1 :
ಇತ್ತ ಯೆಹೂದನು ತನ್ನ ಅಣ್ಣ ತಮ್ಮಂದಿರನ್ನು ಬಿಟ್ಟು ಅದುಲ್ಲಾಮ್ ಊರಿನವನಾದ ಹೀರಾ ಎಂಬವನ ಬಳಿ ವಾಸಮಾಡಲು ಹೋದನು.
2 : ಅಲ್ಲಿ ಕಾನಾನ್ಯಳಾದ ಒಬ್ಬ ಮಹಿಳೆಯನ್ನು ಕಂಡು ಮದುವೆಯಾದನು. ಅವಳ ತಂದೆಯ ಹೆಸರು ಶೂಗ.
3 : ಆಕೆ ಯೆಹೂದನಿಗೆ ಒಂದು ಗಂಡುಮಗುವನ್ನು ಹೆತ್ತಳು. ಅದಕ್ಕೆ ‘ಏರ’ ಎಂದು ಹೆಸರಿಡಲಾಯಿತು.
4 : ಆಕೆ ಗರ್ಭ ಧರಿಸಿ ಎರಡನೆಯ ಗಂಡುಮಗುವನ್ನು ಹೆರಲು ಅದಕ್ಕೆ ‘ಓನಾನ’ ಎಂದು ಹೆಸರಿಡಲಾಯಿತು
5 : ಮತ್ತೊಮ್ಮೆ ಆಕೆ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದಕ್ಕೆ ‘ಶೇಲಹ’ ಎಂದು ಹೆಸರಿಟ್ಟಳು. ಆಕೆ ಈ ಮಗುವನ್ನು ಹೆರುವಾಗ ಯೆಹೂದನು ಕೆಜೀಬ್ ಊರಿನಲ್ಲಿದ್ದನು.
6 : ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ‘ತಾಮಾರ್’ ಎಂಬ ಹೆಣ್ಣನ್ನು ತಂದು ಮದುವೆ ಮಾಡಿದನು.
7 : ಆದರೆ ಯೆಹೂದನ ಈ ಹಿರಿಯ ಮಗ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ಕೆಟ್ಟವನಾಗಿದ್ದನು. ಆದ್ದರಿಂದ ಸರ್ವೇಶ್ವರ ಅವನನ್ನು ಸಾವಿಗೀಡುಮಾಡಿದರು.
8 : ಬಳಿಕ ಯೆಹೂದನು ಓನಾನನಿಗೆ, “ನೀನು ನಿನ್ನ ಅತ್ತಿಗೆಯನ್ನು ಮದುವೆ ಮಾಡಿಕೊಂಡು ಮೈದುನ ಧರ್ಮಕ್ಕನುಸಾರ ನಿನ್ನ ಅಣ್ಣನಿಗೆ ಸಂತತಿಯನ್ನು ಹುಟ್ಟಿಸು,” ಎಂದನು.
9 : ಆದರೆ ಓನಾನನು, ಹೀಗೆ ಆಗುವ ಸಂತಾನ ತನ್ನದಾಗುವುದಿಲ್ಲವೆಂದು ತಿಳಿದುಕೊಂಡನು. ಅಣ್ಣನಿಗೆ ಸಂತತಿ ಹುಟ್ಟಿಸಲು ಅವನು ಒಪ್ಪಲಿಲ್ಲ. ತನ್ನ ಅತ್ತಿಗೆಯಲ್ಲಿ ಸಂಭೋಗ ಮಾಡುವಾಗಲೆಲ್ಲ ತನ್ನ ವೀರ್ಯವನ್ನು ಹಾಸಿಗೆಪಾಲು ಮಾಡುತ್ತಿದ್ದನು.
10 : ಈ ನಡತೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ಕೆಟ್ಟದಾಗಿತ್ತು. ಆದ್ದರಿಂದ ಸರ್ವೇಶ್ವರ ಅವನನ್ನೂ ಸಾವಿಗೀಡುಮಾಡಿದರು.
11 : ಅನಂತರ ಯೆಹೂದನು, ಬಹುಶಃ ಶೇಲಹನು ಕೂಡ ತನ್ನ ಅಣ್ಣಂದಿರಂತೆ ಸತ್ತಾನೆಂದು ಆಲೋಚಿಸಿ, ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರುಮನೆಯಲ್ಲಿರು,” ಎಂದು ನೆವಹೇಳಿದನು. ಅಂತೆಯೇ ಅವಳು ತೌರುಮನೆಗೆ ಹೋಗಿ ಅಲ್ಲೇ ವಾಸಮಾಡಿದಳು.
12 : ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಹೋದಳು. ದುಃಖಶಮನವಾದ ಮೇಲೆ ಯೆಹೂದನು, ತನ್ನ ಕುರಿಗಳಿಗೆ ಉಣ್ಣೇ ಕತ್ತರಿಸುವವರಿದ್ದ ತಿಮ್ನಾ ಊರಿಗೆ ಹೋದನು. ಅದುಲ್ಲಾಮ್ಯದ ತನ್ನ ಗೆಳೆಯ ಹೀರಾ ಅವನ ಜೊತೆಯಲ್ಲಿ ಹೋದನು.
13 : ಮಾವನು ತನ್ನ ಕುರಿಗಳ ಉಣ್ಣೇ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೊರಟಿದ್ದಾರೆಂಬ ಸಮಾಚಾರ ತಾಮಾರಳಿಗೆ ಮುಟ್ಟಿತು.
14 : ಆಗ ಆಕೆ, ‘ಶೇಲಹನು ಪ್ರಾಯಸ್ಥನಾಗಿದ್ದರು ನನ್ನನ್ನು ಅವನಿಗೆ ಮದುವೆ ಮಾಡಿಕೊಡಲಿಲ್ಲವಲ್ಲಾ’ ಎಂದುಕೊಂಡು ತನ್ನ ವಿಧವೆವಸ್ತ್ರಗಳನ್ನು ತೆಗೆದಿಟ್ಟಳು. ಮುಸುಕನ್ನು ಹಾಕಿಕೊಂಡು ತನ್ನನ್ನೇ ಮರೆಸಿಕೊಂಡಳು. ತಿಮ್ನಾ ಊರಿನ ದಾರಿಯಲ್ಲಿ ಇರುವ ಏನಯಿಮ್ ಊರಿನ ಬಾಗಿಲ ಬಳಿಯಲ್ಲೆ ಕುಳಿತುಕೊಂಡಳು.
15 : ಯೆಹೂದನು ಆಕೆಯನ್ನು ನೋಡಿದಾಗ ಆಕೆಯ ಮುಖದಮೇಲೆ ಮುಸುಕು ಇತ್ತು; ಸೊಸೆ ಎಂದು ತಿಳಿಯದೆ ಹೋಯಿತು.
16 : ಆಕೆ ವೇಶ್ಯೆ ಎಂದೇ ಭಾವಿಸಿ, ದಾರಿಯಿಂದ ಓರೆಯಾಗಿ, ಆಕೆಯ ಬಳಿಗೆ ಹೋಗಿ, “ಸಂಭೋಗಕ್ಕೆ ಬರುತ್ತೀಯಾ?” ಎಂದು ಕರೆದನು. “ಬರಬೇಕಾದರೆ ಏನು ಕೊಡುತ್ತೀಯಾ?” ಎಂದಳು ಆಕೆ.
17 : “ಹಿಂಡಿನಿಂದ ಒಂದು ಹೋತಮರಿಯನ್ನು ಕಳಿಸುತ್ತೇನೆ,” ಎಂದ ಆತ. ಆಗ ಆಕೆ, “ಅದನ್ನು ಕಳಿಸುವ ತನಕ ನನ್ನಲ್ಲಿ ಏನಾದರು ಒತ್ತೆಯಿಡಬೇಕು,” ಎಂದಳು.
18 : “ಏನು ಒತ್ತೆಯಿಡಬೇಕು?” ಎಂದು ಅವನು ಕೇಳಲು ಆಕೆ, “ನಿನ್ನ ಮುದ್ರೆ ಉಂಗುರ, ಅದರ ದಾರ ಮತ್ತು ನಿನ್ನ ಕೈಗೋಲು, ಈ ಮೂರನ್ನೂ ಇಡು,” ಎಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಭೋಗಿಸಿದನು. ಆಕೆ ಅವನಿಗೆ ಗರ್ಭವತಿ ಆದಳು.
19 : ಮನೆಗೆ ಬಂದಮೇಲೆ ತಾನು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿಟ್ಟು ವಿಧವೆಯ ವಸ್ತ್ರಗಳನ್ನು ಮತ್ತೆ ಉಟ್ಟುಕೊಂಡಳು.
20 : ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನಿಂದ ಬಿಡಿಸಿಕೊಳ್ಳುವ ಸಲುವಾಗಿ ತನ್ನ ಗೆಳೆಯ ಆ ಅದುಲ್ಲಾಮ್ಯನ ಸಂಗಡ ಹೋತಮರಿಯನ್ನು ಕಳಿಸಿದನು. ಆಕೆ ಅವನಿಗೆ ಸಿಕ್ಕಲಿಲ್ಲ.
21 : ಅವನು ಅವಳ ಊರಿನವರನ್ನು, “ಏನಯಿಮ್ ಬಳಿ ದಾರಿಪಕ್ಕದಲ್ಲಿ ಕುಳಿತಿದ್ದ ವೇಶ್ಯೆ ಎಲ್ಲಿ?” ಎಂದು ವಿಚಾರಿಸಿದನು. ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ,” ಎಂದು ಉತ್ತರಕೊಟ್ಟರು.
22 : ಅವನು ಯೆಹೂದನ ಬಳಿಗೆ ಹಿಂದಿರುಗಿ ಬಂದು, “ನಾನು ಅವಳನ್ನು ಕಾಣಲಿಲ್ಲ; ವಿಚಾರಿಸಿದಾಗ ಆ ಊರಿನವರು ಇಲ್ಲಿ ಯಾವ ವೇಶ್ಯೆಯೂ ಇಲ್ಲವೆಂದರು” ಎಂದು ವರದಿಮಾಡಿದನು.
23 : ಅದಕ್ಕೆ ಯೆಹೂದನು, “ಇನ್ನು ನಾವು ಪರಿಹಾಸ್ಯಕ್ಕೆ ಗುರಿಯಾದೇವು; ನಾನಿಟ್ಟ ಒತ್ತೆಯನ್ನು ಅವಳೇ ಇಟ್ಟುಕೊಳ್ಳಲಿ; ನಾನಂತೂ ಹೋತಮರಿಯನ್ನು ಕಳಿಸಿದ್ದಾಯಿತು; ನಿನ್ನಿಂದಲು ಅವಳನ್ನು ಕಂಡುಹಿಡಿಯಲಾಗಲಿಲ್ಲ,” ಎಂದು ಸುಮ್ಮನಾದನು.
24 : ಸುಮಾರು ಮೂರು ತಿಂಗಳಾದ ಬಳಿಕ, ಯೆಹೂದನಿಗೆ ತನ್ನ ಸೊಸೆ ತಾಮಾರಳು ವ್ಯಭಿಚಾರದಿಂದ ಗರ್ಭವತಿಯಾಗಿದ್ದಾಳೆಂಬ ಸಮಾಚಾರ ಬಂದಿತು. ಅವನು, “ಅವಳನ್ನು ಎಳೆದು ತನ್ನಿ; ಸುಟ್ಟುಹಾಕಬೇಕು,” ಎಂದನು.
25 : ಅಂತೆಯೇ ಎಳೆದು ತರುವಾಗ ಆಕೆ ತನ್ನ ಮಾವನಿಗೆ ಒತ್ತೆಯ ವಸ್ತುಗಳನ್ನು ಕಳುಹಿಸುತ್ತಾ, “ಇವು ಯಾವನವೊ ಅವನಿಂದಲೇ ನಾನು ಗರ್ಭಿಣಿಯಾದುದು; ಮುದ್ರೆಯುಂಗುರ, ಅದರ ದಾರ ಮತ್ತು ಕೈಗೋಲು ಇವುಗಳನ್ನು ಗುರುತಿಸಿ ತಿಳಿದುಕೊಳ್ಳಬಹುದು,” ಎಂದು ಹೇಳಿಕಳಿಸಿದಳು.
26 : ಯೆಹೂದನು ಅವುಗಳ ಗುರುತುಹಚ್ಚಿದನು. “ನಾನು ನನ್ನ ಮಗ ಶೇಲಹನನ್ನು ಆಕೆಗೆ ಮದುವೆ ಮಾಡದೆಹೋದೆ. ಈ ಕಾರಣ ನನಗಿಂತ ಆಕೆಯೇ ನೀತಿವಂತಳು,” ಎಂದುಕೊಂಡನು. ಇದಾದ ಬಳಿಕ ಅವನು ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.
27 : ತಾಮಾರಳಿಗೆ ಹೆರಿಗೆ ಕಾಲ ಬಂದಾಗ ಆಕೆಯ ಗರ್ಭದಲ್ಲಿ ಅವಳಿಜವಳಿ ಮಕ್ಕಳಿರುವುದು ಕಂಡುಬಂದಿತು.
28 : ಆಕೆ ಹೆರುವಾಗ ಒಂದು ಮಗು ಕೈಚಾಚಿತು. ಸೂಲಗಿತ್ತಿ, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು.
29 : ಆದರೆ ಅದು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದರೊಡನೆ ಇದ್ದ ಇನ್ನೊಂದು ಕೂಸು ಹೊರಗೆ ಬಂದಿತು. ಇದನ್ನು ಕಂಡ ಸೂಲಗಿತ್ತಿ, “ನೀನು ಕಿತ್ತುಕೊಂಡು ಬಂದಿರುತ್ತೀಯಲ್ಲಾ” ಎಂದಳು. ಈ ಕಾರಣ ಆ ಮಗುವಿಗೆ ‘ಪೆರೆಚ್’ ಎಂದು ಹೆಸರಾಯಿತು.
30 : ತರುವಾಯ ಕೈಗೆ ಕೆಂಪುನೂಲು ಕಟ್ಟಿಸಿಕೊಂಡ ಕೂಸು ಹುಟ್ಟಿತು. ಅದಕ್ಕೆ ‘ಜೆರಹ’ ಎಂದು ಹೆಸರಾಯಿತು.