1 : ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ.
2 : ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ವಿೂನುಗಳೂ ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ.
3 : ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.
4 : ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು.
5 : ನಿಮ್ಮ ರಕ್ತಸುರಿಸಿ ಪ್ರಾಣತೆಗೆಯುವವರೆಗೆ ಮುಯ್ಯಿ ತೀರಿಸುವೆನು - ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು.
6 : “ನಿರ್ಮಿಸಿಹರು ದೇವರು ತಮ್ಮ
ಸ್ವರೂಪದಲ್ಲಿ ನರನನ್ನು
ಎಂತಲೆ ನರನನ್ನು ಕೊಲ್ಲುವವನು
ನರನಿಂದಲೇ ಹತನಾಗುವನು.
7 : ನೀವು ಹೆಚ್ಚಿ ಅಭಿವೃದ್ಧಿಯಾಗಿರಿ,
ನಿಮ್ಮ ಸಂಖ್ಯೆ ಬೆಳೆಯಲಿ
ಭೂಮಿಯಲ್ಲಿ.”
8 : ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು:
9 : “ಕೇಳಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ
10 : ನಿಮ್ಮ ಕೂಡ ನಾವೆಯಿಂದ ಹೊರಟು ಬಂದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಒಂದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ.
11 : ಆ ಪ್ರತಿಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ.”
12 : ದೇವರು ಮತ್ತೆ ಹೇಳಿದ್ದೇನೆಂದರೆ - “ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ
13 : ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು.
14 : ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡುಬರುವುದು.
15 : ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮುಂದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಳಯ ಬರುವುದಿಲ್ಲ.
16 : ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳಿಗೂ ಆದ ಶಾಶ್ವತ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ.”
17 : ಇದು ಅಲ್ಲದೆ ದೇವರು ನೋಹನಿಗೆ, “ನನಗೂ ಸಮಸ್ತ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು,” ಎಂದು ಹೇಳಿದರು.
18 :
ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್, ಹಾಮ್, ಯೆಫೆತ್ ಎಂಬುವರು. (ಹಾಮನು ಕಾನಾನನ ತಂದೆ).
19 : ಜಗದಲ್ಲೆಲ್ಲ ಹರಡಿಕೊಂಡಿರುವ ಜನರು ನೋಹನ ಈ ಮೂರು ಮಕ್ಕಳಿಂದಲೇ ಉತ್ಪತ್ತಿಯಾದುದು.
20 : ನೋಹನು ವ್ಯವಸಾಯಗಾರ. ದ್ರಾಕ್ಷಿತೋಟ ಮಾಡುವುದನ್ನು ಪ್ರಾರಂಭಿಸಿದವನು ಅವನೇ.
21 : ಒಮ್ಮೆ ಅವನು ಕುಡಿದು ಅಮಲೇರಿ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು.
22 : ತನ್ನ ತಂದೆ ಬೆತ್ತಲೆಯಾಗಿರುವುದನ್ನು ಕಂಡ ಕಾನಾನನ ತಂದೆ ಹಾಮನು ಹೊರಗಿದ್ದ ಶೇಮ್, ಯೆಫೆತ್ ಸೋದರರಿಗೆ ತಿಳಿಸಿದನು.
23 : ಅವರಿಬ್ಬರು ಬಂದು ಹೊದಿಕೆಯನ್ನು ತೆಗೆದುಕೊಂಡು, ಬೆನ್ನಿನ ಹಿಂದೆ ಹಾಕಿಕೊಂಡು, ಹಿಂದುಹಿಂದಕ್ಕೆ ನಡೆದುಬಂದು ತಂದೆಗೆ ಅದನ್ನು ಹೊದಿಸಿ ಅವನ ಮಾನವನ್ನು ಕಾಪಾಡಿದರು. ಅವರಿಬ್ಬರು ಹಿಮ್ಮುಖರಾಗಿ ಇದ್ದುದರಿಂದ ತಂದೆ ಬೆತ್ತಲೆಯಾಗಿದ್ದುದನ್ನು ನೋಡಲಿಲ್ಲ.
24 : ನೋಹನಿಗೆ ಅಮಲು ಇಳಿದ ಮೇಲೆ ತನ್ನ ಕಿರಿಯ ಮಗ ಮಾಡಿದ್ದು ತಿಳಿಯಿತು. ಆಗ ಅವನು ಹೀಗೆಂದನು:
25 : “ಶಾಪ ತಟ್ಟಲಿ ಕಾನಾನಿಗೆ
ದಾಸಾನುದಾಸನಾಗಲಿ ಅವನು ತನ್ನ
ಸೋದರರಿಗೆ”
26 : ಸ್ತೋತ್ರ, ಶೇಮನ ದೇವರಾದ
ಸರ್ವೇಶ್ವರನಿಗೆ
ದಾಸನಾಗಲಿ ಕಾನಾನನು
ಶೇಮನಿಗೆ”
27 : ಅಭಿವೃದ್ಧಿಯನು ನೀಡಲಿ ದೇವರು
ಯೆಫೆತನಿಗೆ
ವಾಸವಾಗಿರಲಿವನು ಶೇಮನ
ಗುಡಾರದೊಳಗೆ,
ದಾಸನಾಗಿರಲಿ ಕಾನಾನನು
ಯೆಫೆತನಿಗೆ”
28 : ಜಲಪ್ರಳಯ ಮುಗಿದ ಮೇಲೆ ನೋಹನು 350 ವರ್ಷ ಬದುಕಿದ್ದನು.
29 : ಸತ್ತಾಗ ಅವನಿಗೆ ಒಟ್ಟು 950 ವರ್ಷಗಳಾಗಿದ್ದವು.