1 : “ಯಾವುದಾದರೊಂದು ಕುಂದುಕೊರತೆಯಾಗಲಿ, ದುರ್ಲಕ್ಷಣವಾಗಲಿ ಇರುವ ದನಕುರಿಗಳನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಸಮರ್ಪಿಸಬಾರದು. ಅಂಥವುಗಳನ್ನು ಅವರು ಸಹಿಸರು.
2 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ಊರುಗಳೊಂದರಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ನಿಮ್ಮ ದೇವರಾದ ಸರ್ವೇಶ್ವರನ ನಿಬಂಧನೆಯನ್ನು ವಿೂರಿದ್ದಾರೆ ಎಂದೂ,
3 : ಅನ್ಯ ದೇವರುಗಳನ್ನಾಗಲಿ, ಪೂಜಿಸಬಾರದೆಂದು ನಿಷೇಧಿಸಿರುವ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ, ಪೂಜಿಸಿ, ಆರಾಧಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದುಷ್ಟವಾದುದನ್ನು ನಡೆಸಿದ್ದಾರೆ ಎಂದೂ
4 : ನಿಮಗೆ ತಿಳಿದರೆ ಅದನ್ನು ನೀವು ಸೂಕ್ಷ್ಮವಾಗಿ ವಿಚಾರಣೆ ಮಾಡಬೇಕು. ಆಗ ಇಸ್ರಯೇಲರಲ್ಲಿ ಯಾರಿಂದಲಾದರೂ ಆ ನಿಷಿದ್ಧ ಕಾರ್ಯ ನಡೆದದ್ದು ನಿಜವೆಂದು ತಿಳಿದು ಬಂದರೆ,
5 : ಆ ಪುರುಷನನ್ನು ಅಥವಾ ಆ ಸ್ತ್ರೀಯನ್ನು ಹಿಡಿದು, ಊರ ಹೊರಗೆ ತಂದು, ಕಲ್ಲುಬೀರಿ ಕೊಲ್ಲಬೇಕು.
6 : ಒಬ್ಬನೇ ಒಬ್ಬ ಸಾಕ್ಷಿಯ ಮಾತಿನ ಮೇಲೆ ಯಾರಿಗೂ ಮರಣಶಿಕ್ಷೆಯಾಗಬಾರದು; ಮರಣ ಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು ಬೇಕು.
7 : ಅಪರಾಧಿಯನ್ನು ಕೊಲ್ಲುವುದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಎಸೆಯಬೇಕು. ತರುವಾಯ ಜನರೆಲ್ಲರೂ ಹಾಕಲಿ. ಹೀಗೆಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.
8 :
“ವಿಧವಿಧವಾದ ಜೀವಹತ್ಯ, ಹಕ್ಕು ಬಾಧ್ಯತೆ, ಹೊಡೆದಾಟ ಇವುಗಳ ವಿಷಯದಲ್ಲಿ ಅನುಮಾನ, ಚರ್ಚೆಗಳು ನಿಮ್ಮ ಊರಲ್ಲಿ ಉಂಟಾಗಬಹುದು. ಆಗ ಸರಿಯಾಗಿ ವಿವೇಚಿಸುವುದು ನಿಮ್ಮ ಶಕ್ತಿಗೆ ವಿೂರಿದ ಪಕ್ಷಕ್ಕೆ ನೀವು ಊರಿನಿಂದ ಹೊರಟು ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ
9 : ಯಾಜಕಸೇವೆಮಾಡುವ ಲೇವಿಯರ ಮತ್ತು ಆ ಕಾಲದ ನ್ಯಾಯಾಧಿಪತಿಯ ಬಳಿಗೆ ಹೋಗಿ ವಿಚಾರಿಸಬೇಕು. ನೀವು ಕೊಡಬೇಕಾದ ತೀರ್ಪನ್ನು ಅವರು ತಿಳಿಸುವರು.
10 : ಸರ್ವೇಶ್ವರ ಆರಿಸಿಕೊಂಡ ಆ ಸ್ಥಳದಲ್ಲಿ ಅವರು ನಿಮಗೆ ತಿಳಿಸುವ ಮಾತಿನ ಪ್ರಕಾರ ನೀವು ಮಾಡಬೇಕು. ಅವರು ಬೋಧಿಸುವುದನ್ನೇ ನೀವು ಅನುಸರಿಸಬೇಕು.
11 : ಅವರು ಕೊಡುವ ಆದೇಶದ ಪ್ರಕಾರ ಹಾಗು ಅವರು ಹೇಳಿಕೊಡುವ ತೀರ್ಪಿನಂತೆ ನೀವು ಮಾಡಬೇಕು; ಅವರು ತಿಳಿಸುವ ಮಾತನ್ನು ಬಿಟ್ಟು ಎಡಬಲಕ್ಕೆ ತಿರುಗಬಾರದು.
12 : ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸೇವೆಮಾಡುವ ಯಾಜಕರ ಅಥವಾ ನ್ಯಾಯಾಧಿಪತಿಯ ಮಾತನ್ನು ಯಾವನು ಅಹಂಕಾರದಿಂದ ನಿರಾಕರಿಸುತ್ತಾನೋ ಅವನಿಗೆ ಮರಣಶಿಕ್ಷೆ ಆಗಬೇಕು. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ಇಸ್ರಯೇಲರ ಮಧ್ಯದಿಂದ ತೆಗೆದು ಹಾಕಬೇಕು.
13 : ಜನರೆಲ್ಲರು ಇದನ್ನು ಕೇಳಿ, ಭಯಪಟ್ಟು, ಇನ್ನು ಅಹಂಕಾರದಿಂದ ನಡೆಯರು.
14 : “ನಿಮ್ಮ ದೇವರಾದ ಸರ್ವೇಶ್ವರ, ನಿಮಗೆ ಕೊಡುವ ನಾಡನ್ನು ನೀವು ಸೇರಿ ಸ್ವಾಧೀನ ಮಾಡಿಕೊಂಡು, ಅದರಲ್ಲಿ ವಾಸವಾಗಿರುವಾಗ ‘ಸುತ್ತಲಿರುವ ಎಲ್ಲ ಜನಾಂಗಗಳಂತೆ ನಾವೂ ಒಬ್ಬ ಅರಸನನ್ನು ನೇಮಿಸಿಕೊಳ್ಳೋಣ’ ಎಂದು ಹೇಳಿಕೊಳ್ಳಬಹುದು.
15 : ಆಗ ನೀವು ಅಗತ್ಯವಾಗಿ ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಂಡವನನ್ನೇ ನೇಮಿಸಿಕೊಳ್ಳಬೇಕು. ನಿಮ್ಮ ಬಂಧುಗಳಾದ ಸ್ವಜನರಲ್ಲೇ ಒಬ್ಬನನ್ನು ಅರಸನನ್ನಾಗಿ ನೇಮಿಸಿಕೊಳ್ಳಬೇಕೆ ಹೊರತು ಅನ್ಯದೇಶದವನನ್ನು ನೇಮಿಸಬಾರದು.
16 : “ಅವನು ಕುದುರೆಯ ದಂಡನ್ನು ಹೆಚ್ಚಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿ ಕೊಳ್ಳುವುದಕ್ಕಾಗಿ ತನ್ನ ಪ್ರಜೆಗಳನ್ನು ಈಜಿಪ್ಟ್ ದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಸರ್ವೇಶ್ವರ ಆಜ್ಞಾಪಿಸಿದ್ದಾರೆ.
17 : ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಸರ್ವೇಶ್ವರನಿಗೆ ವಿಮುಖವಾಗಲು ಅವಕಾಶವಾಗುವುದು. ಅವನು ಬೆಳ್ಳಿ ಬಂಗಾರವನ್ನು ವಿಶೇಷವಾಗಿ ಗಳಿಸಿಕೊಳ್ಳಬಾರದು.
18 : “ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿ ಇರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗಾಗಿ ಪುಸ್ತಕರೂಪವಾಗಿ ಬರೆಯಿಸಿ ಕೊಳ್ಳಬೇಕು.
19 : ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು; ಸರ್ವೇಶ್ವರನ ಆಜ್ಞೆಯನ್ನು ವಿೂರಿ ಎಡಬಲಕ್ಕೆ ತಿರುಗಿಕೊಳ್ಳಬಾರದು; ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಯುಳ್ಳವನಾಗಿರಬೇಕು; ಈ ಧರ್ಮಶಾಸ್ತ್ರದ ಎಲ್ಲ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸಲು ಅಭ್ಯಾಸಮಾಡಿಕೊಳ್ಳಬೇಕು; ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು.
20 : ಹೀಗೆಮಾಡಿದರೆ ಅವನೂ ಅವನ ಸಂತತಿಯವರೂ ದೀರ್ಘಕಾಲ ಇಸ್ರಯೇಲರ ಮೇಲೆ ರಾಜ್ಯಾಧಿಕಾರ ನಡೆಸುವರು.