Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಜೋಸೆಫನು ಫರೋಹನ ಬಳಿಗೆ ಬಂದು, “ನನ್ನ ತಂದೆಯೂ ಸಹೋದರರೂ ದನಕುರಿಗಳನ್ನು ಹಾಗೂ ಎಲ್ಲ ಆಸ್ತಿಪಾಸ್ತಿಯನ್ನು ತೆಗೆದುಕೊಂಡು ಕಾನಾನ್ ನಾಡಿನಿಂದ ಗೋಷೆನ್ ಪ್ರಾಂತ್ಯಕ್ಕೆ ಬಂದಿದ್ದಾರೆ,” ಎಂದು ತಿಳಿಸಿದನು.
2 : ಅದು ಮಾತ್ರವಲ್ಲ, ತನ್ನ ಅಣ್ಣ ತಮ್ಮಂದಿರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು.
3 : ಫರೋಹನು, “ನಿಮ್ಮ ಕಸುಬು ಏನು?” ಎಂದು ಕೇಳಲು ಅವರು, “ನಿಮ್ಮ ಸೇವಕರಾದ ನಾವು ನಮ್ಮ ಪೂರ್ವಜರ ಪದ್ಧತಿಯ ಮೇರೆಗೆ ಕುರಿಕಾಯುವವರು;
4 : ಕಾನಾನ್ ನಾಡಿನಲ್ಲಿ ಬರವು ಘೋರವಾದ್ದರಿಂದ ನಿಮ್ಮ ಸೇವಕರ ದನಕುರಿಗಳಿಗೆ ಮೇವು ಸಿಕ್ಕಲಿಲ್ಲ. ಆದ್ದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ಸೇವಕರು ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.
5 : ಫರೋಹನು ಜೋಸೆಫನಿಗೆ, “ನಿನ್ನ ತಂದೆಯೂ ಅಣ್ಣತಮ್ಮಂದಿರು ನಿನ್ನ ಬಳಿಗೆ ಬಂದಿದ್ದಾರಲ್ಲವೆ?
6 : ಈಜಿಪ್ಟ್ ದೇಶವು ನಿನ್ನ ಮುಂದಿದೆ; ಅದರಲ್ಲಿನ ಉತ್ತಮ ಭಾಗವನ್ನು ನಿನ್ನ ತಂದೆಗೂ ಸಹೋದರರಿಗೂ ವಾಸಸ್ಥಾನವಾಗಿ ನೇಮಿಸು; ಗೋಷೆನ್ ಪ್ರಾಂತ್ಯದಲ್ಲಿ ಬೇಕಾದರೆ ವಾಸಮಾಡಲಿ; ಅವರಲ್ಲಿ ನುರಿತವರು ಯಾರಾದರು ಇದ್ದರೆ ಅವರನ್ನು ನನ್ನ ದನಕರುಗಳ ಮೇಲ್ವಿಚಾರಣೆಗೆ ನೇಮಿಸು,” ಎಂದನು.
7 : ಬಳಿಕ ಜೋಸೆಫನು ತನ್ನ ತಂದೆ ಯಕೋಬನನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು. ಯಕೋಬನು ಫರೋಹನನ್ನು ಆಶೀರ್ವದಿಸಿದನು.
8 : ಫರೋಹನು, “ನಿನಗೆ ಎಷ್ಟು ವರ್ಷ?” ಎಂದು ಕೇಳಿದನು.
9 : ಯಕೋಬನು, “ನನ್ನ ಬಾಳಿನ ಪಯಣದ ದಿನಗಳು ನೂರ ಮೂವತ್ತು ವರ್ಷಗಳಷ್ಟೇ. ಎಣಿಕೆಯಲ್ಲಿ ಅವು ಕಮ್ಮಿ; ಕಷ್ಟದುಃಖದಲ್ಲಿ ಜಾಸ್ತಿ; ನನ್ನ ಪೂರ್ವಜರು ಬಾಳಿದಷ್ಟು ವರ್ಷಗಳು ನನಗಾಗಿಲ್ಲ,” ಎಂದು ಹೇಳಿ
10 : ಫರೋಹನನ್ನು ಆಶೀರ್ವದಿಸಿ, ಅವನ ಸನ್ನಿಧಿಯಿಂದ ಹೊರಟುಹೋದನು.
11 : ಫರೋಹನ ಅಪ್ಪಣೆಯ ಮೇರೆಗೆ ಜೋಸೆಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಈಜಿಪ್ಟಿನಲ್ಲಿ ವಾಸಸ್ಥಾನವನ್ನು ನೇಮಿಸಿ, ಅದರಲ್ಲಿ ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸೊತ್ತನ್ನು ಕೊಟ್ಟನು.
12 : ತಂದೆಗೂ ಸಹೋದರರಿಗೂ ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರಕೊಟ್ಟು ಅವರನ್ನು ಸಂರಕ್ಷಿಸಿದನು.
13 : ಬರವು ಬಹು ಘೋರವಾಗಿತ್ತು. ದೇಶದ ಯಾವ ಭಾಗದಲ್ಲೂ ಆಹಾರ ಸಿಕ್ಕುತ್ತಿರಲಿಲ್ಲ. ಈ ನಿಮಿತ್ತ ಈಜಿಪ್ಟ್ ದೇಶವೂ ಕಾನಾನ್ ನಾಡೂ ಹಾಗೇ ಸೊರಗಿಹೋಗುತ್ತಿದ್ದುವು.
14 : ಜೋಸೆಫನು ಈಜಿಪ್ಟ್ ದೇಶದವರಿಗೂ ಕಾನಾನ್ ನಾಡಿಗರಿಗೂ ದವಸಧಾನ್ಯ ಮಾರಿ ಬಂದ ಹಣದಿಂದ ಫರೋಹನ ಬೊಕ್ಕಸವನ್ನು ತುಂಬಿದನು.
15 : ಈಜಿಪ್ಟಿನ ಹಾಗೂ ಕಾನಾನಿನ ಹಣವೆಲ್ಲ ಮುಗಿದುಹೋದಾಗ ಈಜಿಪ್ಟಿನವರು ಜೋಸೆಫನ ಬಳಿಗೆ ಬಂದು, “ನಾವೇಕೆ ನಿಮ್ಮ ಕಣ್ಮುಂದೆ ಸಾಯಬೇಕು? ನಮಗೆ ಆಹಾರ ಕೊಡಿ, ನಮ್ಮ ಹಣ ಮುಗಿದುಹೋಯಿತು,” ಎಂದರು.
16 : ಜೋಸೆಫನು, ‘ನಿಮ್ಮ ದನಕರುಗಳನ್ನು ತನ್ನಿ, ಹಣವಿಲ್ಲದಿದ್ದರೆ ದನಕರುಗಳನ್ನು ತೆಗೆದುಕೊಂಡು ಧಾನ್ಯ ಕೊಡಿಸುತ್ತೇನೆ,” ಎಂದನು.
17 : ಅವರು ತಮ್ಮ ಪಶುಪ್ರಾಣಿಗಳನ್ನು ಜೋಸೆಫನ ಬಳಿಗೆ ತಂದರು. ಅವನು ಅವರ ಕುದುರೆಗಳನ್ನೂ ದನಕುರಿಕತ್ತೆಗಳನ್ನೂ ತೆಗೆದುಕೊಂಡು ಅವರಿಗೆ ಧಾನ್ಯ ಕೊಡಿಸಿದನು. ಹೀಗೆ ಆ ವರ್ಷ ಅವರ ಪಶು ಪ್ರಾಣಿಗಳನ್ನು ಪಡೆದು, ಧಾನ್ಯಕೊಟ್ಟು ಅವರನ್ನು ಕಾಪಾಡಿದನು.
18 : ಆ ವರ್ಷ ಕಳೆದು ಮಾರನೆಯ ವರ್ಷದಲ್ಲಿ ಅವರು ಅವನ ಬಳಿಗೆ ಬಂದು, “ನಮ್ಮ ಹಣವೆಲ್ಲ ವೆಚ್ಚವಾಯಿತು. ನಮ್ಮ ಪಶುಪ್ರಾಣಿಗಳು ದಣಿಯ ವಶವಾದುವು; ಇನ್ನು ಉಳಿದಿರುವುದು ನಮ್ಮ ಭೂಮಿ ಮತ್ತು ದೇಹಗಳೇ ಹೊರತು ಬೇರೇನೂ ಇಲ್ಲ; ದಣಿಗೆ ಮುಚ್ಚುಮರೆಯಿಲ್ಲದೆ ತಿಳಿಸುತ್ತಿದ್ದೇವೆ.
19 : ನಾವೇಕೆ ನಿಮ್ಮ ಕಣ್ಣೆದುರಿಗೆ ಸಾಯಬೇಕು? ನಮ್ಮ ಭೂಮಿಯೇಕೆ ಹಾಳಾಗಬೇಕು? ನಮ್ಮನ್ನೂ ನಮ್ಮ ಭೂಮಿಯನ್ನೂ ತೆಗೆದುಕೊಂಡು ಧಾನ್ಯ ಕೊಡಿ, ನಾವು ನಮ್ಮ ಭೂಮಿಯನ್ನು ಫರೋಹನಿಗೆ ಕೊಟ್ಟುಬಿಟ್ಟು ಅವರಿಗೆ ಗುಲಾಮರಾಗುತ್ತೇವೆ. ನಾವು ಸಾಯದೆ ಬದುಕಬೇಕಾದರೆ ಮತ್ತು ಭೂಮಿ ಪಾಳುಬೀಳಬಾರದಿದ್ದರೆ ಧಾನ್ಯ ಕೊಡಿ,” ಎಂದು ಕೇಳಿದರು.
20 : ಜೋಸೆಫ್ ಈಜಿಪ್ಟ್ ದೇಶದ ಎಲ್ಲ ಸಾಗುವಳಿ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಬರದ ಘೋರತೆಯಿಂದಾಗಿ ಈಜಿಪ್ಟಿನವರು ತಮ್ಮ ತಮ್ಮ ಹೊಲಗದ್ದೆಗಳನ್ನು ಮಾರಿಬಿಟ್ಟರು. ಹೀಗೆ ಸಾಗುವಳಿ ಭೂಮಿಯೆಲ್ಲ ಫರೋಹನದಾಯಿತು.
21 : ಈಜಿಪ್ಟಿನ ಎಲ್ಲೆಯಿಂದ ಎಲ್ಲೆಯವರೆಗೆ ಜನರನ್ನು ಊಳಿಗಕ್ಕೆ ಈಡು ಮಾಡಿದನು.
22 : ಅರ್ಚಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಅವರಿಗೆ ಫರೋಹನಿಂದ ಭತ್ಯ ದೊರಕುತ್ತಿತ್ತು. ಆ ಭತ್ಯದಿಂದ ಜೀವನ ನಡೆಸುತ್ತಿದ್ದ ಆ ಅರ್ಚಕರು ತಮ್ಮ ಭೂಮಿಯನ್ನು ಮಾರಲಿಲ್ಲ.
23 : ಜೋಸೆಫನು ಪ್ರಜೆಗಳಿಗೆ, “ನಾನು ಈ ದಿನ ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆಂದು ತಿಳಿದುಕೊಳ್ಳಿ. ಇಗೋ, ಬಿತ್ತನೆಗಾಗಿ ನಿಮಗೆ ಬೀಜವನ್ನು ಕೊಟ್ಟಿದ್ದೇನೆ. ಭೂಮಿಯಲ್ಲಿ ಬಿತ್ತಿರಿ.
24 : ಕೊಯ್ಲು ಕಾಲದಲ್ಲಿ ಐದರಲ್ಲೊಂದು ಪಾಲು ಫರೋಹನಿಗೆ ಸಲ್ಲಬೇಕು, ಮಿಕ್ಕ ನಾಲ್ಕು ಪಾಲು ನಿಮ್ಮದು. ಅದನ್ನು ಬಿತ್ತನೆಗಾಗಿ ಮತ್ತು ನಿಮ್ಮ ಮನೆಯವರ ಹಾಗು ಕುಟುಂಬದವರ ಜೀವನಕ್ಕಾಗಿ ಇಟ್ಟುಕೊಳ್ಳಿ,” ಎಂದು ಹೇಳಿದನು.
