1 :
ಇತ್ತ ಯಕೋಬನು ತನ್ನ ಪ್ರಯಾಣವನ್ನು ಮುಂದುವರೆಸಿದನು.
2 : ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ” ಎಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’ ಎಂದು ಹೆಸರಿಟ್ಟನು.
3 : ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯಿರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು.
4 : ಕಳುಹಿಸುವಾಗ ಅವರಿಗೆ, “ನೀವು ನನ್ನೊಡೆಯ ಏಸಾವನ ಬಳಿಗೆ ಹೋಗಿ ಈ ಸಮಾಚಾರವನ್ನು ಕೊಡಿ: ‘ನಿಮ್ಮ ದಾಸ ಯಕೋಬನಾದ ನಾನು ಇಷ್ಟು ದಿನ ಲಾಬಾನನ ಬಳಿ ವಾಸಮಾಡಬೇಕಾಗಿ ಬಂದಿತು.
5 : ನನಗೆ ಎತ್ತು - ಕತ್ತೆ, ಆಡು - ಕುರಿ, ದಾಸ-ದಾಸಿಯರು ಇದ್ದಾರೆ. ನನ್ನೊಡೆಯರಾದ ನೀವು ನನ್ನ ಬಗ್ಗೆ ದಯದಾಕ್ಷಿಣ್ಯವುಳ್ಳವರಾಗಿರಬೇಕೆಂಬ ಕೋರಿಕೆಯಿಂದ ನಮ್ಮನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ’ ಎಂದು ತಿಳಿಸಿರಿ” ಎಂದನು.
6 : ಆ ಆಳುಗಳು ಹೋಗಿ ಯಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿಮ್ಮ ಅಣ್ಣ ಏಸಾವನ ಬಳಿಗೆ ಹೋಗಿದ್ದೆವು. ಅವರು ನಾನೂರು ಜನರ ಸಮೇತ ನಿಮ್ಮನ್ನು ಎದುರುಗೊಳ್ಳಲು ಬರುತ್ತಿದ್ದಾರೆ,” ಎಂದು ತಿಳಿಸಿದರು.
7 : ಆಗ ಯಕೋಬನು ಬಹಳ ದಿಗಿಲುಗೊಂಡನು, ಕಳವಳಗೊಂಡನು; ತನ್ನ ಜನರನ್ನೂ ಕುರಿ, ದನ, ಒಂಟೆಗಳನ್ನೂ ಎರಡು ಪರಿವಾರಗಳಾಗಿ ವಿಂಗಡಿಸಿದನು.
8 : ಏಸಾವನು ಒಂದು ಪರಿವಾರದ ಮೇಲೆ ಬಿದ್ದರೆ ಇನ್ನೊಂದು ತಪ್ಪಿಸಿಕೊಳ್ಳಬಹುದೆಂಬುದು ಅವನ ಯೋಚನೆಯಾಗಿತ್ತು.
9 : ಇದಲ್ಲದೆ ಯಕೋಬನು ದೇವರನ್ನು ಹೀಗೆಂದು ಪ್ರಾರ್ಥಿಸಿದನು: “ಸ್ವಾಮಿ ಸರ್ವೇಶ್ವರಾ, ನನ್ನ ತಂದೆ ತಾತಂದಿರಾದ ಇಸಾಕ, ಅಬ್ರಹಾಮರ ದೇವರೇ, ಸ್ವಂತ ನಾಡಿಗೆ, ಬಂಧುಬಳಗದವರ ಬಳಿಗೆ ಹಿಂದಿರುಗಬೇಕೆಂದು ನನಗೆ ನೀವೇ ಆಜ್ಞಾಪಿಸಿದಿರಿ; ‘ನಿನಗೆ ಒಳ್ಳೆಯದನ್ನೇ ಮಾಡುತ್ತೇನೆ’ ಎಂದು ವಾಗ್ದಾನ ಮಾಡಿದವರು ನೀವೇ ಅಲ್ಲವೆ?
10 : ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿಮ್ಮ ವಾಗ್ದಾನವನ್ನು ನೆರವೇರಿಸಿದ್ದೀರಿ. ನಾನು ಅದಕ್ಕೆ ಕೇವಲ ಅಪಾತ್ರನು. ನಾನು ಮೊದಲು ಈ ಜೋರ್ಡನ್ ನದಿಯನ್ನು ದಾಟಿದಾಗ ನನಗಿದ್ದುದು ಒಂದು ಊರುಗೋಲು ಮಾತ್ರ. ಈಗ ಎರಡು ಪರಿವಾರಗಳಿಗೆ ಒಡೆಯನಾಗಿದ್ದೇನೆ.
11 : ನನ್ನ ಅಣ್ಣ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಂದಿರನ್ನೂ ಕೊಲ್ಲುವನೋ ಏನೋ ಎಂಬ ಭಯ ನನಗಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
12 : ‘ನಿನಗೆ ಒಳ್ಳೆಯದನ್ನೇ ಮಾಡಿ ನಿನ್ನ ಸಂತತಿಯನ್ನು ಎಣಿಸಲಾಗದ ಕಡಲ ತೀರದ ಮರಳಿನಂತೆ ಹೆಚ್ಚಿಸುವೆನು,’ ಎಂದು ಹೇಳಿದವರು ನೀವೇ ಅಲ್ಲವೇ?”
13 : ಯಕೋಬನು ಆ ರಾತ್ರಿಯನ್ನು ಅಲ್ಲೇ ಕಳೆದನು.
14 : ಇನ್ನೂರು ಆಡು, ಇಪ್ಪತ್ತು ಹೋತ, ಇನ್ನೂರು ಕುರಿ, ಇಪ್ಪತ್ತು ಟಗರು, ಹಾಲು ಕರೆಯುವ ಮೂವತ್ತು ಒಂಟೆ ಮತ್ತು ಅವುಗಳ ಮರಿ,
15 : ನಲವತ್ತು ಆಕಳು, ಹತ್ತು ಹೋರಿ, ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತನ್ನ ಅಣ್ಣ ಏಸಾವನಿಗೆ ಕಾಣಿಕೆಯಾಗಿ ತೆಗೆದುಕೊಂಡನು.
16 : ಇವುಗಳನ್ನು ಹಿಂಡುಹಿಂಡಾಗಿ ವಿಂಗಡಿಸಿ ತನ್ನ ಆಳುಗಳ ವಶಕ್ಕೆ ಒಪ್ಪಿಸಿದನು. “ನೀವು ನನಗಿಂತ ಮುಂಚಿತವಾಗಿ ಹೋಗಿರಿ; ಹಿಂಡು ಹಿಂಡಿಗೂ ಮಧ್ಯೆ ಸ್ಥಳವಿರಲಿ,” ಎಂದು ಆ ಆಳುಗಳಿಗೆ ಹೇಳಿದನು.
17 : ಮೊದಲನೆಯ ಹಿಂಡಿನ ಆಳಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, “ನೀನು ಯಾರ ಆಳು? ಎಲ್ಲಿಗೆ ಹೋಗುತ್ತಿರುವೆ? ನಿನ್ನ ಮುಂದೆ ಇರುವ ಇವೆಲ್ಲ ಯಾರವು?” ಎಂದು ಕೇಳಿದರೆ ನೀನು,
18 : ‘ಇವು ನಿಮ್ಮ ದಾಸ ಯಕೋಬನವು; ಒಡೆಯರಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳಿಸಿಕೊಟ್ಟಿದ್ದಾರೆ; ಅವರೂ ನಮ್ಮ ಹಿಂದೆ ಬರುತ್ತಿದ್ದಾರೆ’ ಎಂದು ಉತ್ತರ ಕೊಡಬೇಕು,” ಎಂಬುದಾಗಿ ಅಪ್ಪಣೆ ಕೊಟ್ಟನು.
19 : ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ಕಾಣುವಾಗ ಇದೇ ರೀತಿಯಾಗಿ ಮಾತನಾಡಬೇಕು.
20 : ‘ನಿಮ್ಮ ದಾಸ ಯಕೋಬನು ನಮ್ಮ ಹಿಂದೆ ಬರುತ್ತಿದ್ದಾರೆ,’ ಎನ್ನಿರಿ” ಎಂದು ಆಜ್ಞಾಪಿಸಿದನು. ಯಕೋಬನು ತನ್ನೊಳಗೆ, “ನನಗೆ ಮುಂಚಿತವಾಗಿ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನ ಪಡಿಸಿದ ಮೇಲೆ ನಾನು ಅವನನ್ನು ಭೇಟಿ ಆಗುತ್ತೇನೆ. ಆಗ ಒಂದು ವೇಳೆ ನನ್ನನ್ನು ಪ್ರೀತಿಯಿಂದ ಅಂಗೀಕರಿಸುವನು,” ಎಂದುಕೊಂಡನು.
21 : ಆದಕಾರಣ ಅವನು ಆ ಕಾಣಿಕೆಯನ್ನು ಮುಂಚಿತವಾಗಿ ಕಳಿಸಿ, ತಾನು ಆ ರಾತ್ರಿ ಆ ತನ್ನ ಪಾಳೆಯದೊಳಗೇ ಇದ್ದನು.
22 :
ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ‘ಯಬ್ಬೋಕ್’ ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು.
23 : ಅವರನ್ನೂ ತನ್ನ ಆಸ್ತಿ ಪಾಸ್ತಿಯನ್ನೂ ದಾಟಿಸಿದ ಮೇಲೆ
24 : ಯಕೋಬನು ಒಂಟಿಗನಾಗಿ ಹಿಂದೆ ನಿಂತಿದ್ದನು. ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.
25 : ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು.
26 : ಆ ಪುರುಷ, “ನನ್ನನ್ನು, ಹೋಗಬಿಡು, ಬೆಳಗು ಆಗುತ್ತಿದೆ,” ಎನ್ನಲು ಯಕೋಬನು, “ನೀವು ನನ್ನನ್ನು ಆಶೀರ್ವದಿಸಿದ ಹೊರತು, ನಿಮ್ಮನ್ನು ಹೋಗಬಿಡುವುದಿಲ್ಲ,” ಎಂದನು.
27 : ಆ ಪುರುಷ, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಯಕೋಬನು, “ನನ್ನ ಹೆಸರು ಯಕೋಬ” ಎಂದನು.
28 : ಅವನು ಯಕೋಬನಿಗೆ, “ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ‘ಇಸ್ರಯೇಲ್’ ಎಂದು ಹೆಸರುಂಟಾಗುವುದು,” ಎಂದು ಹೇಳಿದನು.
29 : ಯಕೋಬನು, “ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು”, ಎಂದಾಗ ಆ ಪುರುಷ, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು.
30 : ಯಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ!” ಎಂದುಕೊಂಡು ಆ ಸ್ಥಳಕ್ಕೆ ‘ಪೆನೀಯೇಲ್’ ಎಂದು ಹೆಸರಿಟ್ಟನು.
31 : ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯ ಆಯಿತು; ಕೀಲುಕಳಚಿದ ತೊಡೆಯ ನಿಮಿತ್ತ ಅವನು ಕುಂಟಿಕೊಂಡೇ ನಡೆದನು.
32 : ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ.