1 :
ಮೋಶೆ ಇಸ್ರಯೇಲರ ಹಿರಿಯರ ಸಹಿತ ಜನರಿಗೆ, “ನಾನು ಈಗ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು.
2 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಪ್ರವೇಶಿಸುವುದಕ್ಕೆ ನೀವು ಜೋರ್ಡನ್ ನದಿಯನ್ನು ದಾಟುವಾಗ ಅಂದರೆ,
3 : ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ತಾವು ವಾಗ್ದಾನ ಮಾಡಿದಂತೆ ನಿಮಗೆ ಕೊಡುವ ಹಾಲೂ ಜೇನೂ ಹರಿಯುವ ನಾಡನ್ನು ಪ್ರವೇಶಿಸುವುದಕ್ಕೆ ನೀವು ಜೋರ್ಡನ್ ನದಿಯನ್ನು ದಾಟುವಾಗ, ನೀವು ದೊಡ್ಡ ಕಲ್ಲುಗಳನ್ನು ನಿಲ್ಲಿಸಬೇಕು. ಅವುಗಳಿಗೆ ಗಿಲಾವು ಮಾಡಿಸಿ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಅವುಗಳ ಮೇಲೆ ಬರೆಯಿಸಬೇಕು.
4 : ನೀವು ಜೋರ್ಡನ್ ನದಿಯನ್ನು ದಾಟಿದನಂತರ ನಾನು ಈಗ ಆಜ್ಞಾಪಿಸಿದ ಕಲ್ಲುಗಳನ್ನು ಏಬಾಲ್‍ಬೆಟ್ಟದ ಮೇಲೆ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
5 : “ಅಲ್ಲಿ ನಿಮ್ಮ ದೇವರಾದ ಸರ್ವೇಶ್ವರನಿಗೆ ನೀವು ಕಲ್ಲುಗಳಿಂದ ಬಲಿಪೀಠವನ್ನು ಕಟ್ಟಿಸಬೇಕು.
6 : ಉಳಿ ಮುಂತಾದುದನ್ನು ಉಪಯೋಗಿಸದೆ ಹುಟ್ಟು ಕಲ್ಲುಗಳಿಂದಲೇ ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠವನ್ನು ಕಟ್ಟಿಸಬೇಕು.
7 : ಅಲ್ಲಿ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿ ಸಹಭೋಜನಮಾಡಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
8 : ನೀವು ಆ ಕಲ್ಲುಗಳ ಮೇಲೆ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ವಿರಳವಾಗಿ ಹಾಗು ಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದನು.
9 : ಯಾಜಕರಾದ ಲೇವಿಯರೊಡನೆ ಮೋಶೆ ಇಸ್ರಯೇಲರೆಲ್ಲರಿಗೆ, “ಇಸ್ರಯೇಲರೇ, ನಿಶ್ಯಬ್ದ ವಾಗಿದ್ದು ಕೇಳಿರಿ: ನೀವು ಈಗ ನಿಮ್ಮ ದೇವರಾದ ಸರ್ವೇಶ್ವರನ ಜನರಾದಿರಿ.
10 : ಆದುದರಿಂದ ಈಗ ನಾನು ನಿಮಗೆ ಹೇಳುವ ಆತನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕು,” ಎಂದು ಹೇಳಿದನು.
11 :
ಮೋಶೆ ಆ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ,
12 : “ನೀವು ಜೋರ್ಡನ್ ನದಿ ಯನ್ನು ದಾಟಿದಮೇಲೆ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೋಸೆಫ್, ಬೆನ್ಯಾವಿೂನ್ ಎಂಬೀ ಕುಲಗಳವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತುಕೊಂಡು ಜನರಿಗೆ ಆಶೀರ್ವಚನಗಳನ್ನು ಉಚ್ಚರಿಸಬೇಕು.
13 : ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ ಎಂಬೀ ಕುಲಗಳವರು ಏಬಾಲ್ ಬೆಟ್ಟದ ಮೇಲೆ ನಿಂತುಕೊಂಡು ಶಾಪೋಕ್ತಿಗಳನ್ನು ಉಚ್ಚರಿಸಬೇಕು.
14 : “ಲೇವಿಯರು ಗಟ್ಟಿಯಾದ ಸ್ವರದಿಂದ ಇಸ್ರಯೇಲರೆಲ್ಲರಿಗೆ,
15 : ‘ಶಿಲ್ಪಿಯ ಕೆಲಸವಾಗಿ ಇರುವ ಮರದ ವಿಗ್ರಹ ಹಾಗು ಲೋಹವಿಗ್ರಹ ಸರ್ವೇಶ್ವರನಿಗೆ ಹೇಯವಾದದ್ದು. ಆದುದರಿಂದ ಅವನ್ನು ಮಾಡಿಸಿ ಗೋಪ್ಯವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
16 : “ಲೇವಿಯರು, ‘ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.
17 : “ಅವರು, ‘ಮತ್ತೊಬ್ಬನ ಗಡಿಮೇರೆಯನ್ನು ಸರಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
18 : “ಅವರು, ‘ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.
18 : “ಅವರು, ‘ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.
19 : “ಅವರು, ‘ಪರದೇಶಿ, ತಾಯಿತಂದೆ ಇಲ್ಲದ ವ್ಯಕ್ತಿ, ಇವರ ವ್ಯಾಜ್ಯದಲ್ಲಿ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
20 : . “ಅವರು, ‘ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
21 : “ಅವರು, ‘ಪಶುಸಂಗಮ ಮಾಡಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
22 : “ಅವರು, ‘ತಂದೆಯ ಮಗಳನ್ನಾಗಲಿ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
23 : “ಅವರು, ‘ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
24 : “ಅವರು, ‘ರಹಸ್ಯವಾಗಿ ನರಹತ್ಯಮಾಡಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.
25 : “ಅವರು, ‘ಹಣತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.
26 : . “ಅವರು, ‘ಈ ಧರ್ಮಶಾಸ್ತ್ರ ವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತ’ ಎನ್ನಲು ಜನರೆಲ್ಲರು, ‘ಆಮೆನ್’ ಎನ್ನಬೇಕು.