1 :
ಆಗ ಜೋಸೆಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಕಣ್ಣೀರು ಇಡುತ್ತಾ, ಅವರಿಗೆ ಮುದ್ದಿಟ್ಟನು.
2 : ತರುವಾಯ ತನ್ನ ಸೇವಕರಲ್ಲಿ ಶವಲೇಪಕರಾದವರಿಗೆ, “ನನ್ನ ತಂದೆಯ ಶವವನ್ನು ಸುಗಂಧ ದ್ರವ್ಯಗಳಿಂದ ಲೇಪಿಸಿ ಸಿದ್ಧ ಪಡಿಸಿರಿ,” ಎಂದು ಅಪ್ಪಣೆ ಕೊಟ್ಟನು. ಅವರು ಹಾಗೆಯೇ ಮಾಡಿದರು.
3 : ಪದ್ಧತಿಯ ಪ್ರಕಾರ ನಲವತ್ತು ದಿನಗಳು ಸುಗಂಧ ದ್ರವ್ಯಗಳನ್ನು ಲೇಪಿಸಬೇಕಾಗಿತ್ತು. ಅಷ್ಟು ದಿನಗಳವರೆಗೂ ಅವನಿಗೋಸ್ಕರ ಈಜಿಪ್ಟಿನವರಿಂದ ಶೋಕಾಚರಣೆ ಇತ್ತು.
4 : ದುಃಖದ ದಿನಗಳು ಕಳೆದ ನಂತರ ಜೋಸೆಫನು ಫರೋಹನ ಪರಿವಾರದವರಿಗೆ, “ದಯವಿಟ್ಟು ನೀವು ಫರೋಹನ ಬಳಿಗೆ ಹೋಗಿ ಈ ವಿಷಯವನ್ನು ಮನಮುಟ್ಟುವಂತೆ ಮಾಡಿ:
5 : ನನ್ನ ತಂದೆಯವರು ತಾವು ಕಾನಾನ್ ನಾಡಿನಲ್ಲಿ ಸಿದ್ಧಮಾಡಿಕೊಂಡಿರುವ ಸ್ಥಳದಲ್ಲಿಯೇ ತಮಗೆ ಸಮಾಧಿಮಾಡಬೇಕೆಂದು ಸಾಯುವುದಕ್ಕೆ ಮೊದಲೇ ನನ್ನಿಂದ ಪ್ರಮಾಣಮಾಡಿಸಿದರು. ಆದ್ದರಿಂದ ನಾನು ಹೋಗಿ ತಂದೆಯನ್ನು ಸಮಾಧಿಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ವಿನಂತಿಸುತ್ತಿದ್ದೇನೆ,” ಎಂದನು.
6 : ಫರೋಹನು ಈ ಸಂಗತಿಯನ್ನು ಕೇಳಿ ಜೋಸೆಫನಿಗೆ, “ನಿನ್ನ ತಂದೆ ಪ್ರಮಾಣಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿಮಾಡಿ ಬರಬಹುದು,” ಎಂದು ಅಪ್ಪಣೆಕೊಟ್ಟನು
7 : ಜೋಸೆಫನು ತಂದೆಯನ್ನು ಸಮಾಧಿಮಾಡಲು ಹೊರಟುಹೋದಾಗ, ಅವನ ಜೊತೆಯಲ್ಲಿ ಫರೋಹನ ಪರಿವಾರದವರೆಲ್ಲರು, ಅರಮನೆಯ ಮುಖಂಡರು, ಈಜಿಪ್ಟಿನ ಮುಖ್ಯಸ್ಥರೆಲ್ಲರು,
8 : ಜೋಸೆಫನ ಮನೆಯವರೆಲ್ಲರು, ಅಣ್ಣತಮ್ಮಂದಿರು, ತಂದೆಯ ಮನೆಯವರೆಲ್ಲರು ಹೋದರು. ತಮ್ಮ ಮಡದಿ ಮಕ್ಕಳನ್ನೂ ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಬಿಟ್ಟುಹೋದರು.
9 : ಅವನ ಸಂಗಡ ರಥಗಳೂ ಕುದುರೆಸವಾರರೂ ಸಹ ಇದ್ದರು. ಹೀಗೆ ದೊಡ್ಡ ಜನಸಮೂಹವೇ ಅವನೊಂದಿಗೆ ಹೋಯಿತು.
