Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಮಾನವಕುಲವು ಜಗದ ಮೇಲೆ ಹಬ್ಬಿ ಹರಡಿದಂತೆ ಅವರಿಗೆ ಹೆಣ್ಣು ಮಕ್ಕಳು ಹುಟ್ಟಿದರು.
2 : ಈ ಮನುಷ್ಯ ಪುತ್ರಿಯರ ಚೆಲುವನ್ನು ಕಂಡು ದೇವಪುತ್ರರು ತಮಗೆ ಇಷ್ಟ ಬಂದವರನ್ನೆಲ್ಲ ಮದುವೆಯಾದರು.
3 : ಆಗ ಸರ್ವೇಶ್ವರಸ್ವಾಮಿ, “ನನ್ನ ಆತ್ಮವು ಮನುಷ್ಯನಿಗೆ ಶಾಶ್ವತವಾಗಿ ಹೊಣೆಯಾಗಿರಲಾರದು; ಭ್ರಷ್ಟರಾದ ಅವರು ಮತ್ರ್ಯರು. ಅವರ ಆಯುಷ್ಯ ಕೇವಲ ನೂರಿಪ್ಪತ್ತು ವರ್ಷ ಇರಲಿ” ಎಂದರು.
4 : ದೇವಪುತ್ರರೂ ಮನುಷ್ಯ ಪುತ್ರಿಯರೂ ಕೂಡಿ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದನಂತರವೂ ಜಗದಲ್ಲಿ ‘ನೆಪೀಲಿಯರು’ ಇದ್ದರು. ಇವರೇ ಪ್ರಾಚೀನ ಕಾಲದ ಸುಪ್ರಸಿದ್ಧ ಪರಾಕ್ರಮಿಗಳು.
5 : ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು.
6 : ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು,
7 : ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ. ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿ ಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು.
8 : ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರಸ್ವಾಮಿಗೆ ಮೆಚ್ಚುಗೆಯಿತ್ತು.
9 : ನೋಹನ ಚರಿತ್ರೆಯಿದು: ಆತ ಸತ್ಪುರುಷ. ಅವನಂಥ ನಿರ್ದೋಷಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ದೇವರೊಡನೆ ಆತ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ.
10 : ಆತನಿಗೆ ಶೇಮ್, ಹಾಮ್ ಮತ್ತು ಯೆಫೆತ್ ಎಂಬ ಮೂರು ಮಂದಿ ಮಕ್ಕಳು.
11 : ಜಗತ್ತು ದೇವರ ದೃಷ್ಟಿಯಲ್ಲಿ ಕೆಟ್ಟುಹೋಗಿತ್ತು; ಹಿಂಸಾಚಾರದಿಂದ ತುಂಬಿತುಳುಕುತ್ತಿತ್ತು.
12 : ಭೂ ನಿವಾಸಿಗಳೆಲ್ಲರು ತಮ್ಮ ನಡತೆಯನ್ನು ಕೆಡಿಸಿಕೊಂಡಿದ್ದರು.
13 : ಜಗವಿಡೀ ಕೆಟ್ಟುಹೋಗಿರುವುದನ್ನು ಕಂಡ ದೇವರು ನೋಹನಿಗೆ, “ನರಮಾನವರೆಲ್ಲರಿಗೆ ಸರ್ವನಾಶವನ್ನು ತೀರ್ಮಾನಿಸಿದ್ದೇನೆ. ಜಗವೆಲ್ಲವು ಹಿಂಸಾಚಾರದಿಂದ ತುಂಬಿಹೋಗಿದೆ. ನಾನು ಅವರನ್ನೂ ಜಗದಲ್ಲಿರುವುದೆಲ್ಲವನ್ನೂ ಅಳಿಸಿಬಿಡುತ್ತೇನೆ.
14 : ನೀನು ತುರಾಯಿಮರದಿಂದ ನಾವೆಯೊಂದನ್ನು ಮಾಡಿಕೊ; ಅದರ ತುಂಬ ಕೊಠಡಿಗಳಿರಲಿ; ಅದರ ಒಳಕ್ಕೂ ಹೊರಕ್ಕೂ ರಾಳಪದಾರ್ಥವನ್ನು ಹಚ್ಚು.
15 : ಅದನ್ನು ಹೀಗೆ ಮಾಡು; ಅದರ ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ ಇರಲಿ.
16 : ಅದರೆ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿ ಇಡು, ಪಕ್ಕದಲ್ಲಿ ಬಾಗಿಲಿರಲಿ; ಒಂದರ ಮೇಲೆ ಒಂದರಂತೆ ನಾವೆಯಲ್ಲಿ ಮೂರು ಅಂತಸ್ತುಗಳನ್ನು ಮಾಡು.
17 : ನಾನು ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಲಿದ್ದೇನೆ. ಅದು ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವುದು. ಭೂಮಿಯಲ್ಲಿರುವ ಸಮಸ್ತವೂ ನಾಶವಾಗುವುದು.
18 : ಆದರೆ ನಿನ್ನೊಡನೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ನೀನು ಹೆಂಡತಿ, ಮಕ್ಕಳು ಹಾಗೂ ಸೊಸೆಯರ ಸಮೇತ ನಾವೆಯನ್ನು ಹತ್ತಬೇಕು.
19 : ಅಲ್ಲದೆ, ನಿನ್ನೊಡನೆ ಬದುಕಿಸಲು ಜೀವಿಗಳ ಪ್ರತಿಯೊಂದು ಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು ಹೀಗೆ ಒಂದೊಂದು ಜೊತೆಯನ್ನು ನಾವೆಯಲ್ಲಿ ಸೇರಿಸಿಕೊ.
20 : ಪ್ರಾಣಿಪಕ್ಷಿ, ಕ್ರಿಮಿಕೀಟ ಇವುಗಳ ಸಕಲ ಜಾತಿಗಳಲ್ಲಿ ಎರಡೆರಡು ಬದುಕಿಬಾಳಲು ನಿನ್ನೊಡನೆ ಬರಲಿ.
21 : ಎಲ್ಲ ತರಹದ ಭೋಜನ ಪದಾರ್ಥಗಳನ್ನು ಶೇಖರಿಸಿಟ್ಟುಕೊ. ಅದು ನಿನಗೂ ಪ್ರಾಣಿಗಳಿಗೂ ಆಹಾರವಾಗುವುದು,” ಎಂದು ಹೇಳಿದರು.
22 : ನೋಹನು ಹಾಗೆಯೇ ಮಾಡಿದನು. ದೇವರ ಆಜ್ಞಾನುಸಾರ ನಡೆದುಕೊಂಡನು.

· © 2017 kannadacatholicbible.org Privacy Policy