1 :
ಯಕೋಬನು ತನ್ನ ತಂದೆ ಪ್ರವಾಸಿ ಆಗಿದ್ದ ಕಾನಾನ್ ನಾಡಿನಲ್ಲಿ ವಾಸ ಆಗಿದ್ದನು. ಅವನ ಮಕ್ಕಳ ಚರಿತ್ರೆ ಇದು:
2 : ಆಗ ಜೋಸೆಫನಿಗೆ ಹದಿನೇಳು ವರ್ಷ, ಇನ್ನೂ ಯುವಕ. ತನ್ನ ಅಣ್ಣಂದಿರ ಜೊತೆಯಲ್ಲಿ, ಅಂದರೆ ತನ್ನ ಮಲತಾಯಿಯರಾದ ಬಿಲ್ಹಾ, ಜಿಲ್ಪ ಎಂಬುವರ ಮಕ್ಕಳ ಜೊತೆಯಲ್ಲಿ, ಆಡುಕುರಿಗಳನ್ನು ಮೇಯಿಸುತ್ತಿದ್ದ. ಅಣ್ಣಂದಿರು ಏನಾದರೂ ತಪ್ಪಿ ನಡೆದರೆ ತಂದೆಗೆ ವರದಿ ಮಾಡುತ್ತಿದ್ದ.
3 : ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ.
4 : ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು.
5 : ಒಮ್ಮೆ ಜೋಸೆಫನಿಗೆ ಒಂದು ಕನಸು ಬಿತ್ತು. ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.
6 : ಅವನು ಅವರಿಗೆ, “ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ
7 : ಕೇಳಿ:ಈ ಕನಸಿನಲ್ಲಿ ನಾವು ಹೊಲದಲ್ಲಿ ಬೆಳೆಕೊಯ್ದು ಕಂತೆಗಳನ್ನು ಕಟ್ಟುತ್ತಾ ಇದ್ದೆವು. ಆಗ ನನ್ನ ಕಂತೆ ಎದ್ದು ನಿಂತಿತು. ನಿಮ್ಮ ಕಂತೆಗಳು ಸುತ್ತಲೂ ಬಂದು ನನ್ನ ಕಂತೆಗೆ ಅಡ್ಡಬಿದ್ದುದನ್ನು ಕಂಡೆ,” ಎಂದು ಹೇಳಿದ.
8 : ಅದಕ್ಕೆ ಅವನ ಅಣ್ಣಂದಿರು, “ಏನು, ನೀನು ನಿಜವಾಗಿ ನಮ್ಮನ್ನು ಆಳುವೆಯಾ? ನಮ್ಮ ಮೇಲೆ ದೊರೆತನ ಮಾಡುವೆಯಾ?” ಎಂದು ಪ್ರಶ್ನಿಸಿದರು. ಅವನ ಕನಸುಗಳು, ಅವನ ಮಾತುಗಳು ಅವರನ್ನು ಮತ್ತಷ್ಟು ಹಗೆಗಳನ್ನಾಗಿ ಮಾಡಿದವು.
9 : ಜೋಸೆಫನಿಗೆ ಇನ್ನೊಂದು ಕನಸು ಬಿತ್ತು. ಅದನ್ನೂ ಅವನು ಅಣ್ಣಂದಿರಿಗೆ ತಿಳಿಸಿದ: “ನಾನು ಇನ್ನೊಂದು ಕನಸುಕಂಡಿದ್ದೇನೆ. ಅದರಲ್ಲಿ ಸೂರ್ಯ, ಚಂದ್ರ ಹಾಗೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದು ಹೇಳಿದ.
10 : ಈ ಕನಸನ್ನು ಅಣ್ಣಂದಿರಿಗೆ ಮಾತ್ರವಲ್ಲ, ತಂದೆಗೂ ತಿಳಿಸಿದ. ತಂದೆ ಅವನಿಗೆ, “ಇದೆಂಥ ಕನಸು, ನೀನು ಕಂಡದ್ದು! ನಾನು, ನಿನ್ನ ತಾಯಿ, ಹಾಗೂ ಅಣ್ಣತಮ್ಮಂದಿರು ನಿನ್ನ ಅಡ್ಡಬೀಳಲು ಬರುತ್ತೇವೋ?” ಎಂದು ಹೇಳಿ ಅವನನ್ನು ಗದರಿಸಿದ.
11 : ಅಣ್ಣಂದಿರೋ ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ತಂದೆ ಈ ವಿಷಯವನ್ನು ಮನಸ್ಸಿನಲ್ಲೇ ಮೆಲುಕುಹಾಕಿದ.
12 :
ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ
13 : ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎನ್ನಲು
14 : ಅವನು, “ಇಗೋ ಸಿದ್ಧನಿದ್ದೇನೆ,” ಎಂದ.
ಯಕೋಬನು ಅವನಿಗೆ, “ನೀನು ಹೋಗಿ ನಿನ್ನ ಅಣ್ಣಂದಿರ ಹಾಗೂ ಆಡುಕುರಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬಾ,” ಎಂದು ಅಪ್ಪಣೆಕೊಟ್ಟು ಅವನನ್ನು ಹೆಬ್ರೋನ್ ಕಣಿವೆಯಿಂದ
15 : ಕಳಿಸಿಕೊಟ್ಟ.ಜೋಸೆಫನು ಹೊರಟ. ಶೆಕೆಮ್‍ಗೆ ಬಂದು ಅಡವಿಯೊಳಗೆ ತಿರುಗಾಡುತ್ತಿರುವಾಗ ಒಬ್ಬ ಮನುಷ್ಯನನ್ನು ಕಂಡ. ಆ ಮನುಷ್ಯ, “ಏನು ಹುಡುಕುತ್ತಾ ಇದ್ದೀಯಾ?” ಎಂದು ವಿಚಾರಿಸಿದ.
16 : ಜೋಸೆಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಾ ಇದ್ದೇನೆ; ಅವರು ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ, ದಯವಿಟ್ಟು ಹೇಳು” ಎಂದ.
17 : ಅದಕ್ಕೆ ಆ ಮನುಷ್ಯ, “ಅವರು ಇಲ್ಲಿಂದ ಹೊರಟುಹೋದರು; ‘ದೋತಾನಿಗೆ ಹೋಗೋಣ’ ಎಂದು ಮಾತಾಡುವುದನ್ನು ಕೇಳಿದೆ,” ಎಂದ. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ.
18 : ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸಂಚು ಮಾಡಿಕೊಂಡರು.
19 : “ಅಗೋ ಆ ಕನಸುಗಾರ ಬರುತ್ತಾ ಇದ್ದಾನೆ!
20 : ನಾವು ಅವನನ್ನು ಕೊಂದು ಈ ಬಾವಿಯೊಂದರಲ್ಲಿ ಹಾಕಿಬಿಡೋಣ. ‘ಕಾಡುಮೃಗ ಅವನನ್ನು ತಿಂದುಬಿಟ್ಟಿತು’; ಎಂದು ಹೇಳಿದರೆ ಆಯಿತು, ಬನ್ನಿ. ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
21 : ರೂಬೇನನು ಈ ಮಾತನ್ನು ಕೇಳಿಸಿಕೊಂಡು, ಅವನನ್ನು ಅವರ ಕೈಯಿಂದ ತಪ್ಪಿಸುವ ಉದ್ದೇಶದಿಂದ, “ನಾವು ಅವನ ಪ್ರಾಣತೆಗೆಯಬೇಕಾಗಿಲ್ಲ,
22 : ರಕ್ತಪಾತ ಕೂಡದು. ಕಾಡಿನಲ್ಲಿರುವ ಈ ಬಾವಿ ಒಂದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ,” ಎಂದು ಅವರಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ಪಿಸಬೇಕೆಂಬ ಗುರಿ ರೂಬೇನನದಾಗಿತ್ತು.
23 : ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು.
24 : ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು.
25 : ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂಧ ತೈಲ, ರಸಗಂಧ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು.
26 : ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು?
27 : ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ? ರಕ್ತಸಂಬಂಧಿಯಲ್ಲವೆ?” ಎಂದು ಹೇಳಿದ. ಅವನ ಆ ಮಾತಿಗೆ ಅಣ್ಣತಮ್ಮಂದಿರು ಒಪ್ಪಿದರು.
28 : ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದುಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
29 : ರೂಬೇನನು ಮರಳಿ ಆ ಬಾವಿಯ ಬಳಿಗೆ ಬಂದು ನೋಡಿದನು. ಅದರಲ್ಲಿ ಜೋಸೆಫನು ಇರಲಿಲ್ಲ.
30 : ದುಃಖವನ್ನು ತಾಳಲಾರದೆ ತನ್ನ ಬಟ್ಟೆಯನ್ನು ಹರಿದುಕೊಂಡನು; ತಮ್ಮಂದಿರ ಬಳಿಗೆ ಬಂದು, “ಆ ಹುಡುಗ ಇಲ್ಲವಲ್ಲಾ! ಅಯ್ಯೋ, ನಾನೇನು ಮಾಡಲಿ?” ಎಂದು ಗೋಳಾಡಿದ.
31 : ಬಳಿಕ ಅವರು ಒಂದು ಹೋತವನ್ನು ಕೊಯ್ದು, ಅದರ ರಕ್ತದಲ್ಲಿ ಜೋಸೆಫನ ನಿಲುವಂಗಿಯನ್ನು ಅದ್ದಿ
32 : ಆ ಅಂಗಿಯನ್ನು ತಮ್ಮ ತಂದೆಗೆ ಕಳಿಸಿದರು. ಅದನ್ನು ತಂದವರು, “ಇದು ನಮಗೆ ಸಿಕ್ಕಿತು; ಇದು ನಿಮ್ಮ ಮಗನ ಅಂಗಿಯೋ ಅಲ್ಲವೋ ನೋಡಿ,” ಎಂದು ಹೇಳಿದರು.
33 : ಯಕೋಬನು ಅದರ ಗುರುತನ್ನು ಹಿಡಿದು, “ಈ ಅಂಗಿ ನಿಶ್ಚಯವಾಗಿ ನನ್ನ ಮಗನದೇ; ಕಾಡುಮೃಗ ಅವನನ್ನು ಕೊಂದು ತಿಂದಿರಬೇಕು, ಜೋಸೆಫನನ್ನು ಅದು ನಿಸ್ಸಂದೇಹವಾಗಿ ಸೀಳಿ ಹಾಕಿರಬೇಕು,” ಎಂದು ಹೇಳಿ,
34 : ದುಃಖ ತಾಳಲಾಗದೆ ತನ್ನ ಬಟ್ಟೆಯನ್ನು ಹರಿದುಕೊಂಡ; ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡ; ತನ್ನ ಮಗನಿಗಾಗಿ ಬಹುದಿನಗಳವರೆಗೂ ಅತ್ತು ಪ್ರಲಾಪಿಸಿದ.
35 : ದುಃಖಶಮನಮಾಡಲು ಪುತ್ರಪುತ್ರಿಯರೆಲ್ಲರು ಎಷ್ಟು ಪ್ರಯತ್ನಿಸಿದರೂ ಅವನು ಸಾಂತ್ವನಗೊಳ್ಳಲಿಲ್ಲ; “ನಾನು ಹೀಗೆಯೇ ಹಂಬಲಿಸುತ್ತಾ ನನ್ನ ಮಗನಿರುವ ಮೃತ್ಯುಲೋಕವನ್ನು ಸೇರುತ್ತೇನೆ,” ಎಂದು ಮಗನಿಗಾಗಿ ದುಃಖಿಸುತ್ತಲೇ ಇದ್ದ.
36 : ಮಿದ್ಯಾನ್ಯರು ಜೋಸೆಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋಗಿ ಫರೋಹನ ಆಸ್ಥಾನದಲ್ಲಿದ್ದ ಪೋಟೀಫರನಿಗೆ ಮಾರಿದರು; ಇವನು, ದೊಡ್ಡ ಉದ್ಯೋಗಸ್ಥನೂ ಮೈಗಾವಲಿನವರ ದಳಪತಿಯೂ ಆಗಿದ್ದನು.