10 : ಅವರು ಜೋರ್ಡನ್ ನದಿಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು; ಜೋಸೆಫನು ತನ್ನ ತಂದೆಗೋಸ್ಕರ ಏಳು ದಿನದ ಶೋಕಾಚರಣೆಯನ್ನು ಏರ್ಪಡಿಸಿದನು.
11 : ಆ ನಾಡಿನ ಜನರಾದ ಕಾನಾನ್ಯರು ಆಟಾದ್ ಕಣದಲ್ಲಿ ನಡೆದ ಶೋಕಾಚರಣೆಯನ್ನು ನೋಡಿ, “ಈಜಿಪ್ಟಿನವರಿಗೆ ಒದಗಿ ಇರುವ ಈ ಶೋಕ ಬಹು ವಿಶೇಷವಾದುದು!” ಎಂದರು. ಈ ಕಾರಣ ಜೋರ್ಡನ್ ನದಿಯಾಚೆ ಇರುವ ಆ ಸ್ಥಳಕ್ಕೆ ‘ಆಬೇಲ್ ಮಿಚ್ರಯಿಮ್’ ಎಂದು ಹೆಸರಾಯಿತು.
12 : ಯಕೋಬನ ಮಕ್ಕಳು ತಂದೆಯ ಅಪ್ಪಣೆಯಂತೆ
13 : ಅವನ ಶವವನ್ನು ಕಾನಾನ್ ನಾಡಿಗೆ ಹೊತ್ತುಕೊಂಡು ಹೋಗಿ ಮಕ್ಬೇಲ ಎಂಬ ಬಯಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲು ಇರುವ ಭೂಮಿ ಸಮೇತ, ಸ್ವಂತ ಸ್ವಶಾನಭೂಮಿಗಾಗಿ ಕೊಂಡುಕೊಂಡಿದ್ದನು.
14 : ತಂದೆಯನ್ನು ಸಮಾಧಿಮಾಡಿದ ಮೇಲೆ ಜೋಸೆಫನೂ ಅವನ ಅಣ್ಣತಮ್ಮಂದಿರೂ ಆ ಶವ ಸಂಸ್ಕಾರಕ್ಕಾಗಿ ಅವನ ಜೊತೆಯಲ್ಲಿ ಹೋಗಿದ್ದ ಎಲ್ಲರೂ ಈಜಿಪ್ಟಿಗೆ ಹಿಂದಿರುಗಿದರು.
15 :
ತಂದೆ ಸತ್ತ ಬಳಿಕ ಜೋಸೆಫನ ಅಣ್ಣತಮ್ಮಂದಿರು, “ಜೋಸೆಫನು ಬಹುಶಃ ನಮ್ಮನ್ನು ದ್ವೇಷಿಸಿಯಾನು! ನಾವು ಅವನಿಗೆ ಮಾಡಿದ ಎಲ್ಲ ಹಾನಿಗೆ ಪ್ರತಿಯಾಗಿ ಶಿಕ್ಷಿಸಿಯಾನು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
16 : ಆದುದರಿಂದ ಜೋಸೆಫನಿಗೆ ಹೀಗೆಂದು ಹೇಳಿಕಳಿಸಿದರು: “ನಿನ್ನ ತಂದೆ ಸಾಯುವುದಕ್ಕೆ ಮುಂಚೆ ನಮಗೆ ಅಪ್ಪಣೆಮಾಡಿದ್ದೇನೆಂದರೆ -
17 : ‘ನೀವು ಜೋಸೆಫನಿಗೆ - ನಿನ್ನ ಅಣ್ಣಂದಿರಾದ ನಾವು ನಿನಗೆ ಹಾನಿಮಾಡಿದ್ದೇನೋ ನಿಜ; ಆದರೂ ನಮ್ಮ ಅಪರಾಧವನ್ನು, ಪಾಪವನ್ನು ಕ್ಷಮಿಸು - ಎಂದು ಕೇಳಿಕೊಳ್ಳಬೇಕು.’ ಅವರು ಹೀಗೆ ವಿಧಿಸಿದ್ದರಿಂದ ನಾವು ಮಾಡಿದ ಅಪರಾಧವನ್ನು ಈಗ ನೀನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಿದ್ದೇವೆ.” ಈ ಮಾತುಗಳನ್ನು ಕೇಳಿ ಜೋಸೆಫನು ಕಣ್ಣೀರು ಸುರಿಸಿದನು.
