Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಬರವು ಕಾನಾನಿನಲ್ಲಿ ಘೋರವಾಗಿತ್ತು.
2 : ಈಜಿಪ್ಟಿನಿಂದ ತಂದ ದವಸಧಾನ್ಯ ಮುಗಿದು ಹೋಗಿತ್ತು. ಯಕೋಬನು ತನ್ನ ಪುತ್ರರಿಗೆ, “ನೀವು ಪುನಃ ಹೋಗಿ ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿ,” ಎಂದನು.
3 : ಅದಕ್ಕೆ ಯೆಹೂದನು ಹೀಗೆಂದನು: “ಆ ಮನುಷ್ಯ ನಮಗೆ, ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದಹೊರತು ನನ್ನ ದರ್ಶನಕ್ಕೆ ಬರಕೂಡದು’ ಎಂದು ಕಡುಖಂಡಿತವಾಗಿ ಹೇಳಿಬಿಟ್ಟಿದ್ದಾನೆ.
4 : ನೀವು ನಮ್ಮ ತಮ್ಮನನ್ನು ಜೊತೆಯಲ್ಲಿ ಕಳಿಸಿದರೆ, ಹೋಗಿ ಧಾನ್ಯವನ್ನು ಕೊಂಡುಕೊಂಡು ಬರುತ್ತೇವೆ;
5 : ಕಳಿಸಿಕೊಡದಿದ್ದರೆ, ನಾವು ಹೋಗುವುದಿಲ್ಲ. ಆ ಮನುಷ್ಯ, ‘ನಿಮ್ಮ ತಮ್ಮ ನಿಮ್ಮ ಸಂಗಡ ಇಲ್ಲದಿದ್ದರೆ ಸಮ್ಮುಖಕ್ಕೆ ಬರಲೇಕೂಡದು’ ಎಂದಿದ್ದಾನೆ”.
6 : ಅದಕ್ಕೆ ಯಕೋಬನು, “ನಿಮಗೆ ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ ನನ್ನನ್ನೇಕೆ ಈ ಸಂಕಟಕ್ಕೆ ಗುರಿಮಾಡಿದಿರಿ?” ಎಂದನು
7 : ಆಗ ಅವರು, “ಆ ಮನುಷ್ಯ ನಿಮ್ಮ ವಿಷಯದಲ್ಲೂ ನಮ್ಮ ಮನೆಯವರ ವಿಷಯದಲ್ಲೂ ಸೂಕ್ಷ್ಮವಾಗಿ ವಿಚಾರಿಸಿದ: ನಿಮ್ಮ ತಂದೆ ಇನ್ನೂ ಜೀವದಿಂದ ಇದ್ದಾನೋ? ನಿಮಗೆ ತಮ್ಮನಿದ್ದಾನೋ? ಎಂದೆಲ್ಲ ಅವನೇ ಕೇಳಿದ. ಆ ಪ್ರಶ್ನೆಗಳಿಗೆ ನಾವು ತಕ್ಕ ಉತ್ತರ ಕೊಡಬೇಕಾಯಿತು. ಅಲ್ಲದೆ, ಅವನು ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ,’ ಎಂದು ಕೇಳುತ್ತಾನೆಂದು ತಿಳಿಯಲು ನಮಗೆ ಹೇಗೆ ಸಾಧ್ಯವಿತ್ತು?” ಎಂದರು.
8 : ಆಗ ಯೆಹೂದನು ತನ್ನ ತಂದೆ ಯಕೋಬನಿಗೆ “ನೀವು, ನಾವು ಮತ್ತು ನಮ್ಮ ಮಕ್ಕಳು, ಎಲ್ಲರೂ ಸಾಯದೆ ಉಳಿಯಬೇಕಾದರೆ ಆ ಹುಡುಗನನ್ನು ನನ್ನ ಜೊತೆ ಕಳಿಸಿಕೊಡಿ, ನಾವು ಇದೀಗಲೆ ಹೊರಡುತ್ತೇವೆ.
9 : ಅವನಿಗೆ ನಾನೇ ಹೊಣೆ; ಅವನ ವಿಷಯ ನನಗೆ ಬಿಡಿ. ನಾನು ಅವನನ್ನು ಮತ್ತೆ ಕರೆದುಕೊಂಡು ಬಂದು ನಿಮ್ಮ ಎದುರಿನಲ್ಲಿ ನಿಲ್ಲಿಸದೆ ಹೋದರೆ ಆ ದೋಷ ಸದಾಕಾಲ ನನ್ನ ಮೇಲೆ ಇರಲಿ.
10 : ನಾವು ತಡಮಾಡದೆ ಇದ್ದಿದ್ದರೆ, ಇಷ್ಟರೊಳಗೆ ಎರಡು ಸಾರಿ ಹೋಗಿ ಬರುತ್ತಿದ್ದೆವು,” ಎಂದು ಹೇಳಿದನು.
11 : ಇಷ್ಟಾದ ಮೇಲೆ ಅವರ ತಂದೆ ಯಕೋಬನು, “ನೀವು ಹೋಗಲೇ ಬೇಕಾದರೆ, ಒಂದು ಕೆಲಸಮಾಡಿ: ಈ ನಾಡಿನಲ್ಲಿ ದೊರಕುವ ಶ್ರೇಷ್ಟವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಹಾಕಿಕೊಂಡು ಹೋಗಿ, ಆ ಮನುಷ್ಯನಿಗೆ ಕಾಣಿಕೆಯಾಗಿ ಕೊಡಿ.
12 : ಅದೂ ಅಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿ; ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳಿಸಿದ ಹಣವನ್ನು ತೆಗೆದುಕೊಂಡು ಹೋಗಿ: ಬಹುಶಃ ಅವರಿಗೆ ತಿಳಿಯದೆ ಅದು ನಿಮ್ಮ ಕೈಗೆ ಬಂದಿರಬಹುದು.
13 : ನಿಮ್ಮ ತಮ್ಮನನ್ನೂ ಕರೆದುಕೊಂಡು ಮರಳಿ ಆ ಮನುಷ್ಯನ ಬಳಿಗೆ ಹೋಗಿ,
14 : ಅವನು ನಿಮ್ಮ ಮೇಲೆ ಕನಿಕರವಿಟ್ಟು ನಿಮ್ಮ ಅಣ್ಣನನ್ನೂ ಬೆನ್ಯಾವಿೂನನನ್ನೂ ನಿಮ್ಮೊಂದಿಗೆ ಕಳುಹಿಸಿಬಿಡುವಂತೆ ಸರ್ವವಲ್ಲಭರಾದ ದೇವರು ಅನುಗ್ರಹಿಸಲಿ; ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಬೇಕಾದರೆ ಹಾಗೆಯೇ ಆಗಲಿ!” ಎಂದನು.
15 : ಅವರು ಆ ಕಾಣಿಕೆ ವಸ್ತುಗಳನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನು ತೆಗೆದುಕೊಂಡು ಹಾಗೂ ಬೆನ್ಯಾವಿೂನನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು. ಈಜಿಪ್ಟನ್ನು ಸೇರಿ, ಜೋಸೆಫನ ಸಮ್ಮುಖದಲ್ಲಿ ನಿಂತುಕೊಂಡರು.
16 : ಬೆನ್ಯಾವಿೂನನು ಅವರ ಸಂಗಡ ಇರುವುದನ್ನು ಜೋಸೆಫನು ನೋಡಿದನು. ಕೂಡಲೆ ಗೃಹನಿರ್ವಾಹಕನನ್ನು ಕರೆದು, “ಈ ಜನರು ನನ್ನ ಸಂಗಡ ಈ ಮಧ್ಯಾಹ್ನ ಊಟ ಮಾಡಬೇಕಾಗಿ ಇದೆ; ಇವರನ್ನು ಮನೆಯೊಳಗೆ ಕರೆದುಕೊಂಡು ಹೋಗು. ಮಾಂಸದ ಅಡುಗೆ ಮಾಡಿ, ಎಲ್ಲವನ್ನು ಸಿದ್ಧ ಪಡಿಸು,” ಎಂದು ಅಪ್ಪಣೆ ಮಾಡಿದನು.
17 : ಅದೇ ಮೇರೆಗೆ ಗೃಹನಿರ್ವಾಹಕನು ಅವರನ್ನು ಜೋಸೆಫನ ಮನೆಗೆ ಕರೆದುಕೊಂಡು ಹೋದನು.
18 : ಅಲ್ಲಿಗೆ ಹೋಗುತ್ತಿದ್ದ ಅವರಿಗೆ ಭಯವಾಯಿತು. “ಹಿಂದೆ ನಾವು ಚೀಲಗಳಲ್ಲಿ ವಾಪಸ್ಸು ತೆಗೆದುಕೊಂಡು ಹೋದ ಹಣದ ಪ್ರಯುಕ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ; ದಿಢೀರನೆ ನಮ್ಮ ಮೇಲೆಬಿದ್ದು ನಮ್ಮನ್ನು ಗುಲಾಮರನ್ನಾಗಿಸಿಕೊಳ್ಳಬಹುದು. ನಮ್ಮ ಕತ್ತೆಗಳನ್ನು ಹಿಡಿದುಕೊಳ್ಳಬಹುದು,” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
19 : ಮನೆಯ ಬಾಗಿಲ ಬಳಿ ಗೃಹನಿರ್ವಾಹಕನಿಗೆ,
21 : ನಾವು ಹೊರಟು ಹೋದ ನಂತರ ಚಾವಡಿಯೊಂದರಲ್ಲಿ ಇಳಿದುಕೊಂಡೆವು. ಅಲ್ಲಿ ನಮ್ಮ ಚೀಲಗಳನ್ನು ಬಿಚ್ಚಿನೋಡಿದಾಗ ಪ್ರತಿ ಒಬ್ಬನ ಹಣ, ತೂಕ ಕಿಂಚಿತ್ತೂ ಕಡಿಮೆಯಿಲ್ಲದೆ, ಅವನವನ ಚೀಲದಲ್ಲೇ ಇತ್ತು. ಅದನ್ನು ವಾಪಸ್ಸು ತಂದಿದ್ದೇವೆ.
22 : ದವಸವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣ ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ತಿಳಿಯದು,” ಎಂದು ಹೇಳಿದರು.
23 : ಅದಕ್ಕೆ ಆ ಗೃಹನಿರ್ವಾಹಕ, “ಸಮಾಧಾನದಿಂದಿರಿ, ಹೆದರಬೇಡಿ. ನಿಮ್ಮ ತಂದೆಗೂ ನಿಮಗೂ ದೇವರಾದವರು ನಿಮ್ಮ ಚೀಲಗಳಲ್ಲಿಯೇ ನಿಧಿನಿಕ್ಷೇಪ ದೊರಕುವಂತೆ ಅನುಗ್ರಹಿಸಿದ್ದಾರೆ’ ನೀವು ಕೊಟ್ಟ ಹಣ ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.
24 : ಆ ಮೇಲೆ ಗೃಹನಿರ್ವಾಹಕನು ಅವರೆಲ್ಲರನ್ನು ಜೋಸೆಫನ ಮನೆಯೊಳಗೆ ಕರೆತಂದು ಕಾಲು ತೊಳೆದುಕೊಳ್ಳುವುದಕ್ಕೆ ನೀರನ್ನು ಕೊಡಿಸಿದನು. ಅವರ ಕತ್ತೆಗಳಿಗೆ ಮೇವು ಹಾಕಿಸಿದನು.
25 : ತಾವು ಅಲ್ಲೇ ಊಟಮಾಡಬೇಕೆಂಬ ಸಂಗತಿ ಅವರಿಗೆ ತಿಳಿಯಿತು. ಆದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಸಿದ್ಧವಾಗಿ ಇಟ್ಟುಕೊಂಡರು. ಜೋಸೆಫನು ಬರುವ ತನಕ, ಮಧ್ಯಾಹ್ನದವರೆಗೆ ಕಾದುಕೊಂಡಿದ್ದರು.
26 : ಜೋಸೆಫನು ಮನೆಗೆ ಬಂದಾಗ ಅವರು ಅವನಿಗೆ ಕಾಣಿಕೆಯನ್ನು ತಂದುಕೊಟ್ಟು, ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
27 : ಅವನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಬಳಿಕ, “ನೀವು ಹೇಳಿದ ಮುಪ್ಪುವಯಸ್ಸಿನ ನಿಮ್ಮ ತಂದೆ ಕ್ಷೇಮವೊ? ಇನ್ನೂ ಬದುಕಿದ್ದಾನೋ?” ಎಂದು ಕೇಳಲು
28 : ಅವರು ಮತ್ತೆ ನೆಲದವರೆಗೆ ಬಾಗಿ ನಮಸ್ಕಾರ ಮಾಡಿ, “ನಿಮ್ಮ ಸೇವಕರಾದ ನಮ್ಮ ತಂದೆ ಇಂದಿಗೂ ಕ್ಷೇಮದಿಂದ ಇದ್ದಾರೆ,” ಎಂದರು.
29 : ಅನಂತರ ಕಣ್ಣೆತ್ತಿ, ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾವಿೂನನನ್ನು ನೋಡಿದನು. “ನೀವು ಹೇಳಿದ ನಿಮ್ಮ ಕಿರಿಯ ತಮ್ಮ ಇವನೇನೋ?” ಎಂದು ಕೇಳಿ ಅವನಿಗೆ, “ಮಗು, ದೇವರ ಪ್ರೀತಿ ನಿನ್ನ ಮೇಲಿರಲಿ!” ಎಂದು ಹೇಳಿದನು.
30 : ಜೋಸೆಫನಿಗೆ ತಮ್ಮನನ್ನು ನೋಡಿದ ಮೇಲೆ ಕರುಳು ಕರಗಿತು. ಕಣ್ಣೀರನ್ನು ತಡೆಯಲಾಗದೆ ಒಳ ಅರಮನೆಗೆ ತ್ವರೆಯಾಗಿ ಹೋಗಿ ಅಲ್ಲಿ ಅತ್ತನು.
31 : ಆ ಮೇಲೆ ಮುಖವನ್ನು ತೊಳೆದುಕೊಂಡು, ಹೊರಗೆ ಬಂದು, ಮನಸ್ಸನ್ನು ಬಿಗಿ ಹಿಡಿದು, “ಊಟಕ್ಕೆ ಬಡಿಸಿರಿ”, ಎಂದು ಅಪ್ಪಣೆ ಕೊಟ್ಟನು.
32 : ಪರಿಚಾರಕರು ಅವನಿಗೆ ಬೇರೆ, ಅವನ ಅಣ್ಣ ತಮ್ಮಂದಿರಿಗೇ ಬೇರೆ, ಅವನ ಸಂಗಡವಿದ್ದ ಈಜಿಪ್ಟಿನವರಿಗೇ ಬೇರೆ, ಹೀಗೆ ಬೇರೆಬೇರೆಯಾಗಿ ಊಟಕ್ಕೆ ಬಡಿಸಿದರು. ಈಜಿಪ್ಟಿನವರು ಹಿಬ್ರಿಯರ ಸಹಪಂಕ್ತಿಯಲ್ಲಿ ಊಟಮಾಡುವುದಿಲ್ಲ; ಅದು ಅವರಿಗೆ ಅಸಹ್ಯ.
33 : ಜೋಸೆಫನು ತನ್ನ ಅಣ್ಣ ತಮ್ಮಂದಿರನ್ನು, ಹಿರಿಯವನು ಮೊದಲ್ಗೊಂಡು ಕಿರಿಯವನವರೆಗೂ, ಅವರವರ ವಯಸ್ಸಿನ ಪ್ರಕಾರ ಕುಳ್ಳಿರಿಸಿದ್ದನು. ಇದನ್ನು ಗಮನಿಸಿದ ಅವರು ಒಬ್ಬರನ್ನೊಬ್ಬರು ನೋಡುತ್ತಾ ಆಶ್ಚರ್ಯಪಟ್ಟರು.
34 : ಜೋಸೆಫನು ತನ್ನ ಮುಂದೆ ಬಡಿಸಿದ್ದ ಪದಾರ್ಥಗಳಲ್ಲಿ ಅವರಿಗೆ ಭಾಗಗಳನ್ನು ಕಳಿಸಿದನು. ಬೆನ್ಯಾವಿೂನನಿಗೆ ಬಂದ ಭಾಗವಾದರೋ ಮಿಕ್ಕವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಯಥೇಚ್ಛವಾಗಿ ಪಾನಮಾಡಿ ಜೋಸೆಫನ ಸಂಗಡ ಸಂಭ್ರಮದಿಂದಿದ್ದರು.

· © 2017 kannadacatholicbible.org Privacy Policy