Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟಾಗ ಅವರ ಕಡೆ ಕುದುರೆಗಳು, ರಥಗಳು ಹಾಗು ನಿಮಗಿಂತ ಹೆಚ್ಚಾದ ಕಾಲ್ಬಲವು ಇರುವುದನ್ನು ಕಂಡರೆ, ಹೆದರಬೇಡಿ. ಏಕೆಂದರೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದಾರೆ.
2 : “ಕಾಳಗ ಸವಿೂಪಿಸಿದಾಗ ಯಾಜಕನು ಮುಂದೆ ಬಂದು ಯೋಧರಿಗೆ,
3 : ‘ಇಸ್ರಯೇಲರೇ, ಕೇಳಿ; ನೀವು ಈಗ ಶತ್ರುಗಳೊಡನೆ ಯುದ್ಧ ಮಾಡುವ ಕಾಲ ಸವಿೂಪಿಸಿದೆ; ನೀವು ಎದೆಗೆಡಬಾರದು, ದಿಗಿಲುಪಡಬಾರದು, ನಡುಗಬಾರದು, ಶತ್ರುಗಳಿಗೆ ಭಯಪಡಬಾರದು.
4 : ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇದ್ದು ಶತ್ರುಗಳೊಡನೆ ನಿಮ್ಮ ಪರವಾಗಿ ಯುದ್ಧಮಾಡಿ, ನಿಮಗೆ ಜಯವನ್ನುಂಟುಮಾಡುವರು’ ಎಂದು ಹೇಳಬೇಕು.
5 : “ಮತ್ತು ಸೇನಾಧಿಪತಿಗಳು ಅವರಿಗೆ, ‘ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಗೃಹಪ್ರವೇಶಮಾಡದಿದ್ದರೆ ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಂಡಾನು.
6 : ಯಾವನಾದರು ದ್ರಾಕ್ಷಿತೋಟವನ್ನು ಮಾಡಿ ಅದರ ಹಣ್ಣುಗಳನ್ನು ಇನ್ನೂ ಅನುಭೋಗಿಸದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ತೋಟದ ಹಣ್ಣುಗಳನ್ನು ಅನುಭೋಗಿಸಾನು.
7 : ಯಾವನಾದರೂ ತಾನು ಮದುವೆಮಾಡಿಕೊಂಡ ಹೆಣ್ಣನ್ನು ಇನ್ನು ಸೇರಿಸಿಕೊಳ್ಳದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಅವಳನ್ನು ಸೇರಿಸಿಕೊಂಡಾನು,’ ಎಂದು ಹೇಳಬೇಕು.
8 : ಮತ್ತು ‘ಯಾವನಾದರೂ ಧೈರ್ಯ ಕಡಿಮೆಯಾಗಿ ಅಂಜಿಕೊಂಡರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು’, ಎಂದು ಹೇಳಬೇಕು.
9 : ಸೇನಾಧಿಪತಿಗಳು ಯೋಧರಿಗೆ ಈ ರೀತಿ ಹೇಳಿದ ನಂತರ ದಂಡಿನವರ ಮೇಲೆ ನಾಯಕರನ್ನು ನೇಮಿಸಬೇಕು.
10 : “ನೀವು ಒಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಲು ಅದರ ಹತ್ತಿರಕ್ಕೆ ಬಂದಾಗ, ಮೊದಲು ಅದು ಯುದ್ಧವಿಲ್ಲದೆ ಸಮಾಧಾನದಿಂದಲೇ ಶರಣಾಗಬಹುದೆಂದು ಪ್ರಕಟಿಸಬೇಕು.
11 : ಅದರಲ್ಲಿರುವವರು ಒಪ್ಪಿ ಬಾಗಿಲನ್ನು ನಿಮಗೆ ತೆರೆದುಕೊಟ್ಟರೆ ಅವರೆಲ್ಲರೂ ನಿಮಗೆ ಬಿಟ್ಟೀ ಕೆಲಸವನ್ನು ಮಾಡುವ ಗುಲಾಮರಾಗಬೇಕು.
12 : ಅವರು ನಿಮ್ಮ ಮಾತಿಗೆ ಸಮ್ಮತಿಸದೆ, ಪ್ರತಿಭಟಿಸಿದರೆ ಆಗ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
13 : ನಿಮ್ಮ ದೇವರಾದ ಸರ್ವೇಶ್ವರ ಆ ಪಟ್ಟಣವನ್ನು ನಿಮಗೆ ವಶಪಡಿಸಿದಾಗ ಅದರಲ್ಲಿರುವ ಗಂಡಸರೆಲ್ಲರನ್ನೂ ಕನಿಕರಿಸದೆ ಸಂಹಾರ ಮಾಡಬೇಕು.
14 : ಹೆಂಗಸರನ್ನೂ ಮಕ್ಕಳನ್ನೂ ದನಗಳನ್ನೂ ಊರಲ್ಲಿರುವ ಆಸ್ತಿಯನ್ನೂ ನೀವು ಸ್ವಂತಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ವಶಪಡಿಸಿದ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.
15 : ಈ ನಾಡಿನ ಜನಾಂಗಗಳಿಗೆ ಸೇರದ ಹಾಗು ದೂರದ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ನೀವು ಹಾಗೆಯೆ ನಡೆದುಕೊಳ್ಳಬೇಕು.
16 : ಆದರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವಂತಕ್ಕಾಗಿ ಕೊಡುವ ಈ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ಹಾಗೆ ಮಾಡದೆ ಉಸಿರಾಡುವ ಒಬ್ಬರನ್ನಾದರೂ ಉಳಿಸಬಾರದು.
17 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಅಪ್ಪಣೆಕೊಟ್ಟಂತೆ ಇವರನ್ನು ಅಂದರೆ, ಹಿತ್ತಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲರನ್ನೂ ವಿನಾಶ ಶಾಪಗ್ರಸ್ತರನ್ನಾಗಿ ಮಾಡಿಬಿಡಬೇಕು.
18 : ಇಲ್ಲವಾದರೆ ಅವರು ತಮ್ಮ ದೇವರುಗಳಿಗಾಗಿ ಆಚರಿಸುವ ನಿಷಿದ್ಧಾಚಾರಗಳನ್ನು ನಿಮಗೆ ಕಲಿಸಿಕೊಡಬಹುದು; ಮತ್ತು ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ದ್ರೋಹಿಗಳಾಗಬಹುದು.
19 : “ನೀವು ಒಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಲು ಅದಕ್ಕೆ ಬಹುದಿವಸ ಮುತ್ತಿಗೆ ಹಾಕಬೇಕಾಗಬಹುದು; ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು; ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧ ಮಾಡಬಹುದೇ?
20 : ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಳುಮಾಡಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧ ಆಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.

· © 2017 kannadacatholicbible.org Privacy Policy