1 :
ಯಕೋಬನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು ಪ್ರಯಾಣ ಮಾಡಿ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ತಂದೆ ಇಸಾಕನ ದೇವರಿಗೆ ಬಲಿದಾನಗಳನ್ನು ಅರ್ಪಿಸಿದನು.
2 : ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, “ಯಕೋಬನೇ, ಯಕೋಬನೇ,” ಎಂದು ಕರೆಯಲು, ಅವನು, “ಇಗೋ, ಸಿದ್ಧನಿದ್ದೇನೆ,” ಎಂದನು
3 : ಆಗ ದೇವರು, “ನಾನೇ ದೇವರು, ನಿನ್ನ ತಂದೆ ಆರಾಧಿಸಿದ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು;
4 : ನಾನೇ ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಅಲ್ಲಿಂದ ನಿನ್ನನ್ನು ನಿಶ್ಚಯವಾಗಿ ವಾಪಸ್ಸು ಕರೆದುಕೊಂಡು ಬರುವೆನು. ನೀನು ಸಾಯುವ ಕಾಲದಲ್ಲಿ ಜೋಸೆಫನು ಹಾಜರಿದ್ದು ನಿನ್ನ ಕಣ್ಣುಗಳನ್ನು ಮುಚ್ಚುವನು,” ಎಂದರು.
5 : ಬಳಿಕ ಯಕೋಬನು ಬೇರ್ಷೆಬದಿಂದ ಪ್ರಯಾಣ ಮಾಡಿದನು. ಯಕೋಬನ ಮಕ್ಕಳು ತಮ್ಮ ತಂದೆಯಾದ ಯಕೋಬನನ್ನು ಮತ್ತು ತಮ್ಮ ಮಡದಿಮಕ್ಕಳನ್ನು ಫರೋಹನು ಕಳಿಸಿದ್ದ ಬಂಡಿಗಳಲ್ಲಿ ಕೂರಿಸಿಕೊಂಡು ಹೊರಟರು.
6 : ಕಾನಾನ್ ನಾಡಿನಲ್ಲಿ ತಾವು ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನೂ ದನಕುರಿಗಳನ್ನೂ ತೆಗೆದುಕೊಂಡು ಈಜಿಪ್ಟ್ ದೇಶವನ್ನು ತಲುಪಿದರು.
7 : ಹೀಗೆ ಯಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ ಮೊಮ್ಮಕ್ಕಳನ್ನೂ ತನ್ನ ಕುಟುಂಬದವರೆಲ್ಲರನ್ನೂ ತನ್ನ ಸಂಗಡವೇ ಕರೆದುಕೊಂಡು ಈಜಿಪ್ಟಿಗೆ ಬಂದನು.
8 : ಈಜಿಪ್ಟಿಗೆ ಬಂದು ಸೇರಿದ ಯಕೋಬನ ಮತ್ತು ಅವನ ಮಕ್ಕಳಾದ ಇಸ್ರಯೇಲರ ಹೆಸರುಗಳು ಇವು - ಯಕೋಬನ ಜೇಷ್ಠ ಪುತ್ರ ರೂಬೇನನು.
9 : ರೂಬೇನನ ಮಕ್ಕಳು - ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮಿ.
10 : ಸಿಮೆಯೋನನ ಮಕ್ಕಳು - ಯೆಮೂವೇಲ್, ಯಾವಿೂನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಲ್ಲಿ ಹುಟ್ಟಿದ ಸೌಲ.
11 : ಲೇವಿಯ ಮಕ್ಕಳು - ಗೆರ್ಷೋನ್, ಕೆಹಾತ್ ಮತ್ತು ಮೆರಾರಿ.
12 : ಯೆಹೂದನ ಮಕ್ಕಳು - ಏರ್, ಓನಾನ್, ಶೆಲಾಹ, ಪೆರೆಜ್ ಮತ್ತು ಜೆರಹ (ಇವರಲ್ಲಿ ಏರ್ ಹಾಗೂ ಓನಾನ್ ಕಾನಾನ್ ನಾಡಿನಲ್ಲೇ ಕಾಲವಾಗಿದ್ದರು). ಪೆರೆಜನ ಮಕ್ಕಳು - ಹೆಚ್ರೋನ್ ಮತ್ತು ಹಾಮೂಲ್.
13 : ಇಸ್ಸಾಕಾರನ ಮಕ್ಕಳು - ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್.
14 : ಜೆಬುಲೂನನ ಮಕ್ಕಳು - ಸೆರೆದ್, ಏಲೋನ್ ಮತ್ತು ಯಹ್ಲೇಲ್.
15 : ಇವರೆಲ್ಲರು ಲೇಯಳ ಸಂತತಿಯವರು. ಆಕೆ ಯಕೋಬನಿಗೆ ಇವರನ್ನಲ್ಲದೆ ದೀನಳೆಂಬ ಮಗಳನ್ನೂ ಮೆಸಪೊಟೇಮಿಯಾದಲ್ಲಿ ಪಡೆದಳು. ಆಕೆಯಿಂದಾದ ಗಂಡು ಹೆಣ್ಣು ಮಕ್ಕಳು ಒಟ್ಟು ಮೂವತ್ತು ಮಂದಿ.
16 : ಗಾದನ ಮಕ್ಕಳು - ಚಿಪ್ಯೋನ್, ಹಗ್ಗಿ, ಶೂನೀ, ಎಚ್ಬೋನ್, ಏರಿ, ಅರೋದಿ ಮತ್ತು ಅರೇಲಿ.
17 : ಅಶೇರನ ಮಕ್ಕಳು - ಇಮ್ನಾ, ಇಷ್ವಾ, ಇಷಿವೀ, ಬೆರೀಗಾ ಮತ್ತು ಇವರ ತಂಗಿ ಸೆರಹ; ಬೆರೀಗಾನ ಮಕ್ಕಳು - ಹೆಬೆರ್ ಮತ್ತು ಮಲ್ಕೀಯೇಲ್;
18 : ಇವರು ಲಾಬಾನನು ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟ ಜಿಲ್ಪಳ ಸಂತತಿಯವರು. ಈಕೆಯಿಂದ ಯಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ.
19 : ಯಕೋಬನ ಹೆಂಡತಿಯಾದ ರಾಖೇಲಳ ಮಕ್ಕಳು - ಜೋಸೆಫ್ ಮತ್ತು ಬೆನ್ಯಾವಿೂನ್.
20 : ಈಜಿಪ್ಟಿನಲ್ಲಿ ಜೋಸೆಫನಿಗೆ ಓನ್ ಪಟ್ಟಣದ ಆಚಾರ್ಯ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದ ಮನಸ್ಸೆ ಮತ್ತು ಎಫ್ರಯಿಮ್.
21 : ಬೆನ್ಯಾವಿೂನನ ಮಕ್ಕಳು - ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಏಹೀರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದಾ.
22 : ಈ ಹದಿನಾಲ್ಕು ಮಂದಿ ರಾಖೇಲಳ ಮೂಲಕ ಯಕೋಬನಿಂದಾದ ಸಂತತಿಯರವರು.
23 : ದಾನನ ಮಗ - ಹುಶೀಮ್.
24 : ನಪ್ತಾಲಿಯ ಮಕ್ಕಳು - ಯಹೇಲ್, ಗೂನಿ, ಯೇಚರ್ ಮತ್ತು ಶಿಲ್ಲೇಮ್;
25 : ಇವರು ಲಾಬಾನನು ತನ್ನ ಮಗಳು ರಾಖೇಲಳಿಗೆ ಕೊಟ್ಟ ದಾಸಿ ಬಿಲ್ಹಳ ಸಂತತಿಯವರು. ಈಕೆಯಿಂದ ಯಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಏಳು ಮಂದಿ.
26 : ಯಕೋಬನ ಸೊಸೆಯರಲ್ಲದೆ ಯಕೋಬನಿಂದಲೇ ಹುಟ್ಟಿ ಅವನೊಂದಿಗೆ ಈಜಿಪ್ಟ್ ದೇಶಕ್ಕೆ ಹೋದವರು ಒಟ್ಟು ಅರವತ್ತಾರು ಮಂದಿ.
27 : ಅವರಿಲ್ಲದೆ ಈಜಿಪ್ಟ್ ದೇಶದಲ್ಲಿ ಜೋಸೆಫನಿಗೆ ಹುಟ್ಟಿದವರು ಇಬ್ಬರು. ಈಜಿಪ್ಟ್ ದೇಶಕ್ಕೆ ಹೋದ ಯಕೋಬನ ಕುಟುಂಬದವರೆಲ್ಲರು ಒಟ್ಟಾಗಿ ಎಪ್ಪತ್ತು ಮಂದಿ
28 :
ಗೋಷೆನ್ ಪ್ರಾಂತ್ಯದಲ್ಲಿ ಜೋಸೆಫ್ ತನ್ನನ್ನು ಭೇಟಿಯಾಗಬೇಕೆಂದು ತಿಳಿಸಲು ಯಕೋಬನು ಯೆಹೂದನನ್ನು ಮುಂದಾಗಿ ಜೋಸೆಫನ ಬಳಿಗೆ ಕಳಿಸಿದನು. ಅವರೆಲ್ಲರು ಗೋಷೆನ್ ಪ್ರಾಂತ್ಯವನ್ನು ಬಂದು ಸೇರಿದರು.
29 : ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಭೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು.
30 : ಯಕೋಬನು ಜೋಸೆಫನಿಗೆ, “ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ದಾಯಿತು,” ಎಂದನು.
31 : ತರುವಾಯ ಜೋಸೆಪನು ತನ್ನ ಅಣ್ಣ ತಮ್ಮಂದಿರನ್ನೂ ತಂದೆಯ ಮನೆಯವರೆಲ್ಲರನ್ನೂ ನೋಡಿ, “ನಾನು ಫರೋಹನ ಸನ್ನಿಧಿಗೆ ಹೋಗಿ ನೀವು ಬಂದಿರುವ ಸಮಾಚಾರವನ್ನು ತಿಳಿಸಿ, ‘ಕಾನಾನ್ ನಾಡಿನಲ್ಲಿದ್ದ ನನ್ನ ಸಹೋದರರೂ ನನ್ನ ತಂದೆಯೂ, ಕುಟುಂಬದವರೂ ನನ್ನ ಬಳಿಗೆ ಬಂದಿದ್ದಾರೆ.
32 : ಅವರು ಕುರಿಕಾಯುವವರು, ಮಂದೆ ಮೇಯಿಸುವುದು ಅವರ ಕಸುಬು. ಅವರು ತಮ್ಮ ಕುರಿದನಗಳನ್ನೂ ತಮಗಿದ್ದ ಎಲ್ಲವನ್ನೂ ತಂದಿದ್ದಾರೆ,’ ಎಂದು ಹೇಳುತ್ತೇನೆ.
33 : ಫರೋಹನು ನಿಮ್ಮನ್ನು ಕರೆಸಿ, ‘ನಿಮ್ಮ ಕಸುಬು ಏನೆಂದು ಕೇಳಿದರೆ,
34 : ‘ಚಿಕ್ಕಂದಿನಿಂದ ಇಂದಿನವರೆಗೂ ನಿಮ್ಮ ಸೇವಕರಾದ ನಾವು, ನಮ್ಮ ಪೂರ್ವಜರ ಪದ್ಧತಿಯಂತೆ ಮಂದೆ ಮೇಯಿಸುವವರು,’ ಎಂದು ಹೇಳಿರಿ. ಆಗ ಗೋಷೆನ್ ಪ್ರಾಂತ್ಯವನ್ನು ನಿಮ್ಮ ನಿವಾಸಕ್ಕೆ ನೇಮಿಸುವನು - ಏಕೆಂದರೆ ಕುರಿ ಕಾಯುವವರೆಂದರೆ ಈಜಿಪ್ಟಿಯರಿಗೆ ಹಿಡಿಸದು,” ಎಂದು ಹೇಳಿದನು.