Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ಒಬ್ಬನು ತಾನು ಮದುವೆಮಾಡಿಕೊಂಡ ಮಹಿಳೆಯಲ್ಲಿ ಏನೋ ಅವಲಕ್ಷಣವನ್ನು ಕಂಡು, ಅವಳಲ್ಲಿ ಸಂತೋಷಪಡದೆ, ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಿಬಿಟ್ಟನೆಂದು ಇಟ್ಟುಕೊಳ್ಳೋಣ.
2 : ಅವಳು ಮತ್ತೊಬ್ಬನನ್ನು ಮದುವೆ ಆಗಿ ಅವನಿಂದಲೂ ತಿರಸ್ಕರಿಸಲ್ಪಟ್ಟು ತ್ಯಾಗ ಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ
3 : ಅಥವಾ ಈ ಎರಡನೆಯ ಗಂಡನು ಸತ್ತುಹೋದರೆ,
4 : ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಪರಿಗ್ರಹಿಸಬಾರದು; ಅವಳು ಅಶುದ್ಧಳಾದವಳು; ಅವಳನ್ನು ಪುನಃ ಪರಿಗ್ರಹಿಸುವುದು ಸರ್ವೇಶ್ವರನಿಗೆ ಹೇಯಕಾರ್ಯ. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿಗೆ ದೋಷವುಂಟಾಗಲು ಅವಕಾಶಕೊಡಬೇಡಿ.
5 : “ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನು ಅವನಿಗೆ ನೇಮಿಸಬಾರದು. ಅವನು ಒಂದು ವರ್ಷದವರೆಗೆ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು, ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ.
6 : “ಬೀಸುವಕಲ್ಲನ್ನು ಪೂರ್ತಿಯಾಗಲಿ, ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವುದು.
7 : “ಒಬ್ಬನು ಸ್ವದೇಶದವನಾದ ಇಸ್ರಯೇಲನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದು ಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದು ಹಾಕಿಬಿಡಬೇಕು.
8 : “ಕುಷ್ಠರೋಗಿಗಳ ವಿಷಯದಲ್ಲಿ ಯಾಜಕರಾದ ಲೇವಿಯರು ಬೋಧಿಸುವಂತೆಯೇ ಮಾಡುವುದಕ್ಕೆ ನೀವು ಜಾಗರೂಕರಾಗಿರಬೇಕು; ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನೇ ನೀವು ಅನುಸರಿಸಬೇಕು.
9 : ನೀವು ಈಜಿಪ್ಟ್ ದೇಶದಿಂದ ಬಂದಾಗ ದಾರಿಯಲ್ಲಿ ನಿಮ್ಮ ದೇವರಾದ ಸರ್ವೇಶ್ವರ ಮಿರ್ಯಾಮಳಿಗೆ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿ.
10 : “ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವುದಕ್ಕೆ ಅವನ ಮನೆ ಒಳಕ್ಕೆ ಹೋಗದೆ ಹೊರಗೆ ಇರಬೇಕು.
11 : ಸಾಲ ತೆಗೆದುಕೊಂಡವನೇ ಒತ್ತೆಯ ಸಾಮಾನನ್ನು ತಂದುಕೊಡಬೇಕು.
12 : ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ
13 : ಹೊತ್ತು ಮುಳುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು; ಅದನ್ನು ಇಟ್ಟುಕೊಂಡು ನೀವು ರಾತ್ರಿ ಮಲಗಬಾರದು; ಅವನು ಅದನ್ನು ಹೊದ್ದುಕೊಂಡು ಮಲಗಿಕೊಳ್ಳಬೇಕಲ್ಲವೆ? ಅದಲ್ಲದೆ, ಅವನು ನಿಮ್ಮನ್ನು ಹರಸುವನು, ಮತ್ತು ನೀವು ಮಾಡಿದ್ದು ಧರ್ಮಕಾರ್ಯವೆಂದು ನಿಮ್ಮ ದೇವರಾದ ಸರ್ವೇಶ್ವರ ತಿಳಿದುಕೊಳ್ಳುವರು.
14 : “ಸ್ವದೇಶದವರಲ್ಲೇ ಆಗಲಿ, ನಿಮ್ಮಲ್ಲಿ ಇರುವ ಅನ್ಯದೇಶದವರಲ್ಲೇ ಆಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ ನೀವು ಏನೂ ಅನ್ಯಾಯ ಮಾಡಬಾರದು;
15 : ದಿನದ ಕೂಲಿಯನ್ನು ಆ ದಿನದಲ್ಲೇ ಹೊತ್ತುಮುಳುಗುವುದಕ್ಕೆ ಮುಂಚಿತವಾಗಿ ಅವನಿಗೆ ಕೊಟ್ಟುಬಿಡಬೇಕು. ಅವನಿಗೆ ಬೇರೆ ಗತಿಯಿಲ್ಲದ್ದರಿಂದ ಅದನ್ನೇ ಎದುರು ನೋಡುತ್ತಿರುತ್ತಾನೆ. ನೀವು ಕೊಡದಿದ್ದರೆ ಅವನು ಸರ್ವೇಶ್ವರನಿಗೆ ಮೊರೆಯಿಡುವನು; ಆಗ ನೀವು ದೋಷಿಗಳಾಗುವಿರಿ.
16 : “ಮಕ್ಕಳ ಪಾಪಕ್ಕಾಗಿ ತಂದೆಗೂ, ತಂದೆಯ ಪಾಪಕ್ಕಾಗಿ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು.
17 : “ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪುಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು.
18 : ನೀವೇ ಈಜಿಪ್ಟ್ ದೇಶದಲ್ಲಿ ದಾಸರಾಗಿದ್ದಾಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಬಿಡಿಸಿದರೆಂಬುದನ್ನು ನೆನಪುಮಾಡಿಕೊಳ್ಳಿ; ಅದಕ್ಕಾಗಿಯೇ ಇದನ್ನು ಆಜ್ಞಾಪಿಸಿದ್ದೇನೆ.
19 : “ನೀವು ಬೆಳೆಯನ್ನು ಕೊಯ್ಯುವಾಗ ಒಂದು ಸಿವುಡನ್ನು ಹೊಲದಲ್ಲೇ ಮರೆತುಬಂದರೆ ಅದನ್ನು ತರಲು ಹಿಂದಕ್ಕೆ ಹೋಗಬಾರದು; ಪರದೇಶಿ, ತಾಯಿತಂದೆಯಿಲ್ಲದ ವ್ಯಕ್ತಿ, ವಿಧವೆ, ಇಂಥವರಿಗಾಗಿ ಅದನ್ನು ಬಿಟ್ಟುಬಿಡಿ; ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಕೆಲಸಕಾರ್ಯಗಳಲ್ಲಿ ಕೈಗೂಡಿಸಿ ನಿಮ್ಮನ್ನು ಅಭಿವೃದ್ಧಿಪಡಿಸುವರು.
20 : ಎಣ್ಣೆಯಮರಗಳ ರೆಂಬೆಗಳಿಂದ ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವುದಕ್ಕೆ ಹೋಗಬಾರದು; ಮಿಕ್ಕ ಕಾಯಿಗಳನ್ನು ಪರದೇಶಿ, ತಾಯಿತಂದೆಯಿಲ್ಲದ ವ್ಯಕ್ತಿ, ವಿಧವೆ, ಇಂಥವರಿಗಾಗಿ ಅವುಗಳನ್ನು ಬಿಟ್ಟುಬಿಡಿ.
21 : ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು; ಪರದೇಶಿ, ತಾಯಿತಂದೆಯಿಲ್ಲದ ವ್ಯಕ್ತಿ, ವಿಧವೆ, ಇಂಥವರಿಗಾಗಿ ಅದನ್ನು ಬಿಟ್ಟುಬಿಡಿ.
22 : ನೀವೆ ಈಜಿಪ್ಟ್‍ದೇಶದಲ್ಲಿ ಗುಲಾಮರಾಗಿದ್ದದ್ದು ಜ್ಞಾಪಕದಲ್ಲಿರಬೇಕು; ಅದಕ್ಕಾಗಿಯೇ ಇದನ್ನು ನಿಮಗೆ ಆಜ್ಞಾಪಿಸುತ್ತಿದ್ದೇನೆ.

· © 2017 kannadacatholicbible.org Privacy Policy