Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಧರ್ಮೋಪದೇಶಕಾಂಡ


1 : “ಯಾಜಕಸೇವೆ ಮಾಡುವ ಲೇವಿಯರಿಗೆ ಹಾಗು ಲೇವಿಯಕುಲದ ಸರ್ವರಿಗೆ ಇತರ ಇಸ್ರಯೇಲರಂತೆ ಸ್ವಂತಕ್ಕಾಗಿ ಭೂಸ್ವತ್ತು ದೊರೆಯುವುದಿಲ್ಲ. ಸರ್ವೇಶ್ವರನಿಗೆ ಸಮರ್ಪಿತವಾದ ಬಲಿದ್ರವ್ಯಗಳು ಹಾಗು ಎಲ್ಲ ವಿೂಸಲಾಗಿಟ್ಟವುಗಳೇ ಅವರಿಗೆ ಜೀವನಧಾರ.
2 : ಸ್ವದೇಶದವರಿಗೆ ದೊರಕುವಂತೆ ಅವರಿಗೆ ಸೊತ್ತು ದೊರಕುವುದಿಲ್ಲ. ಸರ್ವೇಶ್ವರಸ್ವಾಮಿಯೇ ಲೇವಿಯರ ಸೊತ್ತು. ಇದನ್ನು ಸ್ವಾಮಿಯೇ ಅವರಿಗೆ ಹೇಳಿದ್ದಾರೆ.
3 : “ಜನರಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಕರುಗಳನ್ನು ಹಾಗು ಆಡುಕುರಿಗಳನ್ನು ಕೊಯ್ದು ಬಲಿದಾನ ಮಾಡುವವರೆಲ್ಲರು ಆ ಪಶುಗಳ ಮುಂದೊಡೆಯನ್ನೂ ಎರಡು ದವಡೆಗಳನ್ನೂ ಕೋಷ್ಠವನ್ನೂ ಯಾಜಕರಿಗೆ ಕೊಡಬೇಕು.
4 : ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗು ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನು ಅವರಿಗೆ ಕೊಡಬೇಕು.
5 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಕುಲಗಳಲ್ಲಿ ಲೇವಿಯನನ್ನು, ಇವನ ತರುವಾಯ ಇವನ ಸಂತತಿಯವರನ್ನು, ತಮ್ಮ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆ ಮಾಡುವುದಕ್ಕೆ ತಾವೇ ನೇಮಿಸಿಕೊಂಡು ಇದ್ದಾರಲ್ಲವೆ?
6 : “ಇಸ್ರಯೇಲರ ಯಾವುದಾದರೊಂದು ಊರಲ್ಲಿ ಇಳಿದುಕೊಂಡಿದ್ದ ಒಬ್ಬ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು ಸರ್ವೇಶ್ವರ ಆರಿಸಿಕೊಂಡ ಸ್ಥಳಕ್ಕೆ ಬರಬಹುದು.
7 : ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಸರ್ವೇಶ್ವರನ ಹೆಸರನ್ನು ಹೇಳಿ ತಾನೂ ಸೇವೆ ನಡೆಸಬಹುದು;
8 : ಅಂಥವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ ಮಿಕ್ಕ ಲೇವಿಯರೊಂದಿಗೆ ಸಮವಾದ ಪಾಲಿಗೆ ಬಾಧ್ಯನಾಗಿರುವನು.
9 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಖಂಡನೀಯ ಆಚಾರಗಳನ್ನು ಅನುಸರಿಸಲೇಬಾರದು.
10 : ಮಕ್ಕಳನ್ನು ಆಹುತಿ ಕೊಡುವವರು, ಕಣಿಹೇಳುವವರು, ಶಕುನ ನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು,
11 : ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.
12 : ಇಂಥ ಕೆಲಸಗಳನ್ನು ನಡೆಸುವವರು ಸರ್ವೇಶ್ವರನಿಗೆ ಅಸಹ್ಯರಾಗಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ಇಂಥ ಹೇಯ ಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ದೂರ ಹೊರದೂಡಿಸಿಬಿಡುತ್ತಾರೆ.
13 : ನೀವು ನಿಮ್ಮ ದೇವರಾದ ಸರ್ವೇಶ್ವರನ ಸೇವೆಯ ವಿಷಯದಲ್ಲಿ ಸದಾಚಾರವುಳ್ಳವರು ಆಗಿರಬೇಕು.
14 : ನೀವು ಸ್ವಾಧೀನ ಮಾಡಿಕೊಳ್ಳುವ ಆ ನಾಡಿನ ಜನಾಂಗಗಳು ಶಕುನಗಳನ್ನು ನೋಡುತ್ತಾರೆ, ಯಂತ್ರಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಸರ್ವೇಶ್ವರನ ಅನುಮತಿ ಇಲ್ಲ.
15 : “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಹೋದರರಲ್ಲಿ ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸುವರು. ಅವನಿಗೆ ಮಾತ್ರ ಕಿವಿಗೊಡಬೇಕು.
16 : ಹೋರೇಬಿನಲ್ಲಿ ನೀವು ಸಭೆ ಕೂಡಿದ ದಿನದಂದು ಇದನ್ನೇ ನೀವು ಕೋರಿಕೊಂಡಿರಿ; ‘ನಮ್ಮ ದೇವರಾದ ಸರ್ವೇಶ್ವರನ ಸ್ವರವನ್ನು ಇನ್ನು ಕೇಳಲು ಹಾಗು ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡಲು ನಮಗೆ ಮನಸ್ಸಿಲ್ಲ; ಹಾಗೇನಾದರು ಕೇಳಿ, ನೋಡಿದರೆ ಸತ್ತೇವು’ ಎಂದು ನೀವು ಹೇಳಿದಿರಿ.
17 : ಆಗ ಸರ್ವೇಶ್ವರ ನನಗೆ, ‘ಇವರು ಹೇಳಿದ್ದು ಸರಿಯಾಗಿದೆ;
18 : ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೆ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.
19 : ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿ ಕೊಡುವುದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು.
20 : ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರ ಹೊಂದದೆ ನಾನು ಪ್ರೇರಣೆಮಾಡದ ಮಾತುಗಳನ್ನು ಸರ್ವೇಶ್ವರನ ಮಾತೆಂದು ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತಾಡುವನೋ, ಅವನಿಗೆ ಮರಣ ಶಿಕ್ಷೆಯಾಗಬೇಕು,’ ಎಂದು ಹೇಳಿದರು.
21 : “ಪ್ರವಾದಿ ಹೇಳಿದ ಮಾತು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ ಎಂದುಕೊಳ್ಳುತ್ತೀರೋ?
22 : ಪ್ರವಾದಿ ಸರ್ವೇಶ್ವರನ ಮಾತೆಂದು ಹೇಳಿ, ಮುಂತಿಳಿಸಿದ ಸಂಗತಿ ನಡೆಯದೆ ಹೋದರೆ, ಅವನ ಮಾತು ಸರ್ವೇಶ್ವರನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ಅಧಿಕಾರವಿಲ್ಲದೆ ಮಾತಾಡಿದವನು; ಅವನಿಗೆ ಹೆದರಬಾರದು.

· © 2017 kannadacatholicbible.org Privacy Policy