25 : ಅದಕ್ಕೆ ಅವರು, ನಮ್ಮ ಪ್ರಾಣಗಳನ್ನು ಉಳಿಸಿದ್ದೀರಿ. ನಮ್ಮ ದಣಿಗಳಾದ ನಿಮ್ಮ ದಯೆ ನಮ್ಮ ಮೇಲಿರಲಿ; ನಾವು ಫರೋಹನಿಗೆ ಊಳಿಗದವರಾಗಿರುತ್ತೇವೆ,” ಎಂದರು.
26 : ಬೆಳೆಯಲ್ಲಿ ಐದನೆಯ ಒಂದು ಪಾಲು ಫರೋಹನಿಗೆ ಸಲ್ಲತಕ್ಕದ್ದು ಎಂಬ ಯೋಜನೆಯನ್ನು ಜೋಸೆಫನು ಈಜಿಪ್ಟ್ ದೇಶದ ಒಂದು ಶಾಸನವನ್ನಾಗಿ ಮಾಡಿದನು. ಈ ದಿನದವರೆಗೂ ಆ ಶಾಸನ ರೂಢಿಯಲ್ಲಿದೆ. ಅರ್ಚಕರ ಭೂಮಿ ಮಾತ್ರ ಫರೋಹನಿಗೆ ಸ್ವಾಧೀನವಾಗಲಿಲ್ಲ.
27 : ಇಸ್ರಯೇಲರು ಈಜಿಪ್ಟ್ ದೇಶಕ್ಕೆ ಸೇರಿದ ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡಿದರು. ಅಲ್ಲಿ ಅವರು ಆಸ್ತಿಪಾಸ್ತಿಯನ್ನು ಸಂಪಾದಿಸಿಕೊಂಡು ಬಹುಸಂತಾನವುಳ್ಳವರಾಗಿ ಅಭಿವೃದ್ಧಿಯಾದರು.
28 : ಯಕೋಬನು ಈಜಿಪ್ಟಿನಲ್ಲಿ ಹದಿನೇಳು ವರ್ಷ ಇದ್ದನು. ಅವನ ಜೀವಮಾನಕಾಲ ಒಟ್ಟಿಗೆ ನೂರನಲವತ್ತೇಳು ವರ್ಷಗಳು.
29 : ಯಕೋಬನಿಗೆ ಅಂತಿಮಕಾಲ ಹತ್ತಿರ ಆದಾಗ ಅವನು ತನ್ನ ಮಗ ಜೋಸೆಫನನ್ನು ಕರೆಸಿ, “ನನ್ನ ಮೇಲೆ ನಿನಗೆ ಪ್ರೀತಿಯಿದ್ದರೆ ನೀನು ನನ್ನ ಮಾತನ್ನು ಪ್ರೀತಿಯಿಂದಲೂ ಪ್ರಾಮಾಣಿಕತೆಯಿಂದಲೂ ನಡೆಸಿಕೊಡಬೇಕು. ಅದೇನೆಂದರೆ; ನನ್ನನ್ನು ಈಜಿಪ್ಟ್ ದೇಶದಲ್ಲಿ ಸಮಾಧಿಮಾಡಬಾರದು.
30 : ನಾನು ಮೃತರಾದ ಪಿತೃಗಳೊಂದಿಗೆ ಸೇರಿಕೊಂಡಾಗ, ನನ್ನ ಶವವನ್ನು ಈಜಿಪ್ಟ್ ದೇಶದಿಂದ ತೆಗೆದುಕೊಂಡು ಹೋಗಿ, ಆ ಪಿತೃಗಳ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಬೇಕು. ಹಾಗೆ ಮಾಡುತ್ತೇನೆಂದು ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಬೇಕು” ಎಂದು ಕೇಳಿಕೊಂಡನು. ಅವನು, “ನೀನು ಹೇಳಿದಂತೆಯೇ ಮಾಡುತ್ತೇನೆ,” ಎಂದು ಪ್ರಮಾಣ ಮಾಡಿದನು.
31 : ಆಗ ಯಕೋಬನು ಆ ಹಾಸಿಗೆಯ ತಲೆಭಾಗದ ಕಡೆ ಬಾಗಿ ಸ್ತೋತ್ರ ಮಾಡಿದನು.

· © 2017 kannadacatholicbible.org Privacy Policy