18 : ಇದೂ ಅಲ್ಲದೆ, ಅಣ್ಣಂದಿರು ತಾವೇ ಬಂದು ಅವನಿಗೆ ಅಡ್ಡಬಿದ್ದರು. “ಇಗೋ ನಾವು ನಿನಗೆ ಗುಲಾಮರು,” ಎಂದು ಹೇಳಿದರು.
19 : ಆದರೆ ಜೋಸೆಫನು ಅವರಿಗೆ, “ಹೆದರಬೇಡಿ; ನಾನು ದೇವರ ಸ್ಥಾನದಲ್ಲಿ ಇಲ್ಲ;
20 : ನೀವೇನೋ ನನಗೆ ಹಾನಿಮಾಡಬೇಕೆಂದು ಎಣಿಸಿದಿರಿ. ಆದರೆ ದೇವರು ಒಳಿತಾಗಬೇಕೆಂದು ಸಂಕಲ್ಪಿಸಿದರು; ಇದರಿಂದ ಅನೇಕ ಜನರ ಪ್ರಾಣ ಉಳಿಯುವಂತೆ ಮಾಡಿದರು. ಇಂದಿಗೂ ಈ ಕಾರ್ಯ ನಡೆಯುತ್ತಿದೆ.
21 : ಆದುದರಿಂದ ನೀವು ಸ್ವಲ್ಪವೂ ಸಂಕೋಚಪಡಬೇಕಾಗಿಲ್ಲ. ನಾನು ನಿಮ್ಮನ್ನೂ ನಿಮಗೆ ಸೇರಿದೆ ಎಲ್ಲರನ್ನೂ ಪೋಷಿಸುತ್ತೇನೆ,” ಎಂದು ಹೇಳಿ ಅವರನ್ನು ಸಂತೈಸಿ, ಅವರ ಸಂಗಡ ಪ್ರೀತಿಯಿಂದ ಮಾತಾಡಿದನು.
22 :
ಜೋಸೆಫನೂ ಅವನ ತಂದೆಯ ಕುಟುಂಬದವರೂ ಈಜಿಪ್ಟಿನಲ್ಲಿ ವಾಸಮಾಡುತ್ತಾ ಬಂದರು. ಜೋಸೆಫನು ನೂರಹತ್ತು ವರ್ಷ ಬದುಕಿದ್ದನು;
23 : ಎಫ್ರಯಿಮನ ಮಕ್ಕಳ ಮೊಮ್ಮಕ್ಕಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಜೋಸೆಫನು ಅವರನ್ನೂ ತನ್ನ ಮಡಲಿಗೆ ಬರಮಾಡಿಕೊಂಡನು.
24 : ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, “ನನ್ನ ಮರಣಕಾಲವು ಸವಿೂಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಲು ಬರುವರು; ತಾವು ಅಬ್ರಹಾಮ್, ಇಸಾಕ್, ಯಕೋಬರಿಗೆ ಕೊಡುವುದಾಗಿ ವಾಗ್ದಾನಮಾಡಿರುವ ನಾಡಿಗೆ ನೀವು ಹೋಗಿ ಸೇರುವಂತೆ ಮಾಡುವರು,” ಎಂದು ಹೇಳಿದನು.
25 : ಇದೂ ಅಲ್ಲದೆ ಜೋಸೆಫನು ಆ ಇಸ್ರಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಕಾಪಾಡಲು ಬರುವರು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು,” ಎಂದು ಹೇಳಿ, “ಹಾಗೆಯೇ ಮಾಡುತ್ತೇನೆ,” ಎಂಬುದಾಗಿ ಅವರಿಂದ ಪ್ರಮಾಣ ಮಾಡಿಸಿದನು.
26 : ಜೋಸೆಫನು ಈಜಿಪ್ಟ್ ದೇಶದಲ್ಲಿ ತನ್ನ ನೂರಹತ್ತನೇ ವರ್ಷದಲ್ಲಿ ಸತ್ತನು. ಅವನ ಶವಕ್ಕೆ ಸುಗಂಧ ದ್ರವ್ಯಗಳನ್ನು ಲೇಪಿಸಿ, ಅದನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿದರು.