Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ತರುವಾಯ ಜೋಸೆಫನು ತನ್ನ ಗೃಹ ನಿರ್ವಾಹಕನನ್ನು ಕರೆದು, “ಆ ಜನರ ಗೋಣಿಚೀಲಗಳಲ್ಲಿ ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಿಯಲ್ಲಿ ಅವನವನ ಹಣದ ಗಂಟನ್ನಿಡು.
2 : ಕಿರಿಯವನ ಚೀಲದ ಬಾಯೊಳಗೆ ಅವನು ದವಸಕ್ಕೆ ತಂದ ಹಣವನ್ನಲ್ಲದೆ ನನ್ನ ಬೆಳ್ಳಿಯ ಪಾನಪಾತ್ರೆಯನ್ನೂ ಇಡು,” ಎಂದು ಅಪ್ಪಣೆಕೊಟ್ಟನು. ಗೃಹ ನಿರ್ವಾಹಕನು ಅದರಂತೆಯೇ ಮಾಡಿದನು.
3 : ಬೆಳಿಗ್ಗೆ, ಹೊತ್ತು ಮೂಡುವಾಗಲೆ, ಆ ಜನರು ಅಪ್ಪಣೆ ಪಡೆದು, ಕತ್ತೆಗಳನ್ನು ಹೊಡೆದುಕೊಂಡು ಹೊರಟು ಹೋದರು.
4 : ಅವರು ಪಟ್ಟಣಗಳನ್ನು ಬಿಟ್ಟು ಸ್ವಲ್ಪದೂರ ಹೋಗುವಷ್ಟರಲ್ಲಿ, ಜೋಸೆಫನು ತನ್ನ ಗೃಹನಿರ್ವಾಹಕನಿಗೆ, “ನೀನೆದ್ದು ಆ ಜನರನ್ನು ಹಿಂದಟ್ಟಿ ಹೋಗಿ ಹಿಡಿ. ಅವರಿಗೆ, ‘ನೀವು ಉಪಕಾರಕ್ಕೆ ಪ್ರತಿಯಾಗಿ ಏಕೆ ಅಪಕಾರ ಮಾಡಿದಿರಿ?
5 : ಆ ಪಾತ್ರೆಯಿಂದಲೆ ಅಲ್ಲವೆ ನನ್ನ ದಣಿ ಪಾನಮಾಡುವುದು? ಅದರಲ್ಲಿ ನೋಡೇ ಅಲ್ಲವೆ ಶಕುನ ಹೇಳುವುದು? ನೀವು ಮಾಡಿರುವುದು ಮಹಾ ನೀಚತನ,’ ಎನ್ನಬೇಕು,” ಎಂದು ತಿಳಿಸಿದನು.
6 : ಗೃಹನಿರ್ವಾಹಕನು ಅವರನ್ನು ಹಿಂದಟ್ಟಿ ಹೋಗಿ ಹಿಡಿದು ಆ ಮಾತುಗಳನ್ನೇ ಹೇಳಿದನು.
7 : ಅದಕ್ಕೆ ಅವರು, “ಅಯ್ಯಾ, ನೀವು ಇಂಥಾ ಮಾತುಗಳನ್ನು ಆಡಬಹುದೆ! ನಿಮ್ಮ ಸೇವಕರಾದ ನಾವು ಇಂಥ ಕೃತ್ಯವನ್ನು ಎಂದಿಗೂ ಮಾಡುವವರಲ್ಲ.
8 : ಮೊದಲು ನಮ್ಮ ಚೀಲಗಳ ಬಾಯಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ನಾಡಿನಿಂದ ವಾಪಸ್ಸು ತಂದು ನಿಮಗೆ ಕೊಟ್ಟೆವಲ್ಲವೆ? ಹೀಗಿರುವಾಗ ನಾವು ನಿಮ್ಮ ದಣಿಯ ಮನೆಯ ಒಳಗಿಂದ ಬೆಳ್ಳಿಬಂಗಾರ ಕದಿಯುವುದುಂಟೆ?
9 : ಆ ಪಾತ್ರೆ ನಿಮ್ಮ ಸೇವಕರಾದ ನಮ್ಮಲ್ಲಿ ಯಾರಾದರ ಬಳಿ ಸಿಕ್ಕಿದ್ದಾದರೆ ಅವನಿಗೆ ಮರಣ ದಂಡನೆ ಆಗಲಿ! ಅದುಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಊಳಿಗದವರಾಗುತ್ತೇವೆ,” ಎಂದರು.
10 : ಅದಕ್ಕೆ ಆ ಗೃಹನಿರ್ವಾಹಕ, “ಸರಿ, ನೀವು ಹೇಳಿದಂತೆಯೇ ಆಗಲಿ; ಆ ಪಾತ್ರೆ ಯಾವನ ಬಳಿ ಸಿಕ್ಕುತ್ತದೋ ಅವನು ನನಗೆ ಊಳಿಗದವನಾಗಬೇಕು; ಉಳಿದವರು ತಪ್ಪಿಲ್ಲದವರು,’ ಎಂದು ಹೇಳಿದ್ದೇ
11 : ಅವರಲ್ಲಿ ಪ್ರತಿಯೊಬ್ಬನೂ ತನ್ನತನ್ನ ಚೀಲವನ್ನು ನೆಲಕ್ಕಿಳಿಸಿ ಬಿಚ್ಚಿದರು.
12 : ಅವನು ಹಿರಿಯವನಿಂದ ಮೊದಲ್ಗೊಂಡು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆ ಬೆನ್ಯಾವಿೂನನ ಚೀಲದಲ್ಲಿ ಸಿಕ್ಕಿತು.
13 : ಆಗ ಅವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಿದರು; ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂದಿರುಗಿ ಬಂದರು.
14 : ಯೆಹೂದನು ಮತ್ತು ಅವನ ಅಣ್ಣ ತಮ್ಮಂದಿರು ಜೋಸೆಫನ ಮನೆಗೆ ಹಿಂದಿರುಗಿದಾಗ ಜೋಸೆಫನು ಇನ್ನೂ ಮನೆಯಲ್ಲೇ ಇದ್ದನು. ಅವರು ಅವನಿಗೆ ಅಡ್ಡಬಿದ್ದರು.
15 : ಅವನು ಅವರನ್ನು, “ನೀವು ಮಾಡಿರುವ ಕೃತ್ಯ ಎಂಥದ್ದು! ನನ್ನಂಥವನು ಕಣಿನೋಡಿ ಗುಟ್ಟನ್ನು ರಟ್ಟುಮಾಡಬಲ್ಲವ ನೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದು ಕೇಳಿದನು.
16 : ಅದಕ್ಕೆ ಯೆಹೂದನು, “ನಮ್ಮೊಡೆಯರಿಗೆ ನಾವು ಏನು ಹೇಳೋಣ? ಯಾವ ಉತ್ತರ ಕೊಡೋಣ? ನಾವು ನಿರ್ದೋಷಿಗಳೆಂದು ತೋರಿಸಲು, ಏನಾತಾನೆ ಮಾಡುವುದು? ನಿಮ್ಮ ಸೇವಕರಾದ ನಮ್ಮ ಪಾಪಕೃತ್ಯವನ್ನು ದೇವರೇ ಹೊರಪಡಿಸಿದ್ದಾರೆ. ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಗುಲಾಮರಾದೆವಲ್ಲವೆ?” ಎಂದನು.
17 : ಜೋಸೆಫನು, “ಹಾಗೆ ಎಂದಿಗೂ ಆಗಬಾರದು; ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರ ನನಗೆ ಗುಲಾಮನಾಗಬೇಕು; ನೀವಾದರೋ ಅಡ್ಡಿಯಲ್ಲದೆ ನಿಮ್ಮ ತಂದೆಯ ಬಳಿಗೆ ಹೋಗಬಹುದು,” ಎಂದನು.
18 : ಆಗ ಯೆಹೂದನು ಹತ್ತಿರಕ್ಕೆ ಬಂದು, “ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ: ನನ್ನ ಮೇಲೆ ಸಿಟ್ಟುಮಾಡಬೇಡಿ; ತಾವು ಫರೋಹನಿಗೆ ಸಮಾನರು.
19 : ಒಡೆಯರಾದ ತಾವು ಸೇವಕರಾದ ನಮ್ಮನ್ನು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ?’ ಎಂದು ಕೇಳಿದಿರಿ.
20 : ನಾವು ‘ತಂದೆ ಇದ್ದಾರೆ, ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,’ ಎಂದು ಹೇಳಿದೆವು.
21 : ಅದಕ್ಕೆ ತಾವು ಸೇವಕರಾದ ನಮಗೆ, ‘ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ,’ ಎಂದು ಅಪ್ಪಣೆಕೊಟ್ಟಿರಿ.
22 : ನಾವು, ‘ಆ ಹುಡುಗನು ತಂದೆಯನ್ನು ಬಿಟ್ಟು ಅಗಲುವುದಕ್ಕಾಗುವುದಿಲ್ಲ; ಅಗಲಿದರೆ ತಂದೆ ಸತ್ತು ಹೋದಾರು,’ ಎಂದು ಒಡೆಯರಾದ ತಮಗೆ ತಿಳಿಸಿದೆವು.
23 : ಅದಕ್ಕೆ ತಾವು, ‘ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡಕೂಡದು,’ ಎಂದು ಆಜ್ಞೆಕೊಟ್ಟಿರಿ.
24 : “ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು.
25 : ನಮ್ಮ ತಂದೆ, ‘ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡುಕೊಂಡು ಬನ್ನಿ’ ಎಂದಾಗ,
26 : ನಾವು, ‘ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ’ ಎಂದು ಹೇಳಿದೆವು.
27 : ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡು ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿದ ವಿಷಯ.
28 : ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟು ಹೋದ: ಅವನು ನಿಸ್ಸಂದೇಹವಾಗಿ ಕಾಡುಮೃಗದಿಂದ ಸೀಳಿಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ.
29 : ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನರೆಕೂದಲಿನ ಮುದುಕ ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ’ ಎಂದರು.
30 : “ತಮ್ಮ ಸೇವಕರಾದ ನನ್ನ ತಂದೆಯ ಬಳಿಗೆ ನಾನು ಸೇರಿದಾಗ, ಅವರ ಪ್ರಾಣದ ಪ್ರಾಣವಾಗಿರುವ ಈ ಹುಡುಗ ನನ್ನ ಸಂಗಡ ಇಲ್ಲದೆ ಹೋದರೆ, ಹುಡುಗ ಬರಲಿಲ್ಲವೆಂದು ಅವರು ಕೂಡಲೆ ಸಾಯುವರು.
31 : ಆಗ ತಮ್ಮ ಸೇವಕರಾದ ನಾವು, ತಮ್ಮ ಸೇವಕ ಹಾಗೂ ನರೆಕೂದಲಿನ ಮುದುಕ ಆದ ನಮ್ಮ ತಂದೆ ಸಂಕಟದಿಂದಲೆ ಸಮಾಧಿ ಸೇರಲು ಕಾರಣರಾಗುತ್ತೇವೆ.
32 : ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿದ್ದೇನೆ. ‘ನಾನು ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬಾರದಿದ್ದರೆ, ತಂದೆಗೆ ತಪ್ಪಿದವನ ದೋಷ ಸದಾಕಾಲ ನನ್ನದಾಗಲಿ’ ಎಂದು ಮಾತುಕೊಟ್ಟೆ.
33 : ಆದುದರಿಂದ ತಮ್ಮಲ್ಲಿ ನಾನು ಮಾಡುವ ಪ್ರಾರ್ಥನೆ ಇದು: ಈ ಹುಡುಗನಿಗೆ ಬದಲಾಗಿ, ತಮ್ಮ ಸೇವಕನಾದ ನನ್ನನ್ನು ತಮ್ಮ ಗುಲಾಮನನ್ನಾಗಿ ಇರಿಸಿಕೊಳ್ಳಿ; ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆ ಅನುಗ್ರಹಿಸಿ.
34 : ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ತಾನೆ ಹೋಗಲಾದೀತು? ತಂದೆಗೆ ಉಂಟಾಗುವ ಮನೋಯಾತನೆಯನ್ನು ನನ್ನಿಂದ ನೋಡಲಾಗದು.”

· © 2017 kannadacatholicbible.org Privacy Policy