1 :
“ಏಳು ಸಂವತ್ಸರಗಳು ಕಳೆದನಂತರ ಬಡವರಿಗೆ ಬಿಡುಗಡೆ ಸಿಗಬೇಕು.
2 : ಹೇಗೆಂದರೆ, ಸರ್ವೇಶ್ವರನೇ ನೇಮಿಸಿದ ಬಿಡುಗಡೆಯ ಸಂವತ್ಸರ ಪ್ರಕಟವಾಗಿದೆ. ಆದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
2 : ಆಡುಕುರಿಗಳಲ್ಲಾಗಲಿ, ದನಗಳಲ್ಲಿ ಆಗಲಿ ಪಾಸ್ಕದ ಪಶುವನ್ನು, ಸರ್ವೇಶ್ವರ ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳದಲ್ಲೇ ಅವರಿಗಾಗಿ ನೀವು ಅದನ್ನು ವಧಿಸಬೇಕು.
3 : ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟದ್ದನ್ನು ಕೇಳಕೂಡದು.
4 : “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ,
5 : ಸರ್ವೇಶ್ವರ ನಿಮಗೆ ಸ್ವದೇಶವಾಗಿ ಕೊಡುವ ನಾಡಿನಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವರು. ಈ ಕಾರಣ, ನಿಮ್ಮಲ್ಲಿ ಬಡವರೇ ಇರುವುದಿಲ್ಲ.
6 : ನಿಮ್ಮ ದೇವರಾದ ಸರ್ವೇಶ್ವರ ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ; ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ.
7 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನ ಯಾವ ಊರಲ್ಲಿಯಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನ ಬಗ್ಗೆ ಮನಸ್ಸನ್ನು ಕಠಿಣ ಮಾಡಿಕೊಳ್ಳಬೇಡಿ. ಅವನಿಗೆ ಸಹಾಯಮಾಡದೆ ಇರಬೇಡಿ.
8 : ನೀವು ಕೈದೆರೆದು ಅವನಿಗೆ ಅಗತ್ಯವಾಗಿ ಬೇಕಾದುದನ್ನು ಕೊಟ್ಟು ಸಹಾಯಮಾಡಬೇಕು.
9 : ಬಿಡುಗಡೆಯಾಗುವ ಏಳನೆಯ ವರ್ಷ ಸವಿೂಪಿಸಿ ಬಿಟ್ಟಿತು ಎಂದು ನೀಚವಾದ ಆಲೋಚನೆ ಮಾಡಿ, ಬಡ ಸಹೋದರನ ಬಗ್ಗೆ ಮೋರೆ ಕರ್ರಗೆಮಾಡಿಕೊಂಡು, ಅವನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಸಹಾಯವನ್ನು ನಿರಾಕರಿಸಿದರೆ, ಅವನು ನಿಮ್ಮ ಬಗ್ಗೆ ಸರ್ವೇಶ್ವರನಿಗೆ ಮೊರೆ ಇಡುವನು; ಆಗ ನೀವು ದೋಷಿಗಳಾಗುತ್ತೀರಿ.
10 : ಕೊಡುವಾಗ ನೀವು ಬೇಸರಗೊಳ್ಳದೆ ಉದಾರ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಕೆಲಸಕಾರ್ಯಗಳಲ್ಲೂ ಪ್ರಯತ್ನಗಳಲ್ಲೂ ನಿಮ್ಮನ್ನು ಅಭಿವೃದ್ಧಿಪಡಿಸುವರು.
11 : ನಾಡಿನಲ್ಲಿ ಯಾವಾಗಲೂ ಬಡವರು ಇದ್ದೇ ಇರುವರು; ಆದುದರಿಂದ ನೀವು ಸ್ವದೇಶದವರಾದ ಬಡವರಿಗೂ ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕೆಂದು ಆಜ್ಞಾಪಿಸಿದ್ದೇನೆ.
12 :
“ಸ್ವದೇಶದವರಲ್ಲಿ ಯಾವ ಹಿಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ಗುಲಾಮ ರಾಗಿ ಮಾರಲ್ಪಟ್ಟಿದ್ದರೆ ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ, ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಟ್ಟುಬಿಡಬೇಕು.
13 : ಬಿಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು.
14 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಆಡುಕುರಿಗಳು, ದವಸಧಾನ್ಯ, ದ್ರಾಕ್ಷಾರಸ ಇವುಗಳಲ್ಲಿ ಉದಾರವಾಗಿ ಕೊಟ್ಟುಕಳುಹಿಸಬೇಕು.
15 : ಈಜಿಪ್ಟ್ ದೇಶದಲ್ಲಿ ನೀವೇ ಗುಲಾಮರಾಗಿದ್ದಿರಿ; ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಬಿಡುಗಡೆ ಮಾಡಿದರೆಂಬುದನ್ನು ಜ್ಞಾಪಕಮಾಡಿಕೊಳ್ಳಿ. ಇದಕ್ಕಾಗಿಯೇ, ನಾನೀಗ ಈ ಆಜ್ಞೆಯನ್ನು ನಿಮಗೆ ಕೊಟ್ಟಿದ್ದೇನೆ.
16 : “ಒಂದು ವೇಳೆ ಅಂಥ ಗುಲಾಮನು ನಿಮ್ಮ ಬಳಿ ಸುಖವಾಗಿದ್ದು, ನಿಮ್ಮನ್ನೂ ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆ ಆಗಿ ಹೋಗಲು ಒಲ್ಲೆನೆಂದು ಹೇಳಬಹುದು;
17 : ಆಗ ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ ಕದಕ್ಕೆ ಸಿಕ್ಕಿಸಬೇಕು. ಆ ದಿನ ಮೊದಲ್ಗೊಂಡು ಅವನು ನಿಮಗೆ ಶಾಶ್ವತ ಗುಲಾಮನಾಗಿರುತ್ತಾನೆ. ಅದೇ ರೀತಿಯಲ್ಲಿ ಗುಲಾಮಸ್ತ್ರೀಯರ ವಿಷಯದಲ್ಲೂ ನಡೆದುಕೊಳ್ಳಬೇಕು.
18 : “ಗುಲಾಮನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ಗುಲಾಮನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲವೆ? ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಸಫಲಗೊಳಿಸುವರು.
19 :
“ದನಗಳಲ್ಲೂ ಆಡುಕುರಿಗಳಲ್ಲೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಸರ್ವೇಶ್ವರನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.
20 : ಪ್ರತಿ ವರ್ಷ ನೀವೂ ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲೆ, ಅವರ ಸನ್ನಿಧಿಯಲ್ಲೇ ಕೊಯ್ದು ತಿನ್ನಬೇಕು.
21 : “ಅದು ಕುಂಟಾಗಿ, ಕುರುಡಾಗಿ, ಇಲ್ಲವೆ ಬೇರೆ ವಿಧದಲ್ಲಿ ದೋಷವುಳ್ಳದ್ದಾಗಿದ್ದರೆ ಅದನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯಾಗಿ ಸಮರ್ಪಿಸಕೂಡದು;
22 : ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಅಶುದ್ಧರೂ ಜಿಂಕೆ ದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
23 : ನೀವು ರಕ್ತವನ್ನು ಮಾತ್ರ ಭುಜಿಸಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.