1 :
ಯಕೋಬನಿಗೆ ಲೇಯಳಲ್ಲಿ ಹುಟ್ಟಿದ ದೀನಳು ಒಂದು ದಿನ ಆ ನಾಡಿನ ಮಹಿಳೆಯರನ್ನು ನೋಡಲು ಹೊರಗೆ ಹೋಗಿ ಇದ್ದಳು.
2 : ಹಿವ್ವಿಯನಾದ ಹಮೋರನ ಮಗನೂ ಆ ನಾಡಿಗೆ ಒಡೆಯನೂ ಆದ ಶೆಕೆಮನು ಆಕೆಯನ್ನು ನೋಡಿ, ಎತ್ತಿಕೊಂಡು ಹೋಗಿ, ಆಕೆಯನ್ನು ಜತೆಗೂಡಿ ಮಾನಭಂಗ ಮಾಡಿದನು.
3 : ಅವನ ಮನಸ್ಸು ಯಕೋಬನ ಮಗಳಾದ ಆ ದೀನಳ ಮೇಲೆಯೇ ತಲ್ಲೀನಗೊಂಡಿತ್ತು. ಆಕೆಯನ್ನು ಮೋಹಿಸಿ ಅವಳ ಮನವೊಲಿಸುವಂಥ ಮಾತುಗಳನ್ನಾಡಿದನು.
4 : ತನ್ನ ತಂದೆ ಹಮೋರನನ್ನು, “ಆ ಹುಡುಗಿಯನ್ನು ನನಗೆ ಮದುವೆ ಮಾಡಿಸಬೇಕು,” ಎಂದು ಕೇಳಿಕೊಂಡನು.
5 : ತನ್ನ ಮಗಳಾದ ದೀನಳಿಗೆ ಶೆಕೆಮನಿಂದ ಮಾನಭಂಗವಾಯಿತೆಂಬ ಸಮಾಚಾರ ಯಕೋಬನಿಗೆ ಮುಟ್ಟಿದಾಗ ಅವನ ಗಂಡು ಮಕ್ಕಳು ಅಡವಿಯಲ್ಲಿ ದನಕಾಯುತ್ತಿದ್ದರು. ಅವರು ಬರುವ ತನಕ ಯಕೋಬನು ಸುಮ್ಮನೆ ಇದ್ದನು.
6 : ಅಷ್ಟರಲ್ಲಿ, ಶೆಕೆಮನ ತಂದೆ ಹಮೋರನು ಯಕೋಬನ ಸಂಗಡ ಮಾತನಾಡಲು ಊರಿಂದ ಹೊರಟುಬಂದನು.
7 : ಇತ್ತ ಯಕೋಬನ ಗಂಡು ಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದರು. ಶೆಕೆಮನು ತಮ್ಮ ತಂಗಿಯನ್ನು ಬಲಾತ್ಕಾರದಿಂದ ಕೂಡಿ, ಮಾಡಬಾರದನ್ನು ಮಾಡಿ, ಇಸ್ರಯೇಲರಿಗೆ ಘನ ಅವಮಾನವನ್ನು ಮಾಡಿದ್ದರಿಂದ ಅವರು ತಳಮಳಗೊಂಡು ಕಡುಕೋಪದಿಂದ ಇದ್ದರು.
8 : ಹಮೋರನು ಅವರಿಗೆ, “ನನ್ನ ಮಗ ಶೆಕೆಮನು ನಿಮ್ಮ ಹುಡುಗಿಯನ್ನು ಬಹಳ ಆಶೆಯಿಂದ ಮೋಹಿಸಿದ್ದಾನೆ; ದಯವಿಟ್ಟು ಆಕೆಯನ್ನು ಅವನಿಗೆ ಮದುವೆ ಮಾಡಿಕೊಡಬೇಕು;
9 : ಅಲ್ಲದೆ ನೀವು ನಮ್ಮಲ್ಲೇ ವಾಸವಾಗಿರಬಹುದು; ನಿಮ್ಮ ಹೆಣ್ಣುಮಕ್ಕಳನ್ನು ನಮಗೆ ಕೊಡಬೇಕು; ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳಬೇಕು; ನಾವು ಬೀಗರಾಗಿ ಬಾಳಬೇಕು, ನಾಡೆಲ್ಲಾ ನಿಮ್ಮ ಮುಂದೆ ಇದೆ.
10 : ಇದರಲ್ಲಿ ವಾಸಿಸಿ, ವ್ಯಾಪಾರಮಾಡಿ, ನೀವು ಆಸ್ತಿಯನ್ನು ಸಂಪಾದಿಸಿಕೊಳ್ಳಬಹುದು,” ಎಂದು ಹೇಳಿದನು.
11 : ಬಳಿಕ ಶೆಕೆಮನು ಆ ಹುಡುಗಿಯ ತಂದೆ ಮತ್ತು ಸಹೋದರರಿಗೆ, “ನನ್ನ ಮೇಲೆ ನಿಮಗೆ ಕೃಪೆಯಿರಲಿ; ನೀವು ಹೇಳುವಷ್ಟನ್ನು ಕೊಡುತ್ತೇನೆ.
12 : ಹೆಣ್ಣಿಗಾಗಿ ತೆರವನ್ನೂ ಕಾಣಿಕೆಯನ್ನೂ ನೀವು ಹೇಳುವ ಮೇರೆಗೆ ಎಷ್ಟಾದರೂ ಕೊಡುತ್ತೇನೆ. ಹೇಗೂ ಆ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಕೇಳಿಕೊಂಡನು.
13 : ಶೆಕೆಮನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದರಿಂದ ಯಕೋಬನ ಮಕ್ಕಳು ಅವನಿಗೂ ಅವನ ತಂದೆ ಹಮೋರನಿಗೂ ಕಪಟದಿಂದ ಈ ಉತ್ತರ ಕೊಟ್ಟರು:
14 : “ಸುನ್ನತಿ ಇಲ್ಲದವರಿಗೆ ನಮ್ಮ ತಂಗಿಯನ್ನು ಕೊಡುವುದಕ್ಕೆ ಆಗುವುದಿಲ್ಲ. ಹಾಗೆ ಕೊಡುವುದು ನಮಗೆ ಅವಮಾನಕರ.
15 : ನಿಮ್ಮಲ್ಲಿ ಗಂಡಸರೆಲ್ಲರು ಸುನ್ನತಿಮಾಡಿಸಿಕೊಂಡು ನಮ್ಮಂತೆ ಆಗಬೇಕು.
16 : ಹಾಗೆ ಮಾಡಿಸಿಕೊಂಡರೆ ಮಾತ್ರ ನಾವು ನಿಮ್ಮ ಮಾತಿನಂತೆ ನಮ್ಮ ಹೆಣ್ಣು ಮಕ್ಕಳನ್ನು ನಿಮಗೆ ಕೊಡಬಹುದು, ನಿಮ್ಮ ಹೆಣ್ಣು ಮಕ್ಕಳನ್ನು ನಾವು ತೆಗೆದುಕೊಳ್ಳಬಹುದು; ನಿಮ್ಮಲ್ಲಿ ವಾಸಮಾಡಿ, ನಿಮ್ಮೊಡನೆ ಒಂದೇ ಕುಲವಾಗಿರಬಹುದು.
17 : ನೀವು ನಮ್ಮ ಮಾತಿಗೆ ಒಪ್ಪಿ ಸುನ್ನತಿ ಮಾಡಿಸಿಕೊಳ್ಳದೆ ಹೋದರೆ ನಾವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೊರಟು ಹೋಗುತ್ತೇವೆ,” ಎಂದರು.
18 : ಅವರು ಹೇಳಿದ್ದು ಹಮೋರನಿಗೂ ಅವನ ಮಗ ಶೆಕೆಮನಿಗೂ ಉಚಿತವೆಂದೇ ತೋಚಿತು.
19 : ಆ ಯುವಕನು ಯಕೋಬನ ಮಗಳಲ್ಲಿ ಅನುರಕ್ತನಾಗಿದ್ದುದರಿಂದ ಅವರು ಹೇಳಿದಂತೆ ಮಾಡಲು ಹಿಂಜರಿಯಲಿಲ್ಲ; ಅಪ್ಪನ ಮನೆಗೆ ಅವನೇ ಮುಖ್ಯಸ್ಥನಾಗಿದ್ದನು.
20 : ಎಂತಲೆ ಹಮೋರನು ಮತ್ತು ಅವನ ಮಗ ಶೆಕೆಮನು ಊರಬಾಗಿಲಿಗೆ ಬಂದರು. ಊರಿನವರನ್ನೆಲ್ಲಾ ಸಂಬೋಧಿಸುತ್ತಾ, ಹೀಗೆ ಎಂದರು:
21 : “ಈ ಜನರು ನಮ್ಮೊಡನೆ ಶಾಂತಿ ಸಮಾಧಾನದಿಂದಿದ್ದಾರೆ; ಇವರು ನಮ್ಮ ನಾಡಿನಲ್ಲೇ ವಾಸಮಾಡಿಕೊಂಡು ವ್ಯಾಪಾರ ಮಾಡಲಿ; ಈ ನಾಡು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆ. ನಾವು ಅವರ ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಳ್ಳೋಣ, ನಮ್ಮ ಹೆಣ್ಣುಮಕ್ಕಳನ್ನು ಅವರಿಗೆ ಕೊಡೋಣ.
22 : ಆದರೆ ಅವರು ಸುನ್ನತಿ ಮಾಡಿಕೊಂಡವರು. ಆದ್ದರಿಂದ ನಮ್ಮಲ್ಲಿಯೂ ಗಂಡಸರೆಲ್ಲರು ಸುನ್ನತಿಮಾಡಿಸಿಕೊಳ್ಳಬೇಕು ಎನ್ನುತ್ತಾರೆ. ಹಾಗೆ ಮಾಡಿಸಿಕೊಂಡರೆ ಮಾತ್ರ ಇವರು ನಮ್ಮಲ್ಲಿ ವಾಸಮಾಡುವುದಕ್ಕೂ ನಮ್ಮ ಸಂಗಡ ಒಂದೇ ಕುಲವಾಗುವುದಕ್ಕೂ ಒಪ್ಪುತ್ತಾರೆ.
23 : ಅವರ ಕುರಿದನಗಳೂ ಆಸ್ತಿಪಾಸ್ತಿಯೂ ಪಶುಪ್ರಾಣಿಗಳೂ ನಮ್ಮವುಗಳೇ ಆಗುತ್ತವಲ್ಲವೆ? ಆದ್ದರಿಂದ ಅವರು ನಮ್ಮಲ್ಲಿ ವಾಸಮಾಡುವಂತೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ”.
24 : ಹಮೋರನ ಮತ್ತು ಅವನ ಮಗ ಶೆಕೆಮನ ಈ ಮಾತಿಗೆ ಊರಿನವರೆಲ್ಲರು ಸಮ್ಮತಿಸಿದರು. ಅಂತೆಯೇ ಅವರಲ್ಲಿದ್ದ ಗಂಡಸರೆಲ್ಲರು ಸುನ್ನತಿಮಾಡಿಸಿ ಕೊಂಡರು.
25 : ಮೂರನೆಯ ದಿನ ಆ ಗಂಡಸರೆಲ್ಲರು ಗಾಯದಿಂದ ಇನ್ನು ಬಹಳ ಬಾಧೆಪಡುತ್ತಿದ್ದರು. ಆಗ, ಯಕೋಬನ ಮಕ್ಕಳಲ್ಲಿ ದೀನಳ ಸಹೋದರರಾದ ಸಿಮೆಯೋನ್ ಮತ್ತು ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಹಿಡಿದು ನಿಶ್ಚಿಂತೆ ಇಂದಿದ್ದ ಆ ಊರಿನವರ ಮೇಲೆ ಬಿದ್ದರು. ದಯೆ ದಾಕ್ಷಿಣ್ಯವಿಲ್ಲದೆ ಗಂಡಸರೆಲ್ಲರನ್ನು ಕೊಂದರು.
26 : ಹಮೋರ್ ಮತ್ತು ಅವನ ಮಗ ಶೆಕೆಮನನ್ನು ಕೊಂದು ದೀನಳನ್ನು ಅವನ ಮನೆಯಿಂದ ಕರೆದುಕೊಂಡು ಹೊರಟುಹೋದರು.
27 : ‘ತಂಗಿಯನ್ನು ಅವಮಾನ ಪಡಿಸಿದವರು ಇವರೇ ಅಲ್ಲವೆ’, ಎಂದುಕೊಂಡು ಆ ಊರನ್ನೇ ಸೂರೆಮಾಡಿಬಿಟ್ಟರು.
28 : ಊರ ಒಳಗೂ ಹೊರಗೂ ಇದ್ದ ಕುರಿ, ದನ, ಕತ್ತೆಗಳನ್ನು ಕಿತ್ತುಕೊಂಡರು.
29 : ಮಡದಿ ಮಕ್ಕಳನ್ನೆಲ್ಲ ಸೆರೆಹಿಡಿದರು, ಅವರ ಮನೆಗಳಲ್ಲಿ ಇದ್ದುದನ್ನೆಲ್ಲ ದೋಚಿಕೊಂಡರು.
30 : ಆಗ ಯಕೋಬನು, ಸಿಮೆಯೋನ್ ಮತ್ತು ಲೇವಿಯರಿಗೆ, “ನೀವು ನನ್ನ ಹೆಸರನ್ನು ಈ ನಾಡಿನ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯಮಾಡಿಬಿಟ್ಟಿರಿ; ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಕೆಲವರೇ. ಈ ನಾಡಿನವರೆಲ್ಲರು ಒಟ್ಟಿಗೆ ಬಂದು ನನ್ನ ಮೇಲೆ ಬಿದ್ದರೆ ನಾನು ಮಾತ್ರವಲ್ಲ ನನ್ನ ಮನೆಯವರೆಲ್ಲರೂ ನಿರ್ಮೂಲವಾಗುತ್ತೇವೆ ಅಲ್ಲವೇ?” ಎಂದನು.
31 : ಅದಕ್ಕೆ ಅವರು, “ಅವನು ಮಾತ್ರ ನಮ್ಮ ತಂಗಿಯನ್ನು ಒಬ್ಬ ಬೀದಿಯ ಸೂಳೆಯಂತೆ ನಡೆಸಿಕೊಳ್ಳಬಹುದೋ?” ಎಂದು ಪ್ರಶ್ನಿಸಿದರು.