1 : ತನ್ನ ಮಕ್ಕಳನ್ನು ಕುರಿತು ಯಕೋಬನ ಭವಿಷ್ಯವಾಣಿ
ಯಕೋಬನು ತನ್ನ ಮಕ್ಕಳನ್ನು
ಕರೆಯಿಸಿ ಇಂತೆಂದನು:
ಕೂಡಿಬನ್ನಿ ನೀವೆಲ್ಲರು,
ನುಡಿವೆನು ನಿಮಗೆ ಮುಂದೆ
ಸಂಭವಿಸುವುದನ್ನು:
2 : ಯಕೋಬನ ಮಕ್ಕಳೇ, ಕೂಡಿಬಂದು
ಕೇಳಿ ನೀವೆಲ್ಲರು
ಆಲಿಸಿ ನಿಮ್ಮ ತಂದೆ ಇಸ್ರಯೇಲನ
ಮಾತನ್ನು:
3 : ರೂಬೇನನೇ, ನೀನೆನ್ನ ಜೇಷ್ಠಪುತ್ರನು
ನನ್ನ ಚೈತನ್ಯಸ್ವರೂಪನು,
ನನ್ನ ವೀರ್ಯದ ಪ್ರಥಮ ಫಲ ನೀನು
ಹಿರಿಮೆಯಲು, ಒಲುಮೆಯಲು
4 : ಆದರೆ ದಡವಿೂರಿದ ಪ್ರವಾಹ ನೀನು
ಹತ್ತಿದೆ, ಹೊಲೆಮಾಡಿದೆ, ತಂದೆಯ
ಹಾಸಿಗೆಯನು
ಪ್ರಮುಖಸ್ಥಾನದಲ್ಲಿರೆ ನನ್ನ
ಮಂಚವನ್ನೇರಿದೆ ನೀನು.
5 : ಅಣ್ಣತಮ್ಮಂದಿರು ಸಿಮೆಯೋನ್ -
ಲೇವಿಯರು
ಅವರ ಕತ್ತಿಗಳು ಹಿಂಸಾತ್ಮಕ
ಆಯುಧಗಳು.
6 : ನನ್ನ ಮನವೇ, ಒಳಗಾಗಬೇಡ
ಅವರ ದುರಾಲೋಚನೆಗೆ
ನನ್ನ ಪ್ರಾಣವೇ, ಸೇರಬೇಡ
ನೀನವರ ಗುಂಪಿಗೆ
ಕೊಂದರವರು ನರರನು
ಕೋಪೋದ್ರೇಕದಿಂದ
ಊನಪಡಿಸಿದರು ಎತ್ತುಗಳನ್ನು
ಮದದಿಂದ.
7 : ಅವರ ಕೋಪ ಭೀಕರ,
ಅದಕ್ಕಿರಲಿ ಧಿಕ್ಕಾರ !
ಅವರ ರೌದ್ರ - ಕ್ರೂರ,
ಅದಕ್ಕಿರಲಿ ಧಿಕ್ಕಾರ !
ವಿಭಾಗಿಸುವೆನವರನು ಯಕೋಬ
ಕುಲದಲಿ
ಚದರಿಸುವೆನವರನು ಇಸ್ರಯೇಲರಲಿ.
8 : ಯೆಹೂದನೇ, ವಂದಿಸುವರು
ನಿನ್ನನು ಸಹೋದರರು
ನಿನ್ನ ಕೈಯಲ್ಲಿರುವುದು
ಶತ್ರುಗಳ ಕುತ್ತಿಗೆಯು
ಎರಗುವರು ನಿನಗೆ ನಿನ್ನ
ಅಣ್ಣತಮ್ಮಂದಿರು.
9 : ನನ್ನ ಪುತ್ರ ಯೆಹೂದ,
ನೀ ಪ್ರಾಯದ ಸಿಂಹದಂತೆ
ಬೇಟೆಹಿಡಿದು ಬೆಟ್ಟ ಏರಿದ
ಕಂಠೀರವನಂತೆ
ಕಾಲು ಮಡಿಚಿ ಹೊಂಚು ಕೂತ
ಕೇಸರಿಯಂತೆ
ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು
ಯಾರಿಗಿದೆ?
10 : ರಾಜ್ಯಾಧಿಕಾರ ಪಡೆದವನು ಬರುವ ತನಕ
ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ
ತಪ್ಪದು ರಾಜದಂಡ ಯೆಹೂದನ
ಕೈಯಿಂದ
ಕದಲದು ಮುದ್ರೆಕೋಲು ಅವನ
ವಂಶದಿಂದ.
11 : ಕಟ್ಟುವನು ತನ್ನ ವಾಹನಪಶುವನು
ದ್ರಾಕ್ಷಾಲತೆಗೆ
ಬಿಗಿಯುವನು ತನ್ನ ಹೇಸರಕತ್ತೆಯನು
ರಾಜದ್ರಾಕ್ಷೆಗೆ
ಒಗೆಯುವನು ತನ್ನ ಬಟ್ಟೆಯನು
ದ್ರಾಕ್ಷಾರಸದಲ್ಲಿ
ತೊಳೆವನು ಮೇಲಂಗಿಯನು ಆ
ರಕ್ತಗೆಂಪು ರಸದಲಿ.
12 : ಅವನ ಕಣ್ಣು ಕೆಂಪಾಗಿರುವುವು
ದ್ರಾಕ್ಷಾರಸದ ಸಮೃದ್ಧಿಯಿಂದ
ಅವನ ಹಲ್ಲು ಬೆಳ್ಳಗಿರುವುವು
ಹಾಲಿನ ಸಮೃದ್ಧಿಯಿಂದ.
13 : ಜೆಬುಲೂನನು ವಾಸಿಸುವನು
ಸಮುದ್ರದ ಕರಾವಳಿಯಲ್ಲಿ
ಹಡಗುಗಳು ಬಂದು ಹೋಗುವ
ರೇವಂತೆ ಇರುವನಲ್ಲಿ
ಸಿದೋನಿನ ತನಕ ಹರಡಿರುವುದು
ಅವನ ಪ್ರಾಂತ್ಯದ ಗಡಿ.
14 : ಇಸ್ಸಾಕಾರನು ಕುರಿಹಟ್ಟಿಗಳ ನಡುವೆ
ಮಲಗಿರುವ ದೊಡ್ಡ ಕತ್ತೆ.
15 : ಸೂಕ್ತವೆಂದುಕೊಂಡು ತನ್ನ ನಾಡು
ವಿಶ್ರಾಂತಿಗೆ, ಸುಖಾನುಭವಕೆ
ಬಗ್ಗಿಸುವನು ಬೆನ್ನನು ಹೊರೆ
ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.
16 : ದಾನನು ತನ್ನ ಜನರನ್ನಾಳುವನು
ಇಸ್ರಯೇಲಿನಿತರ ಕುಲಗಳಂತೆ.
17 : ಇರುವನವನು ದಾರಿಯಲ್ಲಿರುವ
ವಿಷಸರ್ಪದಂತೆ,
ಕುದುರೆಯ ಹಿಮ್ಮಡಿ ಕಚ್ಚಿ
ರಾಹುತನನು ಕೆಡವುವ ಹಾವಿನಂತೆ.
18 : ಸರ್ವೇಶ್ವರಾ, ಎದುರುನೋಡುತ್ತಿರುವೆನು
ನಿನ್ನಿಂದ ಬರುವಾ ಸಂರಕ್ಷಣೆಯನು.
19 : ಗಾದನು ಗುರಿಯಾಗುವನು
ಸುಲಿಗೆಗಾರರಾಕ್ರಮಣಕೆ
ಓಡುವನಾ ದರೋಡೆಗಾರರನ್ನು
ಹಿಮ್ಮೆಟ್ಟಿಕೊಂಡೇ.
20 : ಆಶೇರನಗಿರುವುದು ಸಮೃದ್ಧಿಯಾಗಿ
ಧಾನ್ಯ
ದೊರಕುವುದವನಲಿ ರಾಜನಿಗೂ
ತಕ್ಕ ಭಕ್ಷ್ಯ.
21 : ನಪ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ
ಸಿಗುವುದವನಲಿ ಸುಮಧುರವಾದ
ಮಾತುಕತೆ.
22 : ಜೋಸೆಫನು ಫಲಭರಿತ ವೃಕ್ಷದಂತೆ
ಒರತೆ ಬಳಿಯಲೆ ಬೆಳೆದ
ದ್ರಾಕ್ಷಿಯಂತೆ
ಚಾಚಿದೆ ಅದರ ರೆಂಬೆ ಬೇಲಿಯಿಂದಾಚೆ.
23 : ಬಿಲ್ಲುಗಾರರೆಸಗಿದರು ಅವನ ಮೇಲೆ
ಆಕ್ರಮಣ
ಸುತ್ತುವರೆದರವನನು ಎಸೆದು
ಬಿರುಸುಬಾಣ.
24 : ಆದರೂ ಯಕೋಬಕುಲದ ಸರ್ವ
ಬಲಾಢ್ಯನ ಶಕ್ತಿಯಿಂದ
ಇಸ್ರಯೇಲನ ಪೊರೆಬಂಡೆ -
ಪರಿಪಾಲಕನ ನಾಮದಿಂದ
ನಿಂತಿತು ಸ್ಥಿರವಾಗಿ ಅವನ ಬಿಲ್ಲು
ಚುರುಕುಗೊಂಡಿತು ಅವನ
ಕೈಗಳ ಬಲ್ಬು.
25 : ಹೀಗಾಯಿತು ನಿನ್ನ ತಂದೆಯ ದೇವರಿಂದ
ಸಿಗಲಿ ನಿನಗಾತನ ಸಹಾಯ
ಹೀಗಾಯಿತು ಸರ್ವವಲ್ಲಭ ದೇವರಿಂದ.
ದೊರಕಲಿ ನಿನಗಾತನ ಆಶೀರ್ವಾದ.
ಮೇಲಣ ಆಕಾಶದಿಂದ,
ಕೆಳಗಣ ಸಾಗರ ಸೆಲೆಗಳಿಂದ
ಸ್ತನ್ಯದಿಂದ, ಗರ್ಭದಿಂದ,
ಆತ ನೀಡುವ ವರದಾನ.
26 : ಪ್ರಾಚೀನ ಪರ್ವತಗಳಿಗಿಂತ,
ಚಿರಸ್ಥಾಯಿ ಗುಡ್ಡಗಳಿಗಿಂತ
ಉತ್ತಮೋತ್ತಮ
ನಿನ್ನ ತಂದೆಯಿಂದ ಬರುವ ಆಶೀರ್ವಾದ.
ಇಳಿದು ಬರಲೀ ವರದಾನಗಳು
ಜೋಸೆಫನ ಮೇಲೆ
ಸೋದರರಿಂದ ಬೇರ್ಪಟ್ಟವನ
ಶಿರಸ್ಸಿನ ಮೇಲೆ.
27 : ಕಿತ್ತು ತಿನ್ನುವ ತೋಳ ಬೆನ್ಯಾವಿೂನನು
ಬೆಳಗ್ಗೆ ತಿನ್ನುವನು ಹಿಡಿದುಕೊಂಡದುದನು
ಸಂಜೆ ಹಂಚಿಕೊಳ್ಳುವನು
ಕೊಳ್ಳೆಹೊಡೆದುದನು.
28 : ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.
29 : ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸವಿೂಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.
30 : ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಬೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡು ಕೊಂಡನು.
31 : ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿ ಮಾಡಿದ್ದೇನೆ.
32 : ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.
33 : ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.