಲೆ ಬರುವಂತೆ ಮಾಡುವರು.
50 : ಆ ಜನಾಂಗದವರು ಕ್ರೂರಮುಖವುಳ್ಳವರು; ನೀವು ವೃದ್ಧರೆಂದು ಮರ್ಯಾದೆ ತೋರಿಸುವುದಿಲ್ಲ, ಚಿಕ್ಕವರೆಂದು ಕನಿಕರಿಸುವುದಿಲ್ಲ.
51 : ಅವರು ನಿಮ್ಮ ದನಗಳನ್ನೂ ಬೆಳೆಗಳನ್ನೂ ತಿಂದುಬಿಡುವರು. ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನಕುರಿಗಳ ಸಂತಾನವನ್ನಾಗಲಿ, ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
52 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ನಾಡಿನ ಪಟ್ಟಣಗಳಿಗೆಲ್ಲಾ ಅವರು ಮುತ್ತಿಗೆ ಹಾಕುವರು; ನೀವು ನೆಚ್ಚಿಕೊಳ್ಳುವ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.
53 : “ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಎಂಥ ಇಕ್ಕಟ್ಟಿಗೆ ಸಿಕ್ಕಿಸುವರೆಂದರೆ, ನೀವು ನಿಮ್ಮ ಸಂತಾನವನ್ನೇ, ಅಂದರೆ, ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.
54 : ಶತ್ರುಗಳು ನಿಮ್ಮ ಪಟ್ಟಣಗಳಿಗೆಲ್ಲಾ ಮುತ್ತಿಗೆ ಹಾಕಿ, ನಿಮ್ಮನ್ನು ಭೀಕರವಾದ ಬಿಕ್ಕಟ್ಟಿಗೆ ಸಿಕ್ಕಿಸುವರು.
55 : ಆಗ ನಿಮ್ಮಲ್ಲಿ ಮೃದುಸ್ವಭಾವಿ ಹಾಗು ಅತಿ ಸುಕುಮಾರ ಆದವನೂ ಕೂಡ ತನಗೇ ತಿನ್ನಲಿಕ್ಕೆ ಏನೂ ಉಳಿಯದೆ, ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು, ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಸಿಂಡರಿಸಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.
56 : ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಆ ಭೀಕರ ಇಕ್ಕಟ್ಟಿಗೆ ಸಿಕ್ಕಿಸಿದ ಕಾಲದಲ್ಲಿ ಅಂಗಾಲನ್ನೂ ನೆಲಕ್ಕೆ ಇಡದಷ್ಟು ಕೋಮಲ ಹಾಗು ಸುಕುಮಾರಿಯಾದ ಸ್ತ್ರೀ ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ತಾನು ಆಗಲೇ ಹೆತ್ತ ಮಗುವನ್ನೂ ಅದರ ಮೇಲಣ ಮಾಸನ್ನೂ ಗುಟ್ಟಾಗಿ ತಿನ್ನಲಾಶಿಸುವಳು;
57 : ಪ್ರಾಣಪ್ರಿಯರಾದ ಗಂಡನಿಗು, ಮಗನಿಗು, ಮಗಳಿಗು ಕೊಡಲಿಚ್ಛಿಸದೆ ಮೋರೆಯನ್ನು ಸಿಂಡರಿಸಿಕೊಳ್ಳುವಳು.
58 : “ಈ ಗ್ರಂಥದಲ್ಲಿ ಬರೆದಿರುವ ಧರ್ಮಶಾಸ್ತ್ರ ವಾಕ್ಯಗಳನ್ನೆಲ್ಲಾ ನೀವು ಅನುಸರಿಸಲೊಲ್ಲದೆ, ನಿಮ್ಮ ದೇವರಾದ ಸರ್ವೇಶ್ವರನೆಂಬ ಮಹಾಮಹಿಮೆಯುಳ್ಳ ಪೂಜ್ಯನಾಮದಲ್ಲಿ ನೀವು ಭಯ ಭಕ್ತಿಯುಳ್ಳವರಾಗಿರದೇ ಹೋದರೆ
59 : ಅವರು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹು ಭಯಂಕರವಾದ ಉಪದ್ರವಗಳನ್ನು ಬರಮಾಡುವರು. ದೀರ್ಘಕಾಲ ವಾಸಿಯಾಗದ ಘೋರವ್ಯಾದಿಗಳಿಂದ ನಿಮ್ಮನ್ನು ಬಾಧಿಸುವರು.
60 : ನೀವು ಅಂಜಿಕೊಳ್ಳುತ್ತಿದ್ದ ಈಜಿಪ್ಟ್ ದೇಶದ ರೋಗಗಳನ್ನೆಲ್ಲ ಮತ್ತೆ ನಿಮ್ಮ ಮೇಲೆ ಬರಮಾಡುವರು; ಅವು ನಿಮಗೆ ಅಂಟಿಕೊಂಡೇ ಇರುವುವು.
61 : ಇಷ್ಟು ಮಾತ್ರವಲ್ಲದೆ, ಈ ಧರ್ಮಶಾಸ್ತ್ರ ಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವರು.
62 : ನಕ್ಷತ್ರಗಳಷ್ಟು ಅಸಂಖ್ಯರಾಗಿರುವ ನೀವು, ನಿಮ್ಮ ದೇವರಾದ ಸರ್ವೇಶ್ವರನ ಮಾತಿನಲ್ಲಿ ಲಕ್ಷ್ಯವಿಡದೆ ಹೋದುದರಿಂದ ಸ್ವಲ್ಪ ಮಂದಿಯೇ ಉಳಿಯುವಿರಿ.
63 : ಸರ್ವೇಶ್ವರ ಈಗ ನಿಮ್ಮನ್ನು ಅಭಿವೃದ್ಧಿ ಪಡಿಸುವುದರಲ್ಲೂ ಹೆಚ್ಚಿಸುವುದರಲ್ಲೂ ಹೇಗೆ ಸಂತೋಷಪಡುತ್ತಾರೋ ಹಾಗೆಯೇ ಆಗ ನಿಮ್ಮನ್ನು ಕೆಡಿಸಿ ನಾಶಮಾಡುವುದರಲ್ಲಿ ಸಂತೋಷ ಪಡುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನೊಳಗಿಂದ ನಿಮ್ಮನ್ನು ಕಿತ್ತುಹಾಕುವರು.
64 : “ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲ ಜನಾಂಗಗಳಲ್ಲಿಯೂ ಸರ್ವೇಶ್ವರ ನಿಮ್ಮನ್ನು ಚದರಿಸುವರು; ಅಲ್ಲಿ ನಿಮಗಾಗಲಿ ನಿಮ್ಮ ಪಿತೃಗಳಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.
65 : ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ. ಸ್ವಂತದ್ದು ಎಂದು ಹೇಳಿಕೊಳ್ಳಲು ಅಂಬೆಗಾಲಿಡುವಷ್ಟು ಸ್ಥಳಸಿಕ್ಕುವುದಿಲ್ಲ. ನೀವು ಗಡಗಡನೆ ನಡುಗುವ ಹೃದಯವುಳ್ಳವರಾಗಿ, ದಿಕ್ಕುತೋರದೆ ಕಂಗೆಟ್ಟವರಾಗಿ ಹಾಗು ಮನಗುಂದಿದವರಾಗಿ ಇರುವಂತೆ ಸರ್ವೇಶ್ವರ ಮಾಡುವರು.
66 : ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ಹಗಲಿರುಳು ಪ್ರಾಣಭಯದಲ್ಲಿರುವಿರಿ; ಪ್ರಾಣದ ಮೇಲಣ ನಂಬಿಕೆಯನ್ನು ಬಿಟ್ಟೇಬಿಡುವಿರಿ.
67 : ಮನಸ್ಸಿನಲ್ಲಿ ನಿರಂತರ ಪ್ರಾಣಭಯವಿರುವುದರಿಂದ ಹಾಗು ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವುದರಿಂದ ನೀವು ಹೊತ್ತಾರೆಯಲ್ಲೇ, ‘ಅಯ್ಯೋ, ಅಯ್ಯೋ, ಸಾಯಂಕಾಲ ಯಾವಾಗ ಬರುವುದೋ?’ ಎಂದೂ ಸಾಯಂಕಾಲದಲ್ಲಿ, ‘ಅಯ್ಯೋ, ಅಯ್ಯೋ, ಮರುದಿನ ಯಾವಾಗ ಬರುವುದೋ?’ ಎಂದೂ ಕೊರಗುವಿರಿ.
68 : ನೀವು ಈಜಿಪ್ಟ್ ದೇಶವನ್ನು ಮರಳಿ ಎಂದಿಗೂ ನೊಡುವುದಿಲ್ಲವೆಂದು ಸರ್ವೇಶ್ವರ ಹೇಳಿದ್ದರೂ ಅವರು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗಮಾಡುವರು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನೇ ಗಂಡು ಹೆಣ್ಣು ಎನ್ನದೆ ಗುಲಾಮರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.”

· © 2017 kannadacatholicbible.org Privacy Policy