1 : ಸರ್ವೇಶ್ವರಸ್ವಾಮಿ ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ.
2 : ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ.
3 : ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು.
4 : ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿ ಹಾಕುವೆನು,” ಎಂದು ಹೇಳಿದರು.
5 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು.
6 : ಭೂಮಿಯ ಮೇಲೆ ಜಲಪ್ರಳಯ ಬಂದಾಗ ನೋಹನಿಗೆ ಆರುನೂರು ವರ್ಷ.
7 : ಆ ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಮಡದಿ, ಮಕ್ಕಳು, ಸೊಸೆಯರ ಸಮೇತ ನಾವೆಯನ್ನು ಹತ್ತಿದನು.
8 : ದೇವರ ಆಜ್ಞಾನುಸಾರ ಶುದ್ಧಾಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ
9 : ಗಂಡು ಹೆಣ್ಣುಗಳು ಜೋಡಿಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು.
10 : ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.
11 : ನೋಹನ ಜೀವಮಾನದ ಆರುನೂರನೆಯ ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನ ಭೂಮಿಯ ಅಡಿಸಾಗರದ ಸೆಲೆಗಳು ಒಡೆದವು. ಆಕಾಶದ ತೂಬುಗಳು ತೆರೆದವು.
12 : ನಲವತ್ತು ದಿನವೂ ಹಗಲಿರುಳೆನ್ನದೆ ಭೂಮಿಯ ಮೇಲೆ ಬಿರುಮಳೆ ಸುರಿಯಿತು.
13 : ಅದೇ ದಿನ ನೋಹನೂ ಅವನ ಹೆಂಡತಿಯೂ ಮತ್ತು ಶೇಮ್, ಹಾಮ್, ಯೆಫೆತ್ ಎಂಬ ಅವನ ಮಕ್ಕಳೂ ಅವರ ಮಡದಿಯರೂ ನಾವೆಯನ್ನು ಹೊಕ್ಕರು.
14 : ಅವರೊಂದಿಗೆ ಸಕಲ ವಿಧವಾದ ಕಾಡುಮೃಗಗಳೂ ಸಾಕು ಪ್ರಾಣಿಗಳೂ ಕ್ರಿಮಿಕೀಟಗಳೂ ರೆಕ್ಕೆಬಡಿಯುವ ಹಕ್ಕಿಪಕ್ಷಿಗಳೂ
15 : ತಮ್ಮ ತಮ್ಮ ಜಾತಿಗನುಸಾರ ಎಲ್ಲ ಜೀವಿಗಳು ಎರಡೆರಡಾಗಿ ಬಂದು ನಾವೆಯನ್ನು ಸೇರಿದವು.
16 : ದೇವರು ನೋಹನಿಗೆ ಅಪ್ಪಣೆಕೊಟ್ಟ ಮೇರೆಗೆ, ಗಂಡು ಹೆಣ್ಣಂತೆ ಎಲ್ಲ ಪ್ರಾಣಿಗಳು ಬಂದು ಸೇರಿದವು. ಬಳಿಕ ಸರ್ವೇಶ್ವರ, ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
17 : ಜಲಪ್ರಳಯದ ಮಳೆ ನಲವತ್ತು ದಿನ ಭೂಮಿಯ ಮೇಲೆ ಒಂದೇ ಸಮನೆ ಸುರಿಯಿತು. ನೀರು ಹೆಚ್ಚುತ್ತಾ ನಾವೆಯನ್ನು ಮೇಲೆತ್ತಲು ಅದು ನೀರಿನ ಮೇಲೆ ತೇಲತೊಡಗಿತು.
18 : ನೀರು ಪ್ರಬಲವಾಗಿ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು.
19 : ಅದು ಇನ್ನೂ ಎಷ್ಟು ಅಧಿಕವಾಯಿತು ಎಂದರೆ, ಆಕಾಶದ ಕೆಳಗಿರುವ ಗುಡ್ಡಬೆಟ್ಟಗಳೆಲ್ಲ ಮುಚ್ಚಿ ಹೋದವು.
20 : ಹೀಗೆ ಮುಚ್ಚಿಹೋದ ಬೆಟ್ಟಗಳ ಮೇಲೆ ಹದಿನೈದು ಮೊಳ ನೀರು ನಿಂತಿತು.
21 : ಈ ಕಾರಣ ಭೂಮಿಯ ಮೇಲೆ ಸಂಚರಿಸುತ್ತಿದ್ದ ಎಲ್ಲ ಪ್ರಾಣಿಗಳು, ಕಾಡು ಮೃಗಗಳು, ಸಾಕು ಪ್ರಾಣಿಗಳು, ಕ್ರಿಮಿಕೀಟಗಳು, ಮನುಷ್ಯರು ಸಹಿತವಾಗಿ ನಾಶವಾದುವು.
22 : ಉಸಿರಾಡುವ ಭೂಮಿಯ ಜಂತುಗಳೆಲ್ಲ ಸತ್ತುಹೋದವು.
23 : ಮನುಷ್ಯರು ಮೊದಲ್ಗೊಂಡು ಪ್ರಾಣಿಪಕ್ಷಿ, ಕ್ರಿಮಿಕೀಟದವರೆಗೆ ಭೂಮಿಯ ಮೇಲಿನದೆಲ್ಲವೂ ನಾಶವಾಯಿತು. ಭೂಮಿಯಿಂದ ಎಲ್ಲವೂ ನಿರ್ಮೂಲವಾಯಿತು. ನೋಹನು ಹಾಗೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳು ಮಾತ್ರ ಉಳಿದುಕೊಂಡವು.
24 : ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನಗಳವರೆಗೂ ಪ್ರಬಲವಾಗಿಯೇ ಇತ್ತು.