Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.
2 : ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿ ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.
3 : ಪೆಟ್ಟುಗಳ ಶಿಕ್ಷೆ ನಾಲ್ವತ್ತಕ್ಕಿಂತ ಹೆಚ್ಚಿರಬಾರದು. ಅಷ್ಟಕ್ಕಿಂತ ವಿೂರಿ ನೀವು ಹೆಚ್ಚು ಪೆಟ್ಟುಗಳನ್ನು ಹೊಡಿಸಿದರೆ ನಿಮ್ಮ ಸ್ವದೇಶದವನನ್ನು ಕೇವಲ ನೀಚನನ್ನಾಗಿ ನೀವು ಕಂಡಂತಾಗುವುದು.
4 : “ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು.”
5 : “ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿರುವಾಗ ಅಣ್ಣನು ಮಗನಿಲ್ಲದೆ ಸತ್ತರೆ ಅವನ ಹೆಂಡತಿ ಬೇರೆ ಪುರುಷನನ್ನು ಮದುವೆ ಆಗಬಾರದು. ಅವಳ ಮೈದುನ ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನ ಧರ್ಮವನ್ನು ನೆರವೇರಿಸಬೇಕು.
6 : ಅವಳಲ್ಲಿ ಹುಟ್ಟುವ ಚೊಚ್ಚಲುಮಗನನ್ನು ಸತ್ತವನ ಮಗನೆಂದೇ ಎಣಿಸಬೇಕು; ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಯೇಲರಲ್ಲಿ ಅಳಿದು ಹೋಗುವುದಿಲ್ಲ.
7 : ತಮ್ಮನು ಅಣ್ಣನ ಹೆಂಡತಿಯನ್ನು ಪರಿಗ್ರಹಿಸಲೊಲ್ಲದೆ ಹೋದರೆ ಅವಳು ಚಾವಡಿಗೆ ಹೋಗಿ ಹಿರಿಯರಿಗೆ, ‘ನನ್ನ ಗಂಡನ ತಮ್ಮನು ತನ್ನ ಅಣ್ಣನ ಹೆಸರನ್ನು ಉಳಿಸಲೊಲ್ಲನು; ಮೈದುನ ಧರ್ಮವನ್ನು ನಡೆಸುವುದಿಲ್ಲ ಎನ್ನುತ್ತಾನೆ’ ಎಂದು ತಿಳಿಸಬೇಕು.
8 : ಆಗ ಆ ಊರಿನ ಹಿರಿಯರು ಅವನನ್ನು ಕರೆಸಿ ವಿಚಾರಿಸಿದಲ್ಲಿ ಅವನು ಅವರ ಮುಂದೆ ನಿಂತು, ‘ಈಕೆಯನ್ನು ಪರಿಗ್ರಹಿಸುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ಹೇಳುವ ಪಕ್ಷಕ್ಕೆ
9 : ಅವನ ಅತ್ತಿಗೆ ಹಿರಿಯರ ಎದುರಿನಲ್ಲಿ ಅವನ ಕೆರವನ್ನು ಅವನ ಕಾಲಿನಿಂದ ತೆಗೆದುಬಿಟ್ಟು, ಅವನ ಮುಖದ ಮೇಲೆ ಉಗುಳಿ, ‘ಅಣ್ಣನಿಗೆ ಸಂತಾನವನ್ನು ಹುಟ್ಟಿಸಲೊಲ್ಲದವರೆಲ್ಲರಿಗೂ ಇಂಥ ಅವಮಾನವಾಗಲಿ,’ ಎಂದು ಹೇಳಬೇಕು.
10 : ಆ ಮನುಷ್ಯನ ಮನೆಯವರಿಗೆ, ‘ಕೆರಬಿಚ್ಚಿಸಿ ಕೊಂಡವನ ಮನೆಯವರು’ ಎಂಬ ಹೆಸರು ಬರುವುದು.
11 : “ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಅವರಲ್ಲಿ ಒಬ್ಬನ ಹೆಂಡತಿ ಬಂದು ತನ್ನ ಗಂಡನನ್ನು ಬಿಡಿಸಬೇಕೆಂದು ಆ ಇನ್ನೊಬ್ಬನ ಜನನೇಂದ್ರಿಯವನ್ನು ಹಿಡಿದುಕೊಂಡರೆ,
12 : ಅವಳ ಕೈಕಡಿದುಹಾಕಿಸಬೇಕು; ಅವಳಿಗೆ ಕನಿಕರ ತೋರಿಸಬಾರದು.
13 : “ಹೆಚ್ಚುಕಡಿಮೆಯಾಗಿರುವ ಎರಡು ವಿಧವಾದ ಕಳ್ಳತೂಕದ ಬಟ್ಟುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬೇಡಿ.
14 : ಹೆಚ್ಚುಕಡಿಮೆಯಾದ ಎರಡು ವಿಧವಾದ ಕಳ್ಳಸೇರುಗಳು ನಿಮ್ಮ ಮನೆಯಲ್ಲಿರಬಾರದು.
15 : ನಿಮ್ಮ ತೂಕದ ಬಟ್ಟೂ, ನಿಮ್ಮ ಅಳತೆಯ ಸೇರೂ ನ್ಯಾಯವಾಗಿಯೇ ಇರಬೇಕು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನಲ್ಲಿ ಬಹುಕಾಲ ಬಾಳುವಿರಿ.
16 : ನ್ಯಾಯ ವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯವಾಗಿದ್ದಾರೆ.
17 : “ನೀವು ಈಜಿಪ್ಟ್ ದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿ.
18 : ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರು; ನೀವು ದಣಿದು ಬಳಲಿದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರಮಾಡಿದರು.
19 : ಆದಕಾರಣ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿನಲ್ಲಿ ನಿಮ್ಮನ್ನು ಸೇರಿಸಿ, ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ, ಜಗದಲ್ಲಿ ಅಮಾಲೇಕ್ಯರ ಹೆಸರೇ ಉಳಿಯದಂತೆ ಮಾಡಬೇಕು; ಇದನ್ನು ಮರೆಯಬೇಡಿ.

· © 2017 kannadacatholicbible.org Privacy